ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಸರು ಬದಲಾಯಿಸಿಕೊಂಡ ಉದಯ ಟಿವಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಮೂಗುತಿ ಮಲ್ಲಿʼ; ನಾಯಕ-ನಾಯಕಿ ಯಾರು?

ಮೂರು ದಶಕಗಳ ಇತಿಹಾಸವಿರುವ ಉದಯ ಟಿವಿ ಈಗ 'ಸನ್ ಉದಯ' ಎಂಬ ಹೊಸ ಹೆಸರಿನೊಂದಿಗೆ ಮರುನಾಮಕರಣಗೊಂಡಿದೆ. ಈ ಹೊಸ ಪಯಣದ ಮೊದಲ ಹೆಜ್ಜೆಯಾಗಿ 'ಮೂಗುತಿ ಮಲ್ಲಿ' ಎಂಬ ವಿಭಿನ್ನ ಪ್ರೇಮಕಥೆಯ ಧಾರಾವಾಹಿ ಮಾರ್ಚ್ 23ರ ಸೋಮವಾರದಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಹೆಸರು ಬದಲಾಯಿಸಿಕೊಂಡ ಉದಯ ಟಿವಿ; ಯುಗಾದಿ ಕೊಡುಗೆಯಾಗಿ ಮೂಗುತಿ ಮಲ್ಲಿ

-

Avinash GR
Avinash GR Mar 20, 2026 4:01 PM

ಕಳೆದ ಮೂರು ದಶಕಗಳಿಂದ ಕನ್ನಡಿಗರ ಮನರಂಜನಾ ವಾಹಿನಿಯಾಗಿ ಗುರುತಿಸಿಕೊಂಡಿರುವ ಉದಯ ಟಿವಿ, ಈ ಯುಗಾದಿ ಹಬ್ಬದಂದು ಹೊಸ ರೂಪದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ‘ಸನ್ ಉದಯ’ ಎಂದು ಮರುನಾಮಕರಣಗೊಂಡಿರುವ ವಾಹಿನಿಯು ಹೊಸತನದ ಮೊದಲ ಹೆಜ್ಜೆಯಾಗಿ ‘ಮೂಗುತಿ ಮಲ್ಲಿ’ ಎಂಬ ವಿಭಿನ್ನ ಪ್ರೇಮಕಥೆಯುಳ್ಳ ಧಾರಾವಾಹಿಯನ್ನು ವೀಕ್ಷಕರ ಎದುರು ಹೊತ್ತು ತರುತ್ತಿದೆ.

ಶ್ರೀಮಂತಿಕೆ & ಸ್ವಾಭಿಮಾನದ ನಡುವಿನ ‘ಮೂಗುತಿ ಮಲ್ಲಿ’

ಮಾರ್ಚ್ 23ರ ಸೋಮವಾರದಿಂದ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿರುವ ‘ಮೂಗುತಿ ಮಲ್ಲಿ’ ಸೀರಿಯಲ್‌ನಲ್ಲಿ ಬಡತನ ಮತ್ತು ಶ್ರೀಮಂತಿಕೆಯ ಸಂಘರ್ಷದ ನಡುವೆ ಅರಳುವ ಪ್ರೇಮಕಥೆಯನ್ನು ಒಳಗೊಂಡಿದೆ. ಕಷ್ಟದಲ್ಲಿ ಬೆಳೆದಿದ್ದರೂ ಸ್ವಾಭಿಮಾನಿ ಹುಡುಗಿ ಮಲ್ಲಿ. ಮನೆಯ ಜವಾಬ್ದಾರಿ ಹೊತ್ತಿರುವ ಈಕೆ, ಮನೆ ಮನೆಗೆ ಹೋಗಿ ಅಡುಗೆ ಮಾಡುವ ವೃತ್ತಿ ಮಾಡುತ್ತಾಳೆ. ಅವಳ ಕೈರುಚಿಗೆ ಬೆಲೆ ಕಟ್ಟಲಾಗದು ಎಂಬುದು ಕಥೆಯ ಒಂದು ಆಕರ್ಷಕ ಎಳೆ. ಆದರೆ ಹಸಿವಿನ ಅರಿವೇ ಇಲ್ಲದ ದೊಡ್ಡ ಮಸಾಲೆ ಕಂಪನಿಯ ಮಾಲೀಕ ವಿರಾಜ್. ಶ್ರೀಮಂತರನ್ನು ಕಂಡರೆ ಕಿರಿಕಿರಿ ಮಾಡಿಕೊಳ್ಳುವ ಮಲ್ಲಿ ಮತ್ತು ವಿರಾಜ್ ನಡುವೆ ಪ್ರೀತಿ ಹೇಗೆ ಚಿಗುರುತ್ತದೆ ಎಂಬುದೇ ಈ ಧಾರಾವಾಹಿಯ ಕುತೂಹಲ.

ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಪ್ರೇಮಕಥೆ: 'ಕೃಷ್ಣವಂಶಿ'ಯಲ್ಲಿ ಗಿರಿಜಾ ಲೋಕೇಶ್ ಪ್ರಧಾನ ಪಾತ್ರ!

ಈ ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಇದೆ. ‘ಅಂತರಪಟ’ ಖ್ಯಾತಿಯ ಚಂದನ್ ಗೌಡ ಅವರು ಈ ಸೀರಿಯಲ್‌ನಲ್ಲಿ ವಿರಾಜ್ ಆಗಿ ನಟಿಸುತ್ತಿದ್ದಾರೆ. ‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯ ತಂಗಿಯಾಗಿ ಗಮನ ಸೆಳೆದಿದ್ದ ನಟಿ ತನುಜಾ ವೆಂಕಟೇಶ್ ಅವರು ಮಲ್ಲಿಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಉಳಿದಂತೆ, ಹಿರಿಯ ನಟಿ ಅಂಬಿಕಾ, ತೆಲುಗು ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್, ಆರ್ಯ, ವೀಣಾ ಪೊನ್ನಪ್ಪ, ಪುನೀತ್, ಮರೀನಾ ಸೇರಿದಂತೆ ಹಲವು ಅನುಭವಿ ಕಲಾವಿದರು ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.

Dhruva Dasara: ಸೆಪ್ಟೆಂಬರ್ 27ಕ್ಕೆ ಉದಯ ಟಿವಿಯಲ್ಲಿ ʼಧ್ರುವ ದಸರಾʼ; ನಿಮಗೆ ಗೊತ್ತಿಲ್ಲದ ಆ್ಯಕ್ಷನ್ ಪ್ರಿನ್ಸ್ ರಹಸ್ಯ ಇಲ್ಲಿದೆ

ಈ ಹಿಂದೆ ಕಿರುತೆರೆಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ಆರವ್ ಕಾರ್ತಿಕ್ ‘ಮೂಗುತಿ ಮಲ್ಲಿ’ ಧಾರಾವಾಹಿಯ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಪುನೀತ್ ಅವರ ಛಾಯಾಗ್ರಹಣವಿದ್ದು, ‘ಈವೆಂಟೈನರ್ಸ್’ ಸಂಸ್ಥೆಯ ಅಜಯ್ ರವಿ ಅವರು ಈ ಬಿಗ್ ಬಜೆಟ್ ಸೀರಿಯಲ್ ಅನ್ನು ನಿರ್ಮಾಣ ಮಾಡುತ್ತಿದ್ಧಾರೆ. ಮಾರ್ಚ್ 23ರಿಂದ ಸೋಮವಾರ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರ ಆರಂಭಿಸಲಿದೆ.

‘ಸನ್ ಉದಯ’ದ ಹೊಸ ಪಯಣ

"ಯುಗಾದಿ ಹಬ್ಬದ ಪ್ರಯುಕ್ತ ಚಾನೆಲ್ ಈಗ ‘ಸನ್ ಉದಯ’ವಾಗಿ ಬದಲಾಗಿದೆ. ಹೊಸ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾವು ವೇದಿಕೆ ಕಲ್ಪಿಸುತ್ತಿದ್ದೇವೆ. ಕನ್ನಡಿಗರು ಈ ಪ್ರಯತ್ನವನ್ನು ಖಂಡಿತ ಮೆಚ್ಚುತ್ತಾರೆ" ಎಂದು ವಾಹಿನಿಯ ಮುಖ್ಯಸ್ಥರು ಹೇಳಿಕೊಂಡಿದ್ದಾರೆ.