Urvashi: ʼʼಸುಮ್ಮನೆ ಸ್ವೀಕರಿಸಲು ಇದು ಪಿಂಚಣಿ ಹಣವಲ್ಲʼʼ: ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿರುದ್ಧ ನಟಿ ಊರ್ವಶಿ ಕಿಡಿ
71st National Film Award: ʼಉಳ್ಳೊರುಕುʼ ಮಲಯಾಳಂ ಚಿತ್ರದಲ್ಲಿನ ಅಭಿನಯಕ್ಕೆ ನಟಿ ಊರ್ವಶಿ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ನಿರ್ಧಾರವನ್ನು ಅವರು ಪರಶ್ನಿಸಿದ್ದಾರೆ. ಲೀಡ್ ರೋಲ್ ನಿರ್ವಹಿಸಿದ ತಮ್ಮನ್ನು ಈ ಪ್ರಶಸ್ತಿಗೆ ಪರಿಗಣಿಸಿದ್ದು ಯಾವ ಮಾನದಂಡದ ಆಧಾರದಲ್ಲಿ ಎಂದು ಪ್ರಶ್ನಿಸಿದ್ದಾರೆ.


ತಿರುವನಂತಪುರಂ: ಬಹುನಿರೀಕ್ಷಿತ 71ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ (71st National Film Award) ಘೋಷಣೆಯಾಗಿ 3 ದಿನ ಕಳೆದಿದ್ದು, ಇನ್ನೂ ವಿವಾದ ನಿಂತಿಲ್ಲ. ʼದಿ ಕೇರಳ ಸ್ಟೋರಿʼ (The Kerala Story) ಬಾಲಿವುಡ್ ಚಿತ್ರದ ನಿರ್ದೇಶಕ ಸುದೀಪ್ತೊ ಸೇನ್ (Sudipto Sen) ಅವರಿಗೆ ಪ್ರಶಸ್ತಿ ಘೋಷಿಸಿರುವುದಕ್ಕೆ ಎಡ ಪಕ್ಷದ ನಾಯಕರು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಈ ಮಧ್ಯೆ ʼಉಳ್ಳೊರುಕುʼ (Ullozhukku) ಮಲಯಾಳಂ ಸಿನಿಮಾದ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಊರ್ವಶಿ (Urvashi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಆಧಾರದಲ್ಲಿ ತಮ್ಮನ್ನು ಪೋಷಕ ನಟಿ ಪಾತ್ರಕ್ಕೆ ಪರಿಗಣಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ರಿಲೀಸ್ ಆದ ಕ್ರಿಸ್ಟೋ ಟಾಮಿ ನಿರ್ದೇಶನದ ʼಉಳ್ಳೊರುಕುʼ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಖ್ಯ ಪಾತ್ರದಲ್ಲಿ ಊರ್ವಶಿ ಮತ್ತು ಪಾರ್ವತಿ ತಿರುವೋತ್ತು ನಟಿಸಿದ್ದರು. ಆಲಪ್ಪುಳದ ನೆರೆಬಾಧಿತ ಪ್ರದೇಶದಲ್ಲಿನ ಕುಟುಂಬವೊಂದರ ಕಥೆಯನ್ನು ಹೇಳುವ ಈ ಸಿನಿಮಾದಲ್ಲಿ ಊರ್ವಶಿ ಮತ್ತು ಪಾರ್ವತಿ ಅಭಿನಯ ಗಮನ ಸೆಳೆದಿತ್ತು. ಆಗಲೇ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಲಾಗಿತ್ತು. ಇದೀಗ ಊರ್ವಶಿ ಪ್ರಶಸ್ತಿ ಆಯ್ಕೆಯ ಮಾನದಂಡದ ಬಗ್ಗೆ ಪ್ರಶ್ನಿಸಿದ್ದಾರೆ.
ಊರ್ವಶಿ ಹೇಳಿದ್ದೇನು?
ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಇದೇ ವೇಳೆ ತಮ್ಮನ್ನು ಪೋಷಕ ನಟಿ ಎಂದು ಪರಿಗಣಿಸಿರುವುದಕ್ಕೆ ಗರಂ ಆಗಿದ್ದಾರೆ. ಈ ಚಿತ್ರದಲ್ಲಿ ತಮ್ಮದೂ ಮುಖ್ಯ ಪಾತ್ರವಾಗಿದ್ದು, ಪೋಷಕ ನಟಿಗೆ ಸೀಮಿತಗೊಳಿಸಿದ್ದು ಯಾವ ಮಾನದಂಡದ ಆಧಾರದಲ್ಲಿ ಎಂದು ಕೇಳಿದ್ದಾರೆ.
ʼʼಯಾವ ಆಧಾರದಲ್ಲಿ ಲೀಡ್ ರೋಲ್ ಅನ್ನು ಜ್ಯೂರಿ ಹೇಗೆ ನಿರ್ಧರಿಸುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಹಾಗಾದರೆ ಒಂದು ನಿರ್ದಿಷ್ಟ ವಯಸ್ಸು ದಾಟಿದವರಿಗೆ ಪೋಷಕ ಕಲಾವಿದ ಪ್ರಶಸ್ತಿ ನೀಡುತ್ತಾರಾ? ಯಾವ ಪ್ರೋಟೋಕಾಲ್ ಆಧರಿಸಿ ಕಥೆಯ ಲೀಡ್ ರೋಲ್ ಅನ್ನು ಪೋಷಕ ಪಾತ್ರವನ್ನಾಗಿ ಪರಿಗಣಿಸಿದ್ದಾರೆ? ಚಿತ್ರದ ಪೋಷಕ ಪಾತ್ರ ನಿರ್ವಹಿಸುವವರಿಗೆ ಈ ಪ್ರಶಸ್ತಿ ನೀಡುತ್ತಾರೆ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವವರನ್ನು ಉತ್ತಮ ನಟಿ ಪ್ರಶಸ್ತಿಗೆ ಪರಿಗಣಿಸುತ್ತಾರೆ ಎನ್ನುವುದು ಕೇಳಿದ್ದೇನೆ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲೀ ಈ ಬಗ್ಗೆ ಸಮಾಜಾಯಿಷಿ ನೀಡಲೇಬೇಕು. ಸುಮ್ಮನೆ ಕೊಟ್ಟದ್ದನ್ನು ಸ್ವೀಕರಿಸಲು ಇದು ಪಿಂಚಣಿ ಹಣವಲ್ಲʼʼ ಎಂದು ಹೇಳಿದ್ದಾರೆ.
ಇದೇ ವೇಳೆ ʼಪೂಕಾಲಂʼ ಮಲಯಾಳಂ ಚಿತ್ರದ ನಟನೆಗೆ ವಿಜಯರಾಘವನ್ ಅವರನ್ನು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪರಿಗಣಿಸಿರುವ ನಿರ್ಧಾರಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರೂ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೀಗಾಗಿ ಈ ನಿರ್ಧಾರವನ್ನೂ ಪ್ರಶ್ನಿಸಿದ್ದಾರೆ. ಅದಾಗ್ಯೂ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ವಿಜಯರಾಘವನ್ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಊರ್ವಶಿ ಈ ರೀತಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ 2006ರಲ್ಲಿ ʼಅಚ್ಚುವಿಂಡೆ ಅಮ್ಮʼ ಮಲಯಾಳಂ ಸಿನಿಮಾದಲ್ಲಿನ ನಟನೆಗೆ ಊರ್ವಶಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದರು. ಈ ನಿರ್ಧಾರವನ್ನೂ ಅವರು ಪ್ರಶ್ನಿಸಿದ್ದರು. ಈ ಬಾರಿ ಪ್ರಶಸ್ತಿ ಸ್ವೀಕರಿಸಬೇಕೆ ಬೇಡವೇ ಎನ್ನುವುದನ್ನು ಆಮೇಲೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.