ವಿಜಯ್ ರಾಘವೇಂದ್ರ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ʻಸೀತಾರಾಮ್ ಬಿನೋಯ್ʼ ಸಿನಿಮಾದಲ್ಲಿ! ತನ್ನ ಬಿಗಿಯಾದ ನಿರೂಪಣೆಯಿಂದ ಸಿನಿಪ್ರಿಯರ ಗಮನಸೆಳೆದಿತ್ತು. ವಿಜಯ್ ರಾಘವೇಂದ್ರಗೂ ಹೊಸ ಇಮೇಜ್ ತಂದುಕೊಟ್ಟಿತ್ತು. ಇದೀಗ ಅದೇ ತಂಡ ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ ಸಿನಿಮಾ ಮಾಡಿದೆ. ಇದು ʻಸೀತಾರಾಮ್ ಬಿನೋಯ್ʼ ಸಿನಿಮಾದ ಸೀಕ್ವೇಲ್! ಹಾಗಾದರೆ, ಮೊದಲ ಭಾಗದಂತೆ, ಇದು ಕೂಡ ಉತ್ತಮವಾಗಿ ಮೂಡಿಬಂದಿದೆಯಾ? ಖಂಡಿತ ಅದನ್ನೂ ಮೀರಿಸಿದೆ!
ಏನಿದು ಸೆಕೆಂಡ್ ಕೇಸ್?
ಮಲೆನಾಡಿನ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಸೀತಾರಾಮ್‌ಗೆ (ವಿಜಯ್ ರಾಘವೇಂದ್ರ) ಸಾಲು ಸಾಲು ಕೊಲೆಗಳು ತಲೆನೋವಾಗಿರುತ್ತವೆ. ಆ ಕೊಲೆಗಳ ಪೋಸ್ಟ್‌ಮಾರ್ಟಮ್ ನಡೆಸುವ ವೈದ್ಯರು, ಈ ಕೊಲೆಗಾರ ಒಬ್ಬ ಸೈಕೋಪಾತ್ ಇರಬಹುದೆಂದು ಅಂತಾರೆ. ಸೀತಾರಾಮ್ ಗಂಭೀರವಾಗಿ ತನಿಖೆಯಲ್ಲಿ ತೊಡಗುತ್ತಾನೆ. ಪ್ರತಿ ಬಾರಿ ಅವನು ಕೊಲೆಗಾರನನ್ನು ಹಿಡಿದುಬಿಟ್ಟೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ, ಮತ್ತೊಂದು ಹೆಣ ಪತ್ತೆಯಾಗುತ್ತದೆ. ಇದರಿಂದ ಕೊಲೆಗಾರ ಯಾರಿರಬಹುದು ಎಂಬ ರಹಸ್ಯವನ್ನು ಮತ್ತಷ್ಟು ಜಟಿಲವಾಗುತ್ತದೆ. ಇದೇ ಈ ಸಿನಿಮಾ ಮೇಜರ್ ಪ್ಲಸ್ ಪಾಯಿಂಟ್. ಪ್ರೇಕ್ಷಕ ಊಹಿಸಿದ್ದನ್ನು ತಲೆಕೆಳಗಾಗಿಸಿ, ಮತ್ತೇನೋ ಹೊಸದೊಂದು ಟ್ವಿಸ್ಟ್ ನೀಡುವ ದೇವಿಪ್ರಸಾದ್ ಶೆಟ್ಟಿ, ಈ ಬಾರಿ ಕೊಂಚ ಜಾಸ್ತಿಯೇ ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಮಿಂಚಿದ ರಾಘು
ವಿಜಯ್ ರಾಘವೇಂದ್ರ ಅವರು ದಿನ ಕಳೆದಂತೆ ಪೊಲೀಸ್ ಅಧಿಕಾರಿ ಪಾತ್ರಗಳಿಗೆ ಬಹಳ ಆಪ್ತವಾಗುತ್ತಿದ್ದಾರೆ. ಇಲ್ಲಿಯೂ ಕೂಡ ಅವರು ಸೀತಾರಾಮ್ ಪಾತ್ರವನ್ನು ಜೀವಿಸಿದ್ದಾರೆ. ಪೊಲೀಸರ ಟೆನ್ಷನ್, ಮೇಲಾಧಿಕಾರಿಗಳ ಒತ್ತಡ, ಅಪರಾಧಿಯನ್ನು ಹುಡುಕಾಟದ ಶೈಲಿ.. ಎಲ್ಲವು ಓರ್ವ ಅನುಭವಿ ಪೊಲೀಸ್ ಅಧಿಕಾರಿಯನ್ನೇ ನೆನಪು ಮಾಡುತ್ತವೆ. ಅಷ್ಟರಮಟ್ಟಿಗೆ ಪಾತ್ರದಲ್ಲಿ ಲೀನವಾಗಿದ್ದಾರೆ ವಿಜಯ್. ಅವರನ್ನು ಇಲ್ಲಿ ಸೂಪರ್ ಹೀರೋ ರೀತಿಯಲ್ಲೇನೂ ಬಿಂಬಿಸಿಲ್ಲ. ಓರ್ವ ಸಿಂಪಲ್ ಇನ್ಸ್‌ಪೆಕ್ಟರ್ ಯಾವ ರೀತಿಯಲ್ಲಿ ಇರುತ್ತಾರೋ, ಅಷ್ಟೇ ಸಿಂಪಲ್ ಆಗಿ ಸೀತಾರಾಮ್ ಪಾತ್ರವನ್ನು ಕಟ್ಟಿಕೊಡಲಾಗಿದೆ.
ಹೊಸ ಕೇಸ್‌ನೊಂದಿಗೆ ಅಖಾಡಕ್ಕಿಳಿದ ವಿಜಯ್ ರಾಘವೇಂದ್ರ; ಈ ಬಾರಿ ಯಾರೆಲ್ಲಾ ಸಾಥ್ ಕೊಟ್ರು ನೋಡಿ
ಜೊತೆಗೆ ಕಥೆಗೆ ಬಲವಾದ ಟಿಸ್ಟ್ ನೀಡುವುದಕ್ಕೆ ಸಹಾಯಕವಾಗಿರುವುದು ನಟ ಗೋಪಾಲ್ ಕೃಷ್ಣ ದೇಶಪಾಂಡೆ. ಸೆಬಾಸ್ಟಿಯನ್ ಪಾತ್ರವನ್ನು ನೀರು ಕುಡಿದಷ್ಟೇ ಸುಲಭವಾಗಿ ನಿಭಾಯಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಬರುವ ಇನ್ನೂ ಅನೇಕ ಪಾತ್ರಗಳನ್ನು ಕಥೆಗೆ ತಕ್ಕಂತೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕಲಾವಿದರು.
ಮೇಕಿಂಗ್ ಹೇಗಿದೆ?
ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ತಮ್ಮ ಹಿಂದಿನ ಎರಡು ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ಅವರ ಕೆಲಸ ಅತ್ಯುತ್ತಮ. ಒಂದು ಕ್ರೈಮ್ ಸ್ಟೋರಿಯಲ್ಲೂ ಅದಕ್ಕೊಂದು ಭಾವನಾತ್ಮಕ ಎಳೆ ಜೊತೆಗೆ ಫ್ಯಾಮಿಲಿ ಎಮೋಷನ್ಸ್ ಕೂಡ ಮಿಕ್ಸ್ ಮಾಡಿದ್ದಾರೆ. ಒಂದೊಂದೇ ಲೇಯರ್ ಮೂಲಕ ಕಥೆಯನ್ನು ವಿಸ್ತರಿಸುತ್ತಾ, ಒಂದು ಹಂತದಲ್ಲಿ ಪ್ರೇಕ್ಷಕರನ್ನು ಕೂಡ ತನಿಖಾಧಿಕಾರಿಗಳನ್ನಾಗಿ ಬರಸೆಳೆದುಕೊಳ್ಳುವಂತಹ ಸ್ಕ್ರಿಪ್ಟ್ ಅನ್ನು ಮಾಡಿಕೊಂಡಿರುವುದು ಅವರಿಲ್ಲಿ ಸಾಕಷ್ಟು ಮಾಗಿದ್ದಾರೆ.
ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ಒಂದೊಂದು ಕಥೆಗಳಿಗೂ ಅದರದ್ದೇ ಆದ ತೂಕವಿದೆ. ಕ್ಲೈಮ್ಯಾಕ್ಸ್‌ನಲ್ಲಿ ತುಸು ಅವಸರ ಮಾಡಿದರೇನೋ ಎನಿಸುತ್ತದೆ. ಇನ್ನಷ್ಟು ವಿವರಣೆಗಳನ್ನು ನೀಡಬಹುದಿತ್ತು. ಆದರೆ ಪ್ರೀ-ಕ್ಲೈಮ್ಯಾಕ್ಸ್ ಹೊತ್ತಿಗೆ ಸಿನಿಮಾ ತೆಗೆದುಕೊಳ್ಳುವ ಟ್ವಿಸ್ಟ್‌ಗಳು ಮಾತ್ರ ಪ್ರೇಕ್ಷಕರನ್ನು ರಂಜಿಸುತ್ತವೆ.
ಸರಣಿ ಕೊಲೆಗಳನ್ನು ಸಂಗೀತದ ಜೊತೆಗೆ ಲೇಪಿಸಿರುವುದು ಹೊಸತನದಿಂದ ಕೂಡಿದೆ. ವೀಣೆಯ ಪ್ರತಿರೂಪವನ್ನು ಇಲ್ಲಿ ರೂಪಕದ ಮಾದರಿಯಲ್ಲಿ ಬಳಸಿರುವುದು ವಿಶೇಷ ಎನಿಸಿಕೊಳ್ಳುತ್ತದೆ. ಫಸ್ಟ್ ಹಾಫ್‌ಗಿಂತ ದ್ವಿತೀಯಾರ್ಧ ಹೆಚ್ಚು ರೋಚಕತೆಯಿಂದ ಕೂಡಿದೆ. ಹೆಚ್ಚು ಆರ್ಭಟವಿಲ್ಲದ ನವನೀತ್ ಶಾಮ್ ಅವರ ಹಿನ್ನೆಲೆ ಸಂಗೀತ ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ ಸಿನಿಮಾದ ಗಂಭೀರತೆಯನ್ನು ಹೆಚ್ಚು ಮಾಡಿದೆ.
ಒಟ್ಟಾರೆ, 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾವು ಮೊದಲ ಭಾಗಕ್ಕಿಂತ ಬಹಳಷ್ಟು ಉತ್ತಮವಾಗಿದೆ. ಥ್ರಿಲ್ಲರ್ ಪ್ರಿಯ ಪ್ರೇಕ್ಷಕರಿಗೆ ಖಂಡಿತವಾಗಿಯೂ ಈ ಚಿತ್ರ ನಿರಾಸೆ ಮಾಡುವುದಿಲ್ಲ.
Movie: ಸೆಕೆಂಡ್ ಕೇಸ್ ಆಫ್ ಸೀತಾರಾಮ್
Release Date: ಫೆಬ್ರವರಿ 20, 2026
Language: ಕನ್ನಡ
Genre: ಥ್ರಿಲ್ಲರ್, ಸಸ್ಪೆನ್ಸ್
Director: ದೇವಿಪ್ರಸಾದ್ ಶೆಟ್ಟಿ
Cast: ವಿಜಯ್ ರಾಘವೇಂದ್ರ, ಗೋಪಾಲ್ ದೇಶಪಾಂಡೆ, ಸಾಗರ್ ಪುರಾಣಿಕ್, ಉಷಾ ಭಂಡಾರಿ, ಮಾಲತೇಶ್,
Duration: 120 ನಿಮಿಷ
Rating: 3.5/5