Kichcha Sudeepa: ʼಡೆವಿಲ್ʼ ಚಿತ್ರಕ್ಕೆ ಒಳ್ಳೆಯದಾಗಲಿ; ನಟ ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದಿಷ್ಟು
ಸೆಪ್ಟೆಂಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕಿಚ್ಚ ಸುದೀಪ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼʼಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಮಾತನಾಡಲು ನನಗೆ ಆಸಕ್ತಿ ಇಲ್ಲ. ಹೀಗಾಗಿ ನಾನು ಇನ್ನೊಬ್ಬರ ಬಗ್ಗೆ ಮಾತನಾಡಲು ಹೋಗಲ್ಲʼʼ ಎಂದರು.

-

ಬೆಂಗಳೂರು: ನಟ ದರ್ಶನ್ (Actor Darshan) ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ (Kichcha Sudeepa), ʼʼದರ್ಶನ್ ಅವರ ʼಡೆವಿಲ್ʼ ಚಿತ್ರಕ್ಕೆ ಒಳ್ಳೆಯದಾಗಲಿ. ಎಲ್ಲ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣಬೇಕು ಎನ್ನುವುದೇ ನನ್ನ ಆಶಯ. ಅವರ ನೋವು ಅವರಿಗಿರುತ್ತದೆ. ಅವರ ಅಭಿಮಾನಿಗಳು ನೋವಿನಲ್ಲಿದ್ದಾರೆ. ಈ ಸಮಯದಲ್ಲಿ ನಾವು ಮಾತನಾಡಿದರೆ ತಪ್ಪಾಗುತ್ತದೆ. ಮಾತನಾಡಬಾರದು ಕೂಡ. ಸರ್ಕಾರ, ಕಾನೂನು ಏನು ಮಾಡಬೇಕೊ ಅದನ್ನು ಮಾಡುತ್ತದೆ. ಅದಕ್ಕೂ ನಾವು ಅಡ್ಡ ಬರಬಾರದು. ತಪ್ಪು ಸರಿ ಅಲ್ಲಿ ನಿರ್ಧಾರವಾಗುತ್ತದೆ. ಅವರೂ ಕೈಕಟ್ಟಿ ಕುಳಿತಿರುವುದಿಲ್ಲ. ಅವರು ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆʼʼ ಎಂದರು.
ʼʼಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಮಾತನಾಡಲು ನನಗೆ ಆಸಕ್ತಿ ಇಲ್ಲ. ಹೀಗಾಗಿ ನಾನು ಇನ್ನೊಬ್ಬರ ಬಗ್ಗೆ ಮಾತನಾಡಲು ಹೋಗಲ್ಲ. ಉತ್ತಮ ದಿನವನ್ನು ನಾವು ಯಾರ ಜತೆ ಕಳೆದಿಲ್ಲ? ಹಾಗೆಯೇ ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಆದರೆ ಯಾವುದೋ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಮೈಮನಸ್ಸು ಮೂಡಿತು. ಮೊದಲೇ ಹೇಳಿದಂತೆ ಸೂರ್ಯ-ಚಂದ್ರ ಅವರವರ ಜಾಗದಲ್ಲಿ ಚಂದʼʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: K 47 Movie: ಕಿಚ್ಚ ಸುದೀಪ್ ನಟನೆಯ ʼಕೆ 47ʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ʼಕೆ 47ʼ ಚಿತ್ರದ ರಿಲೀಸ್ ಡೇಟ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ತಮ್ಮ ಮುಂಬರುವ ಚಿತ್ರದ ರಿಲೀಸ್ ಡೇಟ್ ಪ್ರಕಟಿಸಿದರು. ಈ ವರ್ಷದ ಕ್ರಿಸ್‌ಮಸ್ ವೇಳೆಗೆ ʼಕೆ 47ʼ ಸಿನಿಮಾ ತೆರೆಗೆ ಬರುವುದಾಗಿ ಘೋಷಿಸಿದರು. ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಸಿನಿಮಾವನ್ನು ನಿರ್ದೇಶಿಸಿದ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿರುವ ʼಕೆ 47ʼ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಟೀಸರ್ ಸೆಪ್ಟೆಂಬರ್ 1ರ ಸಂಜೆ 7.02 ಗಂಟೆಗೆ ರಿಲೀಸ್ ಆಗಲಿದೆ.
ವಿಶೇಷ ಎಂದರೆ ಡಿಸೆಂಬರ್‌ನಲ್ಲೇ ದರ್ಶನ್ ನಟನೆಯ ‘ಡೆವಿಲ್’ ಹಾಗೂ ಶಿವ ರಾಜ್‌ಕುಮಾರ್-ಉಪೇಂದ್ರ-ರಾಜ್ ಬಿ. ಶೆಟ್ಟಿ ಕಾಂಬಿನೇಷನ್‌ನ ‘45’ ಬಿಡುಗಡೆಯಾಗಲಿದೆ. ʼಡೆವಿಲ್ʼ ಡಿಸೆಂಬರ್ 12ರಂದು ರಿಲೀಸ್ ಆಗಲಿದ್ದು, ‘45’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ಸುದೀಪ್ ಚಿತ್ರವೂ ತೆರೆಗೆ ಬರಲಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಉಂಟಾಗುವ ಎಲ್ಲ ಸಾಧ್ಯತೆಯೂ ಇದೆ. ಇದು ಸ್ಪರ್ಧೆಯ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್, ʼʼಅವರವರ ದೃಷ್ಟಿಕೋನ, ಇದನ್ನು ನೀವು ಕಾಂಪಿಟೇಷನ್ ಎಂದಾದರೂ ತೆಗೆದುಕೊಳ್ಳಬಹುದು, ಸೆಲೆಬ್ರೇಷನ್ ಎಂದಾದರೂ ತೆಗೆದುಕೊಳ್ಳಬಹುದು. ನಾನು ಸಿನಿಮಾ ಮಾಡುತ್ತಿರುವುದು ನನ್ನ ನಿರ್ಮಾಪಕರಿಗೆ, ನನ್ನ ಥಿಯೇಟರ್ಗೆ, ನನ್ನ ಅಭಿಮಾನಿಗಳಿಗಾಗಿʼʼ ಎಂದರು.
‘ʼನಾವು ಅಂದುಕೊಂಡಂತೆ ವೇಗವಾಗಿ ಶೂಟಿಂಗ್ ಮಾಡುತ್ತಿದ್ದೇವೆ. ಈಗಾಗಲೇ ಸಿನಿಮಾದ ಶೇ. 60ರಷ್ಟು ಶೂಟ್ ಪೂರ್ಣಗೊಂಡಿದೆ. ಅಕ್ಟೋಬರ್ ವೇಳೆಗೆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಲಿದೆ. ನವೆಂಬರ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದ್ದು, ಇದಾದ ಬಳಿಕ ಅನೂಪ್ ಭಂಡಾರಿ ಜತೆಗಿನ ʼಬಿಲ್ಲ ರಂಗ ಬಾಷʼ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ಕ್ರಿಸ್ಮಸ್ಗೆ ʼಕೆ 47ʼ ಬಂದೇ ಬರುತ್ತದೆ’' ಎಂದು ಸುದೀಪ್ ಹೇಳಿದರು.