MAX OTT Release: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಒಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಸಕ್ಸಸ್ ಚಿತ್ರವಾಗಿ ಮೂಡಿಬಂದಿದೆ. ಥಿಯೇಟರ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದ್ದು ಈ ಚಿತ್ರ ಇದೀಗ ಒಟಿಟಿ ಪ್ಲ್ಯಾಟ್ ಫಾರಂನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ ಹಾಗಾದ್ರೆ ಯಾವಾಗ? ಎಲ್ಲಿ? ‘ಮ್ಯಾಕ್ಸ್’ ಬರಲಿದೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...
![ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಒಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್!](https://cdn-vishwavani-prod.hindverse.com/media/images/Max_Sudeep_1.max-1280x720.jpg)
![Profile](https://vishwavani.news/static/img/user.png)
ಬೆಂಗಳೂರು: ಸ್ಯಾಂಡಲ್‌ವುಡ್ (Sandalwood) ಸೂಪರ್ ಸ್ಟಾರ್ ಹಾಗೂ ಬಹುಭಾಷಾ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ‘ಮ್ಯಾಕ್ಸ್’ (MAX) ಇದೀಗ ಒಟಿಟಿ ಪ್ಲ್ಯಾಟ್ ಫಾರಂಗೆ (OTT) ಬರಲು ಸಜ್ಜಾಗಿದೆ. ಆ್ಯಕ್ಷನ್ ಪ್ರಿಯರ ಮೆಚ್ಚುಗೆ ಗಳಿಸಿ ಥಿಯೇಟರ್ ನಲ್ಲಿ ಧೂಳೆಬ್ಬಿಸಿದ್ದ ಮ್ಯಾಕ್ಸ್ ಸಿನೆಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದವರಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ. ಕಿಚ್ಚನ ʼಮ್ಯಾಕ್ಸ್ʼ ಚಿತ್ರ ಫೆ. 22ರ ಸುಮಾರಿಗೆ ಝೀ5 (Zee 5) ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಗೊಳ್ಳಲಿದೆ. ಈ ಚಿತ್ರ ತೆಲುಗು (Telugu) ಹಾಗೂ ಇತರ ಪ್ರಮುಖ ಭಾಷೆಗಳಲ್ಲಿ ಒಟಿಟಿಯಲ್ಲಿ ಪ್ರಸಾರಗೊಳ್ಳುವುದು ಖಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಝೀ 5 ಅಧಿಕೃತ ಪ್ರಕಟನೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ.
ʼಮ್ಯಾಕ್ಸ್ʼ ಚಿತ್ರದಲ್ಲಿ ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುವ ಭರ್ಜರಿ ಫೈಟ್ ಸೀನ್‌ಗಳಿದ್ದು ಇದರಲ್ಲಿ ಕಿಚ್ಚ ಸುದೀಪ್ ಭರ್ಜರಿಯಾಗಿ ಮಿಂಚಿದ್ದಾರೆ. ಈಗಾಗಲೇ ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿದವರು ಮೆಚ್ಚುಗೆ ಸೂಚಿಸಿದ್ದಾರೆ. ಮಾತ್ರವಲ್ಲದೇ ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಕ್ಷಣಗಳು ಮತ್ತು ಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರ ಮನ ಗೆದ್ದಿವೆ.
ʼಮ್ಯಾಕ್ಸ್ʼ ಚಿತ್ರದ ಕ್ಲೈಮಾಕ್ಸ್ ದೃಶ್ಯ ಅದ್ಭುತವಾಗಿದ್ದು, ಇದನ್ನು ಸಿನಿ ಪ್ರಿಯರು ತಮಿಳಿನ ʼಕೈದಿʼ ಮತ್ತು ʼವಿಕ್ರಂ ವೇದʼ ಚಿತ್ರಗಳೊಂದಿಗೆ ಹೋಲಿಸಿ ಖುಷಿ ಪಟ್ಟಿದ್ದಾರೆ.
ಚಿತ್ರಕಥೆಯಲ್ಲಿ ಮಾತ್ರವಲ್ಲದೇ ತಾಂತ್ರಿಕವಾಗಿಯೂ ʼಮ್ಯಾಕ್ಸ್ʼ ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು ಕಿಚ್ಚ ಸುದೀಪ್ ಮತ್ತೊಮ್ಮೆ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದಾರೆ. ಸುದೀಪ್ ಅವರ ಜತೆ ಸಹಕಲಾವಿದರ ಭರ್ಜರಿ ಪರ್ ಫಾರ್ಮೆನ್ಸ್ ಸಹ ಈ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ.
ಇದನ್ನೂ ಓದಿ: BBK 11 TRP: ಬಿಗ್ ಬಾಸ್ ಫಿನಾಲೆಗೆ ಸಿಕ್ಕ TRP ಎಷ್ಟು ಗೊತ್ತೇ?: ದಾಖಲೆ ಬರೆದ ಹನುಮಂತ ವಿನ್ ಆದ ಎಪಿಸೋಡ್
![ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನೆಮಾದ ಒಂದು ದೃಶ್ಯ.](https://cdn-vishwavani-prod.hindverse.com/media/images/Max_Sudeep_2.max-1200x800.jpg)
ʼಮ್ಯಾಕ್ಸ್ʼ ಚಿತ್ರದ ವಿಮರ್ಶೆ
ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಪರ್ಫೆಕ್ಟ್ ಡೈರೆಕ್ಷನ್ ಚಿತ್ರದ ಹೈಲೈಟ್‌ಗಳಲ್ಲೊಂದು. ತನ್ನ ಪಾಲಿಗೆ ಬಂದ ಯಾವುದೇ ಪಾತ್ರವನ್ನಾದ್ರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ‘ಅಭಿನಯ ಚಕ್ರವರ್ತಿಯ’ ನಟನಾ ಪ್ರತಿಭೆಗೊಂದು ಇಲ್ಲಿ ‘ಮ್ಯಾಕ್ಸಿಮಮ್’ ಸ್ಕೋಪ್ ಇದೆ. ಮಾಸ್ ಕಥೆಗೆ ಸ್ವಲ್ಪ ಥ್ರಿಲ್ಲರ್ ಮಿಕ್ಸ್ ಮಾಡಿ ಕನ್ನಡದ ಸಿನಿ ಪ್ರೇಕ್ಷಕರೆದುರು ಇಟ್ಟಿದ್ದಾರೆ ಡೈರೆಕ್ಟರ್. ಅಷ್ಟರಮಟ್ಟಿಗೆ ಇದು ಬಿಗಿ ಚಿತ್ರಕಥೆಯೊಂದಿಗೆ ಸಾಗುವ ಸಿನೆಮಾ ಎನ್ನಲಡ್ಡಿಯಿಲ್ಲ.
ಇಡೀ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಅದೇ ಕಾರಣದಿಂದ ಆಗಾಗ ತಮಿಳಿನ ‘ಕೈದಿ' ಸಿನಿಮಾವನ್ನು ನೆನಪಿಸಿದರೂ, ‘ಮ್ಯಾಕ್ಸ್’ ಕೊಡುವ ಮಜ ಬೇರೆಯದ್ದೇ. ಇಲ್ಲಿ ಪ್ರೇಕ್ಷಕರ ಊಹೆಗೆ ನಿಲುಕದೇ ಕಥೆ ಸಾಗುವ ಮೂಲಕ ಸಿನಿಮಾ ಸದಾ ಹೊಸ ಟ್ವಿಸ್ಟ್ ನೀಡುತ್ತದೆ. ʼಮ್ಯಾಕ್ಸ್ʼ ಸಿನಿಮಾ ನೇರ ಕಥೆಯಿಂದಲೇ ಆರಂಭವಾಗುತ್ತದೆ. ಆ ಮಟ್ಟಿನ ವೇಗದೊಂದಿಗೆ ಸಿನಿಮಾ ಸಾಗುವ ಮೂಲಕ ಬೇಡದ ದೃಶ್ಯಗಳಿಂದ ಇದು ಮುಕ್ತವಾಗಿದೆ. ಆ ವೇಗವೇ ಈ ಸಿನಿಮಾದ ಪ್ಲಸ್ ಪಾಯಿಂಟ್ ಕೂಡ.
![ಮ್ಯಾಕ್ಸ್](https://cdn-vishwavani-prod.hindverse.com/media/images/Max_Sudeep_3.max-1200x800.jpg)
ನಾಳಿನ ದಿವಸ ಡ್ಯೂಟಿಗೆ ಹಾಜರಾಗಬೇಕಾಗಿರುವ ಪೊಲೀಸ್ ಅಧಿಕಾರಿಯೊಬ್ಬ ಮುಂಚಿನ ದಿನ ರಾತ್ರಿಯೇ ಸ್ಟೇಷನ್‌ಗೆ ಸಾದಾ-ಸೀದಾ ಎಂಟ್ರಿ ಕೊಟ್ರೆ ಹೇಗಿರುತ್ತೆ ಎನ್ನುವುದೇ ‘ಮ್ಯಾಕ್ಸ್’ನ ಒನ್ ಲೈನ್ ಕಥೆ. ದುಷ್ಟರನ್ನು ಮಟ್ಟ ಹಾಕುತ್ತಾ, ಪೊಲೀಸ್ ಖದರ್ ತೋರಿಸುತ್ತಾ ಈ ಕಥೆ ನೀಟಾಗಿ ಸಾಗುತ್ತದೆ. ಟೈಮ್ ಟು ಟೈಮ್ ಇಲ್ಲಿ ಗೇಮ್ ಬದಲಾಗುತ್ತಾ ಸಾಗುವ ಮೂಲಕ ಚಿತ್ರ ಪ್ರೇಕ್ಷಕರನ್ನು ತಮ್ಮ ಜತೆಗೆ ಹೆಜ್ಜೆ ಹಾಕಿಸುತ್ತದೆ.
ವರಲಕ್ಷ್ಮೀ ಶರತ್ ಕುಮಾರ್, ಸುನಿಲ್, ಉಗ್ರಂ ಮಂಜು, ಸಂಯುಕ್ತಾ, ಸುಕೃತಾ, ಸುಧಾ ಬೆಳವಾಡಿ ಮೊದಲಾದವರು ಕಥೆಗೆ ಪೂರಕವಾಗಿ ಪಾತ್ರ ಪೋಷಣೆ ನಡೆಸಿಕೊಂಡು ಹೋಗಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ವೇಗಕ್ಕೆ ಪೂರಕವಾಗಿದೆ.