ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ನಿನ್ನೆ (ಮೇ 10) "ಸಿ. ಜೋಸೆಫ್ ವಿಜಯ್ ಎಂಬುವವನಾದ ನಾನು.." ಎಂದು ನಟ ದಳಪತಿ ವಿಜಯ್ ಹೇಳುತ್ತಿದ್ದಂತೆಯೇ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಭಿಮಾನಿಗಳ ಎಷ್ಟೋ ವರ್ಷದ ಕನಸು ಆ ಕ್ಷಣಕ್ಕೆ ನನಸಾಗಿತ್ತು. ಚೆನ್ನೈನ ನೆಹರೂ ಸ್ಟೇಡಿಯಂ ವಿಜಯ್ ಅಭಿಮಾನಿಗಳ ಅಭಿಮಾನದಲ್ಲಿ ತುಂಬಿಹೋಗಿತ್ತು. ಆದರೆ, ನಿಮಗೆ ಗೊತ್ತಾ? ಇದೇ ನೆಹರೂ ಸ್ಟೇಡಿಯಂನಲ್ಲಿ ಸರಿಯಾಗಿ 13 ವರ್ಷಗಳ ಹಿಂದೆ ವಿಜಯ್‌ಗೆ ದೊಡ್ಡ ಅವಮಾನವೇ ಆಗಿತ್ತು!
ವಿಜಯ್‌ಗೆ ಅಂದು ಏನಾಗಿತ್ತು?
2013ರ ಆಗಸ್ಟ್ 9ರಂದು ವಿಜಯ್ ಅವರ ತಲೈವಾ ಸಿನಿಮಾ ತೆರೆಗೆ ಸಿದ್ಧವಾಗಿತ್ತು. ಆಗ ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದರು. ತಲೈವಾ ಸಿನಿಮಾದಲ್ಲಿ ಟ್ಯಾಗ್‌ಲೈನ್ ಎಐಎಡಿಎಂಕೆ ಪಕ್ಷಕ್ಕೆ ಕಿರಿಕಿರಿ ಉಂಟು ಮಾಡಿತು. ಅದೇನಪ್ಪ ಅಂದ್ರೆ, ʻಟೈಮ್ ಟು ಲೀಡ್ʼ ಎಂಬ ಟ್ಯಾಗ್‌ಲೈನ್. ಜೊತೆಗೆ ಚಿತ್ರದ ಹಾಡೊಂದರಲ್ಲೂ ವಿಜಯ್ ಮುಂದಿನ ಲೀಡರ್ ಎಂಬರ್ಥದ ಸಾಲುಗಳನ್ನು ಬಳಲಸಾಗಿತ್ತು. ಇದು ಜಯಲಲಿತಾಗೆ ಸಹಿಸಿಕೊಳ್ಳಲು ಆಗಲಿಲ್ಲ.
ಮುಖ್ಯಮಂತ್ರಿಯಾಗಿ ಇಂದು ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕಾರ; ತ್ರಿಶಾ, ರಾಹುಲ್ ಗಾಂಧಿ ಸೇರಿ ಹಲವರು ಭಾಗಿ
ಸರಿಯಾದ ಸಮಯಕ್ಕೆ ಜಯಲಲಿತಾ ಸರ್ಕಾರವು ಸಿನಿಮಾವನ್ನು ರಿಲೀಸ್ ಮಾಡಲು ಬಿಡಲಿಲ್ಲ. ಮುಖ್ಯಮಂತ್ರಿಗಳಿಗೆ ಟಕ್ಕರ್ ಕೊಡುವಂತಹ ಅಂಶಗಳು ಈ ಸಿನಿಮಾದಲ್ಲಿವೆ ಎಂಬಂತೆ ಬಿಂಬಿಸಲಾಗಿತ್ತು. ಕೊನೆಗೆ ಆಗಸ್ಟ್ 9ರಂದು ತಮಿಳುನಾಡು ಮತ್ತು ಪುದುಚ್ಚೇರಿ ಬಿಟ್ಟು ಬೇರೆಲ್ಲಾ ಕಡೆ ಈ ಸಿನಿಮಾ ತೆರೆಕಂಡಿತ್ತು. ನಂತರದ ದಿನಗಳಲ್ಲಿ ತಮಿಳುನಾಡಿನಲ್ಲೂ ರಿಲೀಸ್ ಆಯಿತು.
ಈ ಘಟನೆಯಿಂದ ವಿಜಯ್ ಮೇಲೆ ಎಐಎಡಿಎಂಕೆ ಸರ್ಕಾರದ ಕೆಂಗಣ್ಣು ಬಿದ್ದಿತ್ತು. ನಂತರ ಅದು 2013ರ ಸೆಪ್ಟಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಭಾರತೀಯ ಸಿನಿಮಾರಂಗದ ಶತಮಾನೋತ್ಸವ (100 ನೇ ವರ್ಷಾಚರಣೆ) ಸಮಾರಂಭದಲ್ಲಿ ಬಹಿರಂಗವಾಯಿತು. ಆ ಸಮಯದಲ್ಲಿ ವಿಜಯ್ ಒಬ್ಬ ಸ್ಟಾರ್ ನಟ ಎನಿಸಿಕೊಂಡಿದ್ದರೂ, ಕಾರ್ಯಕ್ರಮದಲ್ಲಿ ಅವರಿಗೆ ಕೊನೆಯ ಸಾಲಿನಲ್ಲಿ ಆಸನ ನೀಡಲಾಯಿತು.
ತಮಿಳುನಾಡು ರಾಜಕೀಯವನ್ನೇ ತಿದ್ದಿ ಬರೆದ ಟಿವಿಕೆ; ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್
ತಮ್ಮ ಎದುರಾಳಿಗಳನ್ನು ಅವಮಾನ ಮಾಡುವುದರಲ್ಲಿ, ಅವರ ರಾಜಕೀಯ ಜೀವನ ಮುಗಿಸುವುದರಲ್ಲಿ ಜಯಲಲಿತಾ ಸದಾ ಮುಂದಿರುತ್ತಿದ್ದರು ಎಂಬುದು ಗುಟ್ಟಿನ ವಿಚಾರವೇನಲ್ಲ. ಅದನ್ನು ವಿಜಯ್ ವಿಚಾರದಲ್ಲೂ ತೋರಿಸಿದ್ದರು ಅಮ್ಮ! ಅಂದು ತಮಗೆ ಬೇಕೆಂದೇ ಅವಮಾನ ಮಾಡುತ್ತಿದ್ದಾರೆ, ಅಗೌರವ ತೋರುತ್ತಿದ್ದಾರೆ ಎಂಬುದು ಗೊತ್ತಿದ್ದರೂ, ವಿಜಯ್ ಗೌರವಯುತವಾಗಿ ನಡೆದುಕೊಂಡರು. ತಮಗಾದ ಅವಮಾನಕ್ಕೆ ಪ್ರತಿಯಾಗಿ ಯಾವುದೇ ಆಕ್ರೋಶವನ್ನು ವ್ಯಕ್ತಪಡಿಸಲಿಲ್ಲ.
13 ವರ್ಷಗಳ ನಂತರ ಇತಿಹಾಸ ಬದಲು
ಇಂದೇ ಕ್ರೀಡಾಂಗಣದಲ್ಲಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಪ್ರೀತಿಯನ್ನು ಕಂಡು ಪುಳಕಿತರಾಗಿದ್ದಾರೆ. ಎರಡೇ ವರ್ಷದಲ್ಲಿ ತಮಿಳುನಾಡ ರಾಜಕಾರಣವನ್ನು ಸಂಪೂರ್ಣವಾಗಿ ಬದಲಿಸಿದ್ದಾರೆ. ಅಂದಹಾಗೆ, ಇಂದು ಜಯಲಿಲಿತಾ ಅವರು ನಮ್ಮೊಂದಿಗೆ ಇಲ್ಲ. ಜೊತೆಗೆ ಅವರ ಎಐಎಡಿಎಂಕೆ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ. ಅಂದು ಬೇಕೆಂದೇ ವಿಜಯ್ ಅವರನ್ನ ಹಿಂದಿನ ಕುರ್ಚಿಗೆ ತಳ್ಳಿದ್ದರು. ಇಂದು ಅದೇ ವಿಜಯ್ ಸಿಎಂ ಕುರ್ಚಿ ಮೇಲೆ ವಿರಾಜಮಾನರಾಗಿದ್ದಾರೆ.