ಬೆಂಗಳೂರಿನಲ್ಲಿ ʻಟಾಕ್ಸಿಕ್ʼ ಟ್ರೇಲರ್ ರಿಲೀಸ್‌ಗೆ ಕ್ಷಣಗಣನೆ; ತಾಯ್ನಾಡಿನಿಂದಲೇ ದೊಡ್ಡ ಸಿಗ್ನಲ್ ಕೊಡ್ತಿದ್ದಾರೆ ಯಶ್!
'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರೀಕರಣ ಆರಂಭವಾಗಿ ಭರ್ತಿ 2 ವರ್ಷ ಪೂರೈಸುತ್ತಿರುವ ಈ ದಿನದಂದು ದೇಶದ ವಿವಿಧ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣಗೊಳ್ಳಲಿದೆ.
-
ಭಾರತೀಯ ಚಿತ್ರರಂಗದಲ್ಲೇ ತೀವ್ರ ಕುತೂಹಲ ಕೆರಳಿಸಿರುವ ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 8ರಂದು ಬಿಡುಗಡೆಯಾಗಲಿರುವ ಈ ಬಹುನಿರೀಕ್ಷಿತ ಟ್ರೇಲರ್‌ಗೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಲಿದೆ.
ವಿಶೇಷವೆಂದರೆ, ನಟ ಯಶ್ ಮತ್ತು ನಿರ್ಮಾಣ ಸಂಸ್ಥೆ ಕೆವಿಎನ್ (KVN) ಪ್ರೊಡಕ್ಷನ್ಸ್‌ಗೆ ಬೆಂಗಳೂರೇ ತವರೂರು. ಹೀಗಾಗಿ ತಮ್ಮ ತಾಯ್ನಾಡಿನಿಂದಲೇ ಚಿತ್ರದ ಜಾಗತಿಕ ಪ್ರಚಾರಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾದ ಚಿತ್ರೀಕರಣ ಆರಂಭವಾಗಿ ಭರ್ತಿ 2 ವರ್ಷ ಪೂರೈಸುತ್ತಿದ್ದು, ಈ ವಿಶೇಷ ದಿನದಂದೇ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಬೆಂಗಳೂರಿಗೆ ಹರಿದುಬರಲಿದ್ದಾರೆ ವಿವಿಧ ರಾಜ್ಯಗಳ ಪತ್ರಕರ್ತರು
ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೊದಲ ಅಧಿಕೃತ ಪತ್ರಿಕಾಗೋಷ್ಠಿ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಅದ್ಧೂರಿ ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ನೂರಾರು ಪತ್ರಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳು ರಾಜಧಾನಿಗೆ ಆಗಮಿಸುತ್ತಿದ್ದು, ಬೆಂಗಳೂರಿನಿಂದಲೇ 'ಟಾಕ್ಸಿಕ್' ಅಲೆಯು ದೇಶಾದ್ಯಂತ ವ್ಯಾಪಿಸಲಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಯಶ್ ಹವಾ ಕಾಯ್ದುಕೊಂಡಿದ್ದರೂ, ತವರೂರನ್ನು ಮರೆಯದ ಅವರ ನಡೆಗೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಹಸ್ಯಗಳಿಗೆ ತೆರೆ ಎಳೆಯಲಿದೆ ಟ್ರೇಲರ್
ಇಲ್ಲಿಯವರೆಗೆ ಬಿಡುಗಡೆಯಾಗಿರುವ ಟೀಸರ್ ಮತ್ತು ಪೋಸ್ಟರ್‌ಗಳು ಸಿನಿಮಾದ ಕಥೆಯನ್ನು ಬಿಟ್ಟುಕೊಡದೆ ತೀವ್ರ ಕುತೂಹಲ ಕಾಯ್ದುಕೊಂಡಿದ್ದವು. ಇದೀಗ ಅನಾವರಣಗೊಳ್ಳಲಿರುವ ಟ್ರೇಲರ್, ಚಿತ್ರದ ಬೃಹತ್ ಕ್ಯಾನ್ವಾಸ್, ಅದ್ಧೂರಿ ಮೇಕಿಂಗ್, ಪಾತ್ರಗಳ ಪರಿಚಯ ಹಾಗೂ ಯಶ್ ಅವರ ರಗಡ್ ಲುಕ್‌ನ ನೈಜ ಜಗತ್ತನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ.
ಆ.26ಕ್ಕೆ ವಿಶ್ವಾದ್ಯಂತ ರಿಲೀಸ್
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್‌ನ ತಾರಾಗಣವಿದೆ. ಒಂದೇ ಸಮಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ತೆರೆಗೆ ಬರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ದೃಶ್ಯಕಾವ್ಯವು ಬುಧವಾರ, ಆಗಸ್ಟ್ 26, 2026 ರಂದು ಜಗತ್ತಿನಾದ್ಯಂತ ಬೆಳ್ಳಿಪರದೆಯ ಮೇಲೆ ಅಪ್ಪಳಿಸಲಿದೆ.
Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್
ವಿತರಣೆ ಮಾಡಲಿದ್ದಾರೆ ಯಶ್
'ಟಾಕ್ಸಿಕ್ʼ ಸಿನಿಮಾವು ಕರ್ನಾಟಕದಾದ್ಯಂತ ದಾಖಲೆ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ಜಂಟಿಯಾಗಿ KVN ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಸ್ವತಃ ನಿರ್ಮಾಣ ಸಂಸ್ಥೆಗಳೇ ವಿತರಣೆ ಮಾಡುತ್ತಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಓಪನಿಂಗ್ ದಾಖಲಿಸುವ ಗುರಿ ಹೊಂದಿವೆ. ಪ್ರೇಕ್ಷಕರು ಮೊದಲ ದಿನವೇ ಸಿನಿಮಾವನ್ನು ವೀಕ್ಷಿಸಲು ಅನುಕೂಲವಾಗುವಂತೆ ಮುಂಜಾನೆಯ ಶೋಗಳು ಹಾಗೂ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.