ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಟಾಕ್ಸಿಕ್ʼ ಶೂಟಿಂಗ್‌ ಟೈಮ್‌ನಲ್ಲಿ ಗರ್ಭಿಣಿ ಕಿಯಾರಾ ಅಡ್ವಾಣಿಗೆ ಬಾಡಿಗಾರ್ಡ್ ಆಗಿದ್ದ ಯಶ್: ಬಾಲಿವುಡ್‌ ನಟಿಯ ಡೆಡಿಕೇಷನ್‌ಗೆ ʻರಾಕಿಂಗ್ ಸ್ಟಾರ್ʼ ಫಿದಾ!

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರೀಕರಣದ ವೇಳೆ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಬದ್ಧತೆಯನ್ನು ನಟ ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂಬೈನಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ಸೆಟ್‌ನಲ್ಲಿ ಕಿಯಾರಾಗೆ ಬೌನ್ಸರ್‌ನಂತೆ ಕಾಳಜಿ ವಹಿಸಿದ್ದಾಗಿ ತಿಳಿಸಿದರು.

'ಟಾಕ್ಸಿಕ್' ಶೂಟಿಂಗ್ ‌ವೇಳೆ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್‌ ಆಗಿದ್ದ ಯಶ್!

-

Avinash GR
Avinash GR Aug 14, 2026 11:43 AM

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairytale for Grown-Ups) ಚಿತ್ರೀಕರಣದ ದಿನಗಳ ಅನುಭವಗಳನ್ನು ನಟ ಯಶ್ ಹಂಚಿಕೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರನ್ನು ತಾವು ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್, ಬೌನ್ಸರ್ ಅಥವಾ ಬಾಡಿಗಾರ್ಡ್‌ನಂತೆ ನಿಂತು ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದಾಗಿ ಯಶ್ ಹೇಳಿಕೊಂಡಿದ್ದಾರೆ.

ಮುಂಬೈನಲ್ಲಿ ಗುರುವಾರ (ಆ.13) ಅದ್ಧೂರಿಯಾಗಿ ಜರುಗಿದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ಕಿಯಾರಾ ಅವರ ಶ್ರಮ ಮತ್ತು ವೃತ್ತಿಪರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ತಾಯಿಯಾದ ನಂತರ ಕಿಯಾರಾ ಅಡ್ವಾಣಿ ಅವರ ಅಭಿನಯದಲ್ಲಿ ತೆರೆಗೆ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಸೆಟ್‌ನಲ್ಲಿ ನಾವಿಬ್ಬರೂ ಕಿಯಾರಾಗೆ ಬೌನ್ಸರ್‌ಗಳಂತಿದ್ದೆವು

ವೇದಿಕೆಯಲ್ಲಿ ಕಿಯಾರಾ ಅವರ ಶ್ರಮವನ್ನು ಕೊಂಡಾಡಿದ ಯಶ್, "ಕಿಯಾರಾ ನಿಜಕ್ಕೂ ಅಪ್ಪಟ ವೃತ್ತಿಪರ ನಟಿ. ಈ ಸಿನಿಮಾದ ಶೂಟಿಂಗ್ ಹೆಚ್ಚು ಶ್ರಮ ಬೇಡುತ್ತಿದ್ದ ಕಾರಣ, ಅವರು ಸೆಟ್‌ಗೆ ಬಂದಾಗ ನನಗೆ ಕೊಂಚ ಆತಂಕವಿತ್ತು. ಮೊದಲ ದಿನವೇ ಅವರು, 'ನೀವು ಎಂದಾದರೂ ಮಳೆಯ ಸನ್ನಿವೇಶಗಳಲ್ಲಿ ನಟಿಸಿದ್ದೀರಾ?' ಎಂದು ಕೇಳಿದ್ದರು. ಅದಕ್ಕೆ ನಾನು, 'ಇಲ್ಲ, ಆದರೆ ಇದು ಸುಲಭವಾಗಿ ಹಾಗೂ ಚೆನ್ನಾಗಿ ಮೂಡಿಬರುತ್ತದೆ' ಎಂದಿದ್ದೆ. ನಂತರ ಅವರ ನಟನೆಯ ಬದ್ಧತೆಯನ್ನು ನೋಡಿ ನಾನು ದಂಗಾದೆ" ಎಂದು ಹೇಳಿದರು.

"ಗರ್ಭಿಣಿಯಾಗಿದ್ದರೂ ಸಹ ಕಿಯಾರಾ ನೂರಕ್ಕೆ ನೂರರಷ್ಟು ಬದ್ಧತೆಯಿಂದ ಶೂಟಿಂಗ್‌ನಲ್ಲಿ ಭಾಗವಹಿಸಿದರು. ಅವರ ಬಗ್ಗೆ ನನಗೂ ಮತ್ತು ನಿರ್ದೇಶಕಿ ಗೀತು ಅವರಿಗೂ ಹೆಚ್ಚು ಚಿಂತೆ ಹಾಗೂ ಕಾಳಜಿಯಿತ್ತು. ಹೀಗಾಗಿ ಸೆಟ್‌ನಲ್ಲಿ ನಾವಿಬ್ಬರೂ ಬೌನ್ಸರ್‌ಗಳು ಅಥವಾ ಬಾಡಿಗಾರ್ಡ್‌ಗಳಂತೆ ನಿಂತು ಅವರನ್ನು ನೋಡಿಕೊಳ್ಳುತ್ತಿದ್ದೆವು. ಕಿಯಾರಾ ಅವರ ಈ ಡೆಡಿಕೇಷನ್‌ಗೆ ನಾನು ಋಣಿ, ಈ ಸಿನಿಮಾ ನಿಜಕ್ಕೂ ಅವರಿಗೆ ವಿಶೇಷವಾದುದು" ಎಂದರು ಯಶ್‌.

ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದ ರಾಕಿಂಗ್ ಸ್ಟಾರ್

ಈ ಚಿತ್ರದ 'ತಬಾಹಿ' ಹಾಡು ಬಿಡುಗಡೆಯಾದ ಸಂದರ್ಭದಲ್ಲಿ, ಅದರಲ್ಲಿನ ಬೋಲ್ಡ್ ದೃಶ್ಯಗಳಿಗಾಗಿ ಕಿಯಾರಾ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ಟ್ರೋಲಿಂಗ್ ಹಾಗೂ ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಟ್ರೇಲರ್ ಲಾಂಚ್‌ ವಿಎಂಟ್‌ನಲ್ಲಿ ಕಿಯಾರಾ ಪರವಾಗಿ ಧ್ವನಿ ಎತ್ತಿದ್ದ ಯಶ್, "ಒಬ್ಬ ಕಲಾವಿದೆಯಾಗಿ ಎದುರಾಗುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನೀವು ನಂಬಿದ ಕೆಲಸವನ್ನು ಮುಂದುವರಿಸಿ, ಪ್ರೇಕ್ಷಕರು ಅದನ್ನು ಖಂಡಿತವಾಗಿ ಸಂಭ್ರಮಿಸುತ್ತಾರೆ. ಸದ್ಯಕ್ಕೆ ನಾವೆಲ್ಲರೂ ಕಾಲಕ್ಕಿಂತ ಸ್ವಲ್ಪ ಮುಂದಿದ್ದೇವೆ ಅಷ್ಟೇ" ಎಂದು ಧೈರ್ಯ ತುಂಬಿದ್ದರು.

ಅಯ್ಯೋ, ಟಾಕ್ಸಿಕ್‌ ರಿಲೇಷನ್‌ಶಿಪ್‌ನಿಂದ ನಲುಗಿಹೋದರೇ ನಟಿ ಅನುಪಮಾ ಪರಮೇಶ್ವರನ್?‌ ಎಲ್ಲರ ಕಣ್ಣು ಆ ಸ್ಟಾರ್‌ ಹೀರೋ ಪುತ್ರನ ಮೇಲೆ ಬಿತ್ತು!

ಡಬಲ್ ರೋಲ್‌ನಲ್ಲಿ ಯಶ್

2022ರ ಬ್ಲಾಕ್‌ಬಸ್ಟರ್ 'ಕೆಜಿಎಫ್ ಚಾಪ್ಟರ್ 2' ನಂತರ ಯಶ್ ನಟಿಸಿರುವ ಬಹುನಿರೀಕ್ಷಿತ ಗ್ಯಾಂಗ್‌ಸ್ಟರ್ ಆಕ್ಷನ್-ಡ್ರಾಮಾ ಚಿತ್ರವಿದು. ಈ ಚಿತ್ರದಲ್ಲಿ ಯಶ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಟ್ರೇಲರ್‌ನಲ್ಲಿ ತಂದೆ-ಮಗನ ರಿವೇಂಜ್ ಕಥೆಯ ಜೊತೆಗೆ ಭೀಕರ ಆಕ್ಷನ್ ಝಲಕ್ ಅನಾವರಣಗೊಂಡಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಜೊತೆಗೆ ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ.

ಏಕಕಾಲದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ. ಯಶ್ ಅವರ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು ವೆಂಕಟ್ ಕೆ. ನಾರಾಯಣ ಅವರ 'ಕೆವಿಎನ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಆಗಸ್ಟ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.