ಲಂಡನ್‌ಗೆ ಹೊರಟಿದ್ದ ಸಿಜೆಪಿ ಸಂಚಾಲಕ ಸೌರವ್ ದಾಸ್‌ಗೆ ವಿಮಾನ ನಿಲ್ದಾಣದಲ್ಲಿ ತಡೆ
CJP co-convener Saurav Das: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಚಾಲಕ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದಾರೆ. ಪಾಸ್‌ಪೋರ್ಟ್ 'ಫ್ಲ್ಯಾಗ್' ಆಗಿದೆ ಎಂಬ ಕಾರಣ ನೀಡಿ ವಿಮಾನ ಹತ್ತದಂತೆ ತಡೆದಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಸೌರವ್ ದಾಸ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
Saurav Das -
ನವದೆಹಲಿ, ನ.24: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಹಾಗೂ ವಕ್ತಾರ ಸೌರವ್ ದಾಸ್ ಅವರನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಮಂಗಳವಾರ ಬೆಳಗಿನ ಜಾವ 1 ಗಂಟೆಯ ವಿಮಾನದಲ್ಲಿ ಪ್ರಯಾಣಿಸಲು ಸಜ್ಜಾಗಿದ್ದ ವೇಳೆ, ವಲಸೆ ತಪಾಸಣಾ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಫ್ಲ್ಯಾಗ್ ಮಾಡಲಾಗಿದೆ ಎಂದು ತಿಳಿಸಿ ಅಧಿಕಾರಿಗಳು ವಿಮಾನ ಹತ್ತದಂತೆ ತಡೆದಿದ್ದಾರೆ ಎಂದು ಸೌರವ್ ದಾಸ್ ಆರೋಪಿಸಿದ್ದಾರೆ.
ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಸೇರಿದಂತೆ ಇಂಗ್ಲೆಂಡ್‌ನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಕಾಕ್ರೋಚ್ ಚಳವಳಿ ಕುರಿತು ಮಾತನಾಡಲು ಭಾರತೀಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅವರು ತೆರಳುತ್ತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವಲಸೆ ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ತಡೆದು, ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸೌರವ್ ದಾಸ್ ಅವರ ವಿಡಿಯೊ ನೋಡಿ
🚨This coward government did not allow me to board my flight to London where I was invited by prestigious universities like Oxford, Cambridge, LSE, Edinburgh to deliver talks on the cockroach movement. Indian students put their heart and soul to organise the events but this anti-intellectual govt was scared of me going to these prestigious institutions! @Cockroachisback
— Saurav Das (@SauravDassss) November 23, 2026
ನಾನು ವಿಜಯ್ ಮಲ್ಯ ಆಗಿರಬೇಕಿತ್ತು...
ತಮ್ಮ ಪ್ರಯಾಣಕ್ಕೆ ತಡೆ ಒಡ್ಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸೌರವ್ ದಾಸ್, "ವಿದ್ಯಾವಂತ ಯುವಕನೊಬ್ಬ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡುವುದಕ್ಕೆ ಸರ್ಕಾರ ಏಕೆ ಇಷ್ಟೊಂದು ಹೆದರುತ್ತಿದೆ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, "ನಾನು ನೀರವ್ ಮೋದಿ ಅಥವಾ ವಿಜಯ್ ಮಲ್ಯ ಆಗಿರಬೇಕಿತ್ತು, ಆಗ ಆರಾಮವಾಗಿ ದೇಶ ಬಿಟ್ಟು ಹೋಗಬಹುದಿತ್ತು" ಎಂದು ವ್ಯಂಗ್ಯವಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಸೌರವ್ ದಾಸ್ ಅವರ ಈ ಪೋಸ್ಟ್ ಮತ್ತು ಆರೋಪಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಹಲವು ನೆಟ್ಟಿಗರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಸ್‌ಪೋರ್ಟ್ ಫ್ಲ್ಯಾಗ್ ಆಗಲು ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಜೆಪಿಯ ಭಾರತ ವಿರೋಧಿ ಅಭಿಯಾನಕ್ಕೆ ವಿದೇಶಿ ಹಣಕಾಸು ನೆರವು, ಪಾಕಿಸ್ತಾನದ ನಂಟು: ಸಾಕ್ಷಿ ಇದೆ ಎಂದ ಕೇಂದ್ರ