ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್: ಜೀ ಕನ್ನಡದಲ್ಲಿ ಪುಟಾಣಿಗಳ ಸ್ವರ ಸಂಭ್ರಮ
ʻಸರಿಗಮಪ ಲಿಟಲ್ ಚಾಂಪ್ಸ್ʼ ಹೊಸ ಆವೃತ್ತಿಯು ಏಪ್ರಿಲ್ 18ರಿಂದ ಜೀ ಕನ್ನಡ ವಾಹಿನಿಯಲ್ಲಿ ಅದ್ಧೂರಿಯಾಗಿ ಚಾಲನೆಗೊಳ್ಳಲಿದೆ. 3ರಿಂದ 15 ವರ್ಷದೊಳಗಿನ ಅಪ್ರತಿಮ ಪ್ರತಿಭೆಗಳನ್ನು ಗುರುತಿಸುವ ಈ ರಿಯಾಲಿಟಿ ಶೋನಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿ ಪುಟಾಣಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
-
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯಲ್ಲಿ ನೃತ್ಯದ ಅಲೆ ಎಬ್ಬಿಸಿದ ನಂತರ, ಜೀ ಕನ್ನಡ ವಾಹಿನಿಯು ಈಗ ಕನ್ನಡಿಗರ ಮನೆಮನಗಳಲ್ಲಿ ಸಂಗೀತದ ಸುಧೆ ಹರಿಸಲು ಸಜ್ಜಾಗಿದೆ. ನಾಡಿನ ಅಪ್ರತಿಮ ಗಾಯನ ಪ್ರತಿಭೆಗಳ ಪಾಲಿನ ಭರವಸೆಯ ವೇದಿಕೆ ‘ಸರಿಗಮಪ ಲಿಟಲ್ ಚಾಂಪ್ಸ್’ ತನ್ನ ಹೊಸ ಆವೃತ್ತಿಯೊಂದಿಗೆ ಮರಳುತ್ತಿದ್ದು, ಪುಟಾಣಿ ಗಾಯಕರ ಕಂಠಸಿರಿಯಲ್ಲಿ ಮೂಡಿಬರುವ ಸ್ವರಗಳ ಮಾಯಾಲೋಕಕ್ಕೆ ಕನ್ನಡ ವೀಕ್ಷಕರು ಸಾಕ್ಷಿಯಾಗಲಿದ್ದಾರೆ.
ಪುಟಾಣಿ ಪ್ರತಿಭೆಗಳಿಗೆ ಸಿಕ್ಕಿದೆ ಭವ್ಯ ವೇದಿಕೆ
3 ರಿಂದ 15 ವರ್ಷದೊಳಗಿನ ಅಸಾಧಾರಣ ಪ್ರತಿಭೆಗಳನ್ನು ಗುರುತಿಸುವ ಈ ರಿಯಾಲಿಟಿ ಶೋ, ಕರ್ನಾಟಕದ ಮೂಲೆ ಮೂಲೆಯ ಪುಟ್ಟ ಸಿಂಗರ್‌ಗಳ ಪಾಲಿಗೆ ದೊಡ್ಡ ವೇದಿಕೆ ಆಗಿದೆ. ಈಗಾಗಲೇ ರಾಜ್ಯಾದ್ಯಂತ ನಡೆದ ಮೆಗಾ ಆಡಿಷನ್ಸ್ ಮೂಲಕ ಆಯ್ಕೆಯಾದ ಗಾಯಕರು ಈ ಬಾರಿ ವೇದಿಕೆಯ ಮೇಲೆ ಸಂಗೀತದ ಕಮಾಲ್ ಮಾಡಲಿದ್ದಾರೆ. ಉದಯೋನ್ಮುಖ ಗಾಯಕರಿಗೆ ಕೇವಲ ವೇದಿಕೆಯನ್ನಷ್ಟೇ ನೀಡದೆ, ಅವರ ವೃತ್ತಿಪರ ಗಾಯನಕ್ಕೆ ಭದ್ರ ಬುನಾದಿ ಹಾಕುವ ಈ ಕಾರ್ಯಕ್ರಮವು ಏಪ್ರಿಲ್ 18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7. 30ಕ್ಕೆ ಪ್ರಸಾರವಾಗಲಿದೆ.
ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಿಂದ ನಟಿ ರಕ್ಷಿತಾ ಪ್ರೇಮ್ ದೂರವಾಗಿದ್ದೇಕೆ? ಸತ್ಯ ಬಿಚ್ಚಿಟ್ಟ ʻಕ್ರೇಜಿ ಕ್ವೀನ್ʼ
ಮಹಾಗುರುಗಳ ಮಾರ್ಗದರ್ಶನ
ಈ ಬಾರಿಯೂ ಸರಿಗಮಪ ವೇದಿಕೆಯ ಸೊಗಸನ್ನು ಹೆಚ್ಚಿಸಲು ಕನ್ನಡಿಗರ ನೆಚ್ಚಿನ ‘ತ್ರಿಮೂರ್ತಿ’ ತೀರ್ಪುಗಾರರು ಸಜ್ಜಾಗಿದ್ದಾರೆ. ಮಧುರ ಗಾಯನಕ್ಕೆ ಹೆಸರಾದ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ಅವರು ಪುಟಾಣಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ಅದ್ಭುತ ಮಾತುಗಳು ಮತ್ತು ಲವಲವಿಕೆಯ ನಿರೂಪಣೆಯ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ. ತೀರ್ಪುಗಾರರ ತಾಂತ್ರಿಕ ಸಲಹೆಗಳು ಮತ್ತು ಅನುಶ್ರೀ ಅವರ ಪ್ರೋತ್ಸಾಹದ ಮಾತುಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದು ಗ್ಯಾರಂಟಿ ಎನ್ನಲಾಗಿದೆ.
ಡಿಜಿಟಲ್ ವೇದಿಕೆಯಲ್ಲೂ ಸರಿಗಮಪ ಹವಾ
ಕೇವಲ ಟೆಲಿವಿಷನ್ ಪರದೆಗಷ್ಟೇ ಸೀಮಿತವಾಗದೆ, ಜೀ ಕನ್ನಡದ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಾರಿ ವಿಶೇಷ ಕಂಟೆಂಟ್‌ಗಳನ್ನು ಹರಿಯಬಿಡಲಾಗುತ್ತಿದೆ. ಸ್ಪರ್ಧಿಗಳ ಅಭ್ಯಾಸದ ಅವಧಿಯ ವಿಡಿಯೋಗಳು, ತೆರೆಯ ಹಿಂದಿನ ಹಾಸ್ಯ ಸನ್ನಿವೇಶಗಳು ಮತ್ತು ತೀರ್ಪುಗಾರರ ಸಹಜ ಪ್ರತಿಕ್ರಿಯೆಗಳ ತುಣುಕುಗಳು ವೀಕ್ಷಕರನ್ನು ಕಾರ್ಯಕ್ರಮದತ್ತ ಮತ್ತಷ್ಟು ಹತ್ತಿರವಾಗಿಸಲಿವೆ.
ಕರ್ನಾಟಕದ ಮುಂದಿನ 'ಸಿಂಗಿಂಗ್ ಸೂಪರ್ ಸ್ಟಾರ್' ಯಾರು ಎಂಬ ಕುತೂಹಲಕ್ಕೆ ಈ ಸುಂದರ ಪ್ರಯಾಣವು ಉತ್ತರ ನೀಡಲಿದೆ. ಇನ್ಮುಂದೆ ಕನ್ನಡಿಗರ ವಾರಾಂತ್ಯದ ಖುಷಿಯನ್ನ ಜೀ ಕನ್ನಡ ಹೆಚ್ಚಿಸಲಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ನಿಮ್ಮ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.