ಭೋಪಾಲ್: ಮಧ್ಯಪ್ರದೇಶದ(Madhya Pradesh) ಸಿಂಗ್ರೌಲಿ (Singrauli Violence) ಜಿಲ್ಲೆಯಲ್ಲಿ ಡಂಪರ್ ಟ್ರಕ್ಕೊಂದು ಬೈಕ್ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಭೀಕರವಾಗಿ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಕೆಲವು ಬಸ್‌ಗಳು ಮತ್ತು ಟ್ರಕ್‌ಗಳು ಸೇರಿ 11 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ(ಫೆ.15) ಸಂಜೆ ಅಮಿಲಿಯಾ ಘಾಟಿ ಬಳಿ ಈ ಅವಘಡ ಸಂಭವಿಸಿದೆ. ಪೊಲೀಸರು ಸ್ಥಳೀಯರನ್ನು ತಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಖತ್ರಿ, 'ಇಬ್ಬರು ಸವಾರರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅದಾನಿ ಸಮೂಹಕ್ಕೆ ಸೇರಿದ ಡಂಪರ್ ಟ್ರಕ್ ಉರುಳಿಬಿದ್ದಿದೆ. ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ' ಎಂದು ತಿಳಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೆಲವು ಬಸ್‌ಗಳು ಮತ್ತು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಕಾರ್ಖಾನೆ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಪೊಲೀಸರು ಸ್ಥಳೀಯರನ್ನು ತಡೆದಿದ್ದು, ಪರಿಸ್ಥಿತಿ ಸದ್ಯಕ್ಕೆ ತಿಳಿಯಾಗಿದೆ. ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮನೀಸ್ ಹೇಳಿದ್ದಾರೆ.
ಕುಂಭಮೇಳಕ್ಕೆ ತೆರಳುತ್ತಿದ್ದ 10 ಭಕ್ತರ ದಾರುಣ ಸಾವು-19 ಜನರಿಗೆ ಗಂಭೀರ ಗಾಯ!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಾರು ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಹತ್ತು ಭಕ್ತರು ದಾರುಣವಾಗಿ ಮೃತಪಟ್ಟಿದ್ದು, 19 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯ ಮೇಜಾ ಪ್ರದೇಶದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಮಹಾ ಕುಂಭಮೇಳದಿಂದ ಹಿಂತಿರುಗುತ್ತಿದ್ದ ಆಂಧ್ರಪ್ರದೇಶ ಮೂಲದ ಭಕ್ತರು ಪ್ರಯಾಣಿಸುತ್ತಿದ್ದ ಮಿನಿ ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದರು.
ಈ ಸುದ್ದಿಯನ್ನೂ ಓದಿ:Narendra Modi: ಫ್ರಾನ್ಸ್-ಅಮೆರಿಕ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಪ್ರಧಾನಿ ಮೋದಿ!
ಕುಂಭಮೇಳದ ಪವಿತ್ರ ನದಿಯಾದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಸಲುವಾಗಿ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಿಂದ ಭಕ್ತರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಭಕ್ತರನ್ನು ಕರೆದೊಯ್ಯುತ್ತಿದ್ದ ಬೊಲೆರೊ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಿಂದ ಪ್ರಯಾಣಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.