ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಆರೋಪಿಸಿ ಪತ್ರಕರ್ತೆಯರ ಬಂಧನ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಆರೋಪದ ಮೇಲೆ ಇಬ್ಬರು ಮಹಿಳಾ ಪತ್ರಕರ್ತರು ಸೇರಿದಂತೆ ಮೂವರನ್ನು ಹೈದರಾಬಾದ್‌ನ ಸೈಬರ್ ಪೊಲೀಸರು ಬುಧವಾರ (ಮಾ. 12) ಬಂಧಿಸಿದ್ದಾರೆ. ಪೊಗಡದಂಡ ರೇವತಿ, ವರದಿಗಾರ್ತಿ ತನ್ವಿ ಯಾದವ್ ಮತ್ತು ʼನಿಪ್ಪುಕೋಡಿʼ ಎಂಬ ಎಕ್ಸ್ ಬಳಕೆದಾರರು ಬಂಧಿತರು.

ತೆಲಂಗಾಣದಲ್ಲಿ ಇಬ್ಬರು ಪತ್ರಕರ್ತೆಯರ ಬಂಧನ

Profile Ramesh B Mar 12, 2025 11:51 PM

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Chief Minister Revanth Reddy) ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಆರೋಪದ ಮೇಲೆ ಇಬ್ಬರು ಮಹಿಳಾ ಪತ್ರಕರ್ತರು ಸೇರಿದಂತೆ ಮೂವರನ್ನು ಹೈದರಾಬಾದ್‌ನ ಸೈಬರ್ ಪೊಲೀಸರು ಬುಧವಾರ (ಮಾ. 12) ಬಂಧಿಸಿದ್ದಾರೆ. ಪಲ್ಸ್ ನ್ಯೂಸ್‌ನ (Pulse News) ವ್ಯವಸ್ಥಾಪಕ ನಿರ್ದೇಶಕಿ ಪೊಗಡದಂಡ ರೇವತಿ, ವರದಿಗಾರ್ತಿ ತನ್ವಿ ಯಾದವ್ ಮತ್ತು ʼನಿಪ್ಪುಕೋಡಿʼ ಎಂಬ ಎಕ್ಸ್ ಬಳಕೆದಾರರು ಬಂಧಿತರು. ಕಾಂಗ್ರೆಸ್‌ ಸರ್ಕಾರದ ಈ ನಡೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್‌ ನೀಡಿದ ದೂರಿನ ನಂತರ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದರಿಂದ ಹಿಡಿದು ಸಂಘಟಿತ ಅಪರಾಧ ಮತ್ತು ಕ್ರಿಮಿನಲ್ ಪಿತೂರಿ, ದ್ವೇಷವನ್ನು ಪ್ರಚೋದಿಸಲು ವದಂತಿಗಳನ್ನು ಹರಡುವುದು ಹಾಗೂ ಶಾಂತಿ ಉಲ್ಲಂಘನೆಗೆ ಪ್ರಯತ್ನ ಸೇರಿದಂತೆ ಇವರ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.



ಯಾಕಾಗಿ ಈ ಕ್ರಮ?

ಎಕ್ಸ್ ಖಾತೆಯಲ್ಲಿನ ವೀಡಿಯೊ ಒಂದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ವಿಡಿಯೊದಲ್ಲಿ ಹಿರಿಯ ಪತ್ರಕರ್ತೆ ರೇವತಿ ಮತ್ತು ಅವರ ಸಹೋದ್ಯೋಗಿ ತನ್ವಿ ಯಾದವ್ ರೈತರೊಬ್ಬರನ್ನು ಸಂದರ್ಶನ ಮಾಡುವುದು, ಅವರು ಮುಖ್ಯಮಂತ್ರಿ ರೇವಂತ್‌ ರೆಡ್ಡಿಯನ್ನು ಟೀಕೆ ಮಾಡುತ್ತಿರುವುದು ಕಂಡು ಬಂದಿದೆ. ಜತೆಗೆ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಹೇಳಿಕೊಂಡಿರುವುದು ಸೆರೆಯಾಗಿದೆ.

ಇದು ಅತ್ಯಂತ ಪ್ರಚೋದನಕಾರಿ ಪೋಸ್ಟ್. ಇದು ಹಿಂಸಾಚಾರವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮಾನಹಾನಿ ಮಾಡಲು ಹಾಗೂ ಪ್ರಚಾರವನ್ನು ಹರಡಲು ಪಲ್ಸ್ ಟಿವಿಯ ಉದ್ದೇಶಪೂರ್ವಕ ಪ್ರಯತ್ನ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

ವ್ಯಾಪಕ ಟೀಕೆ

ಪತ್ರಕರ್ತರ ಬಂಧನವನ್ನು ಪ್ರತಿಪಕ್ಷಗಳು ಖಂಡಿಸಿವೆ. ಬಿಆರ್‌ಎಸ್ ಮತ್ತು ಬಿಜೆಪಿ ನಾಯಕರು ತೆಲಂಗಾಣದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಇದು ಸರ್ವಾಧಿಕಾರಿ ಧೋರಣೆ ಎಂದು ಕರೆದಿದ್ದಾರೆ. ಬಿಆರ್‌ಎಸ್‌ ನಾಯಕ ಕೆ.ಟಿ. ರಾಮ ರಾವ್ ಈ ಘಟನೆಯನ್ನು ತುರ್ತು ಪರಿಸ್ಥಿತಿ ಕಾಲದ ಕಾಂಗ್ರೆಸ್ ಆಡಳಿತದೊಂದಿಗೆ ಹೋಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Government: ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ ; ಲೆಫ್ಟಿನೆಂಟ್ ಗವರ್ನರ್ ವಿರುದ್ಧ ʼಆಪ್‌ʼ ಹಾಕಿದ್ದ ಕೇಸ್‌ಗಳು ವಾಪಸ್‌ !

ಎಕ್ಸ್ ಪೋಸ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು ರೇವತಿ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ʼʼಪೊಲೀಸರು ಬೆಳಗ್ಗೆ 5 ಗಂಟೆಗೆ ರೇವತಿ ಅವರ ಮನೆಯ ಮೇಲೆ ದಾಳಿ ನಡೆಸಿದ್ದು, ಕಾಂಗ್ರೆಸ್‌ನ ತುರ್ತು ಪರಿಸ್ಥಿತಿ ಶೈಲಿಯ ಆಡಳಿತ ಶೈಲಿಗೆ ಹೊಂದಾಣಿಕೆಯಾಗುತ್ತದೆʼʼ ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ರೈತರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮಾತನಾಡುವ ವಿಡಿಯೊವನ್ನು ಪೋಸ್ಟ್ ಮಾಡಿದ ಪತ್ರಕರ್ತರನ್ನು ಬಂಧಿಸಿರುವುದು ಎಷ್ಟು ಸರಿ? ಇದು ರಾಹುಲ್ ಗಾಂಧಿ ಹೇಳುತ್ತಿರುವ ಸಾಂವಿಧಾನಿಕ ನಿಯಮವೇ?ʼʼ ಎಂದು ರಾವ್ ಪ್ರಶ್ನಿಸಿದ್ದಾರೆ.

ಬಿಜೆಪಿಯ ಶೆಹಜಾದ್ ಪೂನಾವಾಲಾ ಅವರು "ತೆಲಂಗಾಣದ ರೈತರ ಹತಾಶೆ ಮತ್ತು ದುಃಸ್ಥಿತಿಯನ್ನು ತೋರಿಸಿದ್ದಕ್ಕಾಗಿ ಹಿರಿಯ ಪತ್ರಕರ್ತನನ್ನು ಕಾಂಗ್ರೆಸ್‌ ಬಂಧಿಸಿದೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.