ವಯನಾಡು ಭೂಕುಸಿತಕ್ಕೆ 2 ವರ್ಷ; ದೇಶವನ್ನೇ ನಡುಗಿಸಿದ ಆ ಕರಾಳ ಮಂಗಳವಾರ ನಡೆದಿದ್ದೇನು? ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ ಸಂತ್ರಸ್ತ ಕುಟುಂಬಗಳು
Wayanad Landslide: ದೇಶವನ್ನೇ ಬೆಚ್ಚಿ ಬೀಳಿಸಿದ ವಯನಾಡು ಭೂಕುಸಿತಕ್ಕೆ 2 ವರ್ಷ. 400ಕ್ಕೂ ಹೆಚ್ಚುನ ಜನರ ಜೀವನ ಕಸಿದ, ಮನೆಗಳನ್ನು ಇಟ್ಟಿಗೆಯ ರಾಶಿಯನ್ನಾಗಿಸಿದ ಈ ದುರಂತದಿಂದ ಕರಾಳ ನೆನಪಿನಿಂದ ಸಂತ್ರಸ್ತರು ಇನ್ನೂ ಹೊರ ಬಂದಿಲ್ಲ. ಗುರುವಾರ ಸಂತ್ರಸ್ತರು ಒಂದೆಡೆ ಸೇರಿ ತಮ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸಂಗ್ರಹ ಚಿತ್ರ -
ತಿರುವನಂತಪುರಂ, ಜು. 30: ಅದು 2024ರ ಜುಲೈ 30ರ ಮುಂಜಾನೆ. ಇಡೀ ದೇಶದ ಜನತೆ ಮುಂಜಾನೆಯ ಸಕ್ಕರೆ ನಿದ್ದೆಯಲ್ಲಿತ್ತು. ರಾತ್ರಿ ಇಡೀ ಸುರಿದ ಭಾರಿ ಮಳೆಯಿಂದಾಗಿ ಇದ್ದಕ್ಕಿದ್ದಂತೆ ಕೇರಳಂನ ವಯನಾಡಿನಲ್ಲಿ ಗುಡ್ಡ ಕುಸಿದು ಇಡೀ ಊರಿಗೆ ಊರೇ ಕೊಚ್ಚಿ ಹೋಯಿತು (Wayanad Landslide). ಗುಡ್ಡದ ನೀರು, ತೋಡು, ಊರಿನ ಮಧ್ಯೆ ಹರಿದು ಕೆಸರು, ತ್ಯಾಜ್ಯದ ರಾಶಿಯೇ ಕಂಡುಬಂತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಸೇರಿ ಸುಮಾರು 400ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ನೂರಾರು ಮನೆಗಳು, ಕೃಷಿ ನಾಶವಾದವು. ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಭೂಕುಸಿತ ದುರಂತಗಳಲ್ಲಿ ಇದೂ ಒಂದು ಎನಿಸಿಕೊಂಡಿದ್ದು, ಈಗಲೂ ಸಂತ್ರಸ್ತ ಕುಟುಂಬಗಳು ನೋವು ಅನುಭವಿಸುತ್ತಿವೆ.
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ವಯನಾಡಿನ ಮೆಪ್ಪಾಡಿಯಲ್ಲಿ ಜುಲೈ 30ರ ಮುಂಜಾನೆ ಸುಮಾರು 2 ಗಂಟೆ ಮತ್ತು 4 ಗಂಟೆಗೆ ನಡೆದ ಭೀಕರ ಭೂಕುಸಿತದಿಂದ ಮಣ್ಣಿನ ರಾಶಿ, ಕಲ್ಲು ಬಂಡೆ, ಮರಗಳ ದಿಮ್ಮಿ ತೇಲಿ ಬಂದು ಇಡೀ ಊರನ್ನೇ ಮುಚ್ಚಿ ಹಾಕಿತು. ಜತೆಗೆ ನದಿಯೂ ಮೇರೆ ಮೀರಿ, ಪಥ ಬದಲಾಯಿಸಿ ಹರಿದು ಇನ್ನಷ್ಟು ನಾಶ ನಷ್ಟಕ್ಕೆ ಕಾರಣವಾಯಿತು. ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶದ ಮೇಲೂ ಇದು ಸಾಕಷ್ಟು ಪರಿಣಾಮ ಬೀರಿತ್ತು.
ಪ್ರಿಯಾಂಕಾ ಗಾಂಧಿ ಎಕ್ಸ್ ಪೋಸ್ಟ್:
Two years since the tragedy that devastated the people of Chooralmala and Mundakkai, we pay homage to the bravery and resilience of the people of Wayanad.
— Priyanka Gandhi Vadra (@priyankagandhi) July 30, 2026
In rememberance and homage to those who left us, we will continue to support those who survived in every way we can. We…
ಟೌನ್ ಶಿಪ್ ನಿರ್ಮಾಣ
ಭೀಕರ ದುರಂತ ನಡೆದು 2 ವರ್ಷಗಳ ಬಳಿಕ ಈಗಲೂ ಸ್ಥಳೀಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಭೀಕರ ದುರಂತದಿಂದ ಇನ್ನೂ ಹೊರ ಬರದ ಸಂತ್ರಸ್ತರು ಗುರುವಾರ ಒಂದೆಡೆ ಸೇರಿ ತಮ್ಮವರಿಗಾಗಿ ಕಂಬನಿ ಮಿಡಿದರು. ದುರಂತ ನಡೆದ ಸ್ಥಳ ಮತ್ತು ಸರ್ಕಾರದ ಟೌನ್‌ಶಿಪ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ಮೇಣದಬತ್ತಿಗಳನ್ನು ಬೆಳಗಿಸಿದರು. ಮೃತಪಟ್ಟವರ ಫೋಟೊ ಮುಂದೆ ಹೂ ಇಟ್ಟು ಬಿಕ್ಕಿ ಬಿಕ್ಕಿ ಅತ್ತರು.
ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿಯಲ್ಲಿ ಭೂಕುಸಿತ; 13 ಮಂದಿ ಸ್ಥಳದಲ್ಲಿಯೇ ಸಾವು
ಭಾರೀ ಮಳೆ ಮತ್ತು ಕಪ್ಪು ಮೋಡಗಳನ್ನು ನೋಡಿದಾಗ ಈಗಲೂ ಸ್ಥಳೀಯರು 2 ವರ್ಷಗಳ ಹಿಂದಿನ ಆ ಭಯಾನಕ ನೆನಪು ಮರುಕಳಿಸಿದಂದಾಗಿ ಬೆಚ್ಚಿ ಬೀಳುತ್ತಾರೆ. ಪುನರ್ವಸತಿ ಪಟ್ಟಣದಲ್ಲಿನ ಮನೆಗಳು ಈಗ ಬದುಕುಳಿದ ಕುಟುಂಬಗಳ ಏಕೈಕ ಭರವಸೆಯ ಸಂಕೇತವಾಗಿ ಉಳಿದಿವೆ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸಂತ್ರಸ್ತರಿಗಾಗಿ ಮಿಡಿದಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅವರು, ʼʼಚೂರಲ್‌ಮಲ ಮತ್ತು ಮುಂಡಕ್ಕೈ ಜನ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ ದುರಂತಕ್ಕೆ ಎರಡು ವರ್ಷ ಸಂದಿದೆ. ವಯನಾಡಿನ ಜನರ ಧೈರ್ಯಕ್ಕೆ ನಾವು ಗೌರವ ಸಲ್ಲಿಸುತ್ತೇವೆ" ಎಂದು ಅವರು ಬರೆದುಕೊಂಡಿದ್ದಾರೆ. ಜತೆಗೆ ಬದುಕುಳಿದವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಮುಂಡಕ್ಕೈ ಮತ್ತು ಚೂರಲ್‌ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಹಾನಿಗೊಳಗಾದ ಕುಟುಂಬಗಳಿಗೆ ಕಲ್ಪಟ್ಟ ಬೈಪಾಸ್ ಬಳಿ ಟೌನ್‌ಶಿಪ್ ನಿರ್ಮಿಸಲಾಗುತ್ತಿದೆ. ಅದರ ಭಾಗವಾಗಿ 410 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಆ ಪೈಕಿ 165 ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಈಗಲೂ ಹಲವು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಾಗಿವೆ. ಕರಾಳ ದುರಂತವನ್ನು ನೆನಪಿಸಿಕೊಳ್ಳುವ ವೃದ್ಧೆಯೊಬ್ಬರು, ʼʼಜೋರು ಮಳೆ ಸುರಿದಾಗ ಅಥವಾ ನದಿಯ ಮಟ್ಟ ಹೆಚ್ಚಾಗ ಈಗಲೂ ನಿದ್ದೆ ಬರುವುದಿಲ್ಲ. ನೆಮ್ಮದಿ ಹಾರಿ ಹೋಗುತ್ತದೆʼʼ ಎಂದು ಹೇಳಿದ್ದಾರೆ.
ವಯನಾಡು ಭೂಕುಸಿತ: ಮತ್ತೆ ಮೂರು ಶವ ಪತ್ತೆ, ಮೃತರ ಸಂಖ್ಯೆ 6ಕ್ಕೆ ಏರಿಕೆ
ಕರ್ನಾಟಕದಿಂದಲೂ ಸಹಾಯ ಹಸ್ತ
ವಿಶೇಷ ಎಂದರೆ ಆ ದುರಂತದ ಸಮಯದಲ್ಲಿ ಇಡೀ ದೇಶದ ಕೇರಳದ ಸಹಾಯಕ್ಕೆ ಧಾವಿಸಿತ್ತು. ಕರ್ನಾಟಕದಿಂದಲೂ ನೆರವು ನೀಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 100 ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದ್ದರು. ಜತೆಗೆ ವಿವಿಧ ಸಂಘ-ಸಂಸ್ಥೆಗಳು, ಕಂಪನಿಗಳು ಸಹಾಯ ಮಾಡಿದ್ದವು. ವೈಯಕ್ತಿಕವಾಗಿಯೂ ಹಲವರು ಸಂತ್ರಸ್ತರ ಬೆಂಬಲಕ್ಕೆ ಧಾವಿಸಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.