Encounter In J&K: ಜಮ್ಮು & ಕಾಶ್ಮೀರದಲ್ಲಿ ಉಗ್ರರೊಂದಿಗೆ ಎನ್‌ಕೌಂಟರ್; ಮೂವರು ಪೊಲೀಸರು ಹುತಾತ್ಮ
Encounter In J&K: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ (ಮಾ. 27) ಭಯೋತ್ಪದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಕಥುವಾ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಗುರುವಾರ (ಮಾ. 27) ಭಯೋತ್ಪದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ (Encounter In J&K). ಕಥುವಾ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇನ್ನೂ ಮೂರರಿಂದ ನಾಲ್ಕು ಭಯೋತ್ಪಾದಕರು ಸ್ಥಳದಲ್ಲಿ ಅಡಗಿ ಕುಳಿತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಹಿರಾನಗರ್ ಉಪವಿಭಾಗದ ಕಾಡುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ಆರಂಭವಾಯಿತು. ಗುಂಡಿನ ಚಕಮಕಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ.
ಜಖೋಲೆ ಗ್ರಾಮದ ಬಳಿ ಉಗ್ರರು ನಡೆಸಿದ ಈ ಗುಂಡಿನ ದಾಳಿಯಲ್ಲಿ ಗಾಯಗೊಂಡವರಲ್ಲಿ ಪೊಲೀಸ್ ಅಧೀಕ್ಷಕರೂ ಸೇರಿದ್ದಾರೆ. ಗುಂಡಿನ ದಾಳಿ ಈಗಲೂ ಮುಂದುವರಿದಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
📍Jakhole village Ghati Juthana, Rajbagh #Kathua
— War & Gore (@Goreunit) March 27, 2025
3 JKP personnel attained veergati in this ongoing encounter.
Om Shanti 🙏🏻
3 terrorists have been killed in this op.
Additionally 02 personnel got minor injuries, they're safe pic.twitter.com/hzvpq5DGvl
ಸೇನೆ, ರಾಷ್ಟ್ರೀಯ ಭದ್ರತಾ ಪಡೆ, ಗಡಿ ಭದ್ರತಾ ಪಡೆ, ಪೊಲೀಸ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ತಂಡಗಳು ಕಳೆದ 4 ದಿನಗಳಿಂದ ಈ ಪ್ರದೇಶದಲ್ಲಿ ಶೋಧ ನಡೆಸುತ್ತಿವೆ. ಹೆಲಿಕಾಪ್ಟರ್, ಡ್ರೋನ್, ಬುಲೆಟ್ ಪ್ರೂಫ್ ವಾಹನ ಮತ್ತು ಸ್ನಿಫರ್ ಶ್ವಾನಗಳ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಮಾ. 25ರಂದು 2 ಗ್ರೆನೇಡ್‌ಗಳು ಪತ್ತೆಯಾಗಿದ್ದವು.
ಒಳನುಸುಳಿರುವ 6 ಉಗ್ರರ ಗುಂಪು
ಗುರುವಾರ ಹತ್ಯೆಗೀಡಾದ ಉಗ್ರರು ಭಾನುವಾರ (ಮಾ. 23) ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿದ ಅದೇ ಗುಂಪಿಗೆ ಸೇರಿದವರು ಎನ್ನಲಾಗಿದೆ. ಸುಮಾರು 6 ಉಗ್ರರನ್ನು ಒಳಗೊಂಡ ಈ ಗುಂಪು ಪಾಕಿಸ್ತಾನದಿಂದ ಗಡಿ ದಾಟಿ ಜಮ್ಮು ಮತ್ತು ಕಾಶ್ಮೀರದ ಒಳಗಡೆ ನುಸುಳಿದೆ ಎಂದು ಶಂಕಿಸಲಾಗಿದೆ. ಭಾನುವಾರ ಸಂಜೆ ಅಂತಾರಾಷ್ಟ್ರೀಯ ಗಡಿಯ ಬಳಿಯ ಸಾನಿಯಾಲ್ ಗ್ರಾಮದ ಬಳಿಯ ಕಾಡುಗಳಲ್ಲಿ ಸ್ಥಳೀಯ ನಿವಾಸಿಗಳು ಅವರನ್ನು ಗುರುತಿಸಿದ್ದರು.
ಅಂದಿನಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ನೇತೃತ್ವದ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿ ಹಿರಾನಗರ್ ವಲಯದ ಅನೇಕ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಉಗ್ರರಿಗೆ ನೆರವು ನೀಡಿದ ಅನುಮಾನದ ಮೇಲೆ 7 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸನ್ಯಾಲ್ ಕಾಡುಗಳಲ್ಲಿ ಪತ್ತೆಯಾದ ಟ್ರ್ಯಾಕ್ ಸೂಟ್‌ಗಳು ಕಳೆದ ವರ್ಷ ಜೂನ್ ಮತ್ತು ಆಗಸ್ಟ್‌ನಲ್ಲಿ ಅಸ್ಸಾರ್ ಕಾಡು ಮತ್ತು ದೋಡಾದಲ್ಲಿ ಹತರಾಗಿದ್ದ ನಾಲ್ವರು ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರು ಧರಿಸಿದ್ದ ಟ್ರ್ಯಾಕ್ ಸೂಟ್‌ಗಳನ್ನು ಹೋಲುತ್ತವೆ ಎಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ತಿಳಿಸಿದೆ. ಗುರುವಾರದ ಎನ್‌ಕೌಂಟರ್ ನಡೆದ ಸ್ಥಳವು ಭಯೋತ್ಪಾದಕರ ಗುಂಪನ್ನು ಮೊದಲು ಗುರುತಿಸಿದ ಸನ್ಯಾಲ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.
ಮಾ. 17ರಂದು ಕುಪ್ವಾರಾ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕನೊಬ್ಬ ಸಾವನ್ನಪ್ಪಿದ್ದ. ಅದಕ್ಕೂ ಮೊದಲು ಕಥುವಾ ಜಿಲ್ಲೆಗೆ ನುಗ್ಗಿದ್ದ ಉಗ್ರ ಮೂವರು ನಾಗರಿಕರನ್ನು ಹತ್ಯೆ ಮಾಡಿದ್ದರು. ಇದರಲ್ಲಿ 14 ವರ್ಷದ ಬಾಲಕನೂ ಸೇರಿದ್ದ.