ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

8ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಅಪ್ರಾಪ್ತ ಬಾಲಕರ ತಾಯಂದಿರ ಮೇಲೆ ಕ್ರಮ ಕೈಗೊಂಡ ಪೊಲೀಸರು; ಈ ಬಗ್ಗೆ ಕಾನೂನು ಏನು ಹೇಳುತ್ತೆ?

Physical Assault: ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಾಲ್ವರು ಅಪ್ರಾಪ್ತರು ಬಾಲಕಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಆರೋಪಿಗಳಿಗೆ ಪಾಠ ಕಲಿಸುವ ಉದ್ದೇಶದಿಂದ ಪೊಲೀಸರು ಅವರ ತಾಯಂದಿರನ್ನು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿವರ ಇಲ್ಲಿದೆ.

ಮಕ್ಕಳು ಮಾಡಿದ ತಪ್ಪಿಗೆ ಹೆತ್ತವರಿಗೆ ಶಿಕ್ಷೆ

ಸಾಂದರ್ಭಿಕ ಚಿತ್ರ. -

Profile
Sushmitha Jain Dec 21, 2025 11:15 PM

ಲಖನೌ: ಉತ್ತರ ಪ್ರದೇಶ (Uttara Pradesha)ದ ಬುದೌನ್ ಜಿಲ್ಲೆಯಲ್ಲಿ(Budaun District) 8ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಗೆ ನಾಲ್ವರು ಅಪ್ರಾಪ್ತ ಬಾಲಕರು ಕಿರುಕುಳ ನೀಡಿದ (Harrassment) ಆರೋಪದ ಹಿನ್ನೆಲೆಯಲ್ಲಿ, ಅವರ ತಾಯಂದಿರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಕ್ಕಳಿಗೆ ಸರಿಯಾದ ಸಂಸ್ಕಾರ, ಮೌಲ್ಯಗಳನ್ನು ಕಲಿಸದ ಕಾರಣಕ್ಕೆ ಪೋಷಕರನ್ನೇ ಹೊಣೆಗಾರರನ್ನಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ನೀಡಿದ ಬಾಲಕರು ಎಲ್ಲರೂ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಪ್ರಕರಣದಲ್ಲಿ ಬುಡೌನ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಪರಾಧ ತಡೆಗಟ್ಟುವ ವಿಧಿಗಳ ಅಡಿಯಲ್ಲಿ ಆರೋಪಿ ಬಾಲಕರ ತಾಯಂದಿರನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಅವರನ್ನು ಬಂಧಿಸಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ನಂತರ ವೈಯಕ್ತಿಕ ಬಾಂಡ್‌ಗಳ ಮೇಲೆ ಅದೇ ದಿನ ಬಿಡುಗಡೆ ಮಾಡಲಾಗಿದೆ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಪೋಷಕರದ್ದು ಎಂಬ ಸಂದೇಶ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, 8ನೇ ತರಗತಿಯ ಬಾಲಕಿ ತನ್ನ ತಂದೆಗೆ, ಶಾಲೆಗೆ ಹೋಗುವಾಗ ಹಾಗೂ ಹಿಂದಿರುಗುವ ವೇಳೆ ಕೆಲವು ಬಾಲಕರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದರು ಎಂದು ತಿಳಿಸಿದ್ದಾಳೆ. ಇದಾದ ಬಳಿಕ ಬಾಲಕಿಯ ಕುಟುಂಬದವರು ಉಷೈತ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ (POCSO) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಠಾಣಾಧಿಕಾರಿ ಅಜಯ್ ಪಾಲ್ ಸಿಂಗ್, ಆರೋಪಿ ಬಾಲಕರು ಒಂದೇ ಗ್ರಾಮದವರು ಹಾಗೂ ಅಪ್ರಾಪ್ತ ವಯಸ್ಕರಾಗಿರುವುದರಿಂದ ಅವರನ್ನು ಬಂಧಿಸಲಾಗಿಲ್ಲ ಎಂದು ಹೇಳಿದರು. ಅವರು ಶಾಲೆಗೆ ಹೋಗದೆ ಪ್ರದೇಶದಲ್ಲಿ ಓಡಾಡುತ್ತಿದ್ದವರು ಎನ್ನಲಾಗಿದೆ. ಬಾಲಕಿ ಮತ್ತು ಬಾಲಕರ ನಡುವೆ ಯಾವುದೇ ವೈಯಕ್ತಿಕ ಪರಿಚಯ ಇರಲಿಲ್ಲ. ಈ ಬಾಲಕರು ಪುನಃ ಪುನಃ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರಿಗೆ ನೋಟಿಸ್ ನೀಡಲಾಗಿತ್ತು. ಆದರೂ ಸ್ಪಷ್ಟ ಸಂದೇಶ ನೀಡಲು ತಾಯಂದಿರನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕ ಲೋಕೇಶ್ವರ ಸ್ವಾಮಿಗೆ 35 ವರ್ಷ ಜೈಲು

ಇನ್ನು ಈ ನಾಲ್ವರು ಬಾಲಕರ ತಂದೆಯರು ರಾಜ್ಯದ ಹೊರಗೆ ಕೆಲಸ ಮಾಡುತ್ತಿದ್ದು, ಅವರು ಮರಳಿ ಬಂದ ಬಳಿಕ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಹಳ್ಳಿಯ ಇತರ ಮಕ್ಕಳಲ್ಲಿಯೂ ಇಂತಹ ವರ್ತನೆ ಮರುಕಳಿಸದಂತೆ ತಡೆಯುವುದೇ ಈ ಕ್ರಮದ ಉದ್ದೇಶ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ತಡೆಗಟ್ಟುವ ಬಂಧನ (Preventive Detention) ಕಾಯ್ದೆಯ ಬಳಕೆಯ ಕುರಿತು ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ತಡೆಗಟ್ಟುವ ಬಂಧನವೆಂದರೆ, ಭವಿಷ್ಯದಲ್ಲಿ ಅಪರಾಧ ನಡೆಯುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ವಿಚಾರಣೆಯಿಲ್ಲದೇ ವ್ಯಕ್ತಿಯನ್ನು ಬಂಧಿಸುವ ವ್ಯವಸ್ಥೆ. ಇದು ಸಾರ್ವಜನಿಕ ಸುವ್ಯವಸ್ಥೆ ಅಥವಾ ರಾಜ್ಯ ಭದ್ರತೆಗಾಗಿ ಬಳಸಲಾಗುತ್ತದಾದರೂ, ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಪೋಕ್ಸೊ ಕಾಯ್ದೆಯಡಿ ಮಕ್ಕಳನ್ನು ರಕ್ಷಿಸುವುದು ಮುಖ್ಯ ಉದ್ದೇಶವಾಗಿದ್ದರೂ, ಪೋಷಕರ ನಿರ್ಲಕ್ಷ್ಯ ಅಥವಾ ಪ್ರಚೋದನೆ ಸಾಬೀತಾಗದ ಹೊರತು ಅವರನ್ನು ಅಪರಾಧಿಗಳೆಂದು ಪರಿಗಣಿಸುವುದು ಕಾನೂನುಬದ್ಧವಾಗಿ ಸಂಕೀರ್ಣ ವಿಷಯವಾಗಿದೆ. ಈ ಹಿನ್ನೆಲೆ, ಈ ರೀತಿಯ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.