ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಕ್ರೋಚ್‌ ಜನತಾ ಪಾರ್ಟಿ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಸಂಚಲನ: ರಿಸರ್ವೇಶನ್ ಹಟಾವೋ ಆಂದೋಲನ ಆರಂಭ; ಲಕ್ಷಾಂತರ ಯುವಕರ ಬೆಂಬಲ

Reservation Hatao Andolan: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಿ ಅರ್ಹತೆ ಹಾಗೂ ಆರ್ಥಿಕ ಮಾನದಂಡದ ಆಧಾರದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತಿರುವ ರಿಸರ್ವೇಶನ್ ಹಟಾವೋ ಆಂದೋಲನ (RHA) ಸೋಷಿಯಲ್‌ ಮೀಡಿಯಾದಲ್ಲಿ ವೇಗವಾಗಿ ಜನಪ್ರಿಯವಾಗುತ್ತಿದೆ. ಸುಮಾರು 50 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಈ ಅಭಿಯಾನ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಆದರೆ ಮೀಸಲಾತಿ ಬೆಂಬಲಿಗರು ಇದು ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಯಾವುದೇ ಬದಲಾವಣೆಗೆ ಕಾನೂನುಬದ್ಧ ಪ್ರಕ್ರಿಯೆ ಅಗತ್ಯ ಎಂದು ವಾದಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ರಿಸರ್ವೇಶನ್ ಹಟಾವೋ ಆಂದೋಲನಕ್ಕೆ ಭಾರಿ ಬೆಂಬಲ

ರಿಸರ್ವೇಶನ್ ಹಟಾವೋ ಆಂದೋಲನ -

Profile
Sushmitha Jain Jul 27, 2026 5:13 PM

ನವದೆಹಲಿ, ಜು. 27: ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನಡೆದ ಕಾಕ್ರೋಚ್‌ ಜನತಾ ಪಾರ್ಟಿಯ (CJP) ಸಾಮಾಜಿಕ ಜಾಲತಾಣ ಅಭಿಯಾನದ ಬಳಿಕ ಇದೀಗ ರಿಸರ್ವೇಶನ್ ಹಟಾವೋ ಆಂದೋಲನ (RHA) ಎಂಬ ಹೊಸ ಇನ್‌ಸ್ಟಾಗ್ರಾಂ ಚಳವಳಿ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಾತಿ ಆಧಾರಿತ ಮೀಸಲಾತಿ ರದ್ದುಗೊಳಿಸಿ, ಅರ್ಹತೆ ಆಧಾರಿತ ಆಯ್ಕೆ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಿರುವ ಈ ಅಭಿಯಾನಕ್ಕೆ ಕೆಲವೇ ದಿನಗಳಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಅನುಯಾಯಿಗಳು ಸೇರ್ಪಡೆಯಾಗಿದ್ದಾರೆ.

ರಿಸರ್ವೇಶನ್ ಹಟಾವೋ ಆಂದೋಲನ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಪ್ರಕಟಿಸಲಾಗಿದ್ದು, ಬಹುತೇಕ ಎಲ್ಲ ಪೋಸ್ಟ್‌ಗಳು ಲಕ್ಷದಿಂದ ಕೋಟಿಗಟ್ಟಲೆ ವೀಕ್ಷಣೆ ಪಡೆದಿವೆ. ಖಾತೆಯಲ್ಲಿ "ಶಿಕ್ಷಣ ನೀಡಿ – ಹೋರಾಡಿ – ಸಂಘಟಿತರಾಗಿ. ಎಲ್ಲ ಜಾತಿಗಳೂ ಸಮಾನ. ಒಂದು ರಾಷ್ಟ್ರ – ಒಂದು ಗುರುತು – ಭಾರತೀಯ" ಎಂಬ ಸಂದೇಶವನ್ನು ಪ್ರಕಟಿಸಲಾಗಿದೆ.

ರಿಸರ್ವೇಶನ್ ಹಟಾವೋ ಆಂದೋಲನ:



ಅಭಿಯಾನದ ಪ್ರಮುಖ ಬೇಡಿಕೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿ ಅರ್ಹತೆ ಆಧಾರಿತ ಆಯ್ಕೆ ಜಾರಿಗೊಳಿಸುವುದು, ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಹಾಗೂ ಸರ್ಕಾರಿ ಅರ್ಜಿಗಳು ಮತ್ತು ದಾಖಲೆಗಳಲ್ಲಿ ಜಾತಿ ವಿವರ ದಾಖಲಿಸುವ ಪದ್ಧತಿಯನ್ನು ಹಂತ ಹಂತವಾಗಿ ನಿಲ್ಲಿಸುವುದು ಸೇರಿವೆ.

ಇತ್ತೀಚಿನ ಪೋಸ್ಟ್‌ವೊಂದರಲ್ಲಿ ಅಭಿಯಾನ ಆಯೋಜಕರು, "ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ನಮ್ಮ ಹೋರಾಟ ಯಾವುದೇ ಪಕ್ಷದ ಪರ ಅಥವಾ ವಿರುದ್ಧವಲ್ಲ. ಇದು ನೀತಿ ಬದಲಾವಣೆಗೆ ಸಂಬಂಧಿಸಿದ ನಾಗರಿಕರ ಚಳವಳಿ" ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ವಿಡಿಯೊದಲ್ಲಿ ಮಹಿಳೆಯರು ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ವ್ಯಕ್ತಪಡಿಸಬೇಕು ಹಾಗೂ ಪುರುಷರು ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಲಾಗಿದೆ.

ಆರ್ಥಿಕ ಮಾನದಂಡ ಆಧಾರವಾಗಲಿ

ಅಭಿಯಾನದ ಬೆಂಬಲಿಗರ ಪ್ರಕಾರ, ಪ್ರಸ್ತುತ ಮೀಸಲಾತಿ ವ್ಯವಸ್ಥೆಯಿಂದ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸಮರ್ಪಕ ಅವಕಾಶ ದೊರೆಯುತ್ತಿಲ್ಲ. ಸರ್ಕಾರದ ನೆರವು ಜಾತಿಯ ಬದಲಿಗೆ ಆರ್ಥಿಕ ಮಾನದಂಡದ ಆಧಾರದಲ್ಲಿ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

CJP ಪ್ರತಿಭಟನಾಕಾರರ ಪಾಸ್‌ಪೋರ್ಟ್ ರದ್ದು ಮಾಡಲಾಗುತ್ತಾ? ಪೊಲೀಸರು ಹೇಳಿದ್ದೇನು?

ಮೀಸಲಾತಿ ಪರ ಸಂಘಟನೆಗಳ ವಾದವೇನು?

ಇನ್ನೊಂದೆಡೆ, ಮೀಸಲಾತಿ ಪರ ಸಂಘಟನೆಗಳು ಹಾಗೂ ತಜ್ಞರು, ಮೀಸಲಾತಿ ವ್ಯವಸ್ಥೆ ಕೇವಲ ಬಡತನ ನಿವಾರಣೆಗೆ ಅಲ್ಲ; ಶತಮಾನಗಳ ಸಾಮಾಜಿಕ ತಾರತಮ್ಯ, ಅಸಮಾನತೆ ಹಾಗೂ ಪ್ರತಿನಿಧಿತ್ವದ ಕೊರತೆಯನ್ನು ಸರಿಪಡಿಸಲು ರೂಪಿಸಲಾದ ಸಂವಿಧಾನಾತ್ಮಕ ವ್ಯವಸ್ಥೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿಯುವುದು ಮತ್ತು ಸಾಮಾಜಿಕ ತಾರತಮ್ಯ ಎರಡೂ ವಿಭಿನ್ನ ವಿಷಯಗಳಾಗಿದ್ದು, ಮೀಸಲಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಪ್ರಕ್ರಿಯೆ ಅಗತ್ಯ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರಮುಖ ವೇದಿಕೆಯಾಗುತ್ತಿದ್ದು, ಕಾಕ್ರೋಚ್‌ ಜನತಾ ಪಾರ್ಟಿ, ರಿಸರ್ವೇಶನ್ ಹಟಾವೋ ಆಂದೋಲನ, ರಿಸರ್ವೇಶನ್ ರಿಮೂವಲ್ ಸಂಘ್ ಹಾಗೂ ಇ20 ಜನತಾ ಪಾರ್ಟಿ ಸೇರಿ ಹಲವು ವಿಷಯಾಧಾರಿತ ಡಿಜಿಟಲ್ ಅಭಿಯಾನಗಳು ಯುವಜನರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯುತ್ತಿವೆ.

ಆದರೆ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವುದರಿಂದ ಮಾತ್ರ ಸರ್ಕಾರದ ನೀತಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಮೀಸಲಾತಿಯಂತಹ ಸೂಕ್ಷ್ಮ ಹಾಗೂ ಸಂವಿಧಾನಾತ್ಮಕ ವಿಷಯದಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಸಂಸತ್ತು, ನ್ಯಾಯಾಂಗ ಹಾಗೂ ವಿವಿಧ ಸಮುದಾಯಗಳ ಅಭಿಪ್ರಾಯಗಳನ್ನು ಒಳಗೊಂಡ ಕಾನೂನು ಪ್ರಕ್ರಿಯೆ ಅಗತ್ಯ ಎಂದು ತಜ್ಞರು ಹೇಳಿದ್ದಾರೆ. ಈ ನಡುವೆ ರಿಸರ್ವೇಶನ್ ಹಟಾವೋ ಆಂದೋಲನ ಸಾಮಾಜಿಕ ಜಾಲತಾಣಗಳಲ್ಲಿ ಮೀಸಲಾತಿ ಕುರಿತ ರಾಷ್ಟ್ರೀಯ ಮಟ್ಟದ ಚರ್ಚೆಗೆ ಹೊಸ ವೇದಿಕೆಯನ್ನು ಸೃಷ್ಟಿಸಿರುವುದು ಸ್ಪಷ್ಟ.