ನರೇಂದ್ರ ಮೋದಿ ಶಾಲಾ ಸಹಪಾಠಿಯ ಜಮೀನು ವಿವಾದ ಅಂತ್ಯ: ಪ್ರಧಾನಿ ಜತೆ ಮಾತುಕತೆ ಬೆನ್ನಲ್ಲೇ ಭೂಮಿ ವಾಪಸ್
PM Modi's Schoolmate: ಮೋದಿ ಭೇಟಿ ಬಳಿಕ ಅವರ ಶಾಲಾ ಮಾಜಿ ಸಹಪಾಠಿ 81 ವರ್ಷದ ಅಸ್ಗರಲಿ ವೊಹ್ರಾ ಅವರಿಗೆ ಭೂ ವಿವಾದದಲ್ಲಿ ನ್ಯಾಯ ಸಿಕ್ಕಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಮುಂಬೈ ಮೀರಾ ರೋಡ್ ನಿವಾಸಿಯಾದ ವೋಹ್ರಾ, ದಶಕಗಳಷ್ಟು ಹಳೆಯ ಭೂ ವಿವಾದ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸಿ, ಸೆಪ್ಟೆಂಬರ್ 8ರಂದು ಮೋದಿ ಭೇಟಿ ಮಾಡಿದ್ದರು.
ಪ್ರಧಾನಿ ಭೇಟಿಯಾಗಿದ್ದ ಸಹಪಾಠಿ -
ಮುಂಬೈ, ಸೆ. 16: ನರೇಂದ್ರ ಮೋದಿ (PM Narendra Modi) ಅವರ ಶಾಲಾ ಸಹಪಾಠಿ 81 ವರ್ಷದ ಅಸ್ಗರಲಿ ವೊಹ್ರಾ ಅವರ ಜಮೀನು ವಿವಾದ ಕೊನೆಗೂ ಬಗೆಹರಿದಿದೆ. ಅವರು ಇತ್ತೀಚೆಗೆ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಮೋದಿ ಭೇಟಿ ಬಳಿಕ ಭೂವಿವಾದದಲ್ಲಿ (Land Dispute) ಅವರಿಗೆ ಜಯ ಸಿಕ್ಕಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಮುಂಬೈಯ ಮೀರಾ ರೋಡ್ ನಿವಾಸಿ ವೋಹ್ರಾ, ದಶಕಗಳಷ್ಟು ಹಳೆಯ ಭೂ ವಿವಾದ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸಿ, ಸೆಪ್ಟೆಂಬರ್ 8ರಂದು ಮೋದಿ ಭೇಟಿಯಾಗಿದ್ದರು.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ದಿನಗಳಲ್ಲಿ, ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರಿಗೆ ಸಂಬಂಧಿಸಿದ ಸೆವೆನ್ ಇಲೆವೆನ್ ಕನ್ಸ್‌ಟ್ರಕ್ಷನ್ಸ್ ಸಂಸ್ಥೆಯು ವಿವಾದಿತ ಭೂಮಿಯ ಮೇಲಿನ ತನ್ನ ಹಕ್ಕುಗಳನ್ನು ಬಿಟ್ಟುಕೊಟ್ಟಿದೆ. ಅಲ್ಲದೆ, ನಿರ್ಮಾಣ ಅನುಮತಿಯನ್ನು ಮುನ್ಸಿಪಲ್ ಕಾರ್ಪೊರೇಷನ್‌ಗೆ ಒಪ್ಪಿಸಿದೆ.
ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ವೋಹ್ರಾ, ಭಯಂದರ್ ಪೂರ್ವದ ನವಘರ್ ನಲ್ಲಿರುವ 2,810 ಚದರ ಮೀಟರ್ ಜಮೀನಿನ ವಿವಾದದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಕೋರಿದರು. ವೋಹ್ರಾ ಮತ್ತು ಪ್ರಧಾನಿ ಗುಜರಾತ್‌ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು.
ಅನೇಕ ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಿಬಿಐ ತನಿಖೆಗೆ ಆಗ್ರಹಿಸಿದ ಸಹಪಾಠಿ
ಏನಿದು ವಿವಾದ?
1989ರಲ್ಲಿ ತಾನು ಈ ಜಮೀನನ್ನು ಖರೀದಿಸಿದ್ದಾಗಿ ಮತ್ತು 2011ರಲ್ಲಿ ಸ್ವಯಂ ಬಿಲ್ಡರ್ಸ್ ಮತ್ತು ಸೆವೆನ್ ಇಲೆವೆನ್ ಕನ್ಸ್‌ಟ್ರಕ್ಷನ್ಸ್ ಎಂಬ ಎರಡು ಸಂಸ್ಥೆಗಳು ಅದನ್ನು ಅತಿಕ್ರಮಿಸಿದ್ದವು ಎಂದು ವೋಹ್ರಾ ಹೇಳಿದ್ದರು. “ನಾನು ಸುಮಾರು 37 ವರ್ಷಗಳ ಹಿಂದೆ ಆಸ್ತಿಯನ್ನು ಖರೀದಿಸಿದೆ. ಆದರೆ 2011ರಲ್ಲಿ ಅದನ್ನು ಇಬ್ಬರು ಬಿಲ್ಡರ್‌ಗಳು ವಶಪಡಿಸಿಕೊಂಡರು. ಅಂದಿನಿಂದ ನಾನು ಈ ಹೋರಾಟವನ್ನು ನಡೆಸುತ್ತಿದ್ದೇನೆ. ಈಗ ನಾನು ಪ್ರಧಾನಿಯನ್ನು ಭೇಟಿಯಾಗಿದ್ದೇನೆ. ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ” ಎಂದು ಮೋದಿ ಭೇಟಿ ಬಳಿಕ ಅವರು ಹೇಳಿದ್ದರು.
ತಾನು ಎಂದಿಗೂ ಆಸ್ತಿಯನ್ನು ಯಾರಿಗೂ ಮಾರಾಟ ಮಾಡಿಲ್ಲ ಅಥವಾ ವರ್ಗಾಯಿಸಿಲ್ಲವಾದರೂ, ಅದನ್ನು 2011ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. ನಂತರ ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅದು ಬಿಜೆಪಿ ಶಾಸಕರ ಒಡೆತನದಲ್ಲಿದೆ ಎಂದು ಹೇಳಲಾದ ಎರಡು ಸಂಸ್ಥೆಗಳಿಂದ ನಿಯಂತ್ರಿಸಲಾಗುತ್ತದೆ ಎಂದು ವೋಹ್ರಾ ಹೇಳಿದ್ದರು.
ವಿವಾದಿತ ಜಾಗದ ಮಾಲಕತ್ವದ ಗೊಂದಲದ ಹಿನ್ನೆಲೆಯಲ್ಲಿ ಸೆವೆನ್ ಇಲೆವೆನ್ ಕನ್ಸ್‌ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆ ಪ್ಲಾಟ್‌ಗೆ ಸಂಬಂಧಿಸಿದ ತನ್ನ ಕಾಮಗಾರಿ ಪ್ರಾರಂಭದ ಪ್ರಮಾಣಪತ್ರವನ್ನು ಮಹಾನಗರ ಪಾಲಿಕೆಗೆ ಒಪ್ಪಿಸಿದೆ. ಅಲ್ಲದೆ, ತಮಗೆ ನೀಡಲಾಗಿದ್ದ ಕಟ್ಟಡ ನಿರ್ಮಾಣ ಅನುಮತಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ಮೀರಾ ಭಯಂದರ್ ಮಹಾನಗರ ಪಾಲಿಕೆಗೆ ಕೋರಿದೆ.