ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Padma Awards 2025: ನಂದಮೂರಿ ಬಾಲಕೃಷ್ಣ, ಅಜಿತ್ ಕುಮಾರ್ ಸೇರಿದಂತೆ 71 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಧಾನ

ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್, ನಟ ಮತ್ತು ಆಂಧ್ರಪ್ರದೇಶ ಶಾಸಕ ನಂದಮೂರಿ ಬಾಲಕೃಷ್ಣ, ನಟ ಎಸ್. ಅಜಿತ್ ಕುಮಾರ್ ಸೇರಿದಂತೆ ಒಟ್ಟು 71 ಗಣ್ಯ ವ್ಯಕ್ತಿಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಯನ್ನು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಪ್ರಧಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನ

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರನ್ನು ಗುರುತಿಸಿ ನೀಡಲಾಗುವ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮವಾರ ನೆರವೇರಿತು. ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ (Shekhar kapoor), ನಟ ಮತ್ತು ಆಂಧ್ರಪ್ರದೇಶ ಶಾಸಕ ನಂದಮೂರಿ ಬಾಲಕೃಷ್ಣ ( Nandamuri Balakrishna ), ನಟ ಎಸ್. ಅಜಿತ್ ಕುಮಾರ್ (Ajith kumar) ಸೇರಿದಂತೆ ಒಟ್ಟು 71 ಗಣ್ಯ ವ್ಯಕ್ತಿಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ (Padma Vibhushan), ಪದ್ಮಭೂಷಣ (Padma Bhushan) ಮತ್ತು ಪದ್ಮಶ್ರೀಯನ್ನು (Padma Shri) ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ( President Droupadi Murmu ) ಅವರು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಪ್ರಧಾನ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2025ರ ಪದ್ಮ ಪ್ರಶಸ್ತಿ ಪ್ರದಾನದ ಮೊದಲ ಹಂತದಲ್ಲಿ ನಾಲ್ಕು ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 57 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.

padma

ಕಲಾ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಖ್ಯಾತ ಪಿಟೀಲು ವಾದಕ ಎಲ್. ಸುಬ್ರಮಣಿಯಂ ಅವರಿಗೆ ಪದ್ಮವಿಭೂಷಣ ನೀಡಲಾಯಿತು. ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ನೀಡಿದ ಕೊಡುಗೆಗಳಿಗಾಗಿ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಮಾಜಿ ಸಿಇಒ ಒಸಾಮು ಸುಜುಕಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಲಾಯಿತು. ಈ ಗೌರವವನ್ನು ಅವರ ಮಗ ಮತ್ತು ಪ್ರಸ್ತುತ ಸಿಇಒ ತೋಶಿಹಿರೊ ಸುಜುಕಿ ಅವರು ಸ್ವೀಕರಿಸಿದರು.

ಕಲಾ ಕ್ಷೇತ್ರದಲ್ಲಿ, ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್, ನಟ ಮತ್ತು ಆಂಧ್ರಪ್ರದೇಶ ಶಾಸಕ ನಂದಮೂರಿ ಬಾಲಕೃಷ್ಣ, ನಟ ಎಸ್. ಅಜಿತ್ ಕುಮಾರ್ ಮತ್ತು ದಿವಂಗತ ಗಾಯಕ ಪಂಕಜ್ ಉದಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಪಂಕಜ್ ಉದಾಸ್ ಅವರಿಗೆ ನೀಡಲಾದ ಪ್ರಶಸ್ತಿಯನ್ನು ಅವರ ಪತ್ನಿ ಫರೀದಾ ಉದಾಸ್ ಸ್ವೀಕರಿಸಿದರು. ಭಾರತದ ಮಾಜಿ ಹಾಕಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಕ್ರೀಡೆಯಲ್ಲಿನ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಹಿನ್ನೆಲೆ ಗಾಯಕಿ ಜಸ್ಪಿಂದರ್ ನರುಲಾ, ಕ್ರೀಡೆಯಲ್ಲಿನ ಸಾಧನೆಗಾಗಿ ಭಾರತೀಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸೇರಿದ್ದಾರೆ.

padma1

ಖ್ಯಾತ ವೇದ ವಿದ್ವಾಂಸ ಗಣೇಶ್ವರ್ ಶಾಸ್ತ್ರಿ ದ್ರಾವಿಡ್ ಅವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ಕಾರಿಡಾರ್‌ನ ಶಂಕುಸ್ಥಾಪನೆ ಸಮಾರಂಭಕ್ಕೆ ಶುಭ ಸಮಯಗಳನ್ನು ಇವರು ನಿರ್ಧರಿಸಿದ್ದರು.

ಸಾಹಿತ್ಯ ಮತ್ತು ಶಿಕ್ಷಣದಲ್ಲಿನ ಕೆಲಸಕ್ಕಾಗಿ ವೈದಿಕ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕುರಿತಾದ ಬರಹಗಳಿಗೆ ಹೆಸರುವಾಸಿಯಾದ ಅಮೆರಿಕನ್ ಲೇಖಕ ಮತ್ತು ಸಂಶೋಧಕ ಸ್ಟೀಫನ್ ಕ್ನ್ಯಾಪ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ದೇಶಾದ್ಯಂತದ ಭಾರತೀಯ ಸೆಲೆಬ್ರಿಟಿಗಳು ತಮ್ಮ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಲು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂದಮೂರಿ ಬಾಲಕೃಷ್ಣ ಅವರು ಪದ್ಮಭೂಷಣವನ್ನು ಸ್ವೀಕರಿಸಲು ಆಂಧ್ರಪ್ರದೇಶದ ಸಾಂಪ್ರದಾಯಿಕ ಉಡುಪು ಧರಿಸಿ ಬಂದಿದ್ದರು.

ಗಾಯಕ ಅರ್ಜಿತ್‌ ಸಿಂಗ್ ಮತ್ತು ಸಂಗೀತ ಸಂಯೋಜಕ ರಿಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿದ್ದು, ಕ್ರೀಡೆ, ವೈದ್ಯಕೀಯ, ವ್ಯವಹಾರ ಮತ್ತು ಇತರ ಕ್ಷೇತ್ರಗಳ ಹಲವಾರು ಇತರರಿಗೆ ಸೋಮವಾರ ಪ್ರಶಸ್ತಿಗಳು ದೊರೆತವು.



ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರು ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದು, ನಯವಾದ ಕಪ್ಪು ಸೂಟ್ ಧರಿಸಿ ಪ್ರಶಸ್ತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲು ನಟ ಅಜಿತ್ ಕುಮಾರ್ ಆಗಮಿಸಿದಾಗ ಅವರ ಪತ್ನಿ ಶಾಲಿನಿ ಮತ್ತು ಮಕ್ಕಳು ಹೆಮ್ಮೆಯಿಂದ ಅವರನ್ನು ಹುರಿದುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಜಿತ್ ಕುಮಾರ್, ಇಂತಹ ಒಂದು ದೊಡ್ಡ ಮಟ್ಟದಲ್ಲಿ ಗುರುತಿಸಲ್ಪಡುವುದು ನನ್ನ ಸೌಭಾಗ್ಯ. ನಮ್ಮ ರಾಷ್ಟ್ರಕ್ಕೆ ನನ್ನ ಕೊಡುಗೆಗಳಿಗೆ ಈ ಪ್ರಶಸ್ತಿಗೆ ನನ್ನನ್ನು ಗುರುತಿಸು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಈ ಮನ್ನಣೆ ಕೇವಲ ವೈಯಕ್ತಿಕ ಪ್ರಶಂಸೆಯಲ್ಲ. ನನ್ನ ಹಿರಿಯರು, ಗೆಳೆಯರು ಮತ್ತು ಚಲನಚಿತ್ರೋದ್ಯಮದೊಳಗಿನ ಅನೇಕರಿಂದ ನಾನು ಪಡೆದ ಸಾಮೂಹಿಕ ಬೆಂಬಲ ಮತ್ತು ಸ್ಫೂರ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರು ಎಕ್ಸ್ ನಲ್ಲಿ ಟ್ವಿಟ್ ಮಾಡಿ, ಭಾರತ ಸರ್ಕಾರ ನನ್ನನ್ನು ಪದ್ಮಭೂಷಣಕ್ಕೆ ಅರ್ಹನೆಂದು ಪರಿಗಣಿಸಿದೆ ಎಂದು ತಿಳಿದು ಹೆಮ್ಮೆಯಾಗಿದೆ. ಈ ಪ್ರಶಸ್ತಿಯು ನಾನು ಭಾಗವಾಗಿರುವ ಉದ್ಯಮಕ್ಕೆ ಮತ್ತು ನಾನು ಸೇರಿರುವ ಸುಂದರ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.