ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಳಪೆ ತುಪ್ಪ ಬಳಸಿ 68 ಲಕ್ಷ ಕೆಜಿ ತಿರುಪತಿ ಲಡ್ಡು ತಯಾರಿ: ಬೃಹತ್ ಹಗರದ ವಿವರ ಬಹಿರಂಗಪಡಿಸಿದ ಎಸ್‌ಐಟಿ

Tirupati Laddu Scam Case: ಕಳಪೆ ತಿರುಪತಿ ಲಡ್ಡು ತಯಾರಿ ಪ್ರಕರಣದಲ್ಲಿ ಎಸ್‌ಐಟಿ ನಡೆಸಿದ ತನಿಖೆಯಿಂದ ಬೃಹತ್ ಮೊತ್ತದ ವಂಚನೆ ಬಹಿರಂಗವಾಗಿದೆ. ತುಪ್ಪ ಪೂರೈಕೆ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖಾ ವರದಿ ಬೆಳಕು ಚೆಲ್ಲಿದ್ದು, ಹಲವು ಪ್ರಮುಖ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ.

ಕಳಪೆ ತುಪ್ಪ ಬಳಸಿ 68 ಲಕ್ಷ ಕೆಜಿ ತಿರುಪತಿ ಲಡ್ಡು ತಯಾರಿ

ತಿರುಪತಿ ಲಡ್ಡು ಹಗರಣವನ್ನು ಬಹಿರಂಗಪಡಿಸಿದ ಎಸ್ಐಟಿ -

Priyanka P
Priyanka P Jan 24, 2026 6:26 PM

ಹೈದರಾಬಾದ್, ಜ. 24: ಮೂರು ವರ್ಷಗಳಲ್ಲಿ ಸಂಗ್ರಹಿಸಿದ 68 ಲಕ್ಷ ಕಿಲೋ ಗ್ರಾಂಗಳಷ್ಟು ಕಲಬೆರಕೆ ತುಪ್ಪವನ್ನು ದೇಶದ ಅತ್ಯಂತ ಪವಿತ್ರ ಪ್ರಸಾದ (ನೈವೇದ್ಯ)ಗಳಲ್ಲಿ ಒಂದಾದ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸಲಾಯಿತು (Tirupati Laddu Scam Case). ವಿಶೇಷ ತನಿಖಾ ತಂಡ (SIT) ನಡೆಸಿದ 15 ತಿಂಗಳ ಸುದೀರ್ಘ ತನಿಖೆಯು ತಿರುಮಲ ತಿರುಪತಿ (Tirumala-Tirupati) ದೇವಸ್ಥಾನದಲ್ಲಿ ನಡೆದ ಅತಿದೊಡ್ಡ ಖರೀದಿ ಹಗರಣಗಳಲ್ಲಿ ಒಂದಾಗಿದೆ.

ಐವರು ಸದಸ್ಯರ ಎಸ್‌ಐಟಿ ತಂಡವು ಶುಕ್ರವಾರ (ಜನವರಿ 23) ನೆಲ್ಲೂರಿನ ಎಸಿಬಿ ನ್ಯಾಯಾಲಯದಲ್ಲಿ 36 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. ತಿರುಪತಿ ಲಡ್ಡು ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ನೇತೃತ್ವದ ಎಸ್‌ಐಟಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ ಮತ್ತು ಈ ವೇಳೆ ಭಾರಿ ಕಲಬೆರಕೆ ನಡೆದಿರುವುದು ಕಂಡುಬಂದಿದೆ. ಅದಾಗ್ಯೂ ಪ್ರಸಾದ ತಯಾರಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪವನ್ನು ಬಹಿರಂಗಪಡಿಸಲು ಎಸ್‌ಐಟಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.

ತಿರುಪತಿಯಲ್ಲಿ ನಕಲಿ ತುಪ್ಪದಿಂದ ತಯಾರಾಗಿತ್ತು 20 ಕೋಟಿ ಲಡ್ಡು

ಲಡ್ಡುಗಳನ್ನು ಕಲುಷಿತಗೊಳಿಸಲು ಗೋಮಾಂಸ ಕೊಬ್ಬು ಮತ್ತು ಹಂದಿ ಕೊಬ್ಬನ್ನು ಬಳಸಲಾಗಿದೆ ಎಂದು ರಾಜಕೀಯ ಪಕ್ಷಗಳು ಆರೋಪಿಸಿದ್ದವು. ಇದು ಭಾರಿ ಆಕ್ರೋಶಕ್ಕೆ ಹಾಗೂ ತನಿಖೆಗೆ ಕಾರಣವಾಯಿತು.

ಉತ್ತರಾಖಂಡ ಮೂಲದ ಭೋಲೆ ಬಾಬಾ ಡೈರಿಯನ್ನು ಆರೋಪಪಟ್ಟಿಯಲ್ಲಿ ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ. ಸಂಸ್ಥೆಯ ನಿರ್ದೇಶಕರಾದ ಪೊಮಿಲ್ ಮತ್ತು ವಿಪಿನ್ ಜೈನ್, ಟಿಟಿಡಿ ಖರೀದಿ ವಿಭಾಗದ ಸಿಬ್ಬಂದಿ ಹಾಗೂ ಡೈರಿ ತಜ್ಞ ವಿಜಯ ಶೇಖರ್ ರೆಡ್ಡಿ ಅವರೊಂದಿಗೆ ಸೇರಿ ಸಂಚು ರೂಪಿಸಿ, ಶೇಕಡಾ 80ರಷ್ಟು ರಾಸಾಯನಿಕಗಳಿರುವ ತುಪ್ಪವನ್ನು ಪೂರೈಸುವ ಮೂಲಕ 250 ಕೋಟಿ ರುಪಾಯಿ ಮೌಲ್ಯದ ಹಗರಣ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದೆಹಲಿ ಮೂಲದ ರಾಸಾಯನಿಕ ಸರಬರಾಜುದಾರ ಅಜಯ್ ಕುಮಾರ್ ಸುಗಂಧ್, ಚಿನ್ನ ಅಪ್ಪಣ್ಣ ಹಾಗೂ ಟಿಟಿಡಿಯ ಖರೀದಿ ವಿಭಾಗದ ಮಾಜಿ ಜನರಲ್ ಮ್ಯಾನೇಜರ್ ಆರ್‌ಎಸ್‌ಎಸ್‌ವಿಆರ್ ಸುಬ್ರಹ್ಮಣ್ಯಂ ಸೇರಿದಂತೆ ಇನ್ನಿತರರನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಇದೇ ಪ್ರಕರಣದ ಮೂಲ ದೂರುದಾರರಾಗಿದ್ದ ಟಿಟಿಡಿಯ ನಿವೃತ್ತ ಖರೀದಿ ವಿಭಾಗದ ಜನರಲ್ ಮ್ಯಾನೇಜರ್ ಪ್ರಳಯ ಕಾವೇರಿ ಮುರಳಿ ಕೃಷ್ಣ ಅವರನ್ನೂ ಸಹ ಇದೀಗ ಆರೋಪಿಯಾಗಿ ಸೇರಿಸಲಾಗಿದೆ.

ತಿರುಪತಿಗೆ ಕಲಬೆರಕೆ ತುಪ್ಪ ಪೂರೈಸುತ್ತಿದ್ದ ಡೈರಿಗೆ ರಾಸಾಯನಿಕ ಪದಾರ್ಥ ಒದಗಿಸುತ್ತಿದ್ದ ವ್ಯಾಪಾರಿಯ ಬಂಧನ

ಟಿಟಿಡಿ ಖರೀದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇತರ ಏಳು ಜನರ ಹೆಸರನ್ನು ಎಸ್‌ಐಟಿ ಹೆಸರಿಸಿದೆ. ಅವರಲ್ಲಿ ಟಿಟಿಡಿ ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರ ಆಪ್ತ ಸಹಾಯಕ ಚಿನ್ನ ಅಪ್ಪಣ್ಣ ಸೇರಿದ್ದಾರೆ. ವೈಎಸ್‌ಆರ್‌ಸಿಪಿ ಸಂಸದ ರೆಡ್ಡಿ ಅವರನ್ನು ಈ ಹಿಂದೆ ಪ್ರಶ್ನಿಸಲಾಗಿದ್ದರೂ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ.

ಇತರ ಇಬ್ಬರು ಪೂರೈಕೆದಾರರಾದ ವೈಷ್ಣವಿ ಡೈರಿಯ ಸಿಇಒ ಅಪೂರ್ವ ವಿನಾಯಕಂತ್ ಚಾವ್ಡಾ ಮತ್ತು ಎಆರ್ ಡೈರಿಯ ಎಂಡಿ ಆರ್ ರಾಜಶೇಖರನ್ ಕೂಡ ತುಪ್ಪವನ್ನು ಕಲಬೆರಕೆ ಮಾಡುವ ಪಿತೂರಿಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2024ರ ಅಕ್ಟೋಬರ್‌ನಲ್ಲಿ ಸಿಬಿಐ–ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಈ ಎಸ್‌ಐಟಿಯಲ್ಲಿ ಸಿಬಿಐ, ಆಂಧ್ರ ಪ್ರದೇಶ ಪೊಲೀಸ್‌ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಅಧಿಕಾರಿಗಳು ಇದ್ದರು. ಜತೆಗೆ ತಿರುಪತಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದ ಸ್ಥಳೀಯ ಪೊಲೀಸ್ ತಂಡವೂ ತನಿಖೆಗೆ ಬೆಂಬಲ ನೀಡಿತು.