ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್‌ ಸಿಂದೂರ್‌ನಲ್ಲಿ ವಾಶ್‌ ಔಟ್‌ ಆದ 9 ಭಯೋತ್ಪಾದಕ ಕೇಂದ್ರಗಳು ಯಾವುವು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಯಾಗಿದ್ದ ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ವರಿ, ಭಿಂಬರ್, ನೀಲಂ ಕಣಿವೆ, ಝೇಲಂ ಮತ್ತು ಚಕ್ವಾಲ್ ಮೇಲೆ ಬುಧವಾರ ಮುಂಜಾನೆ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆ (Operation Sindoor) ನಡೆಸಿದ್ದು, ಸುಮಾರು 70ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಈ ಒಂಬತ್ತು ಸ್ಥಳಗಳ ಕುರಿತು ಅನೇಕ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

9 ಉಗ್ರ ನೆಲೆಗಳೇ ಆಪರೇಷನ್‌ ಸಿಂದೂರ್‌ನ ಟಾರ್ಗೆಟ್‌ ಆಗಿದ್ದೇಕೆ?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ( terror attack) 26 ಪ್ರವಾಸಿಗರು ಸಾವನ್ನಪ್ಪಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಯಾಗಿದ್ದ ಒಂಬತ್ತು ಸ್ಥಳಗಳಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ (Operation Sindoor) ನಡೆಸಿ 24 ನಿಖರವಾದ ಕ್ರೂಸ್ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ವರಿ, ಭಿಂಬರ್, ನೀಲಂ ಕಣಿವೆ, ಝೇಲಂ ಮತ್ತು ಚಕ್ವಾಲ್ ಮೇಲೆ ಬುಧವಾರ ಮುಂಜಾನೆ ದಾಳಿ ನಡೆಸಿದ್ದು, ಇದರಿಂದ ಸುಮಾರು 70ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಭಾರತೀಯ ಸೇನೆಯು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಎಲ್‌ಇಟಿ) ಭಯೋತ್ಪಾದಕ ಗುಂಪುಗಳಿಗೆ ಸಂಬಂಧಿಸಿದ ಶಿಬಿರಗಳ ಮೇಲೆ ಭಾರತ ಸ್ಟ್ಯಾಂಡ್‌ ಆಫ್ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿ ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಿದೆ. ಭಾರತ ಗುರಿ ಮಾಡಿರುವ ಎಲ್ಲ ಒಂಬತ್ತು ಸ್ಥಳಗಳು ಭಯೋತ್ಪಾದಕ ಚಟುವಟಿಕೆಯ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.

oper1

ಮರ್ಕಜ್ ಸುಭಾನ್ ಅಲ್ಲಾ, ಜೆಇಎಂ, ಬಹಾವಲ್ಪುರ್

ಪಾಕಿಸ್ತಾನ ಪಂಜಾಬ್‌ನ ಬಹಾವಲ್ಪುರದ ಹೊರವಲಯದಲ್ಲಿ ಕರಾಚಿ- ಟೋರ್ಖಾಮ್ ರಾಷ್ಟ್ರೀಯ ಹೆದ್ದಾರಿ- 5ರ ಕರಾಚಿ ಮೋರ್‌ನಲ್ಲಿರುವ ಮರ್ಕಜ್ ಸುಭಾನ್ ಅಲ್ಲಾ ಯುವಕರಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದೆ. ಇದು ಜೈಶ್‌ ಉಗ್ರರ ಮುಖ್ಯ ಕೇಂದ್ರವಾಗಿದ್ದು 15 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಗೆ ಇಲ್ಲಿಂದಲೇ ಸಂಚು ರೂಪಿಸಲಾಗಿತ್ತು. ಪುಲ್ವಾಮಾ ದಾಳಿಯ ಉಗ್ರರಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು.

ಈ ಮರ್ಕಜ್‌ನಲ್ಲಿ ಜೆಇಎಂ ಸಂಸ್ಥಾಪಕ ಹಾಗೂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಜೆಇಎಂ ಮುಖ್ಯಸ್ಥ ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಮೌಲಾನಾ ಅಮ್ಮರ್ ಮತ್ತು ಇವರ ಕುಟುಂಬ ಸದಸ್ಯರ ಮನೆಗಳಿವೆ. ಮಸೂದ್ ಅಜರ್ ಇನ್ನೂ ಜೆಇಎಂನ ಡಿ-ಜ್ಯೂರ್ ಮುಖ್ಯಸ್ಥನಾಗಿದ್ದು, ಇಸ್ಲಾಮಾಬಾದ್ ಅಥವಾ ರಾವಲ್ಪಿಂಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳ ರಕ್ಷಣೆಯಲ್ಲಿದ್ದಾನೆ. ಮಸೂಸ್‌ ಅಜರ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಜೆಇಎಂನ ನಿಜವಾದ ಮುಫ್ತಿ ನಿರ್ವಹಿಸುತ್ತಿದ್ದಾನೆ.

ಜೆಇಎಂ ಮರ್ಕಜ್ ಸುಭಾನ್ ಅಲ್ಲಾದಲ್ಲಿ ಭಯೋತ್ಪಾದಕರಿಗೆ ನಿಯಮಿತವಾಗಿ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ ಮತ್ತು ಧಾರ್ಮಿಕ ಸಂಗತಿ ಬೋಧಿಸಲಾಗುತ್ತದೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಮಸೂದ್ ಅಜರ್ ಮತ್ತು ಅವರ ಸೋದರ ಮಾವ ಜೆಇಎಂನ ಸಶಸ್ತ್ರ ವಿಭಾಗದ ಮುಖ್ಯಸ್ಥ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಘೌರಿ ಅವರ ಇತರ ಸಹೋದರರು ಇಲ್ಲಿ ವಾಸಿಸುತ್ತಿದ್ದಾರೆ.

oper2

ಮರ್ಕಜ್ ತೈಬಾ, ಲಷ್ಕರ್-ಎ-ತೈಬಾ, ಮುರಿಡ್ಕೆ

ಪಾಕಿಸ್ತಾನ ಪಂಜಾಬ್‌ನ ಶೇಖುಪುರದ ಮುರಿಡ್ಕೆಯ ನಂಗಲ್ ಸಹದಾನ್‌ನಲ್ಲಿರುವ ಮರ್ಕಜ್ ತೈಬಾ 2000 ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಇದು ಲಷ್ಕರ್-ಎ-ತೈಬಾದ ಪ್ರಮುಖ ತರಬೇತಿ ಕೇಂದ್ರವಾಗಿದೆ. ಸುಮಾರು 82 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಈ ಸಂಕೀರ್ಣವು ಮದರಸಾ, ಮಾರುಕಟ್ಟೆ, ಭಯೋತ್ಪಾದಕ ಘಟಕಗಳಿಗೆ ವಸತಿ ಪ್ರದೇಶ, ಕ್ರೀಡಾ ಸೌಲಭ್ಯ, ಮೀನು ಸಾಕಣೆ ಕೇಂದ್ರ ಮತ್ತು ಕೃಷಿ ಪ್ರದೇಶಗಳನ್ನು ಒಳಗೊಂಡಿದೆ.

ಇಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮತ್ತು ದೈಹಿಕ ತರಬೇತಿಯನ್ನು ನಡೆಸಲಾಗುತ್ತದೆ. ಪಾಕಿಸ್ತಾನ ಮತ್ತು ವಿದೇಶಿಯರನ್ನು ಇಸ್ಲಾಂ ಧರ್ಮ ಪಾಲನೆ ಮಾಡುವಂತೆ ಮಾಡಲು ಪ್ರಚಾರ ಚಟುವಟಿಕೆಯನ್ನು ನಡೆಸಲಾಗುತ್ತದೆ. ಮಾತ್ರವಲ್ಲದೆ ಇದರಲ್ಲಿ ಉಗ್ರರಿಗೆ ಧಾರ್ಮಿಕ ಬೋಧನೆ ಮಾಡಲು ಸೂಫಾ ಅಕಾಡೆಮಿ ಮತ್ತು ಮಹಿಳೆಯರಿಗಾಗಿ ಸೂಫಾ ಶಿಕ್ಷಣ ಕೇಂದ್ರಗಳಿವೆ.

ಈ ಮರ್ಕಜ್ ವಿದ್ಯಾರ್ಥಿಗಳನ್ನು ಸಶಸ್ತ್ರ ಜಿಹಾದ್‌ಗೆ ಸೇರಲು ಪ್ರೇರೇಪಿಸುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ವರ್ಷಕ್ಕೆ ಸುಮಾರು 1,000 ಯುವಕರನ್ನು ಇದಕ್ಕೆ ದಾಖಲಿಸಲಾಗುತ್ತದೆ. ಮರ್ಕಜ್ ತೈಬಾ ಸಂಕೀರ್ಣದಲ್ಲಿ ಮಸೀದಿ ಮತ್ತು ಅತಿಥಿಗೃಹ ನಿರ್ಮಾಣಕ್ಕಾಗಿ 2000ರಲ್ಲಿ ಒಸಾಮಾ ಬಿನ್ ಲಾಡೆನ್ 84 ಕೋಟಿ ರೂಪಾಯಿಗಳನ್ನು ಒದಗಿಸಿದ್ದನು.

ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಆದೇಶದ ಮೇರೆಗೆ ಮುಂಬೈ ಭಯೋತ್ಪಾದಕ ದಾಳಿಯ ಅಜ್ಮಲ್ ಕಸಬ್ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ಇಲ್ಲಿ ತರಬೇತಿ ನೀಡಲಾಗಿತ್ತು. ​ಡೇವಿಡ್ ಕೋಲ್ಮನ್ ಹೆಡ್ಲಿ, ತಹವ್ವೂರ್ ಹುಸೇನ್ ರಾಣಾ, ಝಕಿ-ಉರ್-ರೆಹಮಾನ್ ಲಖ್ವಿ ಅವರ ಸೂಚನೆಯ ಮೇರೆಗೆ ಅಬ್ದುಲ್ ರೆಹಮಾನ್ ಸಯೀದ್ ಅಲಿಯಾಸ್ ಪಾಷಾ, ಹರೂನ್ ಮತ್ತು ಖುರ್ರಾಮ್ ಅವರೊಂದಿಗೆ ಮುರಿಡ್ಕೆಗೆ ಭೇಟಿ ನೀಡಿದ್ದರು.

oper3

ಸರ್ಜಲ್/ತೆಹ್ರಾ ಕಲಾನ್ ಫೆಸಿಲಿಟಿ, ಜೆಇಎಂ, ಶಕರ್‌ಗಢ

ಜಮ್ಮು ಮತ್ತು ಕಾಶ್ಮೀರಕ್ಕೆ ಒಳನುಸುಳಲು ಸಂಚುಕೋರರನ್ನು ರೂಪಿಸುವ ಜೈಶ್-ಎ-ಮೊಹಮ್ಮದ್ ನ ಪ್ರಮುಖ ತಾಣವಾಗಿರುವ ತೆಹ್ರಾ ಕಲಾನ್ ಅಲಿಯಾಸ್ ಸರ್ಜಲ್ ಫೆಸಿಲಿಟಿ ಪಾಕಿಸ್ತಾನ ಪಂಜಾಬ್‌ನ ನರೋವಾಲ್ ಜಿಲ್ಲೆಯ ಶಕರ್‌ಗಢ ತಹಸಿಲ್‌ನಲ್ಲಿದೆ. ಜೆಇಎಂನ ರಹಸ್ಯ ಕಾರ್ಯಾಚರಣೆಗಾಗಿ ತೆಹ್ರಾ ಕಲಾನ್ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗಿದೆ.

ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಸರ್ಕಾರಿ ಕಟ್ಟಡಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗೌಪ್ಯವಾಗಿ ಇಡಲು ಪಾಕಿಸ್ತಾನದ ಐಎಸ್‌ಐ ಅನುಕೂಲ ಮಾಡಿಕೊಟ್ಟಿದೆ. ಇಲ್ಲಿ ಆರೋಗ್ಯ ಘಟಕಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಗುರುತಿಸಿಕೊಂಡು ಜೆಇಎಂ ಮತ್ತು ಎಚ್‌ಎಂನ ಹಲವಾರು ಚಟುವಟಿಕೆಗಳನ್ನು ಇಲ್ಲಿ ನಿರ್ವಹಿಸಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 6 ಕಿ.ಮೀ. ದೂರದಲ್ಲಿದೆ. ಇದು ಭಾರತದ ಗಡಿಗೆ ಹತ್ತಿರದಲ್ಲಿರುವುದರಿಂದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸಲು ಗಡಿಯಾಚೆಗೆ ಸುರಂಗಗಳನ್ನು ಅಗೆಯುವ ನೆಲೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಐಎಸ್‌ಐ ಮತ್ತು ಜೆಇಎಂ ಶಕರ್‌ಗಢದಲ್ಲಿ ಸುರಂಗಗಳ ಜಾಲವನ್ನು ಅಭಿವೃದ್ಧಿಪಡಿಸಿ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲು ಬಳಸುತ್ತಾರೆ.

ಜಮ್ಮು ವಲಯದ ಅರ್ನಿಯಾದಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಕಂಡುಬಂದಿರುವ ಎಲ್ಲಾ ಸುರಂಗಗಳು ಐಎಸ್‌ಐ ಮತ್ತು ಜೆಇಎಂ ಮಾಡಿರುವುದು ಎನ್ನಲಾಗಿದೆ. ಸರ್ಜಲ್ ಫೆಸಿಲಿಟಿ ಭಾರತದ ಭೂಪ್ರದೇಶದ ಮೇಲೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ಸಾಗಿಸುವ ಡ್ರೋನ್‌ಗಳಿಗೆ ಉಡಾವಣಾ ನೆಲೆಯಾಗಿದೆ.

oper4

ಮೆಹಮೂನಾ ಜೋಯಾ ಫೆಸಿಲಿಟಿ, ಹೆಚ್ಎಂ, ಸಿಯಾಲ್ಕೋಟ್

ಪಾಕಿಸ್ತಾನ ಪಂಜಾಬ್‌ನ ಸಿಯಾಲ್ಕೋಟ್ ಜಿಲ್ಲೆಯ ಹೆಡ್ ಮರಾಲಾ ಪ್ರದೇಶದ ಕೋಟ್ಲಿ ಭುಟ್ಟಾ ಸರ್ಕಾರಿ ಆಸ್ಪತ್ರೆಯ ಬಳಿ ಇದೆ ಮೆಹಮೂನಾ ಜೋಯಾ ಫೆಸಿಲಿಟಿ. ಇದು ಹಿಜ್ಬುಲ್ ಮುಜಾಹಿದ್ದೀನ್ (ಹೆಚ್ಎಂ) ನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಅಡಗಿಸಿಡುವ ತಾಣವಾಗಿದೆ. ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಸರ್ಕಾರಿ ಕಟ್ಟಡಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಡಾವಣಾ ಸೌಲಭ್ಯಗಳನ್ನು ಸ್ಥಾಪಿಸಲು ಐಎಸ್ಐ ಸಹಾಯ ಮಾಡಿದೆ.

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಈ ಕೇಂದ್ರವನ್ನು ಜಮ್ಮು ಪ್ರದೇಶಕ್ಕೆ ಒಳನುಸುಳಲು ಬಳಸುತ್ತಾರೆ. ಅವರಿಗೆ ಇಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತದೆ ಮತ್ತು ತರಬೇತಿ ನೀಡಲಾಗುತ್ತದೆ. ಹಿಜ್ಬುಲ್ ಮುಜಾಹಿದ್ದೀನ್ ನ ಈ ಕೇಂದ್ರದ ಮುಖ್ಯಸ್ಥ ಮೊಹಮ್ಮದ್ ಇರ್ಫಾನ್ ಖಾನ್ ಅಲಿಯಾಸ್ ಇರ್ಫಾನ್ ತಾಂಡಾ. ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ 1995ರ ಜನವರಿ 26ರಂದು ಇರ್ಫಾನ್ ತಾಂಡಾ ನಡೆಸಿದ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದು 50 ಜನರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ದಾಳಿಯಲ್ಲಿ ರಾಜ್ಯಪಾಲ ಕೆ.ವಿ. ಕೃಷ್ಣ ರಾವ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಸರಣಿ ಸ್ಫೋಟಗಳ ಸಂದರ್ಭದಲ್ಲಿ ಹಲವು ದಾಳಿಗಳನ್ನು ರೂಪಿಸಿರುವ ಅಪರಾಧಿಯಾಗಿರುವ ಇರ್ಫಾನ್ ತಾಂಡಾ ನೇತೃತ್ವದಲ್ಲಿ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ನಡೆಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ನೆಲೆಸಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಮಾಡುತ್ತಾರೆ.

ಈ ಕೇಂದ್ರದಿಂದ ಹಿಜ್ಬುಲ್ ಮುಜಾಹಿದ್ದೀನ್ ನ ಅಟ್ಟಾ ಅಲ್ ರೆಹಮಾನ್ ಅಲ್ಫೆಜಿ ಅಲಿಯಾಸ್ ಅಬು ಲಾಲಾ ಮತ್ತು ಮಾಜ್ ಭಾಯ್ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಭಯೋತ್ಪಾದಕರನ್ನು ಭಾರತಕ್ಕೆ ನುಸುಳಲು ಸಹಾಯ ಮಾಡುತ್ತಾರೆ.

oper5

ಮರ್ಕಜ್ ಅಹ್ಲೆ ಹದೀಸ್ ಬರ್ನಾಲಾ, ಎಲ್ಇಟಿ, ಭಿಂಬರ್

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಿಂಬರ್ ಜಿಲ್ಲೆಯ ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್ ಲಷ್ಕರ್ ಈ ತೈಬಾದ ಪ್ರಮುಖ ಮರ್ಕಜ್‌ಗಳಲ್ಲಿ ಒಂದು. ಇದನ್ನು ಪೂಂಚ್, ರಾಜೌರಿ, ರಿಯಾಸಿ ವಲಯಕ್ಕೆ ಭಯೋತ್ಪಾದಕರನ್ನು ಕಳುಹಿಸಲು ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಬಳಸಲಾಗುತ್ತದೆ. ಮರ್ಕಜ್ ಕೋಟೆ ಜಮೆಲ್ ರಸ್ತೆಯಲ್ಲಿರುವ ಬರ್ನಾಲಾ ಪಟ್ಟಣದ ಹೊರವಲಯದಲ್ಲಿದೆ. ಇದು ಬರ್ನಾಲಾ ಪಟ್ಟಣದಿಂದ ಸುಮಾರು 500 ಮೀಟರ್ ಹಾಗೂ ಕೋಟೆ ಜೆಮೆಲ್ ರಸ್ತೆಯಿಂದ 200 ಮೀಟರ್ ದೂರದಲ್ಲಿದೆ.

ಇಲ್ಲಿ 100- 150 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. 40 -50 ಭಯೋತ್ಪಾದಕರು ಸಾಮಾನ್ಯವಾಗಿ ಇಲ್ಲಿ ಇದ್ದೇ ಇರುತ್ತಾರೆ. ಇದನ್ನು ಎಲ್‌ಇಟಿ ಭಯೋತ್ಪಾದಕರು ಭಾರತದ ಪ್ರದೇಶಗಳಿಗೆ ಒಳನುಸುಳಲು ಬಳಸಿಕೊಳ್ಳುತ್ತದೆ. ಎಲ್‌ಇಟಿ ಭಯೋತ್ಪಾದಕರಾದ ಖಾಸಿಂ ಗುಜ್ಜರ್ ಅಲಿಯಾಸ್ ಮಹ್ರೋರ್, ಖಾಸಿಂ ಖಾಂಡಾ ಮತ್ತು ಅನಸ್ ಜರಾರ್ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಾರೆ. ಅವರು ಈ ಮರ್ಕಜ್ ಸಮೀಪವೇ ವಾಸವಾಗಿದ್ದಾರೆ. ಇಲ್ಲಿಗೆ ನಿರಂತರ ಭೇಟಿ ನೀಡುವ ಖುಬೈಬ್ ಅಲಿಯಾಸ್ ಮೊಹಮ್ಮದ್ ಅಮೀನ್ ಭಟ್ ಮತ್ತು ಖಾಸಿಂ ಗುಜ್ಜರ್ ವಿರುದ್ಧ ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಅಪರಾಧಿಗಳೆಂದು ಗುರುತಿಸಲಾಗಿದೆ.

2025ರ ಮಾರ್ಚ್ ನಲ್ಲಿ ಕೊಲ್ಲಲ್ಪಟ್ಟ ಸೈಫುಲ್ಲಾ ಸಾಜಿದ್ ಜಟ್ ಮತ್ತು ಅಬು ಕತಲ್ ಸಿಂಧಿ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ರೂಪಿಸುತ್ತಿದ್ದರು. ಇವರು ಪ್ರಮುಖವಾಗಿ 2023ರ ಜನವರಿ 1ರಂದು ರಾಜೌರಿಯ ಧಂಗ್ರಿಯಲ್ಲಿ ಮತ್ತು 2024ರ ಜೂನ್ 9ರಂದು ರಿಯಾಸಿಯಲ್ಲಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಒಟ್ಟು 16 ನಾಗರಿಕರ ಸಾವಿಗೆ ಕಾರಣವಾಗಿದ್ದರು.

ಎಲ್‌ಇಟಿ, ಜಮಾತ್-ಉದ್-ದವಾ ಮತ್ತು ಜಮ್ಮು ಮತ್ತು ಕಾಶ್ಮೀರ ಯುನೈಟೆಡ್ ಮೂವ್‌ಮೆಂಟ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಲು ಮತ್ತು ಮೇಲ್ವಿಚಾರಣೆ ಮಾಡಲು ಎಲ್‌ಇಟಿ ಮತ್ತು ಜೆಯುಡಿ ನಾಯಕರು ಕೂಡ ಈ ಮರ್ಕಜ್‌ಗೆ ನಿರಂತರ ಭೇಟಿ ನೀಡುತ್ತಾರೆ.

oper6

ಮರ್ಕಜ್ ಅಬ್ಬಾಸ್, ಜೆಇಎಂ, ಕೋಟ್ಲಿ

ಜೈಶ್-ಎ-ಮೊಹಮ್ಮದ್ ನ ಮರ್ಕಜ್ ಸೈದ್ನಾ ಹಜರತ್ ಅಬ್ಬಾಸ್ ಬಿನ್ ಅಬ್ದುಲ್ ಮುತಾಲಿಬ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿಯ ಮೊಹಲ್ಲಾ ರೋಲಿ ಧಾರಾ ಬೈಪಾಸ್ ರಸ್ತೆಯಲ್ಲಿದೆ. ಇದು ಪಾಕಿಸ್ತಾನದ ಮಿಲಿಟರಿ ಕ್ಯಾಂಪ್‌ನಿಂದ 2 ಕಿ.ಮೀ. ದೂರದ ಆಗ್ನೇಯ ಪ್ರದೇಶದಲ್ಲಿದೆ. ಇಲ್ಲಿ ಸುಮಾರು 100- 125 ಭಯೋತ್ಪಾದರು ಬೀಡು ಬಿಟ್ಟಿದ್ದರು. 40- 50 ಜೆಇಎಂ ಭಯೋತ್ಪಾದಕರು ಇಲ್ಲಿ ಸದಾ ಇದ್ದೇ ಇರುತ್ತಾರೆ.

ಹಫೀಜ್ ಅಬ್ದುಲ್ ಶಕೂರ್ ಅಲಿಯಾಸ್ ಖಾರಿ ಜರ್ರಾರ್ ಈ ಮರ್ಕಜ್‌ನ ಮುಖ್ಯಸ್ಥ. ಖಾರಿ ಜರ್ರಾರ್ ಜೆಇಎಂ ಕೌನ್ಸಿಲ್‌ನ ಶುರಾ ಸದಸ್ಯ ಮತ್ತು ಜೆಇಎಂನ ಸ್ಥಾಪಕ ಸದಸ್ಯರಲ್ಲಿ ಒಬ್ಬ.
ಖಾರಿ ಜರ್ರಾರ್ ಮರ್ಕಜ್ ಅಬ್ಬಾಸ್ ಪಕ್ಕದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸುವುದು ಮತ್ತು ಕಾರ್ಯಗತಗೊಳಿಸುವಲ್ಲಿ ಈತ ನೇರವಾಗಿ ಭಾಗಿಯಾಗಿದ್ದಾನೆ. 2016ರ ನವೆಂಬರ್ 29ರಂದು ಜಮ್ಮುವಿನ ನಗ್ರೋಟಾದ ಬಲೀನಿ ಸೇತುವೆಯ ಬಳಿಯ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿರುವ ಅಪರಾಧಿಯಾಗಿ ಖಾರಿ ಜರ್ರಾರ್‌ನನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತನ ಹುಡುಕಾಟ ನಡೆಸುತ್ತಿದೆ. ಖಾರಿ ಜರ್ರಾರ್ ಅಫ್ಘಾನಿಸ್ತಾನದಲ್ಲಿ ಜೈಇಎಂಗೆ ನಿಧಿಸಂಗ್ರಹಣೆ ನಡೆಸುತ್ತಾನೆ.

ಮರ್ಕಜ್ ಅಬ್ಬಾಸ್‌ನಲ್ಲಿರುವ ಇತರ ಜೆಇಎಂ ಭಯೋತ್ಪಾದಕರಲ್ಲಿ ಖಾರಿ ಜರ್ರಾರ್ ಅವರ ಮಗ ಖಾರಿ ಮಾಜ್ ಸೇರಿದಂತೆ ಮೊಹಮ್ಮದ್ ಮಾವಿಯಾ ಖಾನ್, ತಾಹಿರ್ ನಜೀರ್ ಮತ್ತು ಅಬು ಬಕರ್ ಸೇರಿದ್ದಾರೆ. ಪಠಾಣ್‌ಕೋಟ್ ದಾಳಿಯ ಅನಂತರ ಸಿಯಾಲ್‌ಕೋಟ್‌ನ ದಸ್ಕಾ ಮರ್ಕಜ್‌ನಲ್ಲಿ ಸಂಗ್ರಹಿಸಲಾಗಿದ್ದ ಜೆಇಎಂನ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಕೋಟ್ಲಿಯಲ್ಲಿರುವ ಮರ್ಕಜ್ ಅಬ್ಬಾಸ್‌ಗೆ ನೀಡಲಾಗಿದೆ. ಇದನ್ನು ಅಗತ್ಯವಿದ್ದಾಗ ಖಾರಿ ಜರ್ರಾರ್ ಸ್ವತಃ ತನ್ನ ವಾಹನಗಳಲ್ಲಿ ಸಿಯಾಲ್‌ಕೋಟ್‌ಗೆ ಸಾಗಿಸುತ್ತಾನೆ.

oper7

ಮಸ್ಕರ್ ರಹೀಲ್ ಶಾಹಿದ್, ಹಿಜ್ಬುಲ್-ಮುಜಾಹಿದ್ದೀನ್, ಕೋಟ್ಲಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಕೋಟ್ಲಿ ಜಿಲ್ಲೆಯ ಮಹುಲಿ ಪುಲಿಯಿಂದ 2.5 ಕಿ.ಮೀ. ದೂರದಲ್ಲಿರುವ ಮಸ್ಕರ್ ರಹೀಲ್ ಶಾಹಿದ್ ಹಿಜ್ಬುಲ್ ಮುಜಾಹಿದ್ದೀನ್ ಅತ್ಯಂತ ಹಳೆಯ ಕೇಂದ್ರವಾಗಿದೆ. ಇಲ್ಲಿಗೆ ಸಾಗಲು ಸರಿಯಾದ ದಾರಿಯಿಲ್ಲ. ಮಣ್ಣಿನ ಮಾರ್ಗದಲ್ಲಿ ಸಾಗಬೇಕು. ಈ ಶಿಬಿರವು ಗುಡ್ಡಗಾಡು ಪ್ರದೇಶದಲ್ಲಿದೆ. ಇಲ್ಲಿ ಬ್ಯಾರಕ್‌, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಇಡಲು ಬಳಸಲಾಗುವ ನಾಲ್ಕು ಕೊಠಡಿಗಳು, ಭಯೋತ್ಪಾದಕರಿಗೆ ಕಚೇರಿ ಮತ್ತು ವಾಸಸ್ಥಳಗಳನ್ನು ಒಳಗೊಂಡಿದೆ. ಈ ಆವರಣದಲ್ಲಿ ಹೆಚ್ಚಿನ ಭಯೋತ್ಪಾದಕರು ಮತ್ತು ಬೋಧಕರಿಗೆ ಸೌಲಭ್ಯ ಕಲ್ಪಿಸಲು ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.

ಈ ಶಿಬಿರಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ದಟ್ಟವಾದ ಅರಣ್ಯ ವ್ಯಾಪ್ತಿಯಲ್ಲಿರುವ ಇದು 150- 200 ಭಯೋತ್ಪಾದಕರಿಗೆ ಸ್ಥಳಾವಕಾಶ ಒದಗಿಸುತ್ತದೆ. ಇಲ್ಲಿ ಭಯೋತ್ಪಾದಕರಿಗೆ ಗುಂಡಿನ ತರಬೇತಿ ಮತ್ತು ವಿಶೇಷ ದೈಹಿಕ ತರಬೇತಿಗಳನ್ನು ನೀಡಲಾಗುತ್ತದೆ. ಇಲ್ಲಿನ ಭಯೋತ್ಪಾದಕರನ್ನು ಪರ್ವತ ಯುದ್ಧದಲ್ಲಿ ತರಬೇತಿ ನೀಡಲು ಹತ್ತಿರದ ಗುಡ್ಡಗಾಡು ಪ್ರದೇಶಗಳಿಗೆ ಕರೆದೊಯ್ಯಲಾಗುತ್ತದೆ.

ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಇಲ್ಲಿ ಹೊಸದಾಗಿ ನೇಮಕಗೊಂಡ ಭಯೋತ್ಪಾದಕರಿಗೆ ತರಬೇತಿ ನೀಡುತ್ತಾನೆ. ಪ್ರಸ್ತುತ ಇಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವ ಅಬು ಮಾಜ್ ಮತ್ತು ಅಬ್ದುಲ್ ರೆಹಮಾನ್ ಗಡಿಯಲ್ಲಿ ನಿಯೋಜಿಸಲಾದ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಾರೆ.

oper8

ಶವಾಯಿ ನಲ್ಲಾ ಕ್ಯಾಂಪ್, ಎಲ್ಇಟಿ, ಮುಜಫರಾಬಾದ್

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶವಾಯಿ ನಲ್ಲಾ ಕ್ಯಾಂಪ್ ಲಷ್ಕರ್-ಎ-ತೈಬಾದ ಪ್ರಮುಖ ಶಿಬಿರಗಳಲ್ಲಿ ಒಂದಾಗಿದೆ. ಇದನ್ನು ಎಲ್‌ಇಟಿ ಭಯೋತ್ಪಾದಕರ ನೇಮಕಾತಿ, ನೋಂದಣಿ ಮತ್ತು ತರಬೇತಿಗಾಗಿ ಬಳಸಲಾಗುತ್ತದೆ. ಈ ಶಿಬಿರವು 2000ದ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದೆ. ಇದು ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ನೀಲಂ ರಸ್ತೆಯಲ್ಲಿರುವ ಚೆಲಬಂಡಿ ಸೇತುವೆಯ ಬಳಿ ಇದೆ.

ಈ ಶಿಬಿರವನ್ನು ಹುಜೈಫಾ ಬಿನ್ ಯೆಮೆನ್ ಮತ್ತು ಬೈತ್-ಉಲ್-ಮುಜಾಹಿದ್ದೀನ್ ಶಿಬಿರ ಎಂದು ಕರೆಯಲಾಗುತ್ತದೆ. ಇಲ್ಲಿ ಫೈರಿಂಗ್ ರೇಂಜ್, ತರಬೇತಿ ಮೈದಾನ, ಎಲ್‌ಇಟಿ ಮದರಸಾ ಮತ್ತು 40 ಕೊಠಡಿಗಳಿವೆ. ಶವಾಯ್ ನಲ್ಲಹ್ ಶಿಬಿರದಲ್ಲಿ ಎಲ್‌ಇಟಿ ಭಯೋತ್ಪಾದಕರಿಗೆ ದೊಡ್ಡ ವಸತಿ ಸೌಲಭ್ಯ ಮತ್ತು ಭಯೋತ್ಪಾದಕ ಕಮಾಂಡರ್‌ಗಳು ಮತ್ತು ಬೋಧಕರಿಗೆ ಮನೆಗಳೂ ಇವೆ. ಇಲ್ಲಿ ಧಾರ್ಮಿಕ ಬೋಧನೆ, ದೈಹಿಕ ತರಬೇತಿ, ಜಿಪಿಎಸ್ ಬಳಕೆಯ ಕುರಿತು ಯುದ್ಧತಂತ್ರದ ತರಬೇತಿ, ನಕ್ಷೆ ಓದುವಿಕೆ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನೂ ನಡೆಸಲಾಗುತ್ತದೆ.

ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ಇಲ್ಲಿನ ಚಟುವಟಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದ. ಇಲ್ಲಿ ಆರಂಭಿಕ ತರಬೇತಿ ಪೂರ್ಣಗೊಂಡ ಭಯೋತ್ಪಾದಕರಿಗೆ ಹೆಚ್ಚಿನ ತರಬೇತಿಗಾಗಿ ಇತರ ಎಲ್‌ಇಟಿ ಶಿಬಿರಗಳಿಗೆ ಕಳುಹಿಸಲಾಗುತ್ತದೆ. ಶವಾಯ್ ನಲ್ಲಹ್ ಶಿಬಿರ ಭಯೋತ್ಪಾದಕರಿಗೆ ವಿಶೇಷ ಶಸ್ತ್ರಾಸ್ತ್ರ ತರಬೇತಿ ಮತ್ತುಈಗಾಗಲೇ ತರಬೇತಿ ಪಡೆದ ಭಯೋತ್ಪಾದಕ ಸದಸ್ಯರಿಗೆ ಹೊಸ ಕೋರ್ಸ್‌ಗಳನ್ನು ನಡೆಸುತ್ತದೆ. ಪಾಕಿಸ್ತಾನಿ ಸೈನ್ಯದ ತರಬೇತುದಾರರು ಇಲ್ಲಿಗೆ ಬಂದು ತರಬೇತಿ ನೀಡುತ್ತಾರೆ.

ಇದನ್ನೂ ಓದಿ: Operation sindoor: ತನ್ನ ವಾಯುಪ್ರದೇಶ ಪೂರ್ತಿ ಮುಚ್ಚಿದ ಪಾಕ್‌, ಮರುದಾಳಿಗೆ ಸಿದ್ಧತೆ?

oper9

ಸೈಯದ್ನಾ ಬಿಲಾಲ್ ಮರ್ಕಜ್, ಜೆಇಎಂ, ಮುಜಫರಾಬಾದ್

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸೈಯದ್ನಾ ಬಿಲಾಲ್ ಮಸೀದಿ ಜೈಶ್-ಎ-ಮೊಹಮ್ಮದ್ ನ ಪ್ರಮುಖ ಕೇಂದ್ರವಾಗಿದೆ. ಇದು ಮುಜಫರಾಬಾದ್‌ನ ಕೆಂಪು ಕೋಟೆಯ ಎದುರು ಇದೆ. ಜೆಇಎಂ ಕಚೇರಿ ಮತ್ತು ಸಾರಿಗೆ ಶಿಬಿರ ಸೈಯದ್ನಾ ಬಿಲಾಲ್ ಮಸೀದಿ ಕಟ್ಟಡದ ಪಕ್ಕದಲ್ಲಿರುವ ಮೊದಲ ಮಹಡಿಯಲ್ಲಿದೆ. ಮಸೀದಿ ಕಟ್ಟಡವು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಕುಟುಂಬ ವಸತಿಗೃಹಗಳು, ಕಚೇರಿ ಕಟ್ಟಡ ಮತ್ತು ಜೆಇಎಂನ ದತ್ತಿ ವಿಭಾಗವಾದ ಅಲ್-ರೆಹಮತ್ ಟ್ರಸ್ಟ್‌ನ ಕಚೇರಿಯನ್ನು ಒಳಗೊಂಡಿದೆ.

ಜೆಇಎಂ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸುವ ಮೊದಲು ಅವರಿಗೆ ಅಲ್ಲಿಗೆ ಹೇಗೆ ಹೋಗಬೇಕು ಎನ್ನುವ ತರಬೇತಿ ನೀಡಲಾಗುತ್ತದೆ. ಇಲ್ಲಿ ಸದಾ 50- 100 ಭಯೋತ್ಪಾದಕರು ಇರುತ್ತಾರೆ. ಭಾರತೀಯ ಸೇನೆಯಿಂದ ಕೊಲ್ಲಲ್ಪಟ್ಟ ಜೆಇಎಂ ಭಯೋತ್ಪಾದಕರ ಫೋನ್‌ಗಳಿಂದ ಪಡೆದ ಫೋಟೋಗಳ ಮಾಹಿತಿಯಂತೆ ಪಾಕಿಸ್ತಾನಿ ವಿಶೇಷ ಪಡೆಗಳು, ಎಸ್‌ಎಸ್‌ಜಿಯಿಂದ ಹೆಚ್ಚುವರಿ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.

ಜೆಇಎಂ ಕಾರ್ಯಾಚರಣೆ ಮುಖ್ಯಸ್ಥ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜೆಇಎಂ ಮುಖ್ಯಸ್ಥ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಅಬ್ದುಲ್ಲಾ ಜೆಹಾದಿ ಅಲಿಯಾಸ್ ಅಬ್ದುಲ್ಲಾ ಕಾಶ್ಮೀರಿ ಮತ್ತು ಪರಾರಿಯಾಗಿರುವ ಭಾರತೀಯ ಆಶಿಕ್ ನೆಂಗ್ರೂ ಕೂಡ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಆಫ್ಘಾನ್‌ ಯುದ್ಧದಲ್ಲಿ ಭಾಗವಹಿಸಿದ್ದನು. 2000 ರಲ್ಲಿ ಜೆಇಎಂ ರಚನೆಯಾದಾಗ ಹರ್ಕತ್-ಉಲ್-ಮುಜಾಹಿದ್ದೀನ್ (ಎಚ್‌ಯುಎಂ) ನ ಭಾಗವಾಗಿದ್ದನು.