Saif Ali Khan: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಪ್ರಕರಣ; ನನ್ನ ವಿರುದ್ಧ ಸುಳ್ಳು ಕೇಸ್ ಮಾಡಲಾಗಿದೆ ಎಂದ ಆರೋಪಿ
ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದಿತ್ತು. ಬಾಂದ್ರಾದಲ್ಲಿರುವ ಅವರ ಮನೆಗೆ ನುಗ್ಗಿದ್ದ 30 ವರ್ಷದ ಬಾಂಗ್ಲಾದೇಶಿ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್, ನಟನಿಗೆ ಚಾಕು ಇರಿದಿದ್ದಾನೆ ಎನ್ನುವ ಆರೋಪದ ಮೇಲೆ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಆರೋಪಿ ತನ್ನ ವಿರುದ್ಧ ಇರುವ ಪ್ರಕರಣ ಸುಳ್ಳು ಎಂದು ಹೇಳಿದ್ದಾನೆ


ಮುಂಬೈ: ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮೇಲೆ ದಾಳಿ ನಡೆದಿತ್ತು. ಬಾಂದ್ರಾದಲ್ಲಿರುವ ಅವರ ಮನೆಗೆ ನುಗ್ಗಿದ್ದ 30 ವರ್ಷದ ಬಾಂಗ್ಲಾದೇಶಿ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್, ನಟನಿಗೆ ಚಾಕು ಇರಿದಿದ್ದಾನೆ ಎನ್ನುವ ಆರೋಪದ ಮೇಲೆ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಆರೋಪಿ ತನ್ನ ವಿರುದ್ಧ ಇರುವ ಪ್ರಕರಣ ಸುಳ್ಳು ಎಂದು ಹೇಳಿದ್ದಾನೆ. ಈ ಕುರಿತು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ತಾನು ನಿರಪರಾಧಿ ಎಂದು ಹೇಳಿಕೆ ನೀಡಿದ್ದಾನೆ. ಶುಕ್ರವಾರ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ, ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್, ಎಫ್‌ಐಆರ್ ವರದಿ ಸಂಪೂರ್ಣ ಸುಳ್ಳಾಗಿದೆ. ತನ್ನ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಕಲೆ ಹಾಕಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾನೆ.
ತನಿಖಾ ಸಂಸ್ಥೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 47 ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಆತ ಹೇಳಿದ್ದಾನೆ. ವಕೀಲ ಅಜಯ್ ಗವಾಲಿ ಮೂಲಕ ಸಲ್ಲಿಸಲಾದ ಶೆಹಜಾದ್ ಅರ್ಜಿ ಆರೋಪಿಯು ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾನೆ ಆದ್ದರಿಂದ ಆತನನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಬಳಿ ಮನವಿ ಮಾಡಲಾಗಿದೆ.
ಜನವರಿ 16 ರಂದು ಮಹಾರಾಷ್ಟ್ರದ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ನಿವಾಸಕ್ಕೆ ಆರೋಪಿ ನುಗ್ಗಿದ್ದ. ದರೋಡೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ತಡೆದಿದ್ದಕ್ಕೆ ಆತ ನಟನಿಗೆ ಚುಚ್ಚಿ ಅವರ ಮೇಲೆ ಹಲ್ಲೆ ನಡೆಸಿದ್ದ. ನಂತರ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆದ ಎರಡು ದಿನಗಳ ನಂತರ ಪೊಲೀಸರು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ಆತ ಬಾಂಗ್ಲಾದೇಶದ ಪ್ರಜೆ ಎಂದು ತಿಳಿದು ಬಂದಿತ್ತು. ಬಂಧನಕ್ಕೂ ಮುನ್ನ ಸೈಫ್ ನಿವಾಸದ ಸುತ್ತ ಮುತ್ತಲಿನ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದರು.
ಈ ಸುದ್ದಿಯನ್ನೂ ಓದಿ: Saif Ali Khan: ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ ನಡೆದೇ ಇಲ್ವಾ? ಇದು ಬರೀ ಆಕ್ಟಿಂಗಾ?
ಖಾನ್ ಮನೆಗೆ ನುಗ್ಗಿದ ಆರೋಪಿಯ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಪ್ರಕರಣದ ತನಿಖೆ ನಡೆಸುವಾಗ ಮುಂಬೈ ಪೊಲೀಸರು ಖಾನ್ ಅವರ ಮನೆಯಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಫಿಂಗರ್‌ಪ್ರಿಂಟ್ ಬ್ಯೂರೋಗೆ ಕಳುಹಿಸಿದ್ದರು. ಅದರ ವರದಿಯಲ್ಲಿ ಆರೋಪಿ ಶರೀಫುಲ್ ಇಸ್ಲಾಂ ಬೆರಳಚ್ಚಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿದು ಬಂದಿತ್ತು. ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಮುಂಬೈ ಪೊಲೀಸರಿಗೆ ಸಿಐಡಿ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿದ್ದವು.