ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻ8 ವರ್ಷಗಳಿಂದ ಮೌನವಾಗಿದ್ದೆ, ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲʼ; 24 ಗಂಟೆಗಳ ಡೆಡ್‌ಲೈನ್ ಕೊಟ್ಟ ರಶ್ಮಿಕಾ ಮಂದಣ್ಣ

Rashmika Mandanna: ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲ್ ಮತ್ತು ಕಿರುಕುಳದ ವಿರುದ್ಧ ನಟಿ ರಶ್ಮಿಕಾ ಮಂದಣ್ಣ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಸಂಭಾಷಣೆಯನ್ನು ತಿರುಚಿ ವೈರಲ್ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸುಳ್ಳು ಸುದ್ದಿ ಹರಡುವ ಮಾಧ್ಯಮಗಳು ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.

'8 ವರ್ಷದಿಂದ ಮೌನವಾಗಿದ್ದೆ, ಇನ್ಮುಂದೆ ಸಾಧ್ಯವಿಲ್ಲ'; ರಶ್ಮಿಕಾ ಮಂದಣ್ಣ ಗರಂ

-

Avinash GR
Avinash GR Mar 12, 2026 5:17 PM

ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಮಂದಣ್ಣ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್‌ ಆಗಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿತ್ತು. ಆ ಬಗ್ಗೆ ಇದೀಗ ರಶ್ಮಿಕಾ ಗರಂ ಆಗಿದ್ಧಾರೆ. ಇಷ್ಟು ವರ್ಷ ತಮ್ಮ ಬಗ್ಗೆ ಏನೇ ಟ್ರೋಲ್‌, ನೆಗೆಟಿವ್‌ ವಿಚಾರಗಳನ್ನು ಹರಡಿದರೂ ಸಹಿಸಿಕೊಂಡಿದ್ದ ರಶ್ಮಿಕಾ, ಇದೀಗ ಗರಂ ಆಗಿದ್ದಾರೆ. "ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲ, ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ವಿರುದ್ಧ ಸುಳ್ಳು ಮಾಹಿತಿ, ಕಿರುಕುಳ!

ಈ ಕುರಿತು ಸುದೀರ್ಘ ಪತ್ರವೊಂದನ್ನು ರಶ್ಮಿಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಈ ಸುದೀರ್ಘ ಪಯಣದಲ್ಲಿ ನನ್ನ ಜೊತೆಗಿರುವ ಪ್ರಿಯ ಜನರಿಗೆ ಮತ್ತು ಈ ವಿಷಯಕ್ಕೆ ಸಂಬಂಧಪಟ್ಟ ಇತರರಿಗೆ, ಕಳೆದ 8 ವರ್ಷಗಳಿಂದ ಮಾಧ್ಯಮಗಳ ಒಂದು ವರ್ಗ ಮತ್ತು ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಸುಳ್ಳು ಮಾಹಿತಿ, ಕಿರುಕುಳ ಹಾಗೂ ಗುರಿಪಡಿಸಿದ ದಾಳಿಗಳ ನಿರಂತರ ಅಭಿಯಾನವನ್ನು ನಡೆಸುತ್ತಿದ್ದಾರೆ. ನನ್ನ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದೆ ತಿರುಚುವುದು, ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿಸುವುದು ಹಾಗೂ ಕೇವಲ ವ್ಯೂವ್ಸ್ ಮತ್ತು ಎಂಗೇಜ್‌ಮೆಂಟ್‌ಗಾಗಿ ದ್ವೇಷವನ್ನು ಹರಡುವುದನ್ನು ನಾನು ಗಮನಿಸುತ್ತಲೇ ಬಂದಿದ್ದೇನೆ"

ರಶ್ಮಿಕಾ ಮಂದಣ್ಣ ಶೇರ್‌ ಮಾಡಿದ ರಿಸೆಪ್ಷನ್‌ ವಿಡಿಯೋದಲ್ಲಿ ‌ʻಕನ್ನಡʼ ಹಾಡು; ಕೊಡವ ಸಂಪ್ರದಾಯ ಮರೆಯದ ನ್ಯಾಷನಲ್‌ ಕ್ರಶ್‌ಗೆ ಫ್ಯಾನ್ಸ್‌ ಮೆಚ್ಚುಗೆ

ನಾನು ಇಲ್ಲಿಯವರೆಗೆ ತಾಳ್ಮೆಯಿಂದ ಇದ್ದೆ

"ಇದೆಲ್ಲವೂ ನನಗೆ ನೋವುಂಟು ಮಾಡಿದರೂ ಸಹ, ನಾನು ಇಲ್ಲಿಯವರೆಗೆ ತಾಳ್ಮೆಯಿಂದ ಇದ್ದೆ ಮತ್ತು ಮೌನವಾಗಿದ್ದೆ. ಏಕೆಂದರೆ, ಸಾರ್ವಜನಿಕ ಜೀವನದಲ್ಲಿರುವಾಗ ಕೆಲವೊಮ್ಮೆ ಇಂತಹ ಅನ್ಯಾಯದ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಸತ್ಯವನ್ನು ನಾನು ಒಪ್ಪಿಕೊಂಡಿದ್ದೆ. ಆದರೆ, ಕಳೆದ 24 ಗಂಟೆಗಳಲ್ಲಿ ನಡೆದಿರುವ ಘಟನೆಗಳು ನಾನು ಇನ್ನು ಮುಂದೆ ನಿರ್ಲಕ್ಷಿಸಲಾಗದ ಗೆರೆಯನ್ನು ದಾಟಿವೆ"

ಗದ್ದರ್ ಚಲನಚಿತ್ರ ಪ್ರಶಸ್ತಿ ಘೋಷಣೆ; ಅತ್ಯುತ್ತಮ ತೆಲುಗು ನಟಿ ಪ್ರಶಸ್ತಿ ಪಡೆದ ರಶ್ಮಿಕಾ ಮಂದಣ್ಣ

ಅನಗತ್ಯ ವಿವಾದ ಸೃಷ್ಟಿಸಲು ಪ್ರಯತ್ನ

"ಸುಮಾರು ಎಂಟು ವರ್ಷಗಳ ಹಿಂದಿನ ಹಳೆಯ ಖಾಸಗಿ ಸಂಭಾಷಣೆಯೊಂದನ್ನು, ಸಂಬಂಧಪಟ್ಟವರ ಅರಿವಿಲ್ಲದೆ ಅಥವಾ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ಈಗ ಹರಿಬಿಡಲಾಗಿದೆ. ಆ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಉದ್ದೇಶಪೂರ್ವಕವಾಗಿ ಸಂದರ್ಭಕ್ಕೆ ತಕ್ಕಂತೆ ಬಳಸದೆ, ಮತ್ತೊಂದು ಅನಗತ್ಯ ವಿವಾದ ಸೃಷ್ಟಿಸಲು ಅದನ್ನ ವೈರಲ್‌ ಮಾಡಲಾಗುತ್ತಿದೆ. ವಿಶೇಷವೆಂದರೆ, ಇದು ನನ್ನ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆಗಳ ಸಮಯದಲ್ಲೇ ವ್ಯವಸ್ಥಿತವಾಗಿ ನಡೆಯುತ್ತಿದೆ"

"ಜನರು ಇಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರೇ? ಹೀಗೆ ಮಾಡುವ ಮೂಲಕ, ಈ ವಿಷಯಕ್ಕೆ ಕಿಂಚಿತ್ತೂ ಸಂಬಂಧವಿಲ್ಲದ ನನ್ನ ಕುಟುಂಬದವರು ಮತ್ತು ನನ್ನ ಜೊತೆ ಸೌಹಾರ್ದಯುತ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಮುಜುಗರಕ್ಕೆ ಈಡುಮಾಡಿದ್ದಾರೆ. ಇದು ಖಾಸಗಿತನದ ಗಂಭೀರ ಉಲ್ಲಂಘನೆ ಮಾತ್ರವಲ್ಲದೆ, ದಾರಿ ತಪ್ಪಿಸುವ ಮತ್ತು ಮಾನಹಾನಿಕರ ವಿಷಯವನ್ನು ಹರಡುವ ಕೆಲಸವಾಗಿದೆ"

ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ

"ನಾವು ಜೀವನದಲ್ಲಿ ಮುಂದೆ ಸಾಗುತ್ತಾ, ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಾ ಸಕಾರಾತ್ಮಕತೆಯನ್ನು ಹರಡುತ್ತಿರುವಾಗ, ಕೆಲವು ವ್ಯಕ್ತಿಗಳು ಇನ್ನೊಬ್ಬರ ಘನತೆ ಮತ್ತು ನೆಮ್ಮದಿಗೆ ಭಂಗ ತಂದು, ದ್ವೇಷ ಮತ್ತು ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ. ಎಂಟು ವರ್ಷಗಳಿಂದ ದಾಳಿಗಳು ಕೇವಲ ನನ್ನ ಮೇಲೆ ಸೀಮಿತವಾಗಿದ್ದಾಗ ನಾನು ಮೌನವಾಗಿದ್ದೆ. ಆದರೆ ಇಂದು ಇತರರನ್ನು ಇದರಲ್ಲಿ ಎಳೆದು ತರುತ್ತಿರುವುದರಿಂದ, ನಾನು ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ನಾನು ಒಂದು ಮಿತಿಯನ್ನು ಹಾಕುತ್ತಿದ್ದೇನೆ"

ಇದನ್ನು ನಾನು ಹಗುರವಾಗಿ ತೆಗೆದುಕೊಳ್ಳುತ್ತಿಲ್ಲ

"ಯಾವೆಲ್ಲಾ ಮಾಧ್ಯಮ ಸಂಸ್ಥೆಗಳು, ಇನ್‌ಫ್ಲುಯೆನ್ಸರ್‌ಗಳು ಮತ್ತು ವ್ಯಕ್ತಿಗಳು ಈ ವಿಷಯವನ್ನು ಅಥವಾ ಇದಕ್ಕೆ ಸಂಬಂಧಿಸಿದ ಕಥೆಗಳನ್ನು ಹರಡುತ್ತಿದ್ದೀರೋ, ಅವರು ತಕ್ಷಣವೇ ಅದನ್ನು ತೆಗೆದುಹಾಕಬೇಕೆಂದು ವಿನಂತಿಸುತ್ತೇನೆ. ಈ ಹೇಳಿಕೆ ನೀಡಿದ ಸಮಯದಿಂದ ನಿಮಗೆ 24 ಗಂಟೆಗಳ ಕಾಲಾವಕಾಶ ನೀಡಲಾಗುತ್ತಿದೆ. ಇದನ್ನು ಪಾಲಿಸದಿದ್ದಲ್ಲಿ, ನಾಳೆಯಿಂದ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಅನ್ವಯವಾಗುವ ಕಾನೂನಿನ ಪ್ರಕಾರ, ಮಾನಹಾನಿಕರ ಅಥವಾ ಖಾಸಗಿತನವನ್ನು ಉಲ್ಲಂಘಿಸುವ ವಿಷಯಗಳನ್ನು ಹರಡುತ್ತಿರುವ ವ್ಯಕ್ತಿಗಳು, ಇನ್‌ಫ್ಲುಯೆನ್ಸರ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಅಥವಾ ಮಾಧ್ಯಮ ಸಂಸ್ಥೆಗಳಿಗೆ ಕಾನೂನು ನೋಟಿಸ್ ನೀಡುವುದೂ ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುವುದು. ನಾನು ಈ ನಿರ್ಧಾರವನ್ನು ಹಗುರವಾಗಿ ತೆಗೆದುಕೊಳ್ಳುತ್ತಿಲ್ಲ, ಆದರೆ ಇದು ಅನಿವಾರ್ಯವಾಗಿದೆ"

ರಶ್ಮಿಕಾ ಮಂದಣ್ಣ ಅವರ ಟ್ವೀಟ್‌



ನಮ್ ನಿರ್ಧಾರ ನಾವೇ ತಗೋಬೇಕು

"ಇಲ್ಲಿ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರ. ಅವರಿಗೆ ತುಂಬು ಹೃದಯದ ಧನ್ಯವಾದಗಳು. ಒಂದು ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ಸಿದೆ. ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತ್ನಾಡೋ ಜನ, ಒಂದ್ ಅರ್ಥ ಮಾಡ್ಕೋಬೇಕು. ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ದಲ್ವಾ? ನಮ್ ನಿರ್ಧಾರ ನಾವೇ ತಗೋಬೇಕು, ಮತ್ತೆ ತೊಗೋತೀವಿ ಕೂಡ" ಎಂದು ಖಡಕ್‌ ಅಗಿ ಪ್ರತಿಕ್ರಿಯೆ ನೀಡಿದ್ದಾರೆ ರಶ್ಮಿಕಾ.