ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೇಪಾಳದಂತೆ ಭಾರತದಲ್ಲೂ ಜೆನ್ ಝೀ ಪ್ರತಿಭಟನೆಗೆ ಸೋನಮ್ ವಾಂಗ್ಚುಕ್ ಕುಮ್ಮಕ್ಕು: ಕೇಂದ್ರ ಸರ್ಕಾರ ಆರೋಪ

Sonam Wangchuk: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನೇಪಾಳದ ಮಾದರಿಯಂತೆ ಭಾರತದಲ್ಲಿಯೂ ಜೆನ್ ಝೀ ಹಿಂಸಾಚಾರಕ್ಕೆ ಪ್ರಚೋದಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಈ ಬಗ್ಗೆ ಕೇಂದ್ರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.

ಸೋನಮ್‌ ವಾಂಗ್‌ಚುಕ್‌ (ಸಂಗ್ರಹ ಚಿತ್ರ)

ನವದೆಹಲಿ, ಫೆ. 3: ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳಂತೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲೂ (Ladakh) jಜೆನ್‌ ಝೀ ಸಮುದಾಯ (ಯುವ ಪೀಳಿಗೆ) ಹಿಂಸಾಚಾರ ನಡೆಸಬೇಕು ಎಂದು ಜೈಲಿನಲ್ಲಿರುವ ಪರಿಸರ ಹೋರಾಟಗಾರ, ಚಿಂತಕ ಸೋನಮ್‌ ವಾಂಗ್‌ಚುಕ್‌ (Sonam Wangchuk) ಪ್ರಯತ್ನಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಈ ಸಂಬಂಧ ಕೇಂದ್ರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿವೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ವಿ. ವರಾಳೆ ಅವರಿದ್ದ ಪೀಠಕ್ಕೆ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಬಗ್ಗೆ ವಿವರಿಸಿದರು. ಕಳೆದ ವರ್ಷ ನೆರೆಯ ನೇಪಾಳದಲ್ಲಿ ನಡೆದಂತೆ ವಾಂಗ್‌ಚುಕ್ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಅರಬ್ ದೇಶಗಳಲ್ಲಿ ಸರ್ಕಾರ ಪತನಕ್ಕೆ ಕಾರಣವಾದ ಅರಬ್ ಸ್ಪ್ರಿಂಗ್ (ಅರಬ್ ಕ್ರಾಂತಿ) ರೀತಿಯ ಆಂದೋಲನವನ್ನೂ ಅವರು ಉಲ್ಲೇಖಿಸಿದ್ದಾರೆ. ಜೆನ್ ಝೀ ಪೀಳಿಗೆಯು ಇಂತಹ ಆಂದೋಲವನ್ನು ಮಾಡಬೇಕೆಂದು ವಾಂಗ್ಚುಕ್ ಬಯಸುತ್ತಿದ್ದಾರೆ ಎಂದು ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ರಾಜ್ಯ ಸ್ಥಾನಮಾನಕ್ಕೆ ಹೋರಾಟ ಮುಂದುವರಿಸಿ; ಲಡಾಖ್ ಜನರಿಗೆ ಜೈಲಿನಿಂದಲೇ ಸೋನಮ್ ವಾಂಗ್‌ಚುಕ್

ಅವರು ಜೆನ್‌ ಝೀ ಪೀಳಿಗೆಯನ್ನು ಪ್ರಚೋದಿಸುವ ಉದ್ದೇಶದಿಂದಲೇ ತಮ್ಮ ಭಾಷಣವನ್ನು ಸೂಕ್ಷ್ಮವಾಗಿ ರೂಪಿಸಿದ್ದರು. ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆದಂತೆಯೇ ಆಂದೋಲನಗಳನ್ನು ನಡೆಸುವಂತೆ ಕರೆ ನೀಡಿದ್ದರು. ತಮ್ಮ ನಿಜವಾದ ಉದ್ದೇಶವನ್ನು ಮುಚ್ಚಿಹಾಕಲು ಮಹಾತ್ಮ ಗಾಂಧೀಜಿ ಅವರ ಭಾಷಣಗಳನ್ನು ಬಳಸಿಕೊಂಡಿದ್ದಾರೆ ಎಂದು ಮೆಹ್ತಾ ಆರೋಪಿಸಿದರು.

ಜೈಲಿನಲ್ಲಿರುವ ಪರಿಸರವಾದಿ ಮತ್ತು ಚಿಂತಕ ಸೋನಮ್ ವಾಂಗ್ಚುಕ್ ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ, ಭಾರತದ ರಕ್ಷಣೆಗೆ ಹಾನಿಕಾರಕವಾಗುವ ರೀತಿಯಲ್ಲಿ ಜನರು ವರ್ತಿಸುವುದನ್ನು ತಡೆಯಲು ಅವರನ್ನು ಬಂಧನದಲ್ಲಿರಿಸುವ ಅಧಿಕಾರವನ್ನು ನೀಡುತ್ತದೆ. ಈ ಕಾಯ್ದೆಯಡಿ ಗರಿಷ್ಠ ಬಂಧನ ಅವಧಿ 12 ತಿಂಗಳು ಆಗಿದ್ದು, ಅಗತ್ಯವಿದ್ದಲ್ಲಿ ಅದನ್ನು ಮುಂಚಿತವಾಗಿಯೇ ರದ್ದುಗೊಳಿಸಬಹುದಾಗಿದೆ.

ಎನ್‌ಎಸ್‌ಎ ಅಡಿ ವಾಂಗ್‌ಚುಕ್‌ ಬಂಧಿಸಲು ನಾವು ಮತ್ತು ಅವರು ಎಂಬ ಪ್ರತ್ಯೇಕತೆ ಸಾಕು. ಇಲ್ಲಿ ನಾವು ಮತ್ತು ಅವರು ಎಂಬುದು ಇಲ್ಲ, ನಾವೆಲ್ಲರೂ ಭಾರತೀಯರು ಎಂದು ಮೆಹ್ತಾ ಹೇಳಿದರು.

ಲಡಾಖ್ ಹಿಂಸಾಚಾರ; ಲೇಹ್‌ನಿಂದ ಜೋಧಪುರ ಜೈಲಿಗೆ ಸೋನಮ್ ವಾಂಗ್‌ಚುಕ್ ಶಿಫ್ಟ್‌

ವಾಂಗ್‌ಚುಕ್‌ ಮಾಡಿದ ಭಾಷಣಗಳನ್ನು ಸಂಪೂರ್ಣವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಅವರು ಯುವಜನರನ್ನು ತಪ್ಪು ದಾರಿಗೆಳೆದು, ಅದನ್ನು ಮುಚ್ಚಿಹಾಕಲು ಮಹಾತ್ಮ ಗಾಂಧೀಜಿ ಅವರ ಭಾಷಣಗಳನ್ನು ಬಳಸಿಕೊಂಡಿದ್ದಾರೆ ಎಂದು ಮೆಹ್ತಾ ಹೇಳಿದರು. ಗಾಂಧೀಜಿ ಎಂದಿಗೂ ತಮ್ಮದೇ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸಿಲ್ಲ. ಗಡಿಗಳಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳಿಗೆ ಸರಕು ಸರಂಜಾಮು ಪೂರೈಸಲು ಲಡಾಖ್ ನಿರ್ಣಾಯಕವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ಇನ್ನು ಜನವರಿ 29ರಂದು, ಜೋಧ್‌ಪುರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ವಾಂಗ್‌ಚುಕ್, ಅರಬ್ ಕ್ರಾಂತಿಯಂತೆ ಸರ್ಕಾರವನ್ನು ಉರುಳಿಸಲು ಹೇಳಿಕೆ ನೀಡಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದರು. ಟೀಕಿಸುವ ಮತ್ತು ಪ್ರತಿಭಟಿಸುವ ಪ್ರಜಾಪ್ರಭುತ್ವದ ಹಕ್ಕು ತಮಗೆ ಇದೆ ಎಂದು ಅವರು ಒತ್ತಿ ಹೇಳಿದರು.

ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಆರನೇ ವೇಳಾಪಟ್ಟಿಯ ಸ್ಥಾನಮಾನವನ್ನು ಒತ್ತಾಯಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಎರಡು ದಿನಗಳ ನಂತರ, ಕೇಂದ್ರಾಡಳಿತ ಪ್ರದೇಶದಲ್ಲಿ ನಾಲ್ವರು ಸಾವಿಗೀಡಾದರು ಮತ್ತು 90 ಜನರು ಗಾಯಗೊಂಡರು. ಕಳೆದ ವರ್ಷ ಸೆಪ್ಟೆಂಬರ್ 26ರಂದು ವಾಂಗ್‌ಚುಕ್ ಅವರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಯಿತು.