Sonam Wangchuk: ರಾಜ್ಯ ಸ್ಥಾನಮಾನಕ್ಕೆ ಹೋರಾಟ ಮುಂದುವರಿಸಿ; ಲಡಾಖ್ ಜನರಿಗೆ ಜೈಲಿನಿಂದಲೇ ಸೋನಮ್ ವಾಂಗ್‌ಚುಕ್
ರಾಜ್ಯ ಸ್ಥಾನಮಾನಕ್ಕೆ ಒತ್ತಾಯಿಸಿ ಲಡಾಖ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಿಂದ ನಾಲ್ವರು ಸಾವನ್ನಪ್ಪಿದ ಬಳಿಕ ಬಂಧನಕ್ಕೆ ಒಳಗಾಗಿ ಜೋಧಪುರ ಜೈಲಿನಲ್ಲಿರುವ ಸೋನಮ್ ವಾಂಗ್‌ಚುಕ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಅವರು ಜೈಲಿನಲ್ಲಿ ಇದ್ದುಕೊಂಡೇ ಹೋರಾಟ ಮುಂದುವರಿಸುವಂತೆ ಲಡಾಖ್ ಜನರಿಗೆ ಕರೆ ನೀಡಿದ್ದಾರೆ.

-

ನವದೆಹಲಿ: ರಾಜ್ಯ ಸ್ಥಾನಮಾನಕ್ಕಾಗಿ (Ladakh Statehood Protest) ಲಡಾಖ್ ಜನರು ಹೋರಾಟ ಮುಂದುವರಿಸಬೇಕು. ಈ ಸಂದರ್ಭದಲ್ಲಿ ಶಾಂತಿ, ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟು ಜೋಧಪುರ ಜೈಲಿನಲ್ಲಿರುವ (Jodhpur jail) ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Activist Sonam Wangchuk) ರಾಜ್ಯದ ಜನತೆಯನ್ನು ಒತ್ತಾಯಿಸಿದ್ದಾರೆ. ಲಡಾಖ್‌ನಲ್ಲಿ (Ladakh) ಸೆಪ್ಟೆಂಬರ್ 25ರಂದು ನಡೆದ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಿಂದ ನಾಲ್ವರು ಸಾವನ್ನಪ್ಪಿದ ಬಳಿಕ ಅವರು ಬಂಧನಕ್ಕೆ ಒಳಗಾಗಿದ್ದರು. ಇದೀಗ ಅವರು ಜೈಲಿನಲ್ಲಿ ಇದ್ದುಕೊಂಡೇ ಹೋರಾಟ ಮುಂದುವರಿಸುವಂತೆ ಲಡಾಖ್ ಜನರಿಗೆ ಕರೆ ನೀಡಿದ್ದಾರೆ.
ಲಡಾಖ್‌ನಲ್ಲಿ ನಡೆದ ಉದ್ವಿಗ್ನತೆಯ ಬಳಿಕ ಜೋಧ್‌ಪುರ ಜೈಲಿನಲ್ಲಿರುವ ಸೋನಮ್ ವಾಂಗ್‌ಚುಕ್, ಶಾಂತಿ ಮತ್ತು ಏಕತೆಗಾಗಿ ಮನವಿ ಮಾಡಿದ್ದು, ಗಾಂಧಿಯವರ ಅಹಿಂಸೆಯ ಮಾರ್ಗದಲ್ಲಿ ರಾಜ್ಯ ಸ್ಥಾನಮಾನಕ್ಕೆ ಲಡಾಖ್ ಜನರು ತಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಾಂಗ್‌ಚುಕ್ ಅವರ ಹಿರಿಯ ಸಹೋದರ ಕಾ ತ್ಸೆಟನ್ ಡೋರ್ಜೆ ಲೇ ಮತ್ತು ಅವರ ವಕೀಲ ಮುಸ್ತಫಾ ಹಾಜಿ ಜೋಧ್‌ಪುರ ಜೈಲಿನಲ್ಲಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ಅವರು ಹೋರಾಟ ಮುಂದುವರಿಸಲು ಕರೆ ನೀಡಿದ್ದಾರೆ.
ದೈಹಿಕ ಮತ್ತು ಮಾನಸಿಕವಾಗಿ ನಾನು ಚೆನ್ನಾಗಿದ್ದೇನೆ. ಎಲ್ಲರ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಮತ್ತು ಬಂಧಿಸಲ್ಪಟ್ಟ ಜನರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿರುವ ಅವರು, ನಾಲ್ವರ ಹತ್ಯೆಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು. ಇದಕ್ಕಾಗಿ ನಾನು ಜೈಲಿನಲ್ಲಿಯೇ ಇರಲು ಸಿದ್ಧ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Murder Case: ಆಸ್ತಿ ವಿವಾದ; ತಂದೆಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೆತ್ನಿಸಿದ ಪಾಪಿ ಮಗ
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಲು ನಿರಂತರ ಹೋರಾಟ ನಡೆಸಲು ಬದ್ದವಾಗಿದ್ದೇನೆ ಎಂದಿರುವ ಅವರು, ಲಡಾಖ್ ಜನರೊಂದಿಗೆ ಇದಕ್ಕಾಗಿ ದೃಢವಾಗಿ ನಿಲ್ಲುತ್ತೇನೆ. ಜನರು ಶಾಂತಿ ಮತ್ತು ಏಕತೆಯನ್ನು ಕಾಪಾಡಿಕೊಂಡು ಹೋರಾಟವನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ವಾಂಗ್‌ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇದರ ವಿಚಾರಣೆ ಸೋಮವಾರ ನಡೆಯಲಿದೆ. ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ಪೀಠ ವಿಚಾರಣೆ ನಡೆಸಲಿದೆ.