ಚೆನ್ನೈ: ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ದಳಪತಿ ವಿಜಯ್ (Thalapathy Vijay) ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ನುಗ್ಗಿರುವ ಘಟನೆ ನಡೆದಿದೆ. ಅರುಣ್ ಎಂದು ಗುರುತಿಸಲಾದ 24 ವರ್ಷದ ಯುವಕ ಏಕಾಏಕಿ ವಿಜಯ್ ನಿವಾಸಕ್ಕೆ ಭದ್ರತೆಯ ನಡುವೆಯೂ ನುಗ್ಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ ಆ ವ್ಯಕ್ತಿಯ ಮಾನಸಿ ಸ್ಥಿತಿ ಸರಿ ಇಲ್ಲ ಎಂಬುದು ತಿಳಿದುಬಂದಿದೆ. ಅರುಣ್ ಒಳ ನುಗ್ಗುವ ಮೊದಲು ವಿಜಯ್ ಅವರ ಮನೆಯ ಟೆರಸ್‌ನಲ್ಲಿ ಕುಳಿತಿದ್ದ. ಆತನನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಘಟನೆಯನ್ನು ದೃಢಪಡಿಸಿದ್ದು, ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದೇವೆ. ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದಿದ್ದು, ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದೇವೆ. ವಿಜಯ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದರೂ ಆ ವ್ಯಕ್ತಿ ಮನೆಗೆ ಹೇಗೆ ಪ್ರವೇಶ ಪಡೆದನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಘಟನೆಯ ನಂತರ, ಕಾಲಿವುಡ್ ನಟ ಈ ವಿಷಯವನ್ನು ತನಿಖೆ ಮಾಡುವಂತೆ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದರು.
ಸದ್ಯ ವಿಜಯ್ ಟಿವಿಕೆ ಪಕ್ಷದ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ ತಿಂಗಳಲ್ಲಿ, ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ನೀಲಂಕಾರೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ ಬಂದಿತ್ತು. ನಟ-ರಾಜಕಾರಣಿಯ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಆರೋಪಿಗಳು ಹೇಳಿದ್ದರು. ಆದಾದ ಬಳಿಕ ಅವರ ನಿವಾಸಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಸುಮಾರು ಒಂದು ಗಂಟೆ ಪರಿಶೀಲನೆಯ ನಂತರ, ಸ್ಥಳದಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿರಲಿಲ್ಲ. ಅಧಿಕಾರಿಗಳು ಇದನ್ನು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Thalapathy Vijay: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ತಾರಾ ದಳಪತಿ ವಿಜಯ್?
2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅನ್ನು ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈಗಾಗಲೇ ವಿಜಯ್ ತಮಿಳುನಾಡಿನಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಜಯ್ ಯಾವುದೇ ಪಕ್ಷದೊಟ್ಟಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.