ಕೇತನ್‌ನನ್ನು ಸಿಯಾ ತಳ್ಳಿದ ಜಾಗ ನೋಡಲು ನೂಕುನುಗ್ಗಲು; ಹತ್ಯೆ ಬಳಿಕ ಲೋಹಗಢ ಕೋಟೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಏರಿಕೆ
Siya Goyal: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆಯಲ್ಲಿ ಯುವ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ನಡೆದ ಬಳಿಕ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಕೇತನ್‌ನನ್ನು ಸಿಯಾ ತಳ್ಳಿದ ಜಾಗ ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಶೇಕಡಾ 50ರಷ್ಟು ಹೆಚ್ಚಾಗಿದೆ ಎಂದು ಮೂಲಳು ತಿಳಿಸಿವೆ.
ಲೋಹಗಢ ಕೋಟೆ ಮತ್ತು ಸಿಯಾ ಗೋಯಲ್ (ಸಂಗ್ರಹ ಚಿತ್ರ) -
ಮುಂಬೈ, ಜೂ. 30: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆ (Lohagad Fort) ಸದ್ಯ ದೇಶದ ಗಮನ ಸೆಳೆದಿದೆ. 10ನೇ ಶತಮಾನದ ಈ ಕೋಟೆ ಈಗ ಪ್ರವಾಸಿಗರ ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿದೆ. ಅದರಲ್ಲೂ ಜೂನ್ 18ರ ಬಳಿಕ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಏರಿಕೆ ಕಂಡುಬಂದಿದೆ. ಅದಕ್ಕೆ ಕಾರಣವಾಗಿದ್ದು ಈ ಕೋಟೆಯ ಮೇಲೆ ನಡೆದ ಹತ್ಯೆ (Pune Murder Case). ಹೌದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಯುವ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಹತ್ಯೆ ಈ ಕೋಟೆಯಲ್ಲಿ ನಡೆದಿತ್ತು. ಅವರ ಭಾವಿ ಪತ್ನಿ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chetan Chaudhary) ಜೂನ್ 18ರಂದು ಕೋಟೆಯ ಮೇಲಿನಿಂದ ಸುಮಾರು 350 ಅಡಿಯ ಪ್ರತಾಪಕ್ಕೆ ತಳ್ಳಿ ಕೊಲೆ ಮಾಡಿದ್ದರು. ಈ ಘಟನೆ ಬೆಳಕಿಗೆ ಬರುತ್ತಲೇ ಪ್ರವಾಸಿಗರು ಈ ಕೋಟೆಯತ್ತ ಧಾವಿಸಿ ಬರುತ್ತಿದ್ದು, ಕೇತನ್‌ನನ್ನು ಸಿಯಾ ತಳ್ಳಿದ ಜಾಗವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ದೇಶ ಪ್ರಮುಖ ರಾಜರಲ್ಲಿ ಒಬ್ಬರೆನಿಸಿಕೊಂಡ ಛತ್ರಪತಿ ಶಿವಾಜಿ ಮಹಾರಾಜ 10ನೇ ಶತಮಾನದದಲ್ಲಿ ಕಟ್ಟಿಸಿದ ಕೋಟೆ ಇದಾಗಿದ್ದು, ಯುನೆಸ್ಕೋ ತನ್ನ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರಿಸಿದೆ. ಪ್ರವಾಸಿಗರು ಸುಮಾರು 2-3 ಗಂಟೆ ಟ್ರೆಕ್ಕಿಂಗ್ ಮಾಡಿ ಈ ಕೋಟೆಯನ್ನು ಏರಬೇಕಾಗುತ್ತದೆ. ಸುತ್ತಲೂ ಹಸಿರಿನಿದ ಕೂಡಿದ ಬೆಟ್ಟ-ಗುಡ್ಡ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ಕೇತನ್ ಕೊಲೆಯ ಕೆಲವೇ ತಾಸುಗಳ ಮೊದಲು ಕೆಫೆಯೊಂದರಲ್ಲಿ ಪ್ರಿಯಕರನನ್ನು ಭೇಟಿಯಾದ ಸಿಯಾ
ಪ್ರವಾಸಿಗರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ
ಆದರೆ ಈ ಕಾರಣಗಳ ಹೊರತಾಗಿ ಲೋಹಗಢ ಕೋಟೆ ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ನಡೆದ ಹತ್ಯೆ ಪ್ರವಾಸಿಗರ ಕುತೂಹಲಕ್ಕೆ ಕಾರಣವಾಗಿದೆ ಎನ್ನುವುದೇ ಅಚ್ಚರಿಯ ಸಂಗತಿ. ಪುಣೆಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಈ ಕೋಟೆಗೆ ಆಗಮಿಸುವವರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಹೆಚ್ಚಳವಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳು ತಿಳಿಸಿವೆ. ʼʼಸಾಮಾನ್ಯವಾಗಿ ರಜಾ ದಿನಗಳಲ್ಲಿ ಲೋಹಗಢ ಕೋಟೆಗೆ 1,000 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಕೇತನ್ ಹತ್ಯೆಯಾದ ಬಳಿಕ ಪ್ರವಾಸಿಗರ ಸಂಖ್ಯೆ ಸುಮಾರು 1,500ಕ್ಕೆ ಏರಿದೆ. ಹಿಂದೆಲ್ಲ ಸಾಮಾನ್ಯ ದಿನಗಳಲ್ಲಿ 400 ಮಂದಿ ಭೇಟಿ ನೀಡಿದ್ದರೆ ಈಗ ಆ ಸಂಖ್ಯೆ 600ಕ್ಕೆ ತಲುಪಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಯಾ ಪಾಯಿಂಟ್
ಅಚ್ಚರಿ ಎಂದರೆ ಕೇತನ್‌ನನ್ನು ಸಿಯಾ ತಳ್ಳಿದ ಜಾಗ ಈಗ ಸಿಯಾ ಪಾಯಿಂಟ್ ಎನಿಸಿಕೊಂಡಿದೆ. ಅಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುವವರ, ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಕ್ರೈಂ ಹೇಗೆ ಕುತೂಹಲದ ಕೇಂದ್ರಬಿಂದು ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಕೋಟೆಗೆ ಪ್ರವಾಸಿಗರು ಆಗಮಿಸುತ್ತಿರುವುದೇಕೆ?
ಲೋಹಗಢ ಕೋಟೆಗೆ ನೋಡಲು ಬಂದಿದ್ದೇಕೆ ಎಂದು ಎನ್‌ಡಿಟಿವಿ ಪ್ರವಾಸಿಗರನ್ನು ವಿಚಾರಿಸಿದಾಗ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ''ಆರಂಭದಲ್ಲಿ ನಾವು ವಿಸಾಪುರ ಕೋಟೆಗೆ ಟ್ರೆಕ್ಕಿಂಗ್ ಹೋಗುವ ಯೋಜನೆ ರೂಪಿಸಿದ್ದೆವು. ಆದರೆ ಕೇತನ್ ಹತ್ಯೆ ಮಹಾರಾಷ್ಟ್ರಾದ್ಯಂತ ಭಾರಿ ಸಂಚಲನ ಮೂಡಿಸಿದ ಹಿನ್ನೆಲೆಯಲ್ಲಿ ನಾವು ಇತ್ತ ಬಂದೆವು. ನಿಜವಾಗಿಯೂ ಕೋಟೆಯಲ್ಲಿ ನಡೆದಿದ್ದೇನು ಎನ್ನುವುದನ್ನು ನೋಡಬೇಕಿತ್ತು. ಕೊಲೆ ನಡೆದ ಸ್ಥಳವನ್ನು ನೋಡುವ ಕುತೂಹಲದಿಂದ ಆಗಮಿಸಿದ್ದೇವೆʼʼ ಎಂದು ಒಬ್ಬರು ತಿಳಿಸಿದ್ದಾರೆ.
ಕೇತನ್ ಅಗರ್ವಾಲ್ ಹತ್ಯೆಗೆ 10 ಗಂಟೆಗಳ ವ್ಯವಸ್ಥಿತ ಸಂಚು ರೂಪಿಸಿದ್ದ ಸಿಯಾ ಗೋಯಲ್ ಪ್ರಿಯಕರ
ʼʼಲೋಹಗಢ ಕೋಟೆಗೆ ಇಂದು ಭೇಟಿ ನೀಡುವ ಯೋಚನೆ ಇರಲಿಲ್ಲ. ಆದರೆ ಇದೀಗ ಎಲ್ಲ ಕಡೆ ಕೇತನ್ ಹತ್ಯೆಯ ಸುದ್ದಿ ಹರಿದಾಡುತ್ತಿರುವುದರಿಂದ ಮೊದಲು ಅಲ್ಲಿಗೆ ಭೇಟಿ ನೀಡುವ ಎಂದುಕೊಂಡೆ. ಕೇತನ್‌ನನ್ನು ಸಿಯಾ ತಳ್ಳಿದ ಸ್ಥಳ ಯಾವುದು ಎನ್ನುವ ಕುತೂಹಲ ನನ್ನೊಳಗೆ ಮನೆ ಮಾಡಿತ್ತು. ಮಕ್ಕಳಿಂದ ಹಿಡಿದು ಹಿರಿಯವರೆಗೆ ಈಗ ಇದನ್ನೇ ಚರ್ಚೆ ಮಾಡುತ್ತಿದ್ದಾರೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.