ನವದೆಹಲಿ: ಕಳೆದ ವಾರ ಭಾರತ ಪ್ರವಾಸ ಮಾಡಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ (UAE President) ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ( Sheikh Mohammed bin Zayed Al Nahyan) ಅವರು 900 ಭಾರತೀಯ ಕೈದಿಗಳ (Indian prisoners) ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಇದರ ಬೆನ್ನಲ್ಲೇ 2025ರ ಆಗಸ್ಟ್ ನಿಂದ ಮಾತುಕತೆ ನಡೆಸುತ್ತಿರುವ ಪಾಕ್ ವಿಮಾನ ನಿಲ್ದಾಣ ಒಪ್ಪಂದದಿಂದ (Pak Airport Deal) ಯುಎಇ ಹಿಂದೆ ಸರಿದಿದೆ. ಇದು ಭಾರತ ಮತ್ತು ಯುಎಇ ನಡುವಿನ ಸಂಬಂಧದಲ್ಲಿ ಸೌಹಾರ್ದತೆಯ ಮಹತ್ವದ ಸೂಚಕವೆಂದು ಪರಿಗಣಿಸಲ್ಪಟ್ಟಿದೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಪ್ರವಾಸವು ದಕ್ಷಿಣ ಏಷ್ಯಾದ ರಾಜಕೀಯದ ಮೇಲೆ ಪರಿಣಾಮ ಬೀರಿದೆ. ಇದು ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ. ಭಾರತಕ್ಕೆ ಶೇಖ್ ನಹ್ಯಾನ್ ಅವರ ಮೂರು ಗಂಟೆಗಳ ಭೇಟಿಯ ಬಳಿಕ ಅಬುಧಾಬಿಯು ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ತನ್ನ ಯೋಜನೆಯನ್ನು ರದ್ದುಗೊಳಿಸಿದೆ.
ಪಾಕಿಸ್ತಾನದ ವಿಮಾನ ನಿಲ್ದಾಣ ಯೋಜನೆಯಿಂದ ಯುಎಇ ಹಿಂದೆ ಸರಿದ ಬಳಿಕ ಹೊರಗುತ್ತಿಗೆ ನೀಡಲು ಸ್ಥಳೀಯ ಪಾಲುದಾರರನ್ನು ಹುಡುಕುವಲ್ಲಿ ಪಾಕಿಸ್ತಾನ ವಿಫಲವಾಗಿದ್ದರಿಂದ ಸದ್ಯ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಇದು ನೆಹ್ಯಾನ್ ಅವರ ಭಾರತ ಭೇಟಿಯ ಪರಿಣಾಮ ಅಲ್ಲ. ಯುಎಇ ಮತ್ತು ಸೌದಿ ಅರೇಬಿಯಾ ನಡುವೆ ಬೆಳೆಯುತ್ತಿರುವ ಬಿಕ್ಕಟ್ಟಿನ ಪರಿಣಾಮವಾಗಿದೆ. ರಿಯಾದ್ ಜೊತೆ ಇಸ್ಲಾಮಾಬಾದ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಯುಎಇ ಭಾರತದೊಂದಿಗೆ ಹೊಸ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ.
ಸುಮಾರು 4 ದಶಕಗಳ ಹಿಂದೆ ಪಾಕಿಸ್ತಾನದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದ್ದ ಯುಎಇಯು ಪಾಕಿಸ್ತಾನದ ಹಣದ ಮೂಲವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಬಂಧ ಸುರಕ್ಷತಾ ಕಾಳಜಿ, ಪರವಾನಗಿ ವಿವಾದಗಳು ಕಾಣಿಸಿಕೊಂಡಿವೆ. ರಾಜಕೀಯ ಹಸ್ತಕ್ಷೇಪ, ಕಳಪೆ ಆಡಳಿತ ಮತ್ತು ಅಧಿಕಾರ ದುರುಪಯೋಗದಿಂದ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಭಾರಿ ನಷ್ಟ ಉಂಟಾಗಿದೆ. ಹೀಗಾಗಿಯೇ ಇಸ್ಲಾಮಾಬಾದ್ ಕಳೆದ ವರ್ಷ ತನ್ನ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿತು. ಅಫ್ಘಾನಿಸ್ತಾನ ಸೇರಿದಂತೆ ಹಲವಾರು ವಿಮಾನ ನಿಲ್ದಾಣಗಳನ್ನು ನಿರ್ವಹಿಸುವಲ್ಲಿ ಅನುಭವ ಹೊಂದಿರುವ ಯುಎಇ ಇದೀಗ ಇಸ್ಲಾಮಾಬಾದ್ ವಿಮಾನ ನಿಲ್ದಾಣ ನಿರ್ವಹಣೆಯಿಂದ ಹಿಂದೆ ಸರಿದಿದೆ. ಇದಕ್ಕೆ ಮುಖ್ಯ ಕಾರಣ ವಿಶ್ವಾಸದ ಕೊರತೆ ಎನ್ನಲಾಗುತ್ತಿದೆ.
ಈ ನಡುವೆ ದೆಹಲಿಗೆ ಭೇಟಿ ನೀಡಿದ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಮೇಲೆ 900 ಭಾರತೀಯ ಕೈದಿಗಳ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ದೇಶದ ಇಬ್ಬರು ನಾಯಕರು ದ್ವಿಪಕ್ಷೀಯ ಸಂಪೂರ್ಣ ಸಹಕಾರದ ಕುರಿತು ಮಾತುಕತೆ ನಡೆಸಿದ್ದಾರೆ. ಇವರ ಸಭೆಯ ಬಳಿಕ ಎರಡು ರಾಷ್ಟ್ರಗಳು ರಕ್ಷಣಾ ಸಹಕಾರದ ಒಪ್ಪಂದ ಸೇರಿ ದೀರ್ಘಾವಧಿಗೆ ಭೌಗೋಳಿಕ, ರಾಜಕೀಯ, ಆರ್ಥಿಕ ಸಂಬಂಧ ವೃದ್ಧಿಗಾಗಿ ಯೋಜನೆ ರೂಪಿಸುವ ನಿರ್ಧಾರ ಮಾಡಿರುವುದಾಗಿ ಬರೆದಿರುವ ಉದ್ದೇಶ ಪತ್ರಕ್ಕೆ ಸಹಿ ಹಾಕಿದ್ದಾರೆ.