ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೋಶಿಯಲ್‌ ಮೀಡಿಯಾ ತುಂಬ ಪೆಂಗ್ವಿನ್‌ ಹವಾ; ಪರ್ವತದತ್ತ ಅದು ಒಬ್ಬಂಟಿಯಾಗಿ ನಡೆದಿದ್ದೇಕೆ? ಈ ವಿಡಿಯೊ ಜೆನ್‌ ಝಿಗೆ ಕನೆಕ್ಟ್‌ ಆಗಿದ್ದು ಹೇಗೆ?

2007ರ Encounters at the End of the World ಡಾಕ್ಯುಮೆಂಟರಿಯ ದೃಶ್ಯವೊಂದು 2026ರಲ್ಲಿ ನಿಹಿಲಿಸ್ಟ್ ಪೆಂಗ್ವಿನ್ ಹೆಸರಿನಲ್ಲಿ ವೈರಲ್ ಆಗಿದೆ. ಗುಂಪನ್ನು ಬಿಟ್ಟು ಹಿಮಪರ್ವತದತ್ತ ಸಾಗುವ ಅಡೆಲಿ ಪೆಂಗ್ವಿನ್‌ನ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಪೆಂಗ್ವಿನ್‌ ಒಂಟಿಯಾಗಿ ಪರ್ವತದತ್ತ ಸಾಗಿದ್ದೇಕೆ? ಈ ವಿಡಿಯೊ ಇಷ್ಟೊಂದು ವೈರಲ್‌ ಆಗುತ್ತಿರುವುದೇಕೆ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದ ಉತ್ತರ.

ವೈರಲ್ ಆದ ನಿಹಿಲಿಸ್ಟ್ ಪೆಂಗ್ವಿನ್ ಹಿನ್ನೆಲೆ ಗೊತ್ತಾ?

ಪೆಂಗ್ವಿನ್‌ -

Profile
Sushmitha Jain Jan 24, 2026 3:03 PM

ಬೆಂಗಳೂರು, ಜ. 24: ತನ್ನ ಗುಂಪಿನಿಂದ ದೂರವಾಗಿ ಪರ್ವತಗಳತ್ತ ಒಬ್ಬಂಟಿಯಾಗಿ ನಡೆಯುತ್ತಿರುವ ಪೆಂಗ್ವಿನ್‌ (Penguin)ನ 19 ವರ್ಷ ಹಳೆಯ ಒಂದು ಚಿಕ್ಕ ವಿಡಿಯೊ 2026ರಲ್ಲಿ ಸಾಮಾಜಿಕ ಜಾಲತಾಣ (Social Media)ದಲ್ಲಿ ಭಾರಿ ವೈರಲ್ ಆಗಿದೆ. ಇಂಟರ್‌ನೆಟ್‌ನಲ್ಲಿ ಇದನ್ನು ʼನಿಹಿಲಿಸ್ಟ್ ಪೆಂಗ್ವಿನ್ʼ (Nilhist Penguin) ಎಂದು ಕರೆಯಲಾಗುತಿದೆ. ಹಾಸ್ಯದಿಂದ ಹಿಡಿದು ಜೀವನದ ಪಾಠಗಳವರೆಗೆ ಬೇರೆ ಬೇರೆ ಕ್ಯಾಪ್ಷನ್‌ಗಳೊಂದಿಗೆ ಲಕ್ಷಾಂತರ ಜನರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಆ ದೃಶ್ಯದಲ್ಲಿ ನಿಜವಾಗಿಯೂ ಏನಾಗುತ್ತಿದೆ? ಸಮುದ್ರದಿಂದ ಇಷ್ಟು ದೂರ ಒಂದು ಅಂಟಾರ್ಕ್ಟಿಕ್ ಪೆಂಗ್ವಿನ್ ಏನು ಮಾಡುತ್ತಿದೆ? ಎಂಬುವುದನ್ನು ತಿಳಿಯೋಣ ಬನ್ನಿ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊ 2007ರಲ್ಲಿ ವರ್ನರ್ ಹೆರ್ಝಾಗ್ ನಿರ್ದೇಶಿಸಿದ Encounters at the End of the World ಎಂಬ ಡಾಕ್ಯುಮೆಂಟರಿಯ ತುಣುಕು. ಅದರಲ್ಲಿ ಒಂದು ಅಡೆಲಿ (Adélie) ಪೆಂಗ್ವಿನ್ ತನ್ನ ಕರಾವಳಿ ಮಾರ್ಗವನ್ನು ಬಿಟ್ಟು, ಸುಮಾರು 70 ಕಿ.ಮೀ. ದೂರ ಯಾವುದೋ ಕಾರಣಕ್ಕೆ ಹಿಮಪರ್ವತದತ್ತ ನಡೆಯುತ್ತ ಹೋಗುತ್ತಿದೆ. ಸಾಮಾನ್ಯವಾಗಿ ಪೆಂಗ್ವಿನ್‌ಗಳು ಸಮುದ್ರದ ಸಮೀಪ ಹಾಗೂ ತಮ್ಮ ಕಾಲೋನಿಗಳ ಬಳಿ ಇರುತ್ತವೆ. ಆದರೆ ಈ ಪೆಂಗ್ವಿನ್ ಮಾತ್ರ ಒಬ್ಬಂಟಿಯಾಗಿ ಹಿಮ ಪರ್ವತದ ಕಡೆಗೆ ಸಾಗುತ್ತಿದೆ. ಇದು ಪೆಂಗ್ವಿನ್‌ಗೆ ಸಂಬಂಧಿಸಿ ಅಸಾಮಾನ್ಯ ವರ್ತನೆಯಾಗಿದ್ದು, ನೆಟ್ಟಿಗರ ಕುತೂಹಲ ಕೆರಳಿಸಿದೆ.

ಈ ಕ್ಲಿಪ್ ವೈರಲ್ ಆಗಿದ್ದೇಕೆ?

ಜನರು ಈ ವಿಡಿಯೊವನ್ನು ಕೇವಲ ಒಂದು ದೃಶ್ಯವನ್ನಾಗಿ ನೋಡದೆ ಅದಕ್ಕೆ ತಮ್ಮದೇ ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೆಂಗ್ವಿನ್ ಸ್ವಾತಂತ್ರ್ಯ, ಬಂಡಾಯ, ಅಥವಾ ಅಸ್ತಿತ್ವದ ಸಂಕಟದ ಸಂಕೇತವಾಗಿ ಚಿತ್ರಿತವಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:

ಈ ವರ್ತನೆಗೆ ವಿಜ್ಞಾನಿಗಳು ಹೇಳೋದೇನು?

ಅಡೆಲಿ ಪೆಂಗ್ವಿನ್‌ಗಳು ಸಾಮಾನ್ಯವಾಗಿ ತಮ್ಮ ಸಂತಾನೋತ್ಪತ್ತಿ ಸ್ಥಳಗಳು ಮತ್ತು ಸಮುದ್ರದ ಬಳಿ ಇರುವ ಆಹಾರ ಮೂಲಗಳ ಸಮೀಪವೇ ಇರುತ್ತವೆ. ಕೆಲವೊಮ್ಮೆ ಕೆಲವು ಪೆಂಗ್ವಿನ್‌ಗಳು ದಾರಿ ತಪ್ಪಬಹುದು. ಆದರೆ ಬಂಜರು ಪರ್ವತಗಳತ್ತ ಉದ್ದೇಶಪೂರ್ವಕವಾಗಿ ತೆರಳುವುದು ಅತ್ಯಂತ ಅಪರೂಪ. ಪೆಂಗ್ವಿನ್ ಕೆಲವೊಮ್ಮೆ ಬಂಡೆಗೆ ಡಿಕ್ಕಿ ಹೊಡೆದುಕೊಳ್ಳುತ್ತವೆ. ಕೆಲವೊಮ್ಮೆ ದಿಕ್ಕು ತಪ್ಪಿದಾಗ ಗೊಂದಲಕ್ಕೆ ಒಳಗಾಗಿ ಅವು ಈ ರೀತಿ ನಡೆಯುತ್ತವೆ. ಅವುಗಳನ್ನು ಮತ್ತೆ ಗುಂಪಿಗೆ ತಂದು ಬಿಟ್ಟರೂ ಅದು ಮತ್ತೆ ಸಾಗೋದು ಪರ್ವತದ ಕಡೆಗೆ. ಅಲ್ಲದೆ ಈ ರೀತಿಯ ವರ್ತನೆಗೆ ನರ ಸಂಬಂಧಿ ಕಾಯಿಲೆಯೂ ಇರಬಹುದು. ಕೆಲವೊಮ್ಮೆ ಯುವ ಪೆಂಗ್ವಿನ್​​ಗಳು ಹೊಸದರ ಹುಡುಕಾಟದಲ್ಲಿ ಈ ರೀತಿ ಮಾಡುತ್ತವೆ ಎಂದೂ ತಜ್ಞರು ವಿವರಿಸಿದ್ದಾರೆ.

282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಪೆಂಗ್ವಿನ್‌ ದಾರಿ ತಪ್ಪಿರುವುದಕ್ಕೆ ತಜ್ಞರು ಕೆಲ ಉದಾಹರಣೆ ಊಹಿಸಿದ್ದಾರೆ

  1. ದಾರಿ ತಪ್ಪುವುದು (Disorientation) - ಯುವ ಅಥವಾ ಅನುಭವವಿಲ್ಲದ ಪಕ್ಷಿಗಳು ಅಪರಿಚಿತ ಮಾರ್ಗಗಳತ್ತ ತೆರಳಬಹುದು.
  2. ಅನಾರೋಗ್ಯ ಅಥವಾ ಗಾಯ - ಆರೋಗ್ಯ ಸಮಸ್ಯೆಗಳು ಸಾಮಾನ್ಯ ಚಲನೆಯನ್ನು ಬದಲಾಯಿಸಬಹುದು.
  3. ಅನ್ವೇಷಣೆ ಅಥವಾ ವಿಸ್ತರಣೆ - ವಿಶೇಷವಾಗಿ ಕಿರಿಯ ಪಕ್ಷಿಗಳು ಕೆಲವೊಮ್ಮೆ ಹೊಸ ಪ್ರದೇಶಗಳನ್ನು ಅನ್ವೇಷಿಸಲು ಮುಂದಾಗುತ್ತವೆ.

ಚಿಂತಿಸಬೇಕಾದ ಅಗತ್ಯವಿದೆಯೇ?

ವಿಜ್ಞಾನ ದೃಷ್ಟಿಕೋನದಿಂದ ನೋಡಿದರೆ, ಒಂದು ಪೆಂಗ್ವಿನ್ ದಾರಿ ತಪ್ಪಿರುವುದು ಯಾವುದೇ ದೊಡ್ಡ ಸಂಕಟದ ಸೂಚನೆ ಅಲ್ಲ. ವನ್ಯಜೀವಿ ಸಂಶೋಧಕರು ಅನೇಕ ಪ್ರಾಣಿಜಾತಿಗಳಲ್ಲಿ ಇಂತಹ ಅಪರೂಪದ ವರ್ತನೆಗಳು ಕಂಡುಬರುತ್ತವೆ ಎಂದು ಹೇಳುತ್ತಾರೆ. ಈ ವೈರಲ್ ವಿಡಿಯೊ ಒಂದು ಪ್ರತ್ಯೇಕ ಘಟನೆ ಮಾತ್ರ, ಇದು ಸಂಪೂರ್ಣ ಪ್ರಜಾತಿಗೆ ಸಂಬಂಧಿಸಿದ ಅಪಾಯವನ್ನು ಸೂಚಿಸುವುದಿಲ್ಲ. ಆದರೂ ಇಂತಹ ಅಪರೂಪದ ಕ್ಷಣಗಳು ವಿಜ್ಞಾನಿಗಳನ್ನು ಯೋಚನೆಗೆ ದೂಡುತ್ತವೆ.

ಮೀಮ್ ಅಥವಾ ಗಂಭೀರ ವಿಷಯ: ವಿಜ್ಞಾನ ಇದನ್ನು ಹೇಗೆ ನೋಡುತ್ತದೆ?

ಸಾಮಾಜಿಕ ಮಾಧ್ಯಮಗಳಿಗೆ ಈ ಪೆಂಗ್ವಿನ್ ಒಂದು ಮೀಮ್ — ಏಕಾಂಗಿ, ಬಂಡಾಯ ಅಥವಾ ಉದ್ದೇಶ ಹುಡುಕುವ ಸಂಕೇತ. ಆದರೆ ವಿಜ್ಞಾನಿಗಳ ದೃಷ್ಟಿಯಲ್ಲಿ ಇದು ವೈಯಕ್ತಿಕ ವರ್ತನ ವ್ಯತ್ಯಾಸದ ಒಂದು ಉದಾಹರಣೆ ಮಾತ್ರ. ಹೆಚ್ಚಿನ ವಿಜ್ಞಾನಿಗಳು ಈ ದೃಶ್ಯವನ್ನು ವಿಜ್ಞಾನಾತ್ಮಕವಾಗಿ ಕುತೂಹಲಕರವೆಂದು ನೋಡುತ್ತಿದ್ದಾರೆಯೇ ಹೊರತು, ಆತಂಕಕಾರಿಯಾಗಿ ಅಲ್ಲ. ನೆಟ್ಟಿಗರು ಇದರ ವರ್ತನೆಯನ್ನು ಇಂದಿನ ಜೆನ್‌ ಝಿ ಸಮುದಾಯದೊಂದಿಗೆ ಹೋಲಿಸುತ್ತಿದ್ದಾರೆ.