ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಂಬೈ ಮಹಾನಗರ ಪಾಲಿಕೆಯಲ್ಲಿ ಗೆದ್ದ ಶಿವಸೇನೆಯ ಎಲ್ಲ ಕಾರ್ಪೋರೇಟರ್‌ಗಳು ಫೈವ್‌ ಸ್ಟಾರ್‌ ಹೋಟೆಲ್‌ಗೆ ಶಿಫ್ಟ್

Mumbai Municipal Corporation: ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಶಿವಸೇನೆಯ ಎಲ್ಲ ಕಾರ್ಪೊರೇಟರ್‌ಗಳನ್ನು ಮುಂಬೈಯ ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ. ಪಕ್ಷಾಂತರ ಯತ್ನಗಳನ್ನು ತಡೆಯಲು ಮತ್ತು ಚುನಾವಣೋತ್ತರ ರಾಜಕೀಯ ಲೆಕ್ಕಾಚಾರಗಳ ನಡುವೆ ಪಕ್ಷದ ಏಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಶಿವಸೇನೆಯ ಎಲ್ಲ ಕಾರ್ಪೋರೇಟರ್‌ಗಳು ಪಂಚತಾರಾ ಹೋಟೆಲ್‌ಗೆ ಶಿಫ್ಟ್

ಮುಂಬೈ ಮಹಾನಗರ ಪಾಲಿಕೆ (ಸಂಗ್ರಹ ಚಿತ್ರ) -

Priyanka P
Priyanka P Jan 19, 2026 6:28 PM

ಮುಂಬೈ, ಜ. 19: ಪಕ್ಷಾಂತರ ತಡೆಯುವ ದೃಢ ನಿಶ್ಚಯದೊಂದಿಗೆ ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ (Shiv Sena chief Eknath Shinde) ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC)ಗೆ ಇತ್ತೀಚೆಗೆ ಆಯ್ಕೆಯಾದ 29 ಕಾರ್ಪೊರೇಟರ್‌ಗಳಿಗೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಕ್ಷಣವೇ ಈ ಕಾರ್ಪೊರೇಟರ್‌ಗಳನ್ನು ಮುಂಬೈಯ ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ.

ಶಿವಸೇನೆಯ ಮೂಲಗಳ ಪ್ರಕಾರ, ಸೇನಾ ಕಾರ್ಪೊರೇಟರ್‌ಗಳ ಗ್ರೂಪ್‍ನ ನಾಯಕನನ್ನು ಸೋಮವಾರ (ಜನವರಿ 19) ಹೆಸರಿಸುವ ಸಾಧ್ಯತೆಯಿದೆ. ಪಕ್ಷಾಂತರದ ಎಲ್ಲ ಸಾಧ್ಯತೆಗಳನ್ನು ತಡೆಗಟ್ಟುವ ಉದ್ದೇಶದಿಂದ ಅಗತ್ಯವಿರುವ ಎಲ್ಲ ದಾಖಲೆ ಸಂಬಂಧಿತ ಪ್ರಕ್ರಿಯೆಗಳನ್ನೂ ಸೋನವಾರವೇ ಪೂರ್ಣಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಯುವ ಕಾರ್ಪೊರೇಟರ್‌ಗಳಾದ ಯಾಮಿನಿ ಜಾಧವ್, ತ್ರಿಷ್ಣಾ ವಿಶ್ವಾಸರಾವ್ ಮತ್ತು ಅಮೇ ಘೋಲೆ ಅವರ ಹೆಸರು ಉನ್ನತ ಹುದ್ದೆಗಳಿಗೆ ಪರಿಗಣನೆಯಲ್ಲಿವೆ ಎಂದು ತಿಳಿದುಬಂದಿದೆ.

ಭಾರತದ ಹಲವು ರಾಜ್ಯಗಳಿಗಿಂತ ದೊಡ್ಡದು ಮುಂಬೈ ಪಾಲಿಕೆ ಬಜೆಟ್!

2017ರ ನಂತರ ನಡೆದ ಬಿಎಂಸಿ ಚುನಾವಣೆಯಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಕ್ರಮವಾಗಿ 89 ಮತ್ತು 29 ಸ್ಥಾನಗಳನ್ನು ಗೆದ್ದಿವೆ. ಎನ್‌ಸಿಪಿಯ ಶರದ್ ಪವಾರ್ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ ಠಾಕ್ರೆ ಸಹೋದರರಾದ ಉದ್ಧವ್ ಮತ್ತು ರಾಜ್ ಒಟ್ಟಾಗಿ 72 ಸ್ಥಾನಗಳನ್ನು ಗೆದ್ದಿದ್ದಾರೆ. 227 ಸದಸ್ಯರ ಸದನದಲ್ಲಿ ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಬಹುಮತವನ್ನು ದಾಟುವ ಸಂಖ್ಯೆಯನ್ನು ಹೊಂದಿದ್ದರೂ, ಮೇಯರ್ ಯಾರಾಗುತ್ತಾರೆ ಎಂಬ ಪ್ರಶ್ನೆಯು ಮಿತ್ರಪಕ್ಷಗಳ ನಡುವಿನ ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ.

ಬೃಹನ್‌ಮುಂಬೈ ಮಹಾನಗರ ಪಾಲಿಕೆಯಲ್ಲಿ ದಶಕಗಳ ಕಾಲ ಶಿವಸೇನೆ ಮೇಯರ್ ಸ್ಥಾನವನ್ನು ಪಡೆದಿತ್ತು. ಶಿವಸೇನಾವನ್ನು ವಿಭಜಿಸಿದ ಬಂಡಾಯಕ್ಕೆ ಕಾರಣವಾದ ಏಕನಾಥ್ ಶಿಂಧೆ, ತನ್ನ ಪಾಳಯವೇ ನಿಜವಾದ ಶಿವಸೇನೆ ಎಂಬ ತನ್ನ ಹಕ್ಕನ್ನು ಬಲಪಡಿಸಲು ಮೇಯರ್ ಹುದ್ದೆಯನ್ನು ಪಡೆಯಲು ಒತ್ತಾಯಿಸುವ ಸಾಧ್ಯತೆ ಇದೆ. ಇನ್ನೊಂದೆಡೆ, ರಾಜಕೀಯ ಸಂದೇಶ ನೀಡುವ ಉದ್ದೇಶದಿಂದ ಬಿಜೆಪಿ ಕೂಡ ಮೇಯರ್ ಹುದ್ದೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಕಾರಣ ಬಿಎಂಸಿಯಲ್ಲಿ ಇದುವರೆಗೆ ಬಿಜೆಪಿ ಕಾರ್ಪೊರೇಟರ್ ಯಾರೂ ಮೇಯರ್ ಆಗಿಲ್ಲ.

ವಿರೋಧ ಪಕ್ಷಗಳ ವಿಷಯದಲ್ಲಿ, ಶಿವಸೇನೆ (ಯುಬಿಟಿ), ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಎನ್‌ಸಿಪಿ (ಶರದ್ ಪವಾರ್) ಕ್ರಮವಾಗಿ 65, 6 ಮತ್ತು 1 ವಾರ್ಡ್‌ಗಳನ್ನು ಗೆದ್ದವು. ಇದರೊಂದಿಗೆ ಒಟ್ಟು ಸಂಖ್ಯೆ 72 ಆಗುತ್ತದೆ. ಕಾಂಗ್ರೆಸ್ 24 ವಾರ್ಡ್‌ಗಳು, ಎಐಎಂಐಎಂ 8 ಮತ್ತು ಸಮಾಜವಾದಿ ಪಕ್ಷ 2 ವಾರ್ಡ್‌ಗಳನ್ನು ಗೆದ್ದವು. ವಿರೋಧ ಪಕ್ಷಗಳು ಸೇರಲು ನಿರ್ಧರಿಸಿದರೆ ಸಂಖ್ಯೆ 106ಕ್ಕೆ ಏರುತ್ತದೆ. ಅಂದರೆ ಬಹುಮತಕ್ಕೆ 8 ಕಡಿಮೆ.

ಈ ಚುನಾವಣಾ ಲೆಕ್ಕಾಚಾರದ ಹಿನ್ನೆಲೆಯಲ್ಲೇ ಶಿವಸೇನಾ ಯಾವುದೇ ಅಪಾಯಕ್ಕೂ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದೆ. ಗೆಲುವು ಸಾಧಿಸಿದ ತಕ್ಷಣವೇ, ಪಕ್ಷಾಂತರದ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸುವ ಉದ್ದೇಶದಿಂದ ಏಕನಾಥ್ ಶಿಂಧೆ ತಮ್ಮ 29 ಕಾರ್ಪೊರೇಟರ್‌ಗಳನ್ನು ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ.