ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಹಲವು ರಾಜ್ಯಗಳಿಗಿಂತ ದೊಡ್ಡದು ಮುಂಬೈ ಪಾಲಿಕೆ ಬಜೆಟ್!

ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಲ್ಲಿ ಹೊಸ ಮೇಯರ್‌ಗಳ ಆಯ್ಕೆಗಾಗಿ ಜನವರಿ 15ರಂದು ಚುನಾವಣೆ ನಡೆಯಲಿದೆ. ರಾಜ್ಯದಾದ್ಯಂತ 15,000ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆಯಾಗಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ ಈ ಚುನಾವಣೆಯ ಮುಖ್ಯ ಆಕರ್ಷಣೆಯಾಗಿದೆ. ಮುಂಬೈಯಲ್ಲಿ ಮಾತ್ರವೇ 227 ವಾರ್ಡ್‌ಗಳಿದ್ದು, ಸುಮಾರು 1,700 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಮುಂಬೈ ಪಾಲಿಕೆ ಬಜೆಟ್ ಎಷ್ಟು ದೊಡ್ಡದು ಗೊತ್ತಾ?

ಮುಂಬೈ ಪಾಲಿಕೆ (ಸಂಗ್ರಹ ಚಿತ್ರ) -

Profile
Sushmitha Jain Jan 13, 2026 8:14 PM

ಮುಂಬೈ, ಜ. 13: ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಲ್ಲಿ ಹೊಸ ಮೇಯರ್‌ಗಳ ಆಯ್ಕೆಗಾಗಿ ಜನವರಿ 15ರಂದು ಚುನಾವಣೆ (Mayors Election) ನಡೆಯಲಿದೆ. ರಾಜ್ಯಾದ್ಯಂತ 15,000ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರಯವ ಬೃಹತ್ ಮುಂಬೈ ಮಹಾನಗರ ಪಾಲಿಕೆ (Mumbai Civic Body’s Budget) ಈ ಚುನಾವಣೆಯ ಕೇಂದ್ರಬಿಂದು.

ಕೇವಲ ಮುಂಬೈಯಲ್ಲಿಯೇ 227 ವಾರ್ಡ್‌ಗಳಿದ್ದು, ಸುಮಾರು 1,700 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 2025–26ರ ಹಣಕಾಸು ವರ್ಷಕ್ಕೆ 74,000 ಕೋಟಿ ರುಪಾಯಿಗೂ ಅಧಿಕ ಬಜೆಟ್ ಹೊಂದಿರುವ ಬಿಎಂಸಿಯ ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ನಡೆಯುತ್ತಿದೆ. 2025–26ರ ಹಣಕಾಸು ವರ್ಷ (FY26)ದಲ್ಲಿ ಬಿಎಂಸಿ 2025ರ ಫೆಬ್ರವರಿ 4ರಂದು 74,427 ಕೋಟಿ ರುಪಾಯಿ ಬಜೆಟ್ ಮಂಡಿಸಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ಆಯ-ವ್ಯಯ ಪತ್ರ ಆಗಿದೆ. ಇದು ಹಿಂದಿನ ವರ್ಷದ ಅವಧಿಗಿಂತ ಸುಮಾರು ಶೇ. 14ರಷ್ಟು ಹೆಚ್ಚು. 2022ರ ಮಾರ್ಚ್ 7ರಂದು ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದು, ಬಿಎಂಸಿ ಆಡಳಿತಾಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹಲವು ರಾಜ್ಯಗಳಿಗಿಂತ ದೊಡ್ಡ ಬಜೆಟ್

ಬಿಎಂಸಿ ಕೇವಲ ಮಹಾನಗರ ಪಾಲಿಕೆಯಾಗಿದ್ದರೂ ಸಹ 74,427 ಕೋಟಿ ರುಪಾಯಿ ಮೊತ್ತದ ಬಜೆಟ್ ಮಂಡಿಸಿದ್ದು, ಇದು ಭಾರತದ ಹಲವು ರಾಜ್ಯಗಳ ಸಂಪೂರ್ಣ ಬಜೆಟ್‌ಗಳಿಗಿಂತ ದೊಡ್ಡದಾಗಿದೆ.

  • ಗೋವಾ: 2025–26ರ ಒಟ್ಟು ಬಜೆಟ್ 28,162 ಕೋಟಿ ರುಪಾಯಿ
  • ಅರುಣಾಚಲ ಪ್ರದೇಶ: 39,842 ಕೋಟಿ ರುಪಾಯಿ
  • ಹಿಮಾಚಲ ಪ್ರದೇಶ: 58,514 ಕೋಟಿ ರುಪಾಯಿ
  • ಸಿಕ್ಕಿಂ: 16,196 ಕೋಟಿ ರುಪಾಯಿ
  • ತ್ರಿಪುರ: 31,412 ಕೋಟಿ ರುಪಾಯಿ

ಇತರ ಮಹಾನಗರ ಪಾಲಿಕೆಗಳು

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) 2026–27ರಿಗಾಗಿ 16,530 ಕೋಟಿ ರುಪಾಯಿ ಬಜೆಟ್ ಪ್ರಸ್ತಾಪಿಸಿದ್ದರೆ, ಬೆಂಗಳೂರು ಬಿಬಿಎಂಪಿ 2025–26ರಿಗಾಗಿ ಸುಮಾರು 19,930 ಕೋಟಿ ರುಪಾಯಿಯ ಆಯ-ವ್ಯಯ ಪತ್ರ ಮಂಡಿಸಿತ್ತು.

ಮಹಾನಗರ ಪಾಲಿಕೆ ಆಫ್ ಗ್ರೇಟರ್ ಮುಂಬೈ (ಎಂಸಿಜಿಎಂ) ಎಂತಲೂ ಕರೆಯಲ್ಪಡುವ ಬಿಎಂಸಿ, ಮುಂಬೈ ಹಾಗೂ ಅದರ ಕೆಲವು ಉಪನಗರಗಳನ್ನು ಒಳಗೊಂಡಿದೆ. 1888ರ ಬಾಂಬೆ ಮಹಾನಗರ ಪಾಲಿಕೆ ಕಾಯ್ದೆಯಡಿ ಸ್ಥಾಪಿತವಾದ ಈ ಸಂಸ್ಥೆ, ನಗರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾಗರಿಕ ಆಡಳಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ.

ಮುಂಬೈ-ಗೋವಾ ಹೆದ್ದಾರಿಯಲ್ಲಿನ ಸಮಸ್ಯೆ ಮನವರಿಕೆ ಮಾಡಲು ಬರೋಬ್ಬರಿ 490 ಕಿ.ಮೀ. ನಡಿಗೆ; ನಿತಿನ್ ಗಡ್ಕರಿಗೆ ವರದಿ ಕಳುಹಿಸಿದ 28 ವರ್ಷದ ಯುವಕ

ಪಾಲಿಕೆಯ ಆದಾಯ ಮೂಲಗಳು

ಬಿಎಂಸಿಯ ಪ್ರಮುಖ ಆದಾಯ ಮೂಲಗಳೆಂದರೆ ತೆರಿಗೆಗಳು, ಶುಲ್ಕಗಳು, ಅಭಿವೃದ್ಧಿ ಶುಲ್ಕಗಳು ಹಾಗೂ ಹೂಡಿಕೆಗಳು. 2024–25ರಲ್ಲಿ ಬಿಎಂಸಿಯ ಆದಾಯವನ್ನು 35,749.03 ಕೋಟಿ ರುಪಾಯಿಯಿಂದ 40,693.85 ಕೋಟಿ ರುಪಾಯಿಗೆ ಪರಿಷ್ಕರಿಸಲಾಯಿತು. 2024ರ ಡಿಸೆಂಬರ್ 31ರವರೆಗೆ ಸಂಗ್ರಹಿಸಲಾದ ಆದಾಯ 28,308.37 ಕೋಟಿ ರುಪಾಯಿ. 2025–26 ಸಾಲಿನ ಆದಾಯ 43,159.40 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದ್ದು, ಇದು 2024–25ರ ಪ್ರಾರಂಭಿಕ ಅಂದಾಜಿಗಿಂತ ಸುಮಾರು ಶೇ. 20.73ರಷ್ಟು ಹೆಚ್ಚು.

ಆಸ್ತಿ ತೆರಿಗೆ ಪ್ರಮುಖ ಆದಾಯದ ಮೂಲ

  • 2024–25ರಲ್ಲಿ ಆಸ್ತಿ ತೆರಿಗೆಯ ಮೂಲ ಅಂದಾಜು 4,950 ಕೋಟಿ ರುಪಾಯಿ ಆಗಿದ್ದು, ಅದನ್ನು 6,200 ಕೋಟಿ ರುಪಾಯಿಗೆ ಹೆಚ್ಚಿಸಲಾಯಿತು.
  • 2025–26ರಲ್ಲಿ ಆಸ್ತಿ ತೆರಿಗೆ ಆದಾಯವನ್ನು 5,200 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ.

ಬಿಎಂಸಿಯ ಖರ್ಚು-ವೆಚ್ಚ

  • ರಸ್ತೆಗಳು, ಸೇತುವೆಗಳು, ಒಳಚರಂಡಿ ವ್ಯವಸ್ಥೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಭದ್ರತೆ, ಸಿಬ್ಬಂದಿ ವೇತನ ಮತ್ತು ಪಿಂಚಣಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯೇ ಬಿಎಂಸಿಯ ಪ್ರಮುಖ ವೆಚ್ಚ.
  • 2024ರಲ್ಲಿ ಬಿಎಂಸಿ ತನ್ನ ಆದಾಯದ ಶೇ. 47ರಷ್ಟನ್ನು ಮುಂಬೈಯ ಮೂಲಸೌಕರ್ಯ ಅಭಿವೃದ್ಧಿಗೆ ವ್ಯಯ ಮಾಡಿದೆ. ಕಳೆದ 10 ವರ್ಷಗಳಲ್ಲಿ ನಗರ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 1,11,600 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.
  • 2025–26ರ ಬಜೆಟ್‌ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 7,410 ಕೋಟಿ ರುಪಾಯಿ ಹೆಚ್ಚಳವಾಗಿದ್ದು, ಅದರಲ್ಲಿ 43,166 ಕೋಟಿ ರುಪಾಯಿ (58%) ಅನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.
  • ಒಟ್ಟು ಬಜೆಟ್‌ನ ಕನಿಷ್ಠ ಶೇ. 10ರಷ್ಟನ್ನು ಆರೋಗ್ಯ ಸೇವೆಗಳಿಗೆ ಮೀಸಲಿಡಲಾಗಿದೆ. 2012–13ರಿಂದ 2025ರ ಜನವರಿವರೆಗೆ, ಬಿಎಂಸಿ ಬೃಹತ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ & ಟ್ರಾನ್ಸ್‌ಪೋರ್ಟ್‌ (ಬೆಸ್ಟ್)ಗೆ 11,304.59 ಕೋಟಿ ರುಪಾಯಿ ಆರ್ಥಿಕ ನೆರವು ನೀಡಿದೆ.
  • 2025–26ನೇ ಸಾಲಿಗೆ ಬೆಸ್ಟ್‌ಗೆ 1,000 ಕೋಟಿ ರುಪಾಯಿ ಅನುದಾನ ಪ್ರಸ್ತಾಪಿಸಲಾಗಿದೆ. ಇದಲ್ಲದೆ, ವಿದ್ಯುತ್ ಬಸ್‌ಗಳ ಖರೀದಿಗಾಗಿ 15ನೇ ಹಣಕಾಸು ಆಯೋಗದಿಂದ 992 ಕೋಟಿ ರುಪಾಯಿ ಮಂಜೂರಾಗಿದ್ದು, ಅದರಲ್ಲಿ 493.38 ಕೋಟಿ ರುಪಾಯಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.