ಮುಂಬೈ, ಫೆ. 8: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ (Anti-Naxal operation) ಉನ್ನತ ಕಮಾಂಡರ್ ಸೇರಿದಂತೆ ಏಳು ಮಾವೋವಾದಿಗಳು ಮೃತಪಟ್ಟಿದ್ದಾರೆ (Maoists killed). ಕಾರ್ಯಾಚರಣೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ.
ಮೂರು ದಿನಗಳ ಕಾಲ ನಡೆದ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಈ ಎನ್‌ಕೌಂಟರ್‌ಗಳು ನಡೆದವು. ತೆಲಂಗಾಣ ಮೂಲದ ಪ್ರಭಾಕರ್ ಅಲಿಯಾಸ್ ಲೋಕೇತಿ ಚಂದರ್ ರಾವ್ ಅವರ ತಲೆಗೆ 25 ಲಕ್ಷ ರುಪಾಯಿ ಬಹುಮಾನವಿತ್ತು. ಗುಂಡಿನ ಚಕಮಕಿಯಲ್ಲಿ ಹತರಾದ ಮಾವೋವಾದಿಗಳಲ್ಲಿ ಇವನೂ ಒಬ್ಬ. ಪ್ರಭಾಕರ್ ಮಾವೋವಾದಿಗಳ ಗಡ್ಚಿರೋಲಿ ವಿಭಾಗ ಸಮಿತಿ, ಪಶ್ಚಿಮ ಉಪ-ವಲಯ ಬ್ಯೂರೋ ಮತ್ತು ಕಂಪನಿ ಸಂಖ್ಯೆ 10ರ ಉಸ್ತುವಾರಿ ವಹಿಸಿದ್ದ ಎಂದು ಗಡ್ಚಿರೋಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ; ಓರ್ವ ಮಾವೋವಾದಿ ಸಾವು
ಛತ್ತೀಸ್‌ಗಢದಿಂದ ಬಂದ ಅಪರಿಚಿತ ಮಾವೋವಾದಿ ಸಂಘಟನೆಯ ಕಾರ್ಯಕರ್ತರ ಚಲನವಲಗಳ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಫೆಬ್ರವರಿ 3ರ ರಾತ್ರಿ ಗಡ್ಚಿರೋಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿಯಾಗಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ನಡೆಸಿತು.
ನಂತರ ಗಡಚಿರೋಲಿ ಪೊಲೀಸರ ವಿಶೇಷ ನಕ್ಸಲ್ ವಿರೋಧಿ ಪಡೆ ಆಗಿರುವ ಸಿ-60ರ 14 ಘಟಕಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು. ನಾರಾಯಣಪುರ–ಗಡಚಿರೋಲಿ ಗಡಿ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.
ಅತ್ಯಂತ ದೂರದ ಹಾಗೂ ಸವಾಲಿನ ಭೂಭಾಗವನ್ನು ಎದುರಿಸುತ್ತಾ, ಪೊಲೀಸ್ ತಂಡಗಳು ಬಹಳ ಧೈರ್ಯದಿಂದ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದವು. ಫೆಬ್ರವರಿ 4ರಂದು ಈ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಮಾವೋವಾದಿಗಳು ಪೊಲೀಸ್ ಸಿಬ್ಬಂದಿಯ ಮೇಲೆ ಮನಬಂದಂತೆ ಗುಂಡು ಹಾರಿಸಿದರು.
ಮಾವೋವಾದಿ ನಿಗ್ರಹ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ; 11 ಭದ್ರತಾ ಸಿಬ್ಬಂದಿಗೆ ಗಾಯ
ಭದ್ರತಾ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಿದರು. ಗುರುವಾರ (ಫೆ. 5), ಸಿ -60ರ ಹೆಚ್ಚುವರಿ ಘಟಕಗಳನ್ನು ನಿಯೋಜಿಸಲಾಯಿತು ಮತ್ತು ಸಿಆರ್‌ಪಿಎಫ್ ಕೂಡ ಸ್ಥಳಕ್ಕೆ ಧಾವಿಸಿತು. ಗುರುವಾರ ರಾತ್ರಿ ಮೂವರು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿದ್ದರೆ, ಶುಕ್ರವಾರ (ಫೆ. 6) ಮತ್ತೆ ನಾಲ್ಕು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ, ನಾಲ್ವರು ಪುರುಷ ಮಾವೋವಾದಿಗಳು ಮತ್ತು ಅವರ ಮೂವರು ಮಹಿಳಾ ಸಹಚರರ ಮೃತದೇಹಗಳು, ಮೂರು ಎಕೆ-47 ರೈಫಲ್‌ಗಳು, ಒಂದು ಎಸ್‌ಎಲ್‌ಆರ್ ಮತ್ತು ಒಂದು .303 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಪೊಲೀಸ್ ಕಮಾಂಡೋ ಅವರನ್ನು 38 ವರ್ಷದ ಸಿ -60 ಜವಾನ್ ದೀಪಕ್ ಚಿನ್ನ ಮಾದವಿ ಎಂದು ಗುರುತಿಸಲಾಗಿದೆ. ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಿದ ನಂತರ ಗುಂಡೇಟಿನಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡನೇ ಸಿ-60 ಕಮಾಂಡೋ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.