ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಹೈದರಾಬಾದ್ ಮೆಟ್ರೋ; ಭದ್ರತಾ ಸಿಬ್ಬಂದಿಯಾಗಿ 20 ತೃತೀಯ ಲಿಂಗಿಗಳ ನೇಮಕ
Hyderabad Metro: ಹೈದರಾಬಾದ್ ಮೆಟ್ರೋ ರೈಲ್ ಲಿಮಿಟೆಡ್ (HMRL) ತನ್ನ ಭದ್ರತಾ ವಿಭಾಗದಲ್ಲಿ 20 ತೃತೀಯ ಲಿಂಗಿ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಸಾಮಾಜಿಕ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ. ಈ ಹೊಸ ನೇಮಕಾತಿ ಮಹಿಳಾ ಭದ್ರತೆ ಹೆಚ್ಚಿಸುವುದರ ಜತೆಗೆ ಎಲ್ಲರಿಗೂ ಸುರಕ್ಷಿತ ಹಾಗೂ ಗೌರವಯುತ ಪ್ರಯಾಣ ವಾತಾವರಣ ನಿರ್ಮಿಸುವಲ್ಲಿ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೈದರಾಬಾದ್ ಮೆಟ್ರೋದಲ್ಲಿ 20 ತೃತೀಯ ಲಿಂಗಿಗಳ ನೇಮಕ -
ಹೈದರಾಬಾದ್, ಡಿ. 2: ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ (HMRL) ತನ್ನ ಮುಂಚೂಣಿ ಭದ್ರತಾ ಸೇವೆಗಳಿಗೆ 20 ತೃತೀಯ ಲಿಂಗಿ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಘೋಷಿಸಿದೆ. ಇದು ಸಾಮಾಜಿಕ ಸಬಲೀಕರಣ ಮತ್ತು ಪ್ರಯಾಣಿಕರ ಭದ್ರತೆ ಹೆಚ್ಚಿಸುವತ್ತ ಪ್ರಮುಖ ಹೆಜ್ಜೆ ಎನಿಸಿಕೊಂಡಿದೆ. ಆ ಮೂಲಕ ಹೊಡದೊಂದು ಕ್ರಾಂತಿಗೆ ಮುನ್ನುಡಿ ಬರೆದಿದೆ. ತಮ್ಮ ಭದ್ರತಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹೊಸದಾಗಿ ನೇಮಕಗೊಂಡ ಅವರು ಆಯ್ಕೆಯಾದ ಮೆಟ್ರೋ ನಿಲ್ದಾಣಗಳು ಮತ್ತು ಮೆಟ್ರೋ ರೈಲುಗಳಲ್ಲಿ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಮಹಿಳೆಯರ ಭದ್ರತೆ ಗಮನಾರ್ಹವಾಗಿ ಹೆಚ್ಚಾಗಿದೆ.
ಭಾರತದ ಅತಿದೊಡ್ಡ ಮತ್ತು ಅತ್ಯಂತ ಮುಂದುವರಿದ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾದ ಹೈದರಾಬಾದ್ ಮೆಟ್ರೋ ರೈಲು, 57 ನಿಲ್ದಾಣಗಳೊಂದಿಗೆ ಮೂರು ಕಾರಿಡಾರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಸುಮಾರು 5 ಲಕ್ಷ ದೈನಂದಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ. ಈ ಪ್ರಯಾಣಿಕರ ಸುಮಾರು ಶೇ. 30ರಷ್ಟು ಮಹಿಳೆಯರು ಆಗಿರುವುದರಿಂದ, ಅವರ ಸುರಕ್ಷತೆ, ಸೌಕರ್ಯ ಮತ್ತು ಆತ್ಮವಿಶ್ವಾಸವನ್ನು ಖಚಿತಪಡಿಸುವುದು HMRLಗೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ.
ಸುರಂಗದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಪ್ರಯಾಣಿಕರು ಸುಸ್ತೋ ಸುಸ್ತು...
ಈ ಕ್ರಮವು ತೆಲಂಗಾಣ ಸರ್ಕಾರದ ಅಂಚಿನಲ್ಲಿರುವ ಸಮುದಾಯಗಳಿಗೆ ಗೌರವ, ಘನತೆ ಮತ್ತು ಸಮಾನ ಅವಕಾಶದ ವಿಶಾಲ ಬದ್ಧತೆಗೆ ಸಾಕ್ಷಿ ಎನಿಸಿಕೊಂಡಿದೆ. ಕಳೆದ ವರ್ಷ ಸರ್ಕಾರವು ತೃತೀಯ ಲಿಂಗಿ ವ್ಯಕ್ತಿಗಳನ್ನು ಸಹಾಯಕ ಸಂಚಾರ ಮಾರ್ಷಲ್‌ಗಳಂತಹ ವಿವಿಧ ಸಾರ್ವಜನಿಕ ಸೇವಾ ವಲಯಗಳಿಗೆ ಸೇರಿಸುವ ನೀತಿಯನ್ನು ಜಾರಿಗೆ ತರಲು ಪ್ರಾರಂಭಿಸಿತ್ತು.
ತೃತೀಯ ಲಿಂಗಿ ಸಿಬ್ಬಂದಿಯ ನಿಯೋಜನೆ, ಸುರಕ್ಷಿತ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣವನ್ನು ನಿರ್ಮಿಸುವ HMRLನ ಧ್ಯೇಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ನೇಮಕಾತಿ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗಾಗಿ, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಅದಿಕಾರಿಯೊಬ್ಬರು ತಿಳಿಸಿದ್ದಾರೆ.
HMRLನ ವ್ಯವಸ್ಥಾಪಕ ನಿರ್ದೇಶಕ ಸರ್ಫರಾಜ್ ಅಹ್ಮದ್ ಈ ಕ್ರಮವನ್ನು ಶ್ಲಾಘಿಸಿದ್ದಾರೆ. ಈ 20 ಮಂದಿ ತರಬೇತಿ ಪಡೆದ ತೃತೀಯ ಲಿಂಗಿ ಸಿಬ್ಬಂದಿಯ ಸೇರ್ಪಡೆ ಹೈದರಾಬಾದ್ ಮೆಟ್ರೋ ಕುಟುಂಬಕ್ಕೆ ಅಪಾರ ಹೆಮ್ಮೆ. ಇದು ಕೇವಲ ಭದ್ರತಾ ವರ್ಧನೆಗಿಂತ ಹೆಚ್ಚಾಗಿದೆ. ಇದು ಸಾಮಾಜಿಕ ಸಬಲೀಕರಣಕ್ಕೆ ನಮ್ಮ ಕೊಡುಗೆ. ಮುಂಚೂಣಿಯ ಪ್ರಯಾಣಿಕರ ಸೇವೆಗಳನ್ನು ಬಲಪಡಿಸುವಲ್ಲಿ ಮತ್ತು ನಮ್ಮ ಮಹಿಳಾ ಪ್ರಯಾಣಿಕರಿಗೆ ಧೈರ್ಯ ತುಂಬುವಲ್ಲಿ ಸಹಾಯ ಮಾಡಲಿದೆ. ಹೈದರಾಬಾದ್ ಮೆಟ್ರೋದಲ್ಲಿ ಪ್ರತಿಯೊಬ್ಬ ನಾಗರಿಕನು ಆತ್ಮವಿಶ್ವಾಸ ಮತ್ತು ಗೌರವದಿಂದ ಪ್ರಯಾಣಿಸುವ ಸ್ಥಳವಾಗಿ ಉಳಿಯುವಂತೆ ನೋಡಿಕೊಳ್ಳುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿರುತ್ತದೆ. ಹೊಸದಾಗಿ ಸೇರ್ಪಡೆಗೊಂಡ ಸಿಬ್ಬಂದಿಯು ಪ್ರಯಾಣಿಕರ ಯೋಗಕ್ಷೇಮ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ಹೇಳಿದರು.
ಅವರು ಪ್ರಯಾಣಿಕರಿಗೆ ಮಾರ್ಗದರ್ಶನ, ಮಾಹಿತಿ ಸೇರಿದಂತೆ ಇತರೆ ಸೇವೆಗಳ ಸುಗಮ ವ್ಯವಸ್ಥೆಗಳಿಗೆ ಸಹಾಯ ಮಾಡುತ್ತಾರೆ. ಅಲ್ಲದೆ, ಪ್ರಯಾಣಿಕರ ಚಲನೆಯನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ಖಚಿತಪಡಿಸಿಕೊಳ್ಳಲು, ಕಾಂಕೋರ್ಸ್ (concourse) ಮಟ್ಟಗಳಲ್ಲಿ ಲಗೇಜ್ ಸ್ಕ್ಯಾನರ್‌ಗೆ (baggage scanner) ಸಹಾಯವನ್ನು ಸಹ ಒದಗಿಸುತ್ತಾರೆ ಎಂದು ತಿಳಿಸಿದರು.