13,629 ಅಡಿ ಎತ್ತರದ ಲಡಾಕ್ ವಾಯುನೆಲೆಯಲ್ಲಿ ಐಎಲ್-76ಎಂಡಿ ಸಾರಿಗೆ ವಿಮಾನದ ಯಶಸ್ವಿ ಲ್ಯಾಂಡಿಂಗ್: ಹೊಸ ಇತಿಹಾಸ ಬರೆದ ಭಾರತೀಯ ವಾಯುಪಡೆ
Indian Air Force: ಭಾರತೀಯ ವಾಯು ಪಡೆ ಹೊಸದೊಂದು ದಾಖಲೆ ಬರೆದಿದೆ. ಭಾರಿ ಸರಕು ಸಾಗಣೆ ವಿಮಾನ ಐಎಲ್-76ಎಂಡಿ ಲಡಾಖ್ನ 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಈ ಸಾಧನೆ ಮಾಡಿದೆ.
-
ಲಡಾಖ್, ನ. 7: ಭಾರತೀಯ ವಾಯು ಪಡೆ (IAF) ವಾಯುಯಾನ ಇತಿಹಾಸದಲ್ಲಿಅಧ್ಯಾಯ ಬರೆದಿದೆ. ಐಎಎಫ್ನ ಭಾರಿ ಸರಕು ಸಾಗಣೆ ವಿಮಾನ ಐಎಲ್-76ಎಂಡಿ (IL-76MD) ಲಡಾಖ್ನ 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ದಾಖಲೆ ನಿರ್ಮಿಸಿದೆ. ಜಗತ್ತಿನಲ್ಲೇ ಅತಿ ಎತ್ತರದ ಪ್ರದೇಶದಲ್ಲಿ ವಿಮಾನ ಇಳಿದ ಸಾಧನೆ ಇದಾಗಿದೆ. ಭಾರತೀಯ ವಾಯುಪಡೆ ಎಕ್ಸ್ ಪೋಸ್ಟ್ ಮೂಲಕ ಈ ಸಾಧನೆಯನ್ನು ಪ್ರಕಟಿಸಿದೆ. ಅತಿ ಎತ್ತರದ ಪ್ರದೇಶದಲ್ಲಿರುವ ವಾಯುನೆಲೆಯಲ್ಲಿನ ವಿಮಾನದ ಫೋಟೊ ಮತ್ತು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಾಯುಪಡೆಯ ಪ್ರಕಾರ, ಜಗತ್ತಿನಾದ್ಯಂತ IL-76MD ವಿಮಾನವೊಂದು ಲ್ಯಾಂಡ್ ಆದ ಅತ್ಯಂತ ಎತ್ತರದ ಸ್ಥಳ ಇದಾಗಿದೆ.
"13,629 ಅಡಿ. ವಾಯುಯಾನ ಇತಿಹಾಸದಲ್ಲಿ ಒಂದು ಹೊಸ ಎತ್ತರ" ಎಂದು ಹೆಮ್ಮೆಯಿಂದ ಬರೆದುಕೊಂಡಿದೆ. ಈ ಲ್ಯಾಂಡಿಂಗ್ ವಿಮಾನದ ಸಾಮರ್ಥ್ಯ ಮತ್ತು ಅದರ ಸಿಬ್ಬಂದಿಯ ಪರಿಣತಿಯನ್ನು ಎತ್ತಿ ತೋರಿಸುವ ಒಂದು ಗಮನಾರ್ಹ ಸಾಧನೆ ಎಂದು ಬಣ್ಣಿಸಿದೆ.
ಐಎಲ್-76ಎಂಡಿ ಸಾರಿಗೆ ವಿಮಾನದ ಲ್ಯಾಂಡಿಂಗ್:
13,629 FEET. A NEW HEIGHT IN AVIATION HISTORY. An Indian Air Force IL-76MD has scripted history with a successful landing at Nyoma, marking the highest-altitude landing ever achieved by the aircraft anywhere in the world. A remarkable demonstration of the aircraft’s enduring capability, backed by the exceptional skill, precision, and professionalism of its crew. A milestone that reinforces India’s strategic airlift capability. Pushing boundaries. Redefining limits. Making history. #IndianAirForce #IAF #Nyoma #AviationHistory #IndianDefence @DefenceMinIndia @SpokespersonMoD @HQ_IDS_India @adgpi @indiannavy @CareerinIAF @air_veterans
— Indian Air Force (@IAF_MCC) November 7, 2026
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಐಎಎಫ್ ಶ್ಲಾಘಿಸಿದೆ. ಈ ಮಹತ್ವದ ಮೈಲುಗಲ್ಲು ಭಾರತದ ವೈಮಾನಿಕ ಸಾಗಣೆ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲಡಾಖ್ ವಾಯುನೆಲೆಯ ವೈಶಿಷ್ಟ್ಯ
ಪೂರ್ವ ಲಡಾಖ್ನ ನ್ಯೋಮಾದಲ್ಲಿರುವ ಈ ವಾಯುನೆಲೆ ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಗೆ (LAC) ಹತ್ತಿರದಲ್ಲಿರುವುದರಿಂದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಈ ಸ್ಥಳದಲ್ಲಿ ವಿಮಾನ ಕಾರ್ಯಾಚರಣೆ ಸವಾಲಿನಿಂದ ಕೂಡಿರುತ್ತದೆ. ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ.
ವಿಶ್ವದ ಅತಿ ಎತ್ತರದ ವಾಯುನೆಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯೋಮಾದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿದ, ಮೈನಸ್ 40 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆ ತಾಪಮಾನವನ್ನು ತಡೆದುಕೊಳ್ಳುವ 2.7 ಕಿಲೋ ಮೀಟರ್ ರನ್ ವೇ ಇದೆ. ಏರ್ ಸ್ಟ್ರಿಪ್ ಸುಖೋಯ್-30 ಎಂಕೆಐ, ರಫೇಲ್, ಮಿಗ್ -29 ಯುಪಿಜಿ, ಸಿ -17 ಗ್ಲೋಬ್ ಮಾಸ್ಟರ್ 3 ಮತ್ತು ಐಎಲ್ -76 ಸೇರಿ ಮುಂಚೂಣಿ ಯುದ್ಧ ವಿಮಾನಗಳು ಮತ್ತು ಭಾರಿ ಸಾರಿಗೆ ವಿಮಾನ ಇಲ್ಲಿ ಕಾರ್ಯಾಚರಿಸಲು ಸಾಧ್ಯವಾಗುತ್ತದೆ.
ಎತ್ತರದ ಸ್ಥಳಗಳಿಗೆ ಸರಕು ಸಾಗಿಸುವ ಭಾರಿ ವಿಮಾನಗಳಿಗೆ ಬೇಡಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಯಶಸ್ವಿ ಲ್ಯಾಂಡಿಂಗ್ ನಡೆದಿರುವುದು ಗಮನಾರ್ಹ. ಎತ್ತರದ ಪ್ರದೇಶಗಳಲ್ಲಿ ಬೀಸುವ ಗಾಳಿ ಎಂಜಿನ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇಲ್ಲಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಹೆಚ್ಚು ಸವಾಲಿನಿಂದ ಕೂಡಿರುತ್ತದೆ.
IL-76MD ವಿಮಾನದ ಬಗ್ಗೆ
4 ಎಂಜಿನ್ ಹೊಂದಿರುವ ರಷ್ಯಾ ಮೂಲದ IL-76MD ಭಾರಿ ವಿಮಾನವನ್ನು ಸೈನಿಕರು, ಉಪಕರಣ ಮತ್ತು ಸರಕು ಸಾಗಿಸಲು ಉಪಯೋಗಿಸಲಾಗುತ್ತದೆ. ಭಾರತೀಯ ವಾಯುಪಡೆಯು ಸಿಬ್ಬಂದಿ ಹಾಗೂ ಅಗತ್ಯ ಸಾಮಗ್ರಿಗಳನ್ನು ದೂರದ ಪ್ರದೇಶಗಳಿಗೆ ಕೊಂಡೊಯ್ಯುವಲ್ಲಿ ಇದರ ಪಾತ್ರ ಪ್ರಮುಖ. "ಸೀಮೆಗಳನ್ನು ವಿಸ್ತರಿಸುತ್ತಾ, ಮಿತಿಗಳನ್ನು ಮರು ವ್ಯಾಖ್ಯಾನಿಸುತ್ತಾ, ಇತಿಹಾಸವನ್ನು ಸೃಷ್ಟಿಸಲಾಗುತ್ತಿದೆʼʼ ಎಂದು ಭಾರತೀಯ ವಾಯುಪಡೆಯು ಹೇಳಿದೆ.