Good Governance Day 2025: 4 ರಾಜ್ಯಗಳ 6 ವಿಭಿನ್ನ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಏಕೈಕ ಭಾರತೀಯ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ
Atal Bihari Vajpayee: ಜನಸಾಮಾನ್ಯರ ಹೃದಯದಲ್ಲಿ ತಮ್ಮದೇ ಸ್ಥಾನ ಪಡೆದಿದ್ದ ವಾಜಪೇಯಿ ಅವರ 101ನೇ ಜನ್ಮ ದಿನ ಇಂದು. ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂಬ ಬಿರುದಾಂಕಿತವನ್ನು ಮುಡಿಗೇರಿಸಿಕೊಂಡಿದ್ದ ಭಾರತ ರತ್ನ ಅಟಲ್ ಬಿಹಾರಿ ಅವರ ರಾಜಕೀಯ ಜೀವನ ಹೇಗಿತ್ತು ನಿಮಗೆ ಗೊತ್ತಾ? ವಾಜಪೇಯಿ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.
ಅಟಲ್ ಬಿಹಾರಿ ವಾಜಪೇಯಿ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 25: ಗುರುವಾರ (ಡಿಸೆಂಬರ್ 25) ಭಾರತದ ಮಾಜಿ ಪ್ರಧಾನ ಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ 101ನೇ ಜನ್ಮ ಜಯಂತಿ (Birth Anniversary). ಇವರು ಹುಟ್ಟುಹಬ್ಬವನ್ನು ಸರ್ಕಾರ ಉತ್ತಮ ಆಡಳಿತ ದಿನ (Good Governance Day) ಎಂದು ಆಚರಿಸುತ್ತ ಬರಲಾಗುತ್ತಿದೆ. ಹೀಗೆ ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂಬ ಬಿರುದಾಂಕಿತವನ್ನು ಮುಡಿಗೇರಿಸಿಕೊಂಡಿದ್ದ ಭಾರತ ರತ್ನ ಅಟಲ್ ಬಿಹಾರಿ ಅವರ ರಾಜಕೀಯ ಜೀವನ ಹೇಗಿತ್ತು ನಿಮಗೆ ಗೊತ್ತಾ? ವಾಜಪೇಯಿ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.
ಜನಸಾಮಾನ್ಯರ ಹೃದಯದಲ್ಲಿ ತಮ್ಮದೇ ಸ್ಥಾನ ಪಡೆದಿದ್ದ ವಾಜಪೇಯಿ 924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಶಿಂದೆ ಕಿ ಚವ್ವಾಣಿ ಗ್ರಾಮದಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿಯ ಪುತ್ರನಾಗಿ ಜನಿಸಿದರು.
ಮೂರು ಬಾರಿ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸಿದ ಅವರು, 11 ಬಾರಿ ಲೋಕಸಭಾ ಸದಸ್ಯರಾಗಿ ಮತ್ತು 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಮತ್ತು ಮಹತ್ವದ ನಿರ್ಣಯಗಳನ್ನು ಕೈಗೊಂಡು ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದರು.
ಹೀಗೆ ರಾಜಕೀಯ ಜೀವನದಲ್ಲಿ ಅನೇಕ ಅಪರೂಪದ ಸಾಧನೆಗಳನ್ನು ಮಾಡಿದ ವಾಜಪೇಯಿ, ಬಿಜೆಪಿಯ ಹಿರಿಯ ನಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಅವರು 1998ರಿಂದ 2004ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಐದು ವರ್ಷಗಳ ಪೂರ್ಣ ಅವಧಿಗೆ ಅಧಿಕಾರದಲ್ಲಿದ್ದ ಮೊದಲ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದರೊಂದಿಗೆ ನಾಲ್ಕು ರಾಜ್ಯಗಳ ಆರು ವಿಭಿನ್ನ ಲೋಕಸಭಾ ಕ್ಷೇತ್ರಗಳಿಂದ ಜಯ ಗಳಿಸಿದ ಭಾರತದ ಏಕೈಕ ರಾಜಕಾರಣಿ ಎಂಬ ಹಿರಿಮೆ ಅವರದ್ದು.
ಚರ್ಚ್‌ಗೆ ತೆರಳಿ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ
ವಾಜಪೇಯಿ ಮೊದಲ ಬಾರಿಗೆ 1957ರಲ್ಲಿ ಉತ್ತರ ಪ್ರದೇಶದ ಬಲರಾಂಪುರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1967ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಗೆದ್ದು 1971ರವರೆಗೆ ಸಂಸದರಾಗಿದ್ದರು. 1971ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ಕ್ಷೇತ್ರದಿಂದ ಆಯ್ಕೆಯಾಗಿ 1977ರವರೆಗೆ ಹುದ್ದೆ ನಿರ್ವಹಿಸಿದರು. 1977ರಿಂದ 1984ರವರೆಗೆ ನವದೆಹಲಿಯ ಲೋಕಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದರು. 1991ರಲ್ಲಿ ಮಧ್ಯಪ್ರ ದೇಶದ ವಿದಿಶಾ ಮತ್ತು ಉತ್ತರ ಪ್ರದೇಶದ ಲಖನೌ ಕ್ಷೇತ್ರಗಳಿಂದ ಸ್ಪರ್ಧಿಸಿದರು. 1996ರಲ್ಲಿ ಗುಜರಾತ್‌ನ ಗಾಂಧಿನಗರ ಹಾಗೂ ಲಖನೌ ಕ್ಷೇತ್ರಗಳಿಂದ ಮತ್ತೆ ಕಣಕ್ಕಿಳಿದರು.
ವಾಜಪೇಯಿ ಗೆದ್ದ ಲೋಕಸಭಾ ಕ್ಷೇತ್ರಗಳು
ಉತ್ತರ ಪ್ರದೇಶ:
• ಬಲರಾಂಪುರ್ – 1957, 1967
• ಲನೌಖ – 1991ರಿಂದ 2004ರವರೆಗೆ ಸತತ ಐದು ಬಾರಿ
ಮಧ್ಯ ಪ್ರದೇಶ:
• ಗ್ವಾಲಿಯರ್ – 1971
• ವಿದಿಶಾ – 1991
ದೆಹಲಿ ಮತ್ತು ಗುಜರಾತ್:
• ಹೊಸದೆಹಲಿ – 1977, 1980
• ಗಾಂಧಿನಗರ – 1996
ಇದಕ್ಕೂ ಮೊದಲು ವಾಜಪೇಯಿ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು—1962ರಲ್ಲಿ ಉತ್ತರ ಪ್ರದೇಶದಿಂದ ಹಾಗೂ 1986ರಲ್ಲಿ ಮಧ್ಯ ಪ್ರದೇಶದಿಂದ.
ಇನ್ನು ಇವರ ಈ ಅಪೂರ್ವ ಸೇವೆಯನ್ನು ಸ್ಮರಿಸುವ ಉದ್ದೇಶದಿಂದಲೇ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಲಾಗುತ್ತಿದೆ. 2014ರ ಡಿಸೆಂಬರ್ 23ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲಾಯಿತು. ಇದರ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ವಾಜಪೇಯಿ ಅವರ ಜನ್ಮದಿನವನ್ನು ಪ್ರತಿವರ್ಷ ಉತ್ತಮ ಆಡಳಿತ ದಿನವಾಗಿ ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು.
ಉತ್ತಮ ಆಡಳಿತ ದಿನದ ಉದ್ದೇಶ ಮತ್ತು ಮಹತ್ವ
ಉತ್ತಮ ಆಡಳಿತ ದಿನದ ಮುಖ್ಯ ಉದ್ದೇಶವು ಸರ್ಕಾರದ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಜವಾಬ್ದಾರಿಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು. ಈ ದಿನದ ಆಚರಣೆ ಸರ್ಕಾರ ಹಾಗೂ ಜನರ ನಡುವಿನ ಸಂಪರ್ಕವನ್ನು ಬಲಪಡಿಸುವ ವೇದಿಕೆಯಾಗಿದ್ದು, ವಿವಿಧ ಕಾರ್ಯಕ್ರಮಗಳು ಮತ್ತು ಅಭಿಯಾನಗಳ ಮೂಲಕ ಆಡಳಿತ ವ್ಯವಸ್ಥೆಯ ಮಹತ್ವವನ್ನು ಜನರಿಗೆ ತಿಳಿಸಲಾಗುತ್ತದೆ. ನಾಗರಿಕರು ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡಿ ವಿಶ್ವಾಸವನ್ನು ಗಟ್ಟಿಗೊಳಿಸುವುದೇ ಈ ದಿನದ ಪ್ರಮುಖ ಆಶಯ.