Bharat Bandh: ನಾಳೆ ಭಾರತ್ ಬಂದ್; ಏನಿರುತ್ತೆ? ಯಾವೆಲ್ಲ ಸೇವೆಗಳು ಅಲಭ್ಯ? ಇಲ್ಲಿದೆ ವಿವರ
ಬುಧವಾರ (ಜು. 9) ಭಾರತ ಬಂದ್‌ಗೆ ಕರೆ ನೀಡಲಾಗಿದ್ದು, ದೇಶಾದ್ಯಂತ ಜನ ಜೀವನದ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತ ಗುಂಪುಗಳ ಬೆಂಬಲದೊಂದಿಗೆ 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಈ ಭಾರತ್ ಬಂದ್‌ಗೆ ಕರೆ ನೀಡಿದೆ. ಬ್ಯಾಂಕ್, ಪೋಸ್ಟ್ ಆಫೀಸ್, ಕಾರ್ಖಾನೆ ಮುಚ್ಚಲಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಬುಧವಾರ (ಜು. 9) ಭಾರತ ಬಂದ್‌ಗೆ (Bharat Bandh) ಕರೆ ನೀಡಲಾಗಿದ್ದು, ದೇಶಾದ್ಯಂತ ಜನ ಜೀವನದ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತ ಗುಂಪುಗಳ ಬೆಂಬಲದೊಂದಿಗೆ 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಈ ಭಾರತ್ ಬಂದ್‌ಗೆ ಕರೆ ನೀಡಿದೆ. ಕೇಂದ್ರ ಸರ್ಕಾರದ ಕಾರ್ಪೋರೇಟ್ ಪರ ನಿಲುವಿಗೆ ವಿರುದ್ಧವಾಗಿ ಈ ಮುಷ್ಕರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕೇಂದ್ರವು ಕಾರ್ಮಿಕರು ಮತ್ತು ರೈತರನ್ನು ನಿರ್ಲಕ್ಷಿಸಿದ್ದು ಇದರ ವಿರುದ್ಧವೂ ಧ್ವನಿ ಎತ್ತಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಬಂದ್ ವಿವಿಧ ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ಬಂದ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೈಗಾರಿಕಾ ಕೇಂದ್ರಗಳು, ಗ್ರಾಮೀಣ ಪ್ರದೇಶಗಳು ಮತ್ತು ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ ನಡೆಸಲು ಸಂಘಟನೆಗಳು ಸಿದ್ದವಾಗಿವೆ.
ಭಾರತ್ ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳು
- ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
- ಇಂಡಿಯನ್‌ನ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
- ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU)
- ಹಿಂದ್ ಮಜ್ದೂರ್ ಸಭಾ (HMS)
- ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC)
- ಸೆಲ್ಫ್ ಎಂಪ್ಲಾಯಿಡ್ ವುಮೆನ್ಸ್ ಅಸೋಸಿಯೇಷನ್ (SEWA)
- ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU)
- ಟ್ರೇಡ್ ಯೂನಿಯನ್ ಕಾರ್ಡಿನೇಷನ್ ಸೆಂಟರ್ (TUCC)
- ಲೇಬರ್ ಪ್ರೊಗ್ರೆಸಿವ್ ಫೆಡರೇಷನ್ (LPF)
- ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC)
ಈ ಸುದ್ದಿಯನ್ನೂ ಓದಿ: Bihar Assembly Election: ಚುನಾವಣೆಗೂ ಮನ್ನ ಮಹಿಳೆಯರಿಗೆ ಭರ್ಜರಿ ಗಿಫ್ಟ್; ಸರ್ಕಾರಿ ಉದ್ಯೋಗಗಳಲ್ಲಿ 35% ಮೀಸಲು ಘೋಷಣೆ
ಯಾವೆಲ್ಲ ಸೇವೆಗಳ ಮೇಲೆ ಪರಿಣಾಮ?
ಬ್ಯಾಂಕ್ ಮುಚ್ಚಲಿದ್ದು, ಚೆಕ್ ಕ್ಲಿಯರೆನ್ಸ್ ಮತ್ತು ಇತರ ಹಣಕಾಸು ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ವಿಮಾ, ಅಂಚೆ ಕಚೇರಿ, ಕಲ್ಲಿದ್ದಲು ಗಣಿಗಾರಿಕೆ ಘಟಕ, ಕಾರ್ಖಾನೆ ಮುಚ್ಚಲಿದೆ. ʼʼಈ ಮುಷ್ಕರವು ಬ್ಯಾಂಕಿಂಗ್, ಅಂಚೆ, ರಾಜ್ಯ ಸಾರಿಗೆ (ಕೇರಳ, ಪಶ್ವಿಮ ಬಂಗಾಳ, ತಮಿಳುನಾಡು, ಪಂಜಾಬ್) ಮತ್ತು ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿದೆʼʼ ಎಂದು ಹಿಂದ್ ಮಜ್ದೂರ್ ಸಭಾದ ಹರ್ಭಜನ್ ಸಿಂಗ್ ಸಧು ತಿಳಿಸಿದ್ದಾರೆ.
ಯಾವೆಲ್ಲ ಸೇವೆಗಳಿಗೆ ವಿನಾಯಿತಿ?
ರೈಲ್ವೆ, ಆರೋಗ್ಯ ಸೇವೆಗಳು, ಖಾಸಗಿ ಕಚೇರಿಗಳು, ಐಟಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬ್ಯಾಂಕ್‌ನ ಡಿಜಿಟಲ್ ಸೇವೆಗಳು ಮತ್ತು ಯುಪಿಐ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.
ಬೇಡಿಕೆಗಳೇನು?
ಕಾರ್ಮಿಕ ಸಂಘಗಳು ಕಳೆದ ವರ್ಷ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ 17 ಅಂಶಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದವು. ಅವು ಈಡೇರದ ಹಿನ್ನೆಲೆಯಲ್ಲಿ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಅವರ ಪ್ರಮುಖ ಬೇಡಿಕೆಗಳು ಹೀಗಿವೆ:
- 4 ಕಾರ್ಮಿಕ ನೀತಿಗಳನ್ನು ಹಿಂಪಡೆಯುವುದು.
- ಸಾರ್ವಜನಿಕ ವಲಯದ ಸಂಸ್ಥೆಗಳ (PSU) ಸಾರ್ವಜನಿಕ ಸೇವೆಗಳ ಖಾಸಗೀಕರಣವನ್ನು ಸ್ಥಗಿತಗೊಳಿಸುವುದು.
- ಕನಿಷ್ಠ ವೇತನ ಖಾತರಿ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುವುದು.
- ಉದ್ಯೋಗಿಗಳನ್ನು ಖಾಯಂಗೊಳಿಸುವುದು.
- ಭಾರತೀಯ ಕಾರ್ಮಿಕ ಸಮ್ಮೇಳನದ ಪುನಃಸ್ಥಾಪನೆ
- ಆರೋಗ್ಯ, ಶಿಕ್ಷಣ ಮತ್ತು ಸಾರ್ವಜನಿಕ ಕಲ್ಯಾಣದಲ್ಲಿ ಹೆಚ್ಚಿನ ಹೂಡಿಕೆ