ನವದೆಹಲಿ, ಅ. 7: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಸೇವೆ ಪೂರೈಸಿದ್ದಕ್ಕಾಗಿ ವಿಶ್ವದಾದ್ಯಂತದ ನಾಯಕರಿಂದ ಅಭಿನಂದನಾ ಸಂದೇಶಗಳು ಬರುತ್ತಿವೆ. ಭೂತಾನ್, ಜಪಾನ್, ಬೆಲ್ಜಿಯಂ, ಡೊಮಿನಿಕಾ ಮತ್ತು ನೈಜೀರಿಯಾದವರೆಗೆ ಹಲವು ದೇಶಗಳ ನಾಯಕರು ಈ ಮೈಲುಗಲ್ಲನ್ನು ಗುರುತಿಸಿ, ಮೋದಿ ಅವರ ರಾಜಕೀಯ ಜೀವನಕ್ಕೆ ಮೆಚ್ಚುಗೆ ಮತ್ತು ಗೌರವ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ರಾಜಕೀಯ ಪಯಣವು 2001ರಲ್ಲಿ ಗುಜರಾತ್‌ನಿಂದ ಆರಂಭವಾಗಿದ್ದು, 2014ರಲ್ಲಿ ಪ್ರಧಾನಮಂತ್ರಿಯಾದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಮುಂದುವರಿದಿದೆ.
ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೆ ಮೋದಿ ಅವರನ್ನು ವಿಷ್ಣುವಿನ ಅವತಾರ ಎಂದು ಕರೆದಿದ್ದಾರೆ. 2019ರಲ್ಲೇ ಮೋದಿ ವಿಷ್ಣುವಿನ ಅವತಾರ ಇರಬಹುದು ಎಂದು ಭಾವಿಸಿದ್ದಾಗಿ ಹೇಳಿದ್ದಾರೆ. ಬಳಿಕ ತಾನು ವಿಷ್ಣುವಿನ ಅಂತಿಮ ಅವತಾರವಾದ ಕಲ್ಕಿ ಅವತಾರ ಇರಬಹುದು ಎಂದು ಯೋಚಿಸುತ್ತಿದ್ದೆ ಅವರು ತಿಳಿಸಿದ್ದಾರೆ.
2019ರಲ್ಲಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭವನ್ನು ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೆ ನೆನಪಿಸಿಕೊಂಡಿದ್ದಾರೆ. ಆ ವೇಳೆ ಅವರು ಮೋದಿ ಅವರಿಗೆ “ನಾನು ನಿಮ್ಮನ್ನು ವಿಷ್ಣುವಿನ ಅವತಾರವಾಗಿ ನೋಡುತ್ತೇನೆ” ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಮೋದಿ ಅವರ ರಾಜಕೀಯ ಪಯಣ ಮತ್ತು ನಾಯಕತ್ವವನ್ನು ಪರಾಮರ್ಶಿಸಿದ ಅವರು, ಮೋದಿ ಅವರನ್ನು ವಿಷ್ಣುವಿನ ಅವತಾರ ಎಂದು ನೋಡಿದ್ದು ಸರಿಯೇ ಆಗಿತ್ತು ಎಂಬ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.
ಭೂತಾನ್ ಪ್ರಧಾನಿ ಪೋಸ್ಟ್:
ತೊಬ್ಗೆ ಮೋದಿ ಅವರ ನಾಯಕತ್ವದ ಬಗ್ಗೆ ತಮ್ಮ ವೈಯಕ್ತಿಕ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಅವರನ್ನು ವಿಷ್ಣುವಿನ ಅವತಾರಕ್ಕೆ ಹೋಲಿಸಿದ್ದಾರೆ. ಇಬ್ಬರೂ ಮತ್ತೆ 2024ರ ಮಾರ್ಚ್‌ನಲ್ಲಿ ಭೇಟಿಯಾದಾಗ ತಾನು 2019ರಲ್ಲಿ ಹೇಳಿದ್ದ ಮಾತುಗಳನ್ನು ಮತ್ತೊಮ್ಮೆ ನೆನಪಿಸಿದ್ದು, ಆಗ ಯಾವ ಅವತಾರದ ಬಗ್ಗೆ ಮಾತನಾಡಿದ್ದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಮೋದಿ ಅವರಿಗೆ ತಿಳಿಸಿದ್ದಾಗಿ ತೊಬ್ಗೆ ಹೇಳಿದ್ದಾರೆ.
ಚಾಯ್ ವಾಲಾನಿಂದ ಪ್ರಧಾನಿವರೆಗೆ: ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ನರೇಂದ್ರ ಮೋದಿ ಜರ್ನಿ ಇಲ್ಲಿದೆ
“ವಿಷ್ಣುವಿನ ಅಂತಿಮ ಅವತಾರ ಅರಾಜಕತೆಯನ್ನು ನಿವಾರಿಸಿ, ಧರ್ಮವನ್ನು ಪುನಃ ಸ್ಥಾಪಿಸಿ, ಹೊಸ ಯುಗಕ್ಕೆ ನಾಂದಿ ಹಾಡುವ ಅವತಾರ ಅಂದರೆ ಕಲ್ಕಿ” ಎಂದು ತೊಬ್ಗೆ ಬರೆದಿದ್ದಾರೆ. ಉತ್ತಮ ಭವಿಷ್ಯದ ಸ್ಪಷ್ಟ ದೃಷ್ಟಿಕೋನದಿಂದಲೇ ಜ್ಞಾನ ಆರಂಭವಾಗುತ್ತದೆ ಎಂದು ತೊಬ್ಗೆ ಹೇಳಿದ್ದಾರೆ. ಪ್ರಧಾನಿ ಮೋದಿ ಭಾರತಕ್ಕೆ ಒಂದು ಗುರಿ, ಆ ಗುರಿ ಸಾಧಿಸಲು ಒಂದು ಕಾಲಮಿತಿ ಮತ್ತು ಒಂದು ರಾಷ್ಟ್ರೀಯ ಉದ್ದೇಶವನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಭಾರತದ ಸಾಮರ್ಥ್ಯದ ಬಗ್ಗೆ ಭಾರತೀಯರು ಇನ್ನಷ್ಟು ಬಲವಾದ ವಿಶ್ವಾಸ ಹೊಂದುವಂತೆ ಮೋದಿ ಪ್ರೇರೇಪಿಸಿದ್ದಾರೆ ಎಂದು ತೊಬ್ಗೆ ಪ್ರಶಂಸಿಸಿದ್ದಾರೆ.
ಭೂತಾನ್ ದೃಷ್ಟಿಯಿಂದ, ಭಾರತ ಮತ್ತಷ್ಟು ಬಲಿಷ್ಠವಾಗುವುದೆಂದರೆ ಭೂತಾನ್ ಕೂಡ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ತ್ಶೆರಿಂಗ್ ತೊಬ್ಗೆ ಹೇಳಿದ್ದಾರೆ. ವಿಕಸಿತ ಭಾರತ ಎಂದರೆ ವಿಕಸಿತ ಭೂತಾನ್ ಎಂದ ಅವರು 2014ರಲ್ಲಿ ಪ್ರಧಾನಿ ಮೋದಿ ತಮ್ಮ ದೇಶಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿತ್ತು. ಭೂತಾನ್‌ಗಾಗಿ ಭಾರತ; ಭಾರತಕ್ಕಾಗಿ ಭೂತಾನ್ ಎಂದು ತೊಬ್ಗೆ ವ್ಯಾಖ್ಯಾನಿಸಿದ್ದಾರೆ.
ಭೂತಾನ್‌ನ ಅಭಿವೃದ್ಧಿ ಯೋಜನೆಗಳಿಗೆ ಭಾರತ ನೀಡಿರುವ ಬೆಂಬಲವನ್ನೂ ತೊಬ್ಗೆ ಸ್ಮರಿಸಿದ್ದಾರೆ. ಜತೆಗೆ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಸಹಕಾರ ಹೆಚ್ಚುತ್ತಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.