ಚಾಯ್ ವಾಲಾನಿಂದ ಪ್ರಧಾನಿವರೆಗೆ: ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ನರೇಂದ್ರ ಮೋದಿ ಜರ್ನಿ ಇಲ್ಲಿದೆ
PM Modi Completing 25 Years In Office: ಪ್ರಧಾನಿ ನರೇಂದ್ರ ಮೋದಿ ಬುಧವಾರ (ಅಕ್ಟೋಬರ್ 7) ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನ ಮಂತ್ರಿಯಾಗಿ ತಮ್ಮ 25 ವರ್ಷಗಳ ಸಾರ್ವಜನಿಕ ಸೇವೆ ಪೂರ್ಣಗೊಳಿಸಿದ್ದಾರೆ. 2001ರ ಅಕ್ಟೋಬರ್ 7ರಂದು ಗುಜರಾತ್ ಸಿಎಂ ಆಗಿ ಮೊದಲ ಬಾರಿ ಅಧಿಕಾರ ವಹಿಸಿಕೊಂಡ ಮೋದಿ, ಸತತ 12 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಮುನ್ನಡೆಸಿದರು. 2014ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ ಅವರು, ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಎನ್ಡಿಎ ಮೈತ್ರಿಕೂಟವನ್ನು ವಿಜಯದತ್ತ ಮುನ್ನಡೆಸಿದ್ದಲ್ಲದೇ ಪ್ರಧಾನಿ ಮಂತ್ರಿಯಾಗಿ ಆಯ್ಕೆಯಾದರು. ಸಾರ್ವಜನಿಕ ಜೀವನದಲ್ಲಿ 25 ವರ್ಷದ ಪೂರೈಸಿದ ಅವರು ಬುಧವಾರ ದೆಹಲಿಯ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅವರ ಅಪರೂಪದ ಫೋಟೊ, ಹೋರಾಟದ ಬದುಕು ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ವಡ್ನಗರದಲ್ಲಿ ಜನನ
ನರೇಂದ್ರ ಮೋದಿ ಗುಜರಾತ್ನ ವಡ್ನಗರದಲ್ಲಿ 1950ರ ಸೆಪ್ಟೆಂಬರ್ 17ರಂದು ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು.1985ರಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದು, 2001ರಲ್ಲಿ ಮೊದಲ ಬಾರಿ ಗುಜರಾತ್ನ ಮುಖ್ಯಮಂತ್ರಿಯಾಗಿ ಮತ್ತು 2014ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಾಲ್ಯದಲ್ಲಿ ಚಾಯ್ ವಾಲಾ
ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮೋದಿ ಆರಂಭದಲ್ಲಿ ತಮ್ಮ ಕುಟುಂಬದ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಚಾಯ್ ವಾಲಾ ಆಗಿದ್ದ ಅವರು ಅತೋ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾದ ಜರ್ನಿಯೇ ರೋಚಕ.
ಆರ್ಎಸ್ಎಸ್ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶ
8ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ತಮ್ಮ ವೃತ್ತಿ ಬದುಕಿನ ಪ್ರಯಾಣ ಆರಂಭಿಸಿದ ಅವರು 1972ರಲ್ಲಿ ಪ್ರಚಾರಕರಾಗಿ, 1980ರ ದಶಕದಲ್ಲಿ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸಿಕೊಂಡು 1987ರಲ್ಲಿ ಬಿಜೆಪಿಯ ಗುಜರಾತ್ ಘಟಕಕ್ಕೆ ಸೇರಿಕೊಂಡರು.
4 ಬಾರಿ ಮುಖ್ಯಮಂತ್ರಿ
ನರೇಂದ್ರ ಮೋದಿ ಒಟ್ಟು 4 ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆರಂಭದಲ್ಲಿ 2001ರಲ್ಲಿ ಮೊದಲ ಬಾರಿ ಸಿಎಂ ಆಗಿ ಆಯ್ಕೆಯಾದ ಮೋದಿ 2002ರ ಚುನಾವಣೆಯಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. 2007ರಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾದರು. 4ನೇ ಬಾರಿ ಮೋದಿ 2012ರಲ್ಲಿ ಮುಖ್ಯಮಂತ್ರಿಯಾದರು. 2014ರಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರ ರಾಜಕೀಯಕ್ಕೆ ಬಂದರು.
ಹ್ಯಾಟ್ರಿಕ್ ಪಿಎಂ ಪಟ್ಟ
ರಾಷ್ಟ್ರ ರಾಜಕೀಯದಲ್ಲಿ ಪ್ರಭಾವ ಬೀರಿದ ಮೋದಿ ಸತತ 3 ಬಾರಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ಮೊದಲ ಬಾರಿ ಪ್ರಧಾನ ಮಂತ್ರಿಯಾದ ಮೋದಿ ಬಳಿಕ 2019 ಮತ್ತು 2024ರಲ್ಲಿ ಹೀಗೆ ಸತತ 3 ಸಲ ಪಿಎಂ ಆಗಿ ನೇಮಕವಾದರು.
ಆರ್ಥಿಕ ಬೆಳವಣಿಗೆಗೆ ಕೊಡುಗೆ
ಗುಜರಾತ್ನ ಮುಖ್ಯಮಂತ್ರಿಯಾಗಿ ಮೋದಿ ತೆಗೆದುಕೊಂಡ ನೀತಿಗಳು ಆರ್ಥಿಕ ಬೆಳವಣಿಗೆಗೆ ಕಾರಣವಾಗಿವೆ. ವ್ಯವಹಾರ ಮತ್ತು ಹೂಡಿಕೆಗೆ ಉತ್ತೇಜನ ನೀಡಿ ಜನಪ್ರಿಯ ಯೋಜನೆಗಳ ಕೊಡುಗೆ ನೀಡಿದ್ದಾರೆ.
ಕೋವಿಡ್ ಕಾಲದ ಹೋರಾಟ
2020ರಲ್ಲಿ ಜಗತ್ತನ್ನೇ ಕಾಡಿದ ಕೋವಿಡ್ ಭಾರತದ ಮೇಲೂ ಪರಿಣಾಮ ಬೀರಿತ್ತು. ಈ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಜನಸ್ನೇಹಿ ಕ್ರಮಗಳನ್ನು ಪರಿಚಯಿಸಿತು. ವ್ಯಾಕ್ಸಿನ್ ಕಂಡು ಹಿಡಿದು ಮಾರಣ ಹೋಮಕ್ಕೆ ತಡೆ ಒಡ್ಡಿತು.
ರಾಮ ಮಂದಿರ ಉದ್ಘಾಟನೆ
ಭಾರತದ ಬಹುನಿರೀಕ್ಷಿತ ಧಾರ್ಮಿಕ ಯೋಜನೆಗಳಲ್ಲಿ ಒಂದಾದ ಅಯೋಧ್ಯೆ ರಾಮ ಮಂದಿರವನ್ನು 2024ರ ಜನವರಿಯಲ್ಲಿ ಉದ್ಘಾಟಿಸಲಾಯಿತು. ಮಂದಿರದ ಮುಖ್ಯ ಗರ್ಭಗುಡಿಯಲ್ಲಿ ನಡೆದ ಪ್ರಾಣಪ್ರತಿಷ್ಠಾಪನಾ ಮಹೋತ್ಸವವು ವಿಶ್ವಾದ್ಯಂತ ಇರುವ ಕೋಟ್ಯಂತರ ಹಿಂದೂಗಳಿಗೆ ಒಂದು ಐತಿಹಾಸಿಕ ಕ್ಷಣವಾಗಿ ಮೂಡಿಬಂತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಇದೇ ಮೋದಿ ನೇತೃತ್ವದ ಸರ್ಕಾರ.
70 ನೇ ವಿಧಿಯ ರದ್ದು
2019ರ ಆಗಸ್ಟ್ನಲ್ಲಿ ಕೇಂದ್ರ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿತು. ಆ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು, ಅದನ್ನು ಭಾರತೀಯ ಒಕ್ಕೂಟದೊಂದಿಗೆ ಸಂಯೋಜಿಸಲಾಯಿತು. ಇದು ದೇಶದ ಅತ್ಯಂತ ಪ್ರಮುಖ ಸಾಂವಿಧಾನಿಕ ಸುಧಾರಣೆಗಳಲ್ಲಿ ಒಂದು ಎನಿಸಿಕೊಂಡಿದೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟದಂತಹ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ.
4ನೇ ಅತಿ ದೊಡ್ಡ ಆರ್ಥಿಕ ಶಕ್ತಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.