ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar election 2025: ಬಿಹಾರ ಚುನಾವಣೆ: ಮೊದಲ ಹಂತದಲ್ಲಿ ದಾಖಲೆಯ ಮತದಾನ

ಬಿಹಾರ ವಿಧಾನ ಸಭೆಗೆ (Bihar Assembly election 2025) ಮೊದಲ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಶೇ. 64.66ರಷ್ಟು ಮತದಾನವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿದೆ. ಇದು ಯಾರಿಗೆ ಲಾಭದಾಯಕವಾಗಬಹುದು, ಯಾರಿಗೆ ನಷ್ಟವಾಗುವ ಸಾಧ್ಯತೆಗಳಿವೆ ಎನ್ನುವ ಲೆಕ್ಕಾಚಾರಗಳು ಈಗಾಗಲೇ ಪ್ರಾರಂಭವಾಗಿವೆ.

ಬಿಹಾರ: ಮೊದಲ ಹಂತದಲ್ಲಿ ಶೇ.  64.66ರಷ್ಟು ಮತದಾನ

ಬಿಹಾರ ವಿಧಾನ ಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ನಡೆಯಿತು. (ಸಂಗ್ರಹ ಚಿತ್ರ) -

ಬಿಹಾರ: ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನ ಸಭಾ ಚುನಾವಣೆಯ (Bihar assembly election) ಮೊದಲ ಹಂತದ (bihar Phase 1 polls) ಮತದಾನ (bihar voting) ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಈ ಬಾರಿ ಹೆಚ್ಚಿನ ಮತದಾನವಾಗಿದ್ದು ಮೊದಲ ಹಂತದಲ್ಲಿ ಶೇ. 64.66ರಷ್ಟು ಮತದಾನವಾಗಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ (Bihar polls) ಶೇ. 56.1ರಷ್ಟು ಮತದಾನವಾಗಿತ್ತು. ಇದನ್ನು ಗಮನಿಸಿದರೆ ಈ ಬಾರಿ ಬಿಹಾರದಲ್ಲಿ (Bihar) ಅತ್ಯಧಿಕ ಮತದಾನವಾಗಿದೆ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ.

ಬಿಹಾರ ವಿಧಾನ ಸಭೆಗೆ ಗುರುವಾರ ನಡೆದ ಚುನಾವಣೆಯ ಮೊದಲ ಹಂತದಲ್ಲಿ ಶೇ. 64.66ರಷ್ಟು ದಾಖಲೆಯ ಮತದಾನವಾಗಿದೆ. 2020ರಲ್ಲಿ ಶೇ. 56.1ರಷ್ಟು ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ಈ ಬಾರಿ ಶೇ.8.5 ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ. ಚುನಾವಣಾ ಕಣದಲ್ಲಿ ಪ್ರಮುಖ ಸ್ಪರ್ಧಿಗಳಾಗಿರುವ ಎನ್‌ಡಿಎ ಮತ್ತು ಮಹಾಘಟಬಂಧನ್ ಎರಡು ಕೂಡ ಇದು ತಮಗೆ ಲಾಭದಾಯಕ ಎಂದು ಬಣ್ಣಿಸಿದೆ.

ಇದನ್ನೂ ಓದಿ: Sunil Chhetri: 2025-26ರ ಐಎಸ್‌ಎಲ್ ನಂತರ ವೃತ್ತಿಪರ ಫುಟ್ಬಾಲ್‌ಗೆ ಸುನಿಲ್ ಛೆಟ್ರಿ ನಿವೃತ್ತಿ

ಬಿಹಾರ ವಿಧಾನಸಭೆಗೆ ಎರಡನೇ ಹಂತದ ಮತದಾನವು ನವೆಂಬರ್ 11 ರಂದು ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶಗಳು ಹೊರಬೀಳಲಿವೆ. 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆದಿದೆ. ವಾರದ ದಿನವಾದರೂ ಒಟ್ಟು 3.75 ಕೋಟಿ ಮತದಾರರು ಮತ ಚಲಾಯಿಸಿದರು. 2020ರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 3.70 ಕೋಟಿ ಅರ್ಹ ಮತದಾರರಲ್ಲಿ 2.06 ಕೋಟಿ ಜನರು ತಮ್ಮ ಮತ ಚಲಾಯಿಸಿದ್ದರು. .ಈ ಬಾರಿ ಹೆಚ್ಚಿನ ಮತದಾನವಾಗಿರುವುದು ಆಡಳಿತ ವಿರೋಧಿ ಅಲೆಯ ಸಂಕೇತವೆಂದು ಬಣ್ಣಿಸಲಾಗುತ್ತಿದೆ.

ಇತಿಹಾಸ ಏನು ಹೇಳಿದೆ?

ಬಿಹಾರದ ಚುನಾವಣಾ ಇತಿಹಾಸವು ಮತದಾರರ ಮತದಾನವು ಶೇ. 5ಕ್ಕಿಂತ ಹೆಚ್ಚಾದಾಗಲೆಲ್ಲಾ ಅದು ಸರ್ಕಾರದ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು ಸೂಚಿಸುತ್ತದೆ. 1967ರಲ್ಲಿ ಮತದಾನದ ಪ್ರಮಾಣದಲ್ಲಿ ಶೇ. 7ರಷ್ಟು ಹೆಚ್ಚಳವಾಗಿ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರವನ್ನು ಕಳೆದುಕೊಂಡಿತು. ಕಾಂಗ್ರೆಸ್ಸೇತರ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಿತ್ತು. 1980ರಲ್ಲಿ ಮತದಾನದ ಪ್ರಮಾಣ ಸುಮಾರು ಶೇ. 7ರಷ್ಟು ಹೆಚ್ಚಳವಾಗಿ ಜನತಾ ಪಕ್ಷದ ಸರ್ಕಾರದ ಪತನಗೊಂಡು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಿತ್ತು.

1990ರಲ್ಲಿ ಮತದಾನ ಪ್ರಮಾಣವು ಮತದಾನದ ಪ್ರಮಾಣ ಶೇ. 5.8ರಷ್ಟು ಏರಿಕೆಯಾಗಿದ್ದು, ಕಾಂಗ್ರೆಸ್ ಅಧಿಕಾರ ಕರೆದುಕೊಂಡು ಲಾಲು ಪ್ರಸಾದ್ ಯಾದವ್ ಅವರ ಜನತಾದಳ ಅಧಿಕಾರ ಗಿಟ್ಟಿಸಿಕೊಂಡಿತ್ತು. 2005ರಲ್ಲಿ ಮತದಾನದ ಪ್ರಮಾಣ ಶೇ. 16ರಷ್ಟು ಕುಸಿದರೂ ಜೆಡಿಯುನ ನಿತೀಶ್ ಕುಮಾರ್ ಮೊದಲ ಬಾರಿಗೆ ಅಧಿಕಾರಕ್ಕೇರಿದರು. ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನ ಹೆಚ್ಚಳವಾಗಿದೆ. ಇದರಿಂದ ಇತಿಹಾಸ ಪುನರಾವರ್ತನೆಯಾಗುವುದೋ ಎಂಬುದನ್ನು ಕಾದುನೋಡಬೇಕು.

2020 ರ ಚುನಾವಣೆಯಲ್ಲಿ 121 ಸ್ಥಾನಗಳಲ್ಲಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್ 61 ಸ್ಥಾನಗಳನ್ನು ಗೆದ್ದಿದ್ದು, ಎನ್‌ಡಿಎ 59 ಸ್ಥಾನಗಳನ್ನು ಗಳಿಸಿತ್ತು. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ 42 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿ 32, ಜೆಡಿ (ಯು) 23 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದುಕೊಂಡಿದ್ದವು.

ಇದನ್ನೂ ಓದಿ: Vande Mataram 150 Years: ವಂದೇ ಮಾತರಂ ಗೀತೆಯ ಪರಂಪರೆ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

2020ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ ಚಿರಾಗ್ ಪಾಸ್ವಾನ್ ಮತ್ತು ಉಪೇಂದ್ರ ಕುಶ್ವಾಹ ಅವರು ಈ ಬಾರಿ ಎನ್‌ಡಿಎ ಜೊತೆ ಸೇರಿದ್ದಾರೆ. ಮುಖೇಶ್ ಸಹಾನಿ ಅವರ ವಿಐಪಿ ಈಗ ಮಹಾಘಟಬಂಧನ್ ಮೈತ್ರಿಕೂಟ ಸೇರ್ಪಡೆಗೊಂಡಿದೆ. ಈ ಬಾರಿ ಸಮಾಜವಾದಿ ನಾಯಕ ನಿತೀಶ್ ಕುಮಾರ್ ಅವರ ಕೊನೆಯ ಚುನಾವಣೆ ಎಂದೇ ಹೇಳಲಾಗುತ್ತಿದೆ. ಅಲ್ಲದೇ ಜೆಡಿಯು ಈ ಬಾರಿ 10 ನೇ ಅವಧಿಗೆ ಮುಖ್ಯಮಂತ್ರಿ ಹೊಂದುವ ನಿರೀಕ್ಷೆ ಇಟ್ಟುಕೊಂಡಿದೆ. ತೇಜಸ್ವಿ ನೇತೃತ್ವದ ಆರ್‌ಜೆಡಿ ಮತ್ತೆ ಅಧಿಕಾರದ ಮೇಲೆ ಕಣ್ಣಿಟ್ಟಿದೆ. ಇವೆಲ್ಲವೂ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.