Crime News: ಅಬ್ಬಾ... ಎಂಥಾ ಘೋರ ಘಟನೆ! ಸಲಿಂಗ ಪ್ರೇಮಕ್ಕೆ 5ತಿಂಗಳ ಮಗುವನ್ನೇ ಕೊಂದ ಪಾಪಿ ತಾಯಿ
5-Month-Old Baby Killed: ಐದು ತಿಂಗಳ ಮಗುವನ್ನು ಸಲಿಂಗ ಜೋಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಳಮಂಗಲಂನಲ್ಲಿ ನವೆಂಬರ್ 2ರಂದು ನಡೆದಿದೆ. ಮಗುವಿನ ತಾಯಿ ಹಾಗೂ ಆಕೆಯ ಜೊತೆಗಾತಿ ಸೇರಿ ಶಿಶುವನ್ನು ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಸಲಿಂಗ ಪ್ರೇಮಕ್ಕೆ 5ತಿಂಗಳ ಮಗುವನ್ನೇ ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. -
ಕೃಷ್ಣಗಿರಿ: ಐದು ತಿಂಗಳ ಮಗುವನ್ನು ಕೊಂದ (Baby Killed) ಆರೋಪದ ಮೇಲೆ ಸಲಿಂಗ ಜೋಡಿಯನ್ನು (gay couple) ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, 25 ವರ್ಷದ ಯುವತಿಯು ತನ್ನ ಸಲಿಂಗಿ ಜೊತೆಗಾತಿಯೊಂದಿಗೆ ಸೇರಿಕೊಂಡು ಮಗುವನ್ನು ಹತ್ಯೆ ಮಾಡುವ ಮೂಲಕ ನೀಚ ಕೃತ್ಯ ಎಸಗಿದ್ದಾಳೆ (Crime News). ನವೆಂಬರ್ 2ರಂದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಳಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಕೆಳಮಂಗಲ ಸಮೀಪದ ಚಿನ್ನತ್ತಿ ಗ್ರಾಮದ ಎಸ್. ಭಾರತಿ ಹಾಗೂ ಆಕೆಯ ಸಲಿಂಗಿ ಜೊತೆಗಾತಿ, ಅದೇ ಗ್ರಾಮದ 22 ವರ್ಷದ ಸುಮಿತ್ರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭಾರತಿಯು ಸುರೇಶ್ ಎಂಬಾತನನ್ನು ಮದುವೆಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದರು. ಐದು ಮತ್ತು ಮೂರು ವರ್ಷದ ಹೆಣ್ಣು ಮಕ್ಕಳು ಹಾಗೂ ಮೃತಪಟ್ಟ ಮಗು 5 ತಿಂಗಳ ಗಂಡು ಮಗು ಧ್ರುವನ್ ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: Crime News: ಮತ್ತೊಂದು ವೈಶಾಚಿಕ ಕೃತ್ಯ; ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ
ಭಾರತಿಯು ಅದೇ ಗ್ರಾಮದ ಸುಮಿತ್ರಾ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಕೂಡಲೇ ಪತಿ ಸುರೇಶ್ ಕೋಪಗೊಂಡಿದ್ದಾರೆ. ಇದು ಗಂಡ-ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಗಿದೆ. ಇದರಿಂದ ಈ ದಂಪತಿಯ ಮಕ್ಕಳನ್ನು ಸುರೇಶ್ ಸಹೋದರಿ ನೋಡಿಕೊಳ್ಳುತ್ತಿದ್ದರು. ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯ ತೀವ್ರವಾಗುತ್ತಿದ್ದಂತೆ ಭಾರತಿ ಗಂಡನ ಮನೆ ಬಿಟ್ಟು, ತನ್ನ ತವರು ಮನೆ ಕುಂತುಮಾರನಪಲ್ಲಿ ಗ್ರಾಮಕ್ಕೆ ತೆರಳಿದಳು.
ಕೊನೆಗೆ ಕುಟುಂಬಸ್ಥರು ಮಧ್ಯಸ್ಥಿಕೆ ನಡೆಸಿ ಆಕೆಯನ್ನು ಮತ್ತೆ ಗಂಡನ ಮನೆಗೆ ಕಳುಹಿಸಲಾಯಿತು. ಮತ್ತೆ ಪತಿ ಮನೆಗೆ ಬಂದ ಭಾರತಿ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ಮನೆಗೆ ಬಂದ ಪತಿ ಹಾಗೂ ಮನೆಯವರಿಗೆ ಮಗು ಉಸಿರುಗಟ್ಟಿ ಮೃತಪಟ್ಟಿತು ಎಂದು ಹೇಳಿ ನಂಬಿಸಿದ್ದಾಳೆ. ಇದನ್ನು ನಂಬಿದ ಕುಟುಂಬಸ್ಥರು ಮಗುವಿನ ಮೃತದೇಹದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಆದರೆ, ಏನೋ ಸರಿಯಿಲ್ಲ ಎಂದು ಅನುಮಾನಗೊಂಡ ಪತಿ ಸುರೇಶ್, ಮಂಗಳವಾರದಂದು ಕೆಳಮಂಗಲಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಗು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಭಾರತಿಯೇ ಮಗುವನ್ನು ಕೊಂದಿದ್ದಾಳೆ ಎಂಬುದು ತಿಳಿದು ಬಂದಿದೆ. ಮಗುವನ್ನು ಕೊಲ್ಲಲು ಆಕೆಯ ಸಲಿಂಗಿ ಜೋಡಿ ಸುಮಿತ್ರಾ ಕೂಡ ಕುಮ್ಮಕ್ಕು ನೀಡಿದ್ದಾಳೆ ಎಂಬುದು ತನಿಖೆಯಿಂದ ತಿಳಿದು ಬಂದಿದೆಯ
ಕೂಡಲೇ ಕ್ರಮ ಕೈಗೊಂಡ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಅವರಿಬ್ಬರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತಿ ಹಾಗೂ ಸುಮಿತ್ರಾಳು ಮಗುವನ್ನು ಕೊಲ್ಲುವ ಬಗ್ಗೆ ಮಾಡಿರುವ ಮೆಸೇಜ್ ಹಾಗೂ ಮಗು ಮೃತಪಟ್ಟ ನಂತರ ಅದರ ದೇಹದ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆರೋಪಿಗಳಾದ ಭಾರತಿ ಹಾಗೂ ಸುಮಿತ್ರಾಳ ಫೋಟೋ ಹಾಗೂ ವಿಡಿಯೊಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಾಗಿರುವ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.