ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bike Accident: ಕಂದಕದಲ್ಲಿ ಬಿದ್ದ ದೆಹಲಿ ಯುವಕ ಕೊನೆಯ ಬಾರಿಗೆ ಫೋನ್‌ನಲ್ಲಿ ಹೇಳಿದ್ದೇನು?

ದೆಹಲಿಯಲ್ಲಿ 25 ವರ್ಷದ ಬೈಕ್ ಸವಾರ ಕಮಲ್ ಧ್ಯಾನಿ ತೆರೆದ ಒಳಚರಂಡಿ ಗುಂಡಿಗೆ ಬಿದ್ದು ಸುಮಾರು ಎಂಟು ಗಂಟೆಗಳ ಕಾಲ ನರಳಾಡಿ ಸಾವನ್ನಪ್ಪಿದ್ದಾರೆ. ಅಪಘಾತವನ್ನು ಕನಿಷ್ಠ ಐದು ಜನರು ಗಮನಿಸಿದ್ದರೂ, ಯಾರೂ ಪೊಲೀಸರಿಗೆ ಅಥವಾ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿಲ್ಲ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಮೃತರು ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು

ತೆರೆದ ಒಳಚರಂಡಿಗೆ ಬಿದ್ದು ಬೈಕ್ ಸವಾರ ಸಾವು

ಅಪಘಾತದ ದೃಶ್ಯ -

Profile
Sushmitha Jain Feb 8, 2026 9:14 PM

ನವದೆಹಲಿ: ದೆಹಲಿಯ 25 ವರ್ಷದ ಬೈಕ್ ಸವಾರನೊಬ್ಬ(Biker Death) ತೆರೆದ ಒಳಚರಂಡಿ ಗುಂಡಿಗೆ(Open Drain) ಬಿದ್ದು ಸುಮಾರು ಎಂಟು ಗಂಟೆಗಳ ಕಾಲ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದಾನೆ. ಕನಿಷ್ಠ ಐದು ಜನರಿಗೆ ಈ ಅಪಘಾತದ(Delhi Accident) ಬಗ್ಗೆ ತಿಳಿದಿದ್ದರೂ, ಯಾರೊಬ್ಬರೂ ಪೊಲೀಸರಿಗಾಗಲಿ ಅಥವಾ ರಕ್ಷಣಾ ತಂಡಕ್ಕಾಗಲಿ ಮಾಹಿತಿ ನೀಡದಿರುವುದು ತನಿಖೆಯಲ್ಲಿ ಬಯಲಾಗಿದೆ.

ಮೃತ ಯುವಕನನ್ನು ಕಮಲ್ ಧ್ಯಾನಿ ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಕಮಲ್ ಧ್ಯಾನಿ, ಶುಕ್ರವಾರ ತಡರಾತ್ರಿ ಬೈಕ್‌ನಲ್ಲಿ ಬರುತ್ತಿರುವಾಗ ಜನಕಪುರಿಯಲ್ಲಿ ದೆಹಲಿ ಜಲ ಮಂಡಳಿ (DJB) ಒಳಚರಂಡಿ ಕೆಲಸಕ್ಕಾಗಿ ಅಗೆದಿದ್ದ 15-20 ಅಡಿ ಆಳದ ಗುಂಡಿಗೆ ಬಿದ್ದಿದ್ದಾನೆ. ಈ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಯಾವುದೇ ಬ್ಯಾರಿಕೇಡ್‌ಗಳಾಗಲಿ, ಎಚ್ಚರಿಕೆ ಫಲಕಗಳಾಗಲಿ ಅಥವಾ ಕತ್ತಲೆಯಲ್ಲಿ ಕಾಣುವ ರಿಫ್ಲೆಕ್ಟರ್‌ಗಳಾಗಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 47 ವರ್ಷದ ಸಬ್ ಕಾಂಟ್ರ್ಯಾಕ್ಟರ್ ರಾಜೇಶ್ ಕುಮಾರ್ ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ 'ನರಹತ್ಯೆ' (Culpable homicide not amounting to murder) ಪ್ರಕರಣ ದಾಖಲಿಸಲಾಗಿದೆ.

Bus fire accident: ಮತ್ತೊಂದು ಖಾಸಗಿ ಬಸ್‌ ಧಗಧಗ, ನೆಲಮಂಗಲದಲ್ಲಿ 40 ಪ್ರಯಾಣಿಕರಿದ್ದ ಬಸ್‌ ಬೆಂಕಿಗಾಹುತಿ

ತನಿಖೆಯಲ್ಲಿ ಬಯಲಾದ ಆಘಾತಕಾರಿ ಅಂಶ

ವರದಿಗಳ ಪ್ರಕಾರ ರಾತ್ರಿ 12 ಗಂಟೆ ಸುಮಾರಿಗೆ ಕಮಲ್ ತನ್ನ ಸ್ನೇಹಿತನಿಗೆ ಫೋನ್ ಮಾಡಿ "ಇನ್ನೇನು ಕೆಲವು ನಿಮಿಷಗಳಲ್ಲಿ ಮನೆ ತಲುಪುತ್ತೇನೆ" ಎಂದು ಹೇಳಿದ ಸ್ವಲ್ಪ ಹೊತ್ತಿನಲ್ಲೇ ಗುಂಡಿಗೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಮದುವೆ ಸಮಾರಂಭದಿಂದ ಮರಳುತ್ತಿದ್ದ ವಿಪಿನ್ ಸಿಂಗ್ ಎಂಬುವವರು ಬೈಕ್ ಗುಂಡಿಗೆ ಬೀಳುವುದನ್ನು ಕಂಡು ಹತ್ತಿರದ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಆ ಭದ್ರತಾ ಸಿಬ್ಬಂದಿಯು ಯೋಗೇಶ್ ಎಂಬ ಕಾರ್ಮಿಕನಿಗೆ ಮಾಹಿತಿ ನೀಡಿದ್ದಾನೆ. ಯೋಗೇಶ್ ಗುಂಡಿಯೊಳಗೆ ಇಣುಕಿ ನೋಡಿದಾಗ ಬೈಕಿನ ಹೆಡ್‌ಲೈಟ್ ಉರಿಯುತ್ತಿರುವುದು ಮತ್ತು ವ್ಯಕ್ತಿಯೊಬ್ಬ ಬಿದ್ದಿರುವುದು ಕಂಡಿದೆ.

ಯೋಗೇಶ್ ತಕ್ಷಣ ಕಾಂಟ್ರ್ಯಾಕ್ಟರ್ ಪ್ರಜಾಪತಿಗೆ ಫೋನ್ ಮಾಡಿದ್ದಾನೆ. ಪ್ರಜಾಪತಿ ಸ್ಥಳಕ್ಕೆ ಬಂದರೂ ಸಹ ಪೊಲೀಸರಿಗೆ ಅಥವಾ ಅಂಬ್ಯುಲೆನ್ಸ್‌ಗೆ ಕರೆ ಮಾಡುವ ಬದಲು, ಮೇನ್ ಕಾಂಟ್ರ್ಯಾಕ್ಟರ್ ಹಿಮಾಂಶು ಗುಪ್ತನಿಗೆ ಕಾನ್ಫರೆನ್ಸ್ ಕಾಲ್ ಮಾಡಿ ಘಟನೆಯ ಬಗ್ಗೆ ಹೇಳಿದ್ದಾನೆ. ಕಮಲ್ ಗುಂಡಿಯೊಳಗೆ ಬಿದ್ದು ಗಾಯಗೊಂಡು ಸಹಾಯಕ್ಕಾಗಿ ಕೂಗಾಡುತ್ತಿದ್ದರೂ, ಇವರೆಲ್ಲರೂ ಯಾವುದೇ ನೆರವು ನೀಡದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆಯ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ಈ ಅಪಘಾತದ ಬಗ್ಗೆ ಅನೇಕ ಜನರಿಗೆ ತಿಳಿದಿತ್ತು, ಆದರೂ ಯಾರೂ ಪಿಸಿಆರ್ (PCR)ಗೆ ಕರೆ ಮಾಡಲಿಲ್ಲ ಅಥವಾ ರಕ್ಷಣಾ ಪ್ರಯತ್ನವನ್ನೂ ನಡೆಸಿಲ್ಲ. ಬೆಳಿಗ್ಗೆ 8 ಗಂಟೆಗೆ ಪೊಲೀಸರಿಗೆ ವಿಷಯ ತಿಳಿದಾಗ ಅದಾಗಲೇ ಕಮಲ್ ಮೃತಪಟ್ಟಿದ್ದನು," ಎಂದು ತಿಳಿಸಿದ್ದಾರೆ.

ಪ್ರಸ್ತುತ ತಲೆಮರೆಸಿಕೊಂಡಿರುವ ಕಾರ್ಮಿಕ ಯೋಗೇಶ್ ಮತ್ತು ಮೇನ್ ಕಾಂಟ್ರ್ಯಾಕ್ಟರ್ ಹಿಮಾಂಶು ಗುಪ್ತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.