ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ; ಬಿಜೆಪಿ ಕಿಡಿ
ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ನಾಯಕ ನಾನಾ ಪಟೋಲೆ ಶ್ರೀರಾಮನಿಗೆ ಹೋಲಿಸಿರುವುದು ಹೊಸ ವರ್ಷದ ಆರಂಭದಲ್ಲೇ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ರಾಹುಲ್ ಗಾಂಧಿ ಇನ್ನೂ ಭೇಟಿ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಟೋಲೆ, ರಾಹುಲ್ ಗಾಂಧಿ “ಶ್ರೀರಾಮನ ಮಾರ್ಗದಲ್ಲೇ ಕೆಲಸ ಮಾಡುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -
ನವದೆಹಲಿ, ಜ. 1: ರಾಹುಲ್ ಗಾಂಧಿ (Rahul Gandhi) ಅವರನ್ನು ಕಾಂಗ್ರೆಸ್ ನಾಯಕ ನಾನಾ ಪಟೋಲೆ (Nana Patole) ಶ್ರೀರಾಮನಿಗೆ (Lord Ram) ಹೋಲಿಸಿದ್ದು, ಹೊಸ ವರ್ಷದ ಆರಂಭದಲ್ಲೇ ಮತ್ತೊಂದು ರಾಜಕೀಯ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ನಾಯಕನ ಈ ಹೋಲಿಕೆಗೆ ಬಿಜೆಪಿ (BJP) ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ರಾಹುಲ್ ಗಾಂಧಿ ಇನ್ನೂ ಏಕೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಟೋಲೆ, ರಾಹುಲ್ ಗಾಂಧಿ “ಶ್ರೀರಾಮನ ಕೆಲಸವನ್ನೇ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಕಿರುಕುಳಕ್ಕೆ ಒಳಗಾದವರು ಹಾಗೂ ವಂಚಿತರಿಗೆ ನ್ಯಾಯ ಒದಗಿಸುವುದೇ ಶ್ರೀರಾಮನ ಕೆಲಸ. ಅದನ್ನೇ ನಮ್ಮ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ರಾಮ ಮಂದಿರದಲ್ಲಿ ಫೋಟೊ ಸೆಷನ್ ಮಾಡುವುದಕ್ಕಿಂತ ಈ ಸೇವೆಯನ್ನು ಮಾಡುವುದನ್ನು ಅವರು ಹೆಚ್ಚು ಇಷ್ಟಪಡುತ್ತಾರೆ” ಎಂದು ಮಾಧ್ಯಮಗಳಿಗೆ ಹೇಳುವ ಮೂಲಕ ಪಟೋಲೆ ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
ರಾಮ ಮಂದಿರದ ಬಾಗಿಲು ತೆರೆಯುವುದರ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ ಪಾತ್ರವಿತ್ತು ಎಂಬುದನ್ನೂ ಪಟೋಲೆ ನೆನಪಿಸಿದರು.
ಶೆಹಜಾದ್ ಪೂನಾವಾಲ್ಲಾ ಎಕ್ಸ್ ಪೋಸ್ಟ್:
This is sycophancy pro max
— Shehzad Jai Hind (Modi Ka Parivar) (@Shehzad_Ind) January 1, 2026
After labelling Rahul Gandhi “Jan Nayak”
After saying Christmas is due to Sonia Gandhi
Now
Congress Leader Nana Patole compares Rahul Gandhi to Prabhu Sree Ram
Says photo shoot happens in Ram Mandir
This is Hindu Astha ka Apman
Not just… pic.twitter.com/rC3roc9bVP
ರಾಮ ಮಂದಿರ ಉದ್ಘಾಟನೆಯ ನಂತರ, ಮಂದಿರಕ್ಕೆ ಭೇಟಿ ನೀಡದಿರುವುದಕ್ಕಾಗಿ ಬಿಜೆಪಿ ನಿರಂತರವಾಗಿ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮಾಡುತ್ತಿದೆ. ಇದೀಗ ಪಟೋಲೆ ರಾಹುಲ್ ಗಾಂಧಿ ಅವರನ್ನು ಶ್ರೀರಾಮಚಂದ್ರನಿಗೆ ಹೋಲಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, "ಕಾಂಗ್ರೆಸ್ ಹಿಂದೂ ಧರ್ಮದ ನಂಬಿಕೆಗೆ ಅವಮಾನ ಮಾಡುತ್ತಿದೆ” ಎಂದು ಕಿಡಿಕಾರಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, ʼʼಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು “ನಾಚ್ ಗಾನಾ” ಎಂದು ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದೇಕೆ ಎಂಬುದನ್ನು ಪ್ರಶ್ನಿಸುವ ಧೈರ್ಯ ಪಟೋಲೆ ಅವರಿಗಿದೆಯೇ? ಅವರು ಇನ್ನೂ ರಾಮ ಮಂದಿರಕ್ಕೆ ಏಕೆ ಹೋಗಿಲ್ಲ ಎಂದು ಕೇಳುವ ಸಾಹಸ ಮಾಡುತ್ತಾರೆಯೇ?ʼʼ ಎಂದು ಪ್ರಶ್ನಿಸಿದ್ದಾರೆ.
ಸಂಕ್ರಾಂತಿಯಿಂದ ಬಿಜೆಪಿಗೆ ಹೊಸ ಸಾರಥಿ? ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆ ಸಾಧ್ಯತೆ
“ಕಾಂಗ್ರೆಸ್ ನಾಯಕರು ಮತ್ತೊಮ್ಮೆ ‘ಅತಿಯಾದ ಚಾಪ್ಲೂಸಿ’ ತೋರಿಸಿದ್ದಾರೆ. ಕಾಂಗ್ರೆಸ್ಸಿಗರು ಇತ್ತ ರಾಹುಲ್ ಗಾಂಧಿ ಶ್ರೀರಾಮನಂತಿದ್ದಾರೆ ಎನ್ನುತ್ತಾರೆ, ಅದೇ ನಾಯಕರು ಸೋನಿಯಾ ಗಾಂಧಿಯಿಂದಾಗಿಯೇ ಕ್ರಿಸ್‌ಮಸ್ ಆಚರಿಸಲಾಗುತ್ತಿದೆ ಎಂತಲೂ ಹೇಳುತ್ತಿದ್ದಾರೆ. ಇದು ಯಾವ ರೀತಿಯ ಚಾಪ್ಲೂಸಿ? ಹಿಂದು ಧರ್ಮವನ್ನು ಅವಮಾನಿಸುತ್ತೀದ್ದಿರಾ?" ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ್ಲಾ ಪ್ರಶ್ನಿಸಿದ್ದಾರೆ. ಅಲ್ಲದೇ ಈ ಹಿಂದೇ ಇದೇ ಕಾಂಗ್ರೆಸ್ ರಾಮ ಮಂದಿರ ಕಟ್ಟಬಾರದು ಎಂದಿತ್ತು...ಇದೇ ಪಕ್ಷ ರಾಮ ಮಂದಿರ ಪ್ರಾಣ ಪ್ರತಿಷ್ಠೆಯನ್ನು ‘ನಾಚ್ ಗಾನಾ’ ಎಂದಿತ್ತು. ಇದೇ ರೀತಿ ಕಾಂಗ್ರೆಸಿಗರು ಹಿಂದೂ ಧರ್ಮದ ಮೇಲೆ ನಿರಂತರವಾಗಿ ದಾಳಿ ಮಾಡಿ ಅವಮಾನ ಮಾಡುತ್ತಲೇ ಇದ್ದಾರೆ” ಎಂದು ಪೂನಾವಾಲ್ಲಾ ಆರೋಪಿಸಿದ್ದಾರೆ.