ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ; ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಲಖನೌನಲ್ಲಿ ತುರ್ತು ಭೂಸ್ಪರ್ಶ

Bomb threat written on tissue paper: ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವನ್ನು ಉತ್ತರ ಪ್ರದೇಶದ ಲಖನೌನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಟಿಶ್ಯೂ ಪೇಪರ್‌ನಲ್ಲಿ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ

ಸಾಂದರ್ಭಿಕ ಚಿತ್ರ -

Priyanka P
Priyanka P Jan 18, 2026 7:21 PM

ಲಖನೌ, ಜ. 18: ದೆಹಲಿಯಿಂದ ಪಶ್ಚಿಮ ಬಂಗಾಳದ ಬಾಗ್ಡೋಗ್ರಾಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನಕ್ಕೆ (Indigo Flight) ಟಿಶ್ಯೂ ಪೇಪರ್‌ನಲ್ಲಿ ಬೆದರಿಕೆ ಬಂದ ಕಾರಣ ಅದನ್ನು ಭಾನುವಾರ (ಜನವರಿ 18) ಬೆಳಗ್ಗೆ ಉತ್ತರ ಪ್ರದೇಶದ ಲಖನೌನಲ್ಲಿ ಇಳಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ (Bomb Threat) ಬಂದ ಕಾರಣ ವಿಮಾನವನ್ನು ಲಖನೌನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಮೂಲಗಳು ವರದಿ ಮಾಡಿವೆ.

ʼʼ2026ರ ಜನವರಿ 18ರಂದು ದೆಹಲಿಯಿಂದ ಬಾಗ್ಡೋಗ್ರಾಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6E 6650ರಲ್ಲಿ ಭದ್ರತಾ ಬೆದರಿಕೆ ಕಂಡುಬಂದ ಕಾರಣ ವಿಮಾನವನ್ನು ಲಖನೌನಲ್ಲಿ ಇಳಿಸಬೇಕಾಯಿತು. ಶಿಷ್ಟಾಚಾರವನ್ನು ಅನುಸರಿಸಿ, ನಾವು ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಮತ್ತು ಅಗತ್ಯ ಭದ್ರತಾ ತಪಾಸಣೆಗಳನ್ನು ಕೈಗೊಳ್ಳುವಲ್ಲಿ ಅವರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆʼʼ ಎಂದು ಇಂಡಿಗೋ ವಕ್ತಾರರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ; ಎರಡನೇ ಆತ್ಮಹತ್ಯಾ ಬಾಂಬರ್‌ ನೇಮಕಕ್ಕೆ ಮುಂದಾಗಿದ್ದ ಮಾಸ್ಟರ್ ಮೈಂಡ್

''ನಮ್ಮ ಗ್ರಾಹಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರಿಗೆ ಉಪಾಹಾರಗಳನ್ನು ನೀಡುವುದು ಮತ್ತು ಅಪ್‌ಡೇಟ್‌ ಹಂಚಿಕೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ಸಹಾಯ ಮಾಡಲಾಗುತ್ತಿದೆ. ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ಪ್ರಮುಖ ಆದ್ಯತೆʼʼ ಎಂದು ಅಧಿಕೃತರು ಹೇಳಿದ್ದಾರೆ.

ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ:



ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಬಾಂಬ್ ಇದೆ ಎಂಬ ವರದಿಯ ನಂತರ ಕೆಲ ಹೊತ್ತು ಭೀತಿಯ ವಾತಾವರಣ ಕಂಡು ಬಂತು. ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ರಜನೀಶ್ ವರ್ಮಾ ಅವರ ಪ್ರಕಾರ, ವಿಮಾನದ ಶೌಚಾಲಯದೊಳಗೆ ಟಿಶ್ಯೂ ಪೇಪರ್‌ನಲ್ಲಿ ಕೈಬರಹದ ಟಿಪ್ಪಣಿ ಮೂಲಕ ಬೆದರಿಕೆ ಬಂದಿತ್ತು.

ʼʼವಿಮಾನದಲ್ಲಿ ಪೈಲಟ್‌ಗಳುಮ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 238 ಮಂದಿ ಇದ್ದರು. ವಿಮಾನವು ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿತ್ತು. ಅದು ಲಖನೌದಲ್ಲಿ ತುರ್ತು ಭೂಸ್ಪರ್ಶ ಮಾಡಿತುʼʼ ಎಂದು ಎಸಿಪಿ ತಿಳಿಸಿದರು.

ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ, ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರಿದರು. ಅದನ್ನು ಪ್ರತ್ಯೇಕ ಬೇಯಲ್ಲಿ ನಿಲ್ಲಿಸಲಾಯಿತು. ಈ ಬಗ್ಗೆ ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಐಎಸ್ಎಫ್ ತಂಡಗಳು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದವು. ಎಲ್ಲ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು ಮತ್ತು ಸ್ಕ್ಯಾನ್ ಮಾಡಲಾಯಿತು ಹಾಗೂ ವಿಮಾನ ನಿಲ್ದಾಣದಲ್ಲಿ ಸಮಗ್ರ ಶೋಧ ನಡೆಸಲಾಗುತ್ತಿದೆ.

ಭಾನುವಾರ ಬೆಳಗ್ಗೆ ಸುಮಾರು 8:46ಕ್ಕೆ ದೆಹಲಿಯಿಂದ ಹೊರಟ ಇಂಡಿಗೋ ವಿಮಾನವನ್ನು ಬೆಳಗ್ಗೆ 9:17ಕ್ಕೆ ಸುರಕ್ಷಿತವಾಗಿ ಲಖನೌನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನವು 222 ವಯಸ್ಕರು ಮತ್ತು 8 ಮಕ್ಕಳು, 2 ಪೈಲಟ್‌ಗಳು ಮತ್ತು 6 ಸಿಬ್ಬಂದಿ ಸೇರಿದಂತೆ 238 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಪ್ರಸ್ತುತ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.