ಭದ್ರತಾ ಪಡೆಗಳ ಮಿಂಚಿನ ಕಾರ್ಯಾಚರಣೆ; ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಬಳಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನ ಪ್ರಜೆಯ ಬಂಧನ
Pakistani Infiltrator Arrests: ಜಮ್ಮು ಮತ್ತು ಕಾಶ್ಮೀರದ ಕನಚಕ್ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಭದ್ರತಾ ಪಡೆ (ಬಿಎಸ್‌ಎಫ್) ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದೆ. ಒಳನುಗ್ಗಿದ ವ್ಯಕ್ತಿಯನ್ನು ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯ ಲುನಿ ಗ್ರಾಮದ ನಿವಾಸಿ ನಜೀರ್ ಎಂದು ಗುರುತಿಸಲಾಗಿದೆ.
ಜಮ್ಮುವಿನಲ್ಲಿ ಪಾಕಿಸ್ತಾನಿ ನುಸುಳುಕೋರನ ಬಂಧನ -
ಶ್ರೀನಗರ, ಸೆ. 3: ಜಮ್ಮು ಕಾಶ್ಮೀರದ ಜಮ್ಮುವಿನ ಕನಚಕ್ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಭದ್ರತಾ ಪಡೆ (BSF) ಶಂಕಿತ ಪಾಕಿಸ್ತಾನಿ ಪ್ರಜೆಯನ್ನು (Pakistani Infiltrator) ಬಂಧಿಸಿದೆ. 198 ಕಿ.ಮೀ. ಉದ್ದದ ಜಮ್ಮು (Jammu) ಐಬಿಯ ಸೂಕ್ಷ್ಮ ಪ್ರದೇಶವಾದ ಸೋಹನ್ ಗಡಿ ಹೊರಠಾಣೆಯ (ಬಿಒಪಿ) ಮುಂಭಾಗದ ಪ್ರದೇಶದಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಬಂಧಿಸಲಾಯಿತು. ಇದು ಒಳನುಸುಳುವಿಕೆ ಮತ್ತು ಕಳ್ಳಸಾಗಣೆಗಳಿಗೆ ಹೆಚ್ಚು ಗುರಿಯಾಗುವ 198 ಕಿ.ಮೀ. ಉದ್ದದ ಜಮ್ಮು ಐಬಿಯ ಸೂಕ್ಷ್ಮ ಪ್ರದೇಶವಾಗಿದೆ.
ಒಳನುಗ್ಗಿದ ವ್ಯಕ್ತಿಯನ್ನು ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯ ಲುನಿ ಗ್ರಾಮದ ನಿವಾಸಿ ನಜೀರ್ ಎಂದು ಗುರುತಿಸಲಾಗಿದೆ. ಬಿಎಸ್‌ಎಫ್ ಸಿಬ್ಬಂದಿ ಒಳನುಗ್ಗಿದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡರು. ಪರಿಸ್ಥಿತಿಯನ್ನು ಅವಲೋಕಿಸಲು ವಲಯದ ಉಪ ಮಹಾನಿರ್ದೇಶಕರು (ಡಿಐಜಿ) ಸ್ಥಳಕ್ಕೆ ಧಾವಿಸಿದರು.
ಗಡಿ ದಾಟುವಿಕೆಯು ಆಕಸ್ಮಿಕವಾಗಿ ನಡೆದಿದೆಯೇ ಅಥವಾ ಭಯೋತ್ಪಾದಕರನ್ನು ಒಳನುಗ್ಗಿಸಲು ಗಡಿಯಲ್ಲಿರುವ ಸೈನಿಕರ ಭದ್ರತೆಯನ್ನು ಪರಿಶೀಲಿಸುವ ದೃಷ್ಟಿಯಿಂದ ಉದ್ದೇಶಪೂರ್ವಕ ಪ್ರಯತ್ನದ ಭಾಗವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬಿಎಸ್‌ಎಫ್ ನಜೀರ್‌ನನ್ನು ಪ್ರಶ್ನಿಸುತ್ತಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಅಂದಹಾಗೆ, ಇತ್ತೀಚಿಗೆ ಜಮ್ಮು ಗಡಿಭಾಗದಲ್ಲಿ ಇದೇ ರೀತಿಯ ಹಲವು ಘಟನೆಗಳು ನಡೆದಿವೆ. ಮಾರ್ಚ್ 25ರಂದು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ವೃದ್ಧ ಪ್ರಜೆಯನ್ನು ಬಂಧಿಸಿದವು. ಪ್ರಾಥಮಿಕ ವಿಚಾರಣೆಯಲ್ಲಿ ಅವರು ಅಜಾಗರೂಕತೆಯಿಂದ ದಾಟಿದ್ದಾರೆಂದು ತಿಳಿದುಬಂತು. ನಂತರ ಅವರನ್ನು ಸ್ವದೇಶಕ್ಕೆ ಕಳುಹಿಸಲು ನಿರ್ಧರಿಸಲಾಯಿತು.
ಈ ವರ್ಷದ ಗಣರಾಜ್ಯೋತ್ಸವದ ಮುನ್ನಾದಿನ, ಲಾಹೋರ್‌ನ ಮೊಹಮ್ಮದ್ ಆರಿಫ್ (61) ಎಂದು ಗುರುತಿಸಲಾದ ಪಾಕಿಸ್ತಾನಿ ನುಸುಳುಕೋರನನ್ನು ಬಿಎಸ್‌ಎಫ್ ಹೊಡೆದುರುಳಿಸಿತು. ಈತ ಪದೇ ಪದೆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ರಾಮಗಢ ವಲಯದ ಚಕ್ ಮಜ್ರಾ ಗ್ರಾಮದ ಬಳಿ ಬೇಲಿಯ ಬಳಿ ಅಕ್ರಮವಾಗಿ ಒಳ ನುಸುಳಿದ್ದ. ಹೀಗಾಗಿ ಗಡಿ ಭದ್ರತಾ ಪಡೆ ಆತನನ್ನು ಹೊಡೆದುರುಳಿಸಿತು.
ಇದಕ್ಕೂ ಮುನ್ನ ಎರಡು ಪ್ರತ್ಯೇಕ ಘಟನೆಗಳಲ್ಲಿ, ಆರ್ನಿಯಾ ಸೆಕ್ಟರ್‌ನಲ್ಲಿ ಬೇಲಿಯತ್ತ ಆಕ್ರಮಣಕಾರಿಯಾಗಿ ಬರುತ್ತಿದ್ದ ಒಬ್ಬ ನುಸುಳುಕೋರನನ್ನು ಬಿಎಸ್‌ಎಫ್ ಗುಂಡಿಕ್ಕಿ ಹತ್ಯೆ ಮಾಡಿತು. ರಾಮಗಢ ಸೆಕ್ಟರ್‌ನಲ್ಲಿ ಮತ್ತೊಬ್ಬನನ್ನು ಬಂಧಿಸಿತು.
ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳು ಗಡಿಯಲ್ಲಿ ಒಳನುಸುಳುವಿಕೆ ಮತ್ತು ಡ್ರೋನ್ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ಸಾಗಿಸುವುದನ್ನು ಮುಂದುವರಿಸಿರುವುದರಿಂದ ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಐಬಿ ಉದ್ದಕ್ಕೂ ಬಿಎಸ್‌ಎಫ್ ಭಾರಿ ಕಟ್ಟೆಚ್ಚರ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.