ಕೆನಡಾದಲ್ಲಿ ತರಬೇತಿ ವಿಮಾನ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು
Canada plane crash: ಕೆನಡಾದಲ್ಲಿ ಶುಕ್ರವಾರ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಮನೋಜ್ ಶಿವಕುಮಾರ್ ಮತ್ತು ಶ್ರೀಶರಣ್ ತಿರುಜ್ಞಾನಸಂಬಂಧಂ ಎಂದು ಗುರುತಿಸಲಾಗಿದೆ. ಇವರು ಹಾರ್ವ್ಸ್ ಏರ್ ಫ್ಲೈಟ್ ಸ್ಕೂಲ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗ ದುರಂತ ಸಂಭವಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ವಿಮಾನ ತರಬೇತಿಯ ವೇಳೆ ಸಂಭವಿಸಿದ ಅಪಘಾತದಲ್ಲಿ (Canada plane crash) ಇಬ್ಬರು ಭಾರತೀಯ ವಿದ್ಯಾರ್ಥಿಗಳು (Indian students) ಸಾವನ್ನಪ್ಪಿರುವ ಘಟನೆ ಕೆನಡಾದಲ್ಲಿ (canada) ನಡೆದಿದೆ. ಈ ಕುರಿತು ವ್ಯಾಂಕೂವರ್‌ನಲ್ಲಿರುವ (Vancouver) ಭಾರತೀಯ ದೂತಾವಾಸ ಕಚೇರಿಯು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕೆನಡಾದಲ್ಲಿ ಶುಕ್ರವಾರ ಸಂಭವಿಸಿದ ತರಬೇತಿ ವಿಮಾನ ಅಪಘಾತದಲ್ಲಿ ಭಾರತೀಯ ಮೂಲದ ತಮಿಳುನಾಡು (tamilnadu) ಮತ್ತು ಪುದುಚೇರಿಯ (puduchery) ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಮನೋಜ್ ಶಿವಕುಮಾರ್ ಮತ್ತು ಶ್ರೀಶರಣ್ ತಿರುಜ್ಞಾನಸಂಬಂಧಂ ಎಂದು ಗುರುತಿಸಲಾಗಿದೆ ಎಂದು ಹೇಳಿದೆ.
ಭಾರತೀಯ ವಿದ್ಯಾರ್ಥಿಗಳಿಬ್ಬರ ಸಾವಿಗೆ ಭಾನುವಾರ ಸಂತಾಪ ಸೂಚಿಸಿರುವ ಭಾರತದ ಕಾನ್ಸುಲೇಟ್ ಜನರಲ್, ಕೆನಡಾದಲ್ಲಿ ವಿಮಾನ ತರಬೇತಿಯ ವೇಳೆ ಸಂಭವಿಸಿದ ಅಪಘಾತದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳಾದ ಮನೋಜ್ ಶಿವಕುಮಾರ್ ಮತ್ತು ಶ್ರೀಶರಣ್ ತಿರುಜ್ಞಾನಸಂಬಂಧಂ ಮೃತಪಟ್ಟಿದ್ದಾರೆ. ಈ ಕಠಿಣ ಸಮಯದಲ್ಲಿ ಅವರ ಶೋಕತಪ್ತ ಕುಟುಂಬಗಳು ಮತ್ತು ಆಪ್ತರೊಂದಿಗೆ ನಮ್ಮ ಹೃತ್ಪೂರ್ವಕ ಸಹಾನುಭೂತಿ ಇದೆ ಎಂದು ತಿಳಿಸಿದೆ.
ಪಶ್ಚಿಮ ಏಷ್ಯಾ ಯುದ್ಧ ಮತ್ತೆ ಆರಂಭ? ಶಾಂತಿ ಒಪ್ಪಂದದ ಬಿಕ್ಕಟ್ಟಿನ ನಡುವೆ ಅಮೆರಿಕಗೆ ಇರಾನ್ ಎಚ್ಚರಿಕೆ
ಮೃತರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ರವಾನಿಸುವುದು ಸೇರಿದಂತೆ ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ದೂತಾವಾಸ ನೆರವು ನೀಡಲು ಸಿದ್ಧವಿರುವುದಾಗಿ ಕೂಡ ರಾಯಭಾರ ಕಚೇರಿ ತಿಳಿಸಿದೆ.
ಮಾಧ್ಯಮವೊಂದರ ವರದಿ ಪ್ರಕಾರ ಶುಕ್ರವಾರ ಮುಂಜಾನೆ ಸಸ್ಕಾಚೆವನ್‌ನ ಕಿಸ್ಬೆ ಬಳಿ ಹಾರ್ವ್ಸ್ ಏರ್ ಸಂಸ್ಥೆಯ ಸೆಸ್ನಾ 172 ವಿಮಾನವು ಪತನಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಈ ವಿಮಾನವು ಹಾರ್ವ್ಸ್ ಏರ್ ಫ್ಲೈಟ್ ಸ್ಕೂಲ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ.
The Consulate General of India, Vancouver, expresses its deepest condolences on the tragic demise of Shri Manoj Sivakumar and Shri Srisaran Thirugnanasambantham, two Indian students from Tamil Nadu and Puducherry, who lost their lives in a tragic air accident in Canada during…
— India in Vancouver (@cgivancouver) September 20, 2026
ಈ ವಿಮಾನವು ರೆಜಿನಾದಿಂದ ಮ್ಯಾనిಟೋಬಾದ ಸ್ಟೀನ್‌ಬಾಕ್‌ಗೆ ಸಸ್ಕಾಚೆವನ್‌ನ ಕಾರ್ಲೈಲ್ ದಾರಿಯಲ್ಲಿ ರಾತ್ರಿಯ ವೇಳೆ ಸುದೀರ್ಘ ಪ್ರಯಾಣ ಕೈಗೊಂಡಿತ್ತು. ಇದರಲ್ಲಿ ಇಬ್ಬರು ಪರವಾನಗಿ ಪಡೆದ ಪೈಲಟ್‌ಗಳಿದ್ದರು. ವಾಣಿಜ್ಯ ಪೈಲಟ್ ಪರವಾನಿಗೆಗಾಗಿ ಇವರು ಹಾರಾಟದ ಅವಧಿಯನ್ನು ಪೂರೈಸಲು ಈ ವಿಮಾನವನ್ನು ಬಾಡಿಗೆಗೆ ಪಡೆದಿದ್ದರು ಎಂದು ಹಾರ್ವ್ಸ್ ಏರ್‌ನ ಅಧ್ಯಕ್ಷ ಆಡಮ್ ಪೆನ್ನರ್ ತಿಳಿಸಿದ್ದಾರೆ.
ಈ ವಿಮಾನ ನಿಗದಿತ ಸಮಯವಾದ ಬೆಳಗ್ಗೆ 10.30ರ ವೇಳೆಗೆ ತಲುಪಬೇಕಿದ್ದ ಸ್ಥಳಕ್ಕೆ ಬಾರದೇ ಇದ್ದುದರಿಂದ ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಶೋಧ ಮತ್ತು ರಕ್ಷಣಾ ತಂಡಗಳು ಸಂಜೆ 6 ಗಂಟೆ ಸುಮಾರಿಗೆ ವಿಮಾನವನ್ನು ಪತ್ತೆಹಚ್ಚಿದವು ಮತ್ತು ಸ್ಥಳದಲ್ಲಿ ಇಬ್ಬರು ಪೈಲೆಟ್ ಗಳ ಮೃತ ಶರೀರ ಕೂಡ ಪತ್ತೆಯಾಗಿದೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಈ ಪ್ರಕರಣವನ್ನು ತನಿಖೆಗಾಗಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್‌ಗೆ ಹಸ್ತಾಂತರಿಸಲಾಯಿತು.
ಕೆನಡಾದಲ್ಲಿ ಹಾರ್ವ್ಸ್ ಏರ್ ನ ವಿಮಾನ ದುರಂತ 2025ರ ಜನವರಿ ಬಳಿಕ ನಡೆದ ಮೂರನೇ ಪ್ರಕರಣ ಇದಾಗಿದೆ. ಕಳೆದ ವರ್ಷದ ಜನವರಿಯಲ್ಲಿ ನಡೆದ ದುರಂತದಲ್ಲಿ ತರಬೇತುದಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬಳಿಕ ಜುಲೈ ನಲ್ಲಿ ನಡೆದ ದುರಂತದಲ್ಲಿ ಇಬ್ಬರು ವಿದ್ಯಾರ್ಥಿ ಪೈಲಟ್‌ಗಳು ಸಾವನ್ನಪ್ಪಿದ್ದರು. .