ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಬಜೆಟ್ ಮಂಡನೆ (Union Budget 2026) ದಿನ ಬಂದೇ ಬಿಟ್ಟಿದೆ. ಎಂದಿನಂತೆ ಈ ಬಾರಿಯೂ ಕೇಂದ್ರ ಹಣಕಾಸು ಸಚಿವೆ (Finance Minister ) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಧರಿಸಿರುವ ಸೀರೆ ಎಲ್ಲರ ಗಮನ ಸೆಳೆದಿದೆ. ಈ ಬಾರಿ ಅವರು ತಮಿಳುನಾಡಿನ (tamilnadu) ಕಾಂಜೀವರಂ ರೇಷ್ಮೆ ಸೀರೆಯನ್ನು (Kanjivaram silk saree) ಧರಿಸಿದ್ದು, ಇದನ್ನು ತಮಿಳಿನಲ್ಲಿ ಕಟ್ಟಂ ಎಂದು ಕರೆಯಲಾಗುತ್ತದೆ. ನೇರಳೆ ಬಣ್ಣದ ಈ ಸೀರೆಯು ಕಂದು ಬಣ್ಣದ ಬಾರ್ಡರ್, ಚಿನ್ನ ಬಣ್ಣದ ಚೆಕ್ಸ್ ಅನ್ನು ಒಳಗೊಂಡಿದೆ. ಕೈಯಿಂದ ನೇಯ್ದ ಈ ಸೀರೆ ತಮಿಳುನಾಡಿನ ಪ್ರಾಚೀನ ನೇಯ್ಗೆ ಪರಂಪರೆಯನ್ನು ಗೌರವಿಸುತ್ತದೆ.
ಈ ದಿನದ ಬಜೆಟ್ ಮಂಡನೆ ಸೇರಿ ಈವರೆಗೆ ಒಟ್ಟು ಒಂಬತ್ತು ಬಜೆಟ್ ಮಂಡನೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಜೆಟ್ ಮಂಡನೆಯ ದಿನವೂ ವಿಶೇಷ ಸಂದೇಶವನ್ನು ಸಾರುವ ಸೀರೆಯನ್ನು ಗಮನ ಸೆಳೆದಿದ್ದಾರೆ. ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಪ್ರತಿಬಿಂಬಿಸಿದ್ದಾರೆ. ಪ್ರಾದೇಶಿಕ ಸಂಸ್ಕೃತಿಗೆ ಒತ್ತು ನೀಡುವ ಸಲುವಾಗಿ ಸಾಂಪ್ರದಾಯಿಕ ನೇಯ್ಗೆ ನೀಡಿದ್ದಾರೆ. ಇವರ ಈ ಸೀರೆಗಳು ರಾಜಕೀಯ ವಿಷಯಗಳ ಹೊರತಾಗಿ ದೇಶದ ವೈಭವದ ಸಂಸ್ಕೃತಿಯ ಕಥೆಯನ್ನೂ ಸಾರುತ್ತದೆ.
ಈ ಬಾರಿಯ ಬಜೆಟ್‌ಗೆ ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟ ನಿರ್ಮಲಾ ಸೀತಾರಾಮನ್
ಮೊದಲ ಬಜೆಟ್
ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಹಣಕಾಸು ಬಜೆಟ್ ಮಂಡಿಸಿದ್ದು 2019ರಲ್ಲಿ. ಈ ಸಂದರ್ಭದಲ್ಲಿ ಅವರು ಚಿನ್ನದ ಬಾರ್ಡರ್ ನ ಗುಲಾಬಿ ಬಣ್ಣದ ಮಂಗಳಗಿರಿ ರೇಷ್ಮೆ ಸೀರೆಯನ್ನು ಧರಿಸಿದ್ದರು.
ಎರಡನೇ ಬಜೆಟ್
ಕೋವಿಡ್ ಸಾಂಕ್ರಾಮಿಕ ವರ್ಷವಾದ 2020ರಲ್ಲಿ ಮಂಡಿಸಲಾದ ಎರಡನೇ ಬಜೆಟ್ ಗೆ ಅವರು ತೆಳುವಾದ ಕೆನರಿ ನೀಲಿ ಬಾರ್ಡರ್ ಇರುವ ಹಳದಿ ರೇಷ್ಮೆ ಸೀರೆ ಧರಿಸಿದ್ದರು. ಹಳದಿ ಬಣ್ಣವು ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯ ಸಂಕೇತವಾಗಿತ್ತು.
ಮೂರನೇ ಬಜೆಟ್
ಮೂರನೇ ಬಜೆಟ್ ಮಂಡನೆಯಾಗಿದ್ದು 2021ರಲ್ಲಿ. ಈ ಸಂದರ್ಭದಲ್ಲಿ ಅವರು ಕೆಂಪು ಬಾರ್ಡರ್ ನ ಬಿಳಿ ಮೈ ಹೊಂದಿದ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು. ಈ ಸೀರೆ ತೆಲಂಗಾಣದ ಭೂದಾನ್ ಪೋಚಂಪಲ್ಲಿ ಗ್ರಾಮದಲ್ಲಿ ಹುಟ್ಟಿಕೊಂಡಿತ್ತು. ಇದು ಜ್ಯಾಮಿತೀಯ ಇಕಾಟ್ ಟೈ-ಡೈ ತಂತ್ರಕ್ಕೆ ಖ್ಯಾತಿ ಪಡೆದಿದ್ದು, ಇದು "ವೋಕಲ್ ಫಾರ್ ಲೋಕಲ್" ಅಭಿಯಾನವನ್ನು ಪ್ರತಿಬಿಂಬಿಸಿತ್ತು. ಈ ಸೀರೆಗೆ 2005 ರಲ್ಲಿ ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ನೀಡಲಾಗಿತ್ತು.
ನಾಲ್ಕನೇ ಬಜೆಟ್
ನಾಲ್ಕನೇ ಬಜೆಟ್ ಮಂಡನೆ ವರ್ಷ 2022ರಲ್ಲಿ ನಿರ್ಮಲಾ ಅವರು ಮೆರೂನ್ ಮತ್ತು ಬೆಳ್ಳಿಯ ಬಾರ್ಡರ್ ಅನ್ನು ಹೊಂದಿದ್ದ ಚಾಕೊಲೇಟ್ ಬ್ರೌನ್ ಬಣ್ಣದ ಬೊಮ್ಕೈ ಸೀರೆಯನ್ನು ಉಟ್ಟಿದ್ದರು. ಇದನ್ನು ಸೋನ್‌ಪುರಿ ಸೀರೆ ಎಂದು ಕರೆಯಲಾಗುತ್ತದೆ. ಇದು ಒಡಿಶಾದ ಗಂಜಾಂ ಜಿಲ್ಲೆಯಲ್ಲಿ 8 ನೇ ಶತಮಾನದಲ್ಲಿ ಹುಟ್ಟಿಕೊಂಡಿತ್ತು. ಇದಕೆ 2012 ರಲ್ಲಿ ಜಿಐ ಟ್ಯಾಗ್ ಅನ್ನು ನೀಡಲಾಯಿತು.
ಐದನೇ ಬಜೆಟ್
2023ರಲ್ಲಿ ಮಂಡಿಸಲಾದ ಐದನೇ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಅವರು ಕೆಂಪು ರೇಷ್ಮೆ ಸೀರೆಯನ್ನು ಧರಿಸಿದ್ದರು. ಉತ್ತರ ಕರ್ನಾಟಕದಲ್ಲಿ ಹುಟ್ಟಿದ ಈ ಸೀರೆಯು ಕಸೂತಿ ದಾರದಿಂದ ಮಾಡಲ್ಪಟ್ಟಿದ್ದು, ಕೆಂಪು ಮತ್ತು ಕಪ್ಪು ಬಣ್ಣದ ಬಾರ್ಡರ್ ಅನ್ನು ಹೊಂದಿತ್ತು.
ಆರನೇ ಬಜೆಟ್
ಲೋಕಸಭಾ ಚುನಾವಣೆಗೆ ಮುನ್ನ 2024ರಲ್ಲಿ ಮಂಡನೆಯಾದ ಮಧ್ಯಂತರ ಬಜೆಟ್ ವೇಳೆ ಅವರು ನೀಲಿ ಟಸರ್ ರೇಷ್ಮೆ ಸೀರೆ ಧರಿಸಿದ್ದರು. ಇದು ಪಶ್ಚಿಮ ಬಂಗಾಳದಿಂದ ಕಾಂಥಾ ಕಸೂತಿಯನ್ನು ಹೊಂದಿತ್ತು.
ಏಳನೇ ಬಜೆಟ್
2024ರ ಪೂರ್ಣ ಬಜೆಟ್ ಮಂಡನೆ ವೇಳೆ ಅವರು ನೇರಳೆ ಮತ್ತು ಚಿನ್ನ ಬಣ್ಣದ ಬಾರ್ಡರ್ ಹೊಂದಿರುವ ಬಿಳಿ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿದ್ದರು. ಇದರ ಮೂಲ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಪಟ್ಟಣ. ಹೀಗಾಗಿ ಈ ಸೀರೆಯನ್ನು ಮಂಗಳಗಿರಿ ಸೀರೆ ಎಂದು ಕರೆಯಲಾಗುತ್ತದೆ. ಈ ಬಜೆಟ್ ನಲ್ಲಿ ಅವರು ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ನೆರವನ್ನು ಘೋಷಿಸಿದ್ದರು.
ಎಂಟನೇ ಬಜೆಟ್
ಬಿಹಾರ ವಿಧಾನ ಸಭಾ ಚುನಾವಣೆಗೆ ತಯಾರಿ ಎಂಬಂತೆ ನಡೆದ ಎಂಟನೇ ಬಜೆಟ್ ಮಂಡನೆಯಲ್ಲಿ ತಮ್ಮ ಸೀರೆ ಮೂಲಕ ಅವರು ಮಧುಬನಿ ಕಲೆಗೆ ಗೌರವ ಸಲ್ಲಿಸಿದ್ದರು. 2025ರ ಬಜೆಟ್ ಮಂಡನೆ ವೇಳೆ ಅವರು ಧರಿಸಿದ್ದ ಸೀರೆ ಮೀನಿನ ವಿಷಯದ ಕಸೂತಿ ಮತ್ತು ಚಿನ್ನದ ಬಾರ್ಡರ್ ಹೊಂದಿತ್ತು. ಇದು ಬಿಳಿ ಕೈಮಗ್ಗದ ರೇಷ್ಮೆ ಸೀರೆ ಆಗಿದ್ದು, ಇದನ್ನು ಮಧುಬನಿ ಕೈಯಿಂದ ತಯಾರಿಸಲಾಗಿತ್ತು. ಬಿಹಾರದ ಮಿಥಿಲಾ ಪ್ರದೇಶದಲ್ಲಿ ಹುಟ್ಟಿಕೊಂಡ ಮಧುಬನಿಯು ಒಂದು ಸಾಂಪ್ರದಾಯಿಕ ಜಾನಪದ ಕಲೆಯಾಗಿದೆ. ಹೀಗಾಗಿ ಈ ಸೀರೆಯು ಮಿಥಿಲಾ ಕಲೆ ಎಂದೇ ಪ್ರಸಿದ್ದಿ ಪಡೆದಿದೆ. ಈ ಸೀರೆ ದಲಿತ ಮಲ್ಲಾಹ್ ಜಾತಿಯ ಪದ್ಮಶ್ರೀ ದುಲಾರಿ ದೇವಿಗೆ ಸಮರ್ಪಿತವಾಗಿದೆ.
ಈ ಬಾರಿಯೂ ತೆರಿಗೆದಾರರಿಗೆ ಸಿಗುತ್ತಾ ಸಿಹಿ ಸುದ್ದಿ; ಬಜೆಟ್ ಕುರಿತು ನಿರೀಕ್ಷೆಯೇನು?
ಒಂಬತ್ತನೇ ಬಜೆಟ್
ಈ ಬಾರಿ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಚುನಾವಣೆಗಳು ನಡೆಯಲಿದೆ. ಹೀಗಾಗಿ ಇದರ ಮುನ್ಸೂಚನೆಯಂತೆ ಸೀತಾರಾಮನ್ ಅವರು ಈ ರಾಜ್ಯಗಳನ್ನು ಪ್ರತಿಬಿಂಬಿಸುವ ಕಾಂಜೀವರಂ, ತಂಗೈಲ್, ಗರದ್, ಕೋರಿಯಲ್, ಬಲುಚರಿ, ಜಾಮ್ದಾನಿ ಅಥವಾ ಧನಿಯಖಾಲಿ ಸೀರೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದೆಂದು ಊಹಿಸಲಾಗಿತ್ತು. ಮೂಲತಃ ತಮಿಳುನಾಡಿನ ಮದುರೈನವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ತಮಿಳುನಾಡಿನಲ್ಲಿ ತಯಾರಾದ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದಾರೆ. 2005-2006ರಲ್ಲಿ ಕಾಂಜೀವರಂ ರೇಷ್ಮೆ ಸೀರೆಗಳಿಗೆ ಜಿಐ ಟ್ಯಾಗ್ ಪಡೆದುಕೊಂಡಿತ್ತು.