ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026: ಕೇಂದ್ರ ಬಜೆಟ್ ಪ್ರತಿ ವರ್ಷ ಫೆಬ್ರವರಿ 1ರಂದೇ ಏಕೆ ಮಂಡಿಸಲಾಗುತ್ತದೆ?

ಪ್ರತಿ ವರ್ಷ ಫೆಬ್ರವರಿ 1ರಂದು ಹಣಕಾಸು ಸಚಿವರು ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾರೆ. ಈ ಮೊದಲು ಬಜೆಟ್ ಅನ್ನು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಂಡಿಸಲಾಗುತ್ತಿತ್ತು. ಹಾಗಾದರೆ, ದಿನಾಂಕವನ್ನು ಫೆಬ್ರವರಿ 1ಕ್ಕೆ ಏಕೆ ಬದಲಾಯಿಸಲಾಯಿತು ಎಂಬುವುದನ್ನು ತಿಳಿಯೋಣ ಬನ್ನಿ

ಫೆಬ್ರವರಿ 1ರಂದೇ ಬಜೆಟ್ ಮಂಡನೆ ಮಾಡೋದು ಯಾಕೆ?

ನಿರ್ಮಲಾ ಸೀತಾರಾಮನ್ -

Profile
Sushmitha Jain Feb 1, 2026 8:49 AM

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1, ಭಾನುವಾರದಂದು ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್(Union Budget) ಅನ್ನು ಮಂಡಿಸಲಿದ್ದಾರೆ. ಆದರೆ, ಪ್ರತಿ ವರ್ಷ ಫೆಬ್ರವರಿ 1ರಂದೇ ಕೇಂದ್ರ ಬಜೆಟ್ ಅನ್ನು ಏಕೆ ಮಂಡಿಸಲಾಗುತ್ತದೆ ಎಂದು ನಿಮಗೆ ಗೊತ್ತಾ? ಈ ದಿನವನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?

ಕೇಂದ್ರ ಬಜೆಟ್ ಭಾರತ(India)ದಲ್ಲಿನ ಪ್ರಮುಖ ವಿಚಯಗಳಲ್ಲೊಂದಾಗಿದ್ದು, ಮುಂದಿನ ವರ್ಷ ಸರ್ಕಾರ ಹೇಗೆ ಆದಾಯ ಗಳಿಸುತ್ತದೆ ಮತ್ತು ಹೇಗೆ ವೆಚ್ಚ ಮಾಡುತ್ತದೆ ಎಂಬುದನ್ನು ಈ ಬಜೆಟ್‌ನಲ್ಲಿ ವಿವರಿಸಲಾಗುತ್ತದೆ.

ಪ್ರತಿ ವರ್ಷ ಫೆಬ್ರವರಿ 1ರಂದು ಹಣಕಾಸು ಸಚಿವರು ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾರೆ. ಈ ಮೊದಲು ಬಜೆಟ್ ಅನ್ನು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಂಡಿಸಲಾಗುತ್ತಿತ್ತು. ಹಾಗಾದರೆ, ದಿನಾಂಕವನ್ನು ಫೆಬ್ರವರಿ 1ಕ್ಕೆ ಏಕೆ ಬದಲಾಯಿಸಲಾಯಿತು ಎಂಬುವುದನ್ನು ತಿಳಿಯೋಣ ಬನ್ನಿ.

2016ರವರೆಗೂ ಭಾರತದಲ್ಲಿ ಬ್ರಿಟಿಷ್ ಕಾಲದ ಪದ್ಧತಿಯಂತೆ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆಯ ವರ್ಕಿಂಗ್ ಡೇನಲ್ಲಿ ಮಂಡಿಸಲಾಗುತ್ತಿತ್ತು. ಆದರೆ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗುವುದರಿಂದ, ವ್ಯಾಪಾರ ವಲಯ ಮತ್ತು ತೆರಿಗೆದಾರರಿಗೆ ಹೊಸ ನೀತಿಗಳು ಮತ್ತು ತೆರಿಗೆ ನಿಯಮಗಳನ್ನು ಅನುಸರಿಸಲು ಸ್ವಲ್ಪ ಸಮಯ ಮಾತ್ರ ದೊರೆಯುತ್ತಿತ್ತು. ಬಜೆಟ್ ಅನುಮೋದನೆ ಪಡೆದು ಜಾರಿಗೆ ಬರುವಷ್ಟರಲ್ಲಿ ಹೊಸ ಹಣಕಾಸು ವರ್ಷ ಅದಾಗಲೇ ಆರಂಭವಾಗಿರುತ್ತಿತ್ತು. ಇದರಿಂದ ಹಲವಾರು ಸರ್ಕಾರಿ ಯೋಜನೆಗಳು ಮತ್ತು ನೀತಿಗಳು ಸಮಯಕ್ಕೆ ಸರಿಯಾಗಿ ಜಾರಿಯಾಗುತ್ತಿರಲಿಲ್ಲ.

Union Budget 2026: ಹೊಸ ದಾಖಲೆ ಬರೆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಅತಿಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ

2017ರಲ್ಲಿ ಈ ಬಜೆಟ್ ಮಂಡನೆ ದಿನಾಂಕವನ್ನು ಮೊದಲ ಬಾರಿಗೆ ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಬದಲಾಯಿಸಲಾಯಿತು. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೊಸ ಹಣಕಾಸು ವರ್ಷ ಆರಂಭವಾಗುವ ಮೊದಲು ಎಲ್ಲರಿಗೂ ಯೋಜನೆ ರೂಪಿಸಲು ಹೆಚ್ಚಿನ ಸಮಯ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಅದೇ ರೀತಿ, ವಸಾಹತುಶಾಹಿ ಕಾಲದಿಂದ ಅನುಸರಿಸಲಾಗುತ್ತಿದ್ದ ಬಜೆಟ್ ಮಂಡನೆಯ ಸಮಯವನ್ನೂ ಬದಲಾಯಿಸಲಾಯಿತು. 1999ರ ತನಕ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ ಆಗಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಮಾಧ್ಯಮಗಳಿಗೆ ಹೆಚ್ಚು ಸಮಯ ಒದಗಿಸುವುದು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಸಾಧ್ಯವಾಗುವಂತೆ ಬೆಳಿಗ್ಗೆ 11 ಗಂಟೆಗೆ ಸಮಯವನ್ನು ಬದಲಾಯಿಸಿದರು.

ದಿನಾಂಕ ಬದಲಾಯಿಸಿದ ಬಗ್ಗೆ ವಿವಾದ

ಸರ್ಕಾರ ದಿನಾಂಕ ಬದಲಾವಣೆ ಘೋಷಿಸಿದ ಕೆಲವೇ ದಿನಗಳಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ರಾಜ್ಯ ಚುನಾವಣೆಗಳ ಮೊದಲು ಜನಪ್ರಿಯ ಘೋಷಣೆಗಳನ್ನು ಮಾಡುವ ಮೂಲಕ ಮತದಾರರನ್ನು ಆಕರ್ಷಿಸಲು ಸರ್ಕಾರಕ್ಕೆ ಇದು ಅವಕಾಶ ನೀಡುತ್ತದೆ ಎಂಬುವುದು ಅರ್ಜಿದಾರರ ವಾದವಾಗಿತ್ತು.

ಆದರೆ, ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದ್ದು, ಕೇಂದ್ರ ಬಜೆಟ್ ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಯಾವುದೇ ಪ್ರತ್ಯೇಕ ರಾಜ್ಯಗಳಿಗೆ ಸೀಮಿತವಲ್ಲ ಎಂದಿದೆ. ಅಷ್ಟೇಅಲ್ಲದೆ, “ಕೇಂದ್ರ ಬಜೆಟ್‌ಗೂ, ರಾಜ್ಯ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ," ಎಂದು ನ್ಯಾಯಪೀಠ ಹೇಳಿದೆ.