ಸೋಫಾದ ಬಳಿ ಹೊಂಚುಹಾಕಿ ಕಾದಿತ್ತು ಸಾವು; ಸೊಂಟದಲ್ಲಿದ್ದ ಲೋಡೆಡ್ ಗನ್ ಸಿಡಿದು ಎನ್‌ಐಆರ್‌ಯ ದಾರುಣ ಅಂತ್ಯ
ಭಾರತಕ್ಕೆ ಆಗಮಿಸಿದ್ದ ಅನಿವಾಸಿ ಭಾರತೀಯನೊಬ್ಬನ ಸೊಂಟದಲ್ಲಿದ್ದ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು, ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಫಿರೋಜ್‌ಪುರದ ಧಾನಿ ಸುಚಾ ಸಿಂಗ್ ಗ್ರಾಮದಲ್ಲಿ ಈ ಅವಘಡ ನಡೆದಿದ್ದು, ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.
ಘಟನೆಯ ದೃಶ್ಯ -
ಚಂಡೀಗಢ, ಡಿ. 30: ಸೋಫಾದಿಂದ ಏಳುವಾಗ ಸೊಂಟದಲ್ಲಿ ಇಟ್ಟುಕೊಂಡಿದ್ದ ಲೋಡೆಡ್ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಎನ್‌ಐಆರ್‌ವೊಬ್ಬರು ಸಾವನ್ನಪ್ಪಿರುವ ಘಟನೆ ಫಿರೋಜ್‌ಪುರ(ಫಿರೋಜ್‌ಪುರ)ದ ಧಾನಿ ಸುಚಾ ಸಿಂಗ್ (Dhani Sucha Singh) ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ (CCTV) ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಮೃತರನ್ನು ಹರ್ಪಿಂದರ್ ಸಿಂಗ್ (Harpinder Singh) ಅಲಿಯಾಸ್ ಸೋನು (Sonu) ಎಂದು ಗುರುತಿಸಲಾಗಿದೆ.
ಹರ್ಪಿಂದರ್ ಸಿಂಗ್ ಇತ್ತೀಚೆಗೆ ವಿದೇಶದಿಂದ ಮರಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು. "ಹರ್ಪಿಂದರ್ ಸಿಂಗ್ ತಮ್ಮ ಸಂಬಂಧಿಯೊಂದಿಗೆ ಸೋಫಾದ ಮೇಲೆ ಕುಳಿತಿದ್ದರು. ಅಲ್ಲಿಂದ ಏಳುವ ಸಂದರ್ಭದಲ್ಲಿ ಸೊಂಟದಲ್ಲಿ ಇಟ್ಟುಕೊಂಡಿದ್ದ ಗನ್ ಆಕಸ್ಮಿಕವಾಗಿ ಸಿಡಿದು ಗುಂಡು ಹರ್ಪಿಂದರ್ ಅವರ ಹೊಟ್ಟೆಗೆ ತಗುಲಿದೆʼʼ ಎಂದು ಪೊಲೀಸರು ಹೇಳಿದ್ದಾರೆ.
ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಕುಟುಂಬಸ್ಥರು ಹರ್ಪಿಂದರ್ ಸಿಂಗ್ ಅವರತ್ತ ಓಡಿ ಬಂದು ಅವರನ್ನು ರೂಮ್‌ನಿಂದ ಹೊರ ಕರೆತರುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸಿದೆ. ತಕ್ಷಣ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆ ರವಾನಿಸಲಾಯಿತು. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಮತ್ತೊಂದು ಆಸ್ಪತ್ರೆಗೆ ಕರೆದೊಂಡು ಹೋಗಲು ತಿಳಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಠಿಂಡಾ (Bhatinda)ಕ್ಕೆ ಕರೆದೊಯ್ಯುವ ಮಾರ್ಗದಲ್ಲೇ ಹರ್ಪಿಂದರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಡಿಯೊ ಇಲ್ಲಿದೆ:
NRI died in Dhani Sucha Singh village with his holstered gun going off while he was rising from a sofa. The entire ordeal was recorded by the home’s #CCTV cameras.#viralVideo #punjab pic.twitter.com/HvuWpYSVXK
— Nomadic Nitin (@Niitz1) December 30, 2025
ಶಿಮ್ಲಾ ಆಸ್ಪತ್ರೆ ಗಲಾಟೆ ಪ್ರಕರಣ; ಪರಸ್ಪರ ಅಪ್ಪಿಕೊಂಡು ಕ್ಷಮೆಯಾಚಿಸಿದ ವೈದ್ಯ-ರೋಗಿ!
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸದರ್ ಪೊಲೀಸ್ ಠಾಣೆ (Sadar Police Station)ಯ ಅಧಿಕಾರಿ ರವೀಂದರ್ ಶರ್ಮಾ (Ravinder Sharma), "ಘಟನೆಯ ಕುರಿತು ಹರ್ಪಿಂದರ್ ಸಿಂಗ್ ಅವರ ತಂದೆ ದರ್ಶನ ಸಿಂಗ್ (Darshan Singh) ಅವರ ಹೇಳಿಕೆ ಪಡೆಯಲಾಗಿದೆ. ಈ ಸಂಬಂಧ ಬಿಎನ್‌ಎಸ್ (Bharatiya Nyaya Sanhita) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಹರ್ಪಿಂದರ್ ಸಿಂಗ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಅಲ್ಲದೇ ಈ ರೀತಿ ಬಂದೂಕು ಸಿಡಿದ ಪ್ರಕರಣಗಳು ಮತ್ತು ಕಾರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿದೇಶದಿಂದ ಸ್ವಗ್ರಾಮಕ್ಕೆ ಮರಳಿ ವಿವಾಹವಾಗಿದ್ದ ಹರ್ಪಿಂದರ್ ಸಿಂಗ್ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಅಗಲಿದ್ದಾರೆ. ಮಂಗಳವಾರ ಗ್ರಾಮದಲ್ಲೇ ಅವರ ಅಂತ್ಯಕ್ರಿಯೆ ನೆರವೇರಿದ್ದು, ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.