ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣ: ಝೀ ಸಂಸ್ಥಾಪಕ ಸುಭಾಷ್ ಚಂದ್ರ ವಿರುದ್ಧ ಎಫ್‌ಐಆರ್
CBI Files Case Against Subhash Chandra: ವಂಚನೆ ಪ್ರಕರಣ ಆರೋಪದಲ್ಲಿ ಝೀ ಸಂಸ್ಥೆಯ ಸಂಸ್ಥಾಪಕ ಸುಭಾಷ್ ಚಂದ್ರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಸುಭಾಷ್ ಚಂದ್ರ ಅವರನ್ನು ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಂಬಿಕೆ ಉಲ್ಲಂಘನೆ ಆರೋಪಗಳ ಅಡಿಯಲ್ಲಿ ಎ1 ಆರೋಪಿ ಎಂದು ಹೆಸರಿಸಲಾಗಿದೆ.
ಝೀ ಸಂಸ್ಥೆಯ ಸಂಸ್ಥಾಪಕ ಸುಭಾಷ್ ಚಂದ್ರ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 5: ವಂಚನೆ ಪ್ರಕರಣ ಆರೋಪದಲ್ಲಿ ಝೀ ಸಂಸ್ಥೆಯ (Zee Founder) ಸಂಸ್ಥಾಪಕ ಸುಭಾಷ್ ಚಂದ್ರ (Subhash Chandra) ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LICHFL) ಒಳಗೊಂಡಿರುವ ಸುಮಾರು 1,322 ಕೋಟಿ ರೂಪಾಯಿಗಳ ಭಾರಿ ವಂಚನೆಗೆ ಸಂಬಂಧಿಸಿದಂತೆ ಸುಭಾಷ್ ಚಂದ್ರ, ಇತರ ಖಾಸಗಿ ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಕೇಂದ್ರೀಯ ತನಿಖಾ ದಳವು (CBI) ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 31ರಂದು ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ (FIR) ಸುಭಾಷ್ ಚಂದ್ರ ಅವರನ್ನು ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಂಬಿಕೆ ಉಲ್ಲಂಘನೆ ಆರೋಪಗಳ ಅಡಿಯಲ್ಲಿ ಆರೋಪಿ ನಂಬರ್ 1 ಎಂದು ಹೆಸರಿಸಲಾಗಿದೆ. ವ್ಯಾಪಾರ ವಿಸ್ತರಣೆ ಮತ್ತು ಬಾಡಿಗೆ ನಗದೀಕರಣಕ್ಕಾಗಿ ವಿವಿಧ ಕಂಪನಿಗಳಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LICHFL) ಒದಗಿಸಿದ್ದ ಸಾಲ ಸೌಲಭ್ಯಗಳಿಗೆ ಸಂಬಂಧಿಸಿ ಈ ಆರೋಪಗಳಿವೆ. ಈ ಸಾಲದ ಮೊತ್ತಕ್ಕೆ ಸುಭಾಷ್ ಚಂದ್ರ ನಿರಂತರ ಗ್ಯಾರಂಟಿ ನೀಡಿದ್ದರು ಎನ್ನಲಾಗಿದೆ.
ಬಾಡಿಗೆ ನಗದೀಕರಣ ಯೋಜನೆಯಡಿ ಡಿಜಿಟಲ್ ಸಬ್‌ಸ್ಕ್ರೈಬರ್ ಮ್ಯಾನೇಜ್‌ಮೆಂಟ್ ಆಂಡ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಪಿರಿಟ್ ಇನ್‌ಫ್ರಾಪವರ್ ಆ್ಯಂಡ್ ಮಲ್ಟಿವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳಿಗೆ ಒಟ್ಟು 480 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು.
ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಕೋರಿದ ತನಿಖಾ ಸಂಸ್ಥೆ: ನಾಗೇಂದ್ರಗೆ ಸಿಬಿಐ ತನಿಖೆಯ ಉರುಳು ?
ಈ ಎರಡೂ ಸಂದರ್ಭಗಳಲ್ಲಿ 2018ರಲ್ಲಿ ಸುಭಾಷ್ ಚಂದ್ರ ಸಲ್ಲಿಸಿದ್ದ ನಿವ್ವಳ ಮೌಲ್ಯದ ಪ್ರಮಾಣಪತ್ರಗಳ ಆಧಾರದ ಮೇಲೆಯೇ ಸಾಲ ನೀಡುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ವಸಂತ್ ಸಾಗರ್ ಪ್ರಾಪರ್ಟೀಸ್ ಸಾಲಕ್ಕಾಗಿ 2017ರ ಮಾರ್ಚ್ 31ರ ವೇಳೆಗೆ ನಿವ್ವಳ ಮೌಲ್ಯ 59,113 ಕೋಟಿ ರೂಪಾಯಿ ಎಂದು ಹಾಗೂ ಡಿಜಿಟಲ್ ಸಾಲ ಸೌಲಭ್ಯ ವಿಷಯದಲ್ಲಿ 2018ರ ಜುಲೈ 6ರಂದು ನಿವ್ವಳ ಮೌಲ್ಯ 40,562 ಕೋಟಿ ರೂಪಾಯಿ ಎಂದು ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು.
ಅಂದಿನಿಂದಈ ಎರಡೂ ಸಾಲದ ಖಾತೆಗಳು ಮರುಪಾವತಿ ಮಾಡಲು ವಿಫಲವಾಗಿದೆ. ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪರಿಹಾರಕ್ಕಾಗಿ ದಿವಾಳಿತನ ಸಂಹಿತೆಯ (IBC) ಅಡಿಯಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಾಲಗಳ ಅನುಮೋದನೆ ಮತ್ತು ವಿತರಣೆಗೆ ಕಾರಣವಾಗುವಂತೆ ತಾವು ಎಲ್‌ಐಸಿಎಚ್‌ಎಫ್‌ಎಲ್‌ಗೆ (LICHFL) ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿ ನಮೂದಿಸಲಾಗಿದ್ದ ನಿವ್ವಳ ಮೌಲ್ಯವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, 2017-18ರಲ್ಲಿಯೂ ಸಹ ಅವರ ನಿವ್ವಳ ಮೌಲ್ಯವು 40,000 ಕೋಟಿ ರೂಪಾಯಿಗಿಂತ ಹೆಚ್ಚಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಭಾಷ್ ಚಂದ್ರ ಮಾತ್ರವಲ್ಲದೆ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಆರೋಪಿಗಳಲ್ಲಿ ವಸಂತ್ ಸಾಗರ್ ಪ್ರಾಪರ್ಟೀಸ್, ಅದರ ನಿರ್ದೇಶಕ ಪಂಕಜ್ ಸುರೋಲಿಯಾ, ಪ್ಯಾನ್ ಇಂಡಿಯಾ ಇನ್ಫ್ರಾಸ್ಟ್ರಕ್ಚರ್, ಡಿಜಿಟಲ್ ಸಬ್‌ಸ್ಕ್ರೈಬರ್ ಮ್ಯಾನೇಜ್‌ಮೆಂಟ್ ಮತ್ತು ಅದರ ನಿರ್ದೇಶಕ ಅಮಿಶ್ ಪಾಂಡ್ಯ, ಸ್ಪಿರಿಟ್ ಇನ್‌ಫ್ರಾಪವರ್ ಆ್ಯಂಡ್ ಮಲ್ಟಿವೆಂಚರ್ಸ್ ಮತ್ತು ಅದರ ನಿರ್ದೇಶಕ ರಾಜೀವ್ ಧೋಲಾಕಿಯಾ ಹಾಗೂ ಇತರರು ಸೇರಿದ್ದಾರೆ.