ನವದೆಹಲಿ, ಮಾ.26: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ (middle east crisis) ನಡುವೆ ತೈಲ ಬೆಲೆ ಏರಿಕೆ ಮತ್ತು ಎಲ್‌ಪಿಜಿ (LPG) ಕೊರತೆಯಿದೆ. ಹೀಗಾಗಿ ಹೋಟೆಲ್‌ಗಳು ಗ್ರಾಹಕರಿಗೆ ಹೆಚ್ಚುವರಿ ಗ್ಯಾಸ್ ಶುಲ್ಕ (Gas charges) ವಿಧಿಸುತ್ತಿದೆ. ಇಂತಹ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ (Central Government) ಮುಂದಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ, ಇಂತಹ ಶುಲ್ಕಗಳನ್ನು ಸಿಸಿಪಿಎ ಅನ್ಯಾಯ ವಾಣಿಜ್ಯ ಪ್ರಕ್ರಿಯೆ ಎಂದು ಘೋಷಿಸಿದೆ.
ಇಂತಹ ಶುಲ್ಕಗಳನ್ನು ಸೇರಿಸುವುದು ಸೇವಾ ಶುಲ್ಕಗಳ ಕುರಿತು ಅಸ್ತಿತ್ವದಲ್ಲಿರುವ ಪ್ರಸ್ತುತ ಮಾರ್ಗಸೂಚಿಗಳನ್ನು ತಪ್ಪಿಸಲು ಮಾಡುವ ಪ್ರಯತ್ನ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ. ದೇಶದ ಪ್ರಮುಖ ಗ್ರಾಹಕ ಮೇಲ್ವಿಚಾರಕ ಸಂಸ್ಥೆಯು ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಕಲಂ 10ರ ಅಡಿಯಲ್ಲಿ ಹೊಸ ನಿರ್ದೇಶನ ಹೊರಡಿಸಿದೆ. ಇದರ ಪ್ರಕಾರ, ಇಂತಹ ಯಾವುದೇ ಶುಲ್ಕಗಳನ್ನು ಸ್ವಯಂಚಾಲಿತವಾಗಿ ವಿಧಿಸಬಾರದು ಎಂದು ನಿರ್ದೇಶಿಸಲಾಗಿದೆ.
ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಜವಳಿ ಉದ್ಯಮಕ್ಕೂ ತಟ್ಟಿದ ಇಂಧನ ಕೊರತೆ: ಎಲ್‌ಪಿಜಿ ಸಮಸ್ಯೆಯಿಂದ ಮುಚ್ಚಿದ ಸೂರತ್‌ನ ಘಟಕಗಳು
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಬಂದಿರುವ ದೂರುಗಳು ಹಾಗೂ ಮಾಧ್ಯಮ ವರದಿಗಳ ಆಧಾರದ ಮೇಲೆ, ಕೆಲವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮೆನುದಲ್ಲಿ ಸೂಚಿಸಿರುವ ಆಹಾರ ಮತ್ತು ಪಾನೀಯಗಳ ಬೆಲೆ ಹಾಗೂ ಅನ್ವಯಿಸುವ ತೆರಿಗೆಗಳ ಮೇಲೆ ಹೆಚ್ಚುವರಿಯಾಗಿ ಇಂತಹ ಶುಲ್ಕಗಳನ್ನು ಗ್ರಾಹಕರ ಬಿಲ್ಲಿನಲ್ಲಿ ವಿಧಿಸುತ್ತಿರುವುದನ್ನು ಸಿಸಿಪಿಎ ಗಮನಿಸಿದೆ.
ಇಂತಹ ಕ್ರಮಗಳು ಪಾರದರ್ಶಕತೆ ಕೊರತೆಯನ್ನು ಉಂಟುಮಾಡುವುದರ ಜೊತೆಗೆ ಗ್ರಾಹಕರ ಮೇಲೆ ಹೆಚ್ಚುವರಿ ವೆಚ್ಚವನ್ನು ಹೊರೆಸುತ್ತಿದೆ ಎಂದು ಸಚಿವಾಲಯ ಹೇಳಿದೆ. ಎಲ್‌ಪಿಜಿ ಶುಲ್ಕ ಅಥವಾ ಇತರ ಸಮಾನ ಶುಲ್ಕಗಳನ್ನು ವಿಧಿಸುವ ಪ್ರಸ್ತುತ ಕ್ರಮವು, ಬೇರೆ ಹೆಸರು ಬಳಸುವ ಮೂಲಕ ಮೇಲ್ಕಂಡ ಮಾರ್ಗಸೂಚಿಗಳನ್ನು ತಪ್ಪಿಸಲು ಮಾಡುವ ಪ್ರಯತ್ನವಾಗಿದೆ.
ಇಂಧನ, ಎಲ್‌ಪಿಜಿ, ವಿದ್ಯುತ್ ಹಾಗೂ ಇತರ ಕಾರ್ಯಾಚರಣಾ ವೆಚ್ಚಗಳು ವ್ಯಾಪಾರ ನಡೆಸುವ ಖರ್ಚಿನ ಭಾಗವಾಗಿದ್ದು, ಅವುಗಳನ್ನು ಮೆನು ದರಗಳಲ್ಲಿ ಸೇರಿಸಬೇಕು ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.
ಪ್ರತ್ಯೇಕ ಕಡ್ಡಾಯ ಶುಲ್ಕಗಳ ಮೂಲಕ ಅಂತಹ ವೆಚ್ಚಗಳನ್ನು ವಸೂಲಿ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯಿದೆಯ ಸೆಕ್ಷನ್ 2019ರ ಕಲಂ 2(47) ರ ಅಡಿಯಲ್ಲಿ ಅನ್ಯಾಯದ ವಾಣಿದ್ಯ ಪ್ರಕ್ರಿಯೆಯಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
LPG Crisis: 12 ದಿನದ ಸಂಕಷ್ಟಕ್ಕೆ ಪರಿಹಾರ, ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಲಿದೆ ಎಲ್‌ಪಿಜಿ ಪೂರೈಕೆ
ಈ ಸಲಹೆಯ ಮೂಲಕ ಸಿಸಿಪಿಎ ಕೆಳಕಂಡಂತೆ ಸೂಚಿಸಿದೆ:
- ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಬಿಲ್ಲಿನಲ್ಲಿ ಎಲ್‌ಪಿಜಿ ಶುಲ್ಕ ಅಥವಾ ಗ್ಯಾಸ್ ಶುಲ್ಕ ಅಥವಾ ಇತರ ಸಮಾನ ಶುಲ್ಕಗಳನ್ನು ಸ್ವಯಂಚಾಲಿತವಾಗಿ ವಿಧಿಸಬಾರದು.
- ಮೆನುದಲ್ಲಿ ತೋರಿಸಿರುವ ಬೆಲೆ ಅಂತಿಮ ಬೆಲೆ ಆಗಿರಬೇಕು. ಇದರಲ್ಲಿ ಅನ್ವಯಿಸುವ ತೆರಿಗೆಗಳನ್ನು ಮಾತ್ರ ಹೊರತುಪಡಿಸಬಹುದು.
- ಸ್ವಯಂಪ್ರೇರಿತವಲ್ಲದ ಯಾವುದೇ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಬಾರದು.
ಗ್ರಾಹಕರು ಸಂಬಂಧಪಟ್ಟ ಹೋಟೆಲ್, ರೆಸ್ಟೋರೆಂಟ್‌ಗಳ ವಿರುದ್ಧ ದೂರು ಸಲ್ಲಿಸಬಹುದು. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ 1915 ಗೆ ಕರೆ ಮಾಡುವ ಮೂಲಕ ಅಥವಾ NCH ಮೊಬೈಲ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಬಹುದು. ಇ-ಜಾಗೃತಿ ಪೋರ್ಟಲ್ ಮೂಲಕ ಸೂಕ್ತ ಗ್ರಾಹಕ ಆಯೋಗದ ಮುಂದೆ ದೂರು ದಾಖಲಿಸಬಹುದು. ಅಥವಾ ಜಿಲ್ಲಾಧಿಕಾರಿಗಳಿಗೆ ಅಥವಾ ನೇರವಾಗಿ ಸಿಸಿಪಿಎಗೆ ದೂರು ಸಲ್ಲಿಸಬಹುದು.
ದೇಶಾದ್ಯಂತ ಇಂತಹ ಪದ್ಧತಿಗಳನ್ನು ಸಿಸಿಪಿಎ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಅನ್ಯಾಯದ ಅಥವಾ ಅನಧಿಕೃತ ಶುಲ್ಕಗಳನ್ನು ವಿಧಿಸುವುದು ಸೇರಿದಂತೆ ಯಾವುದೇ ಉಲ್ಲಂಘನೆಯನ್ನು ಸೂಕ್ತವಾಗಿ ಪರಿಗಣಿಸಲಾಗುವುದು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸಿಸಿಪಿಎ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವಾಲಯ ತಿಳಿಸಿದೆ.