ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chetan Chaudhary: ಕೇತನ್‌ ಅಗರ್ವಾಲ್‌ ಹತ್ಯೆಗೆ 10 ಗಂಟೆಗಳ ವ್ಯವಸ್ಥಿತ ಸಂಚು ರೂಪಿಸಿದ್ದ ಸಿಯಾ ಗೋಯಲ್‌ ಪ್ರಿಯಕರ; ಇಲ್ಲಿದೆ ಟೈಮ್‌ಲೈನ್‌

Pune Murder Case: ಮಹಾರಾಷ್ಟ್ರದ ಯುವ ಉದ್ಯಮಿ ಕೇತನ್‌ ಅಗರ್ವಾಲ್‌ ಪ್ರಕರಣದ ಒಂದೊಂದೇ ರಹಸ್ಯ ಬಿಚ್ಚತೊಡಗಿದೆ. ಕೇತನ್‌ನ ಹತ್ಯೆಗೆ ಅವರ ಭಾವಿ ಪತ್ನಿ ಸಿಯಾ ಗೋಯಲ್‌ ಮತ್ತು ಆಕೆಯ ಪ್ರಿಯಕರ ಚೇತನ್‌ ಚೌಧರಿ ಸಂಚು ರೂಪಿಸಿದ್ದು, ತನಿಖೆ ವೇಳೆ ಬಯಲಾಗಿದೆ.

ಚೇತನ್‌ ಚೌಧರಿ ಮತ್ತು ಸಿಯಾ ಗೋಯಲ್‌ (ಸಂಗ್ರಹ ಚಿತ್ರ)

ಮುಂಬೈ, ಜೂ. 28: ಆರಂಭದಲ್ಲಿ ಆಕಸ್ಮಿಕ ಸಾವು ಎನಿಸಿಕೊಂಡಿದ್ದ ಮಹಾರಾಷ್ಟ್ರದ ಯುವ ಉದ್ಯಮಿ ಕೇತನ್‌ ಅಗರ್ವಾಲ್‌ (Ketan Agarwal) ಪ್ರಕರಣ ಬಳಿಕ ಹತ್ಯೆ ಎಂದು ಗೊತ್ತಾಗಿ ದೇಶವೇ ಬೆಚ್ಚಿ ಬಿದ್ದಿದೆ. ಜೂನ್‌ 18ರಂದು ನಡೆದ ಈ ಪ್ರಕರಣದ ಮುಖ್ಯ ಅಪರಾಧಿಗಳಾದ ಕೇತನ್‌ ಅವರ ಭಾವಿ ಪತ್ನಿ ಸಿಯಾ ಗೋಯಲ್‌ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್‌ ಚೌಧರಿ (Chetan Chaudhary) ವಿಚಾರಣೆ ನಡೆಯುತ್ತಿದೆ. ಕೇತನ್‌ ಜತೆಗಿನ ವಿವಾಹ ಇಷ್ಟವಿಲ್ಲದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆ ಮುಂದುವರಿದಂತೆ ಪ್ರಕರಣದ ಗಂಟು ಇನ್ನಷ್ಟು ಬಿಚ್ಚುತ್ತ ಹೋಗುತ್ತಿದ್ದು, ಅಚ್ಚರಿಯ ವಿವರಗಳು ಬೆಳಕಿಗೆ ಬರುತ್ತಿವೆ. ಹತ್ಯೆಯ ಮಾಸ್ಟರ್‌ ಮೈಂಡ್‌ ಚೇತನ್‌ ಸುಮಾರು 10 ಗಂಟೆಗಳ ಕಾಲ ಸಂಚು ರೂಪಿಸಿದ್ದ ಎನ್ನುವುದು ಗೊತ್ತಾಗಿದೆ.

ಕೇತನ್‌ ತಂದೆ ವಿಶಾಲ್‌ ದೇವಿಚಂದ್‌ ಅಗರ್ವಾಲ್‌ ಎಫ್‌ಐಆರ್‌ ದಾಖಲಿಸಿದ್ದು, ಚೇತನ್‌ ಮತ್ತು ಸಿಯಾ ಇಬ್ಬರು ಸೇರಿ ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆ ಮೇಲಿನಿಂದ ಸುಮಾರು 350 ಅಡಿಯ ಆಳದ ಕಂದಕಕ್ಕೆ ತಳ್ಳಿ ಪುತ್ರನನ್ನು ಕೊಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹಿಂದೆಯೂ 2 ಬಾರಿ ಕೇತನ್‌ ಹತ್ಯೆಗೆ ಸಂಚು ರೂಪಿಸಿದ್ದ ಸಿಯಾ ಮತ್ತು ಚೇತನ್‌ 3ನೇ ಯತ್ನದಲ್ಲಿ ಸಫಲರಾಗಿದ್ದರು.

ಕ್ರಿಕೆಟ್‌ನಿಂದ ಶುರುವಾದ ಪ್ರೀತಿ, ಒಟ್ಟಿಗೆ ಕುಳಿತು ಮ್ಯಾಚ್‌ ವೀಕ್ಷಣೆ; ವೈರಲ್‌ ಆಯ್ತು ಸಿಯಾ - ಚೇತನ್‌ ಹಳೆ ವಿಡಿಯೋ

ಕೇತನ್‌ ಹತ್ಯೆಯ ಟೈಮ್‌ಲೈನ್‌

ಬೆಳಗ್ಗೆ 7 ಗಂಟೆ: ಡಿಜಿಟಲ್‌ ಬ್ಲ್ಯಾಕ್‌ಔಟ್‌: ಕೃತ್ಯ ನಡೆದ ಜೂನ್‌ 18ರ ಬೆಳಗ್ಗೆ 7 ಗಂಟೆಗೆ ಚೇತನ್‌ ತನ್ನ ಮೊಬೈಲ್ ಡೇಟಾವನ್ನು ಆಫ್‌ ಮಾಡಿದ್ದ. ತಾನು ಕೇತನ್‌ ಮತ್ತು ಸಿಯಾಳನ್ನು ಹಿಂಬಾಲಿಸಿಕೊಂಡು ಲೋಹಗಢ ಕೋಟೆಗೆ ತೆರೆಳಿರುವುದು ಜಿಪಿಎಸ್‌ನಲ್ಲಿ ದಾಖಲಾಗದಿರಲು ಆತ ಹೀಗೆ ಮಾಡಿದ್ದ.

ಬೆಳಗ್ಗೆ 8 ಗಂಟೆ: ಮೊಬೈಲ್‌ ಅಂಗಡಿಯಲ್ಲಿಟ್ಟಿದ್ದ: ಡ್ರೈ ಫ್ರುಟ್‌ ಬ್ಯುಸಿನೆಸ್‌ ನಡೆಸುವ ಚೇತನ್‌ ತನ್ನ ಅಂಗಡಿಯಲ್ಲಿ ಮೊಬೈಲ್‌ ಇರಿಸಿ ಯಾವುದಾದರೂ ಕಾಲ್‌ ಬಂದರೆ ಸ್ವೀಕರಿಸುವಂತೆ ಸಿಬ್ಬಂದಿಗೆ ತಿಳಿಸಿ ಸ್ಥಳದಿಂದ ತೆರಳಿದ್ದ. ಘಟನೆ ವೇಳೆ ತಾನು ಅಂಗಡಿಯಲ್ಲೇ ಇದ್ದೆ ಎನ್ನುವುದನ್ನು ತನಿಖೆ ವೇಳೆ ಸಾಬೀತು ಪಡಿಸುವುದು ಈತನ ಯೋಜನೆಯಾಗಿತ್ತು. ಸಿಬ್ಬಂದಿಯೊಬ್ಬರ ಮೊಬೈಲ್‌ ತಗೆದುಕೊಂಡಿದ್ದ ಆತ ದಾರಿಯುದ್ದಕ್ಕೂ ಅದರಲ್ಲೇ ಸಂವಹನ ನಡೆಸಿದ್ದ.

ಅಪರಾಹ್ನ 2 ಗಂಟೆ: ಗಮನ ಸೆಳೆದ ಹೂಡಿ: ಲೋಹಗಢ ಕೋಟೆ ಬಳಿ ತಲುಪಿದ ಚೇತನ್‌ ಭದ್ರತಾ ಸಿಬ್ಬಂದಿಯಿಂದ ತನ್ನ ಗುರುತನ್ನು ಮರೆಮಾಡುವ ಉದ್ದೇಶದಿಂದ 33 ಡಿಗ್ರಿ ಸೆಲ್ಸಿಯಸ್‌ನ ಶಾಖದ ನಡುವೆಯೂ ದಪ್ಪ, ಚಳಿಗಾಲದ ಹೂಡಿಯನ್ನು ಧರಿಸಿಕೊಂಡು ಕೇತನ್‌-ಸಿಯಾಳನ್ನು ಹಿಂಬಾಲಿಸಿದ್ದ.

ಅಪರಾಹ್ನ 2.30: ಸಿಗ್ನಲ್‌ ಪಾಸ್‌: ಚೇತನ್‌ ಮತ್ತು ಸಿಯಾ ಮೊದಲೇ ನಿಗಧಿಪಡಿಸಿದ ಸ್ಥಳ ಬಂದಾಗ ಸಿಯಾ ಸಿಗ್ನಲ್‌ ಪಾಸ್‌ ಮಾಡಲು ಕುಳಿತುಕೊ‍ಂಡಳು. ಕೂಡಲೇ ಮರೆಯಲ್ಲಿ ನಿಂತಿದ್ದ ಚೇತನ್‌ ಧಾವಿಸಿ ಬಂದು ಕೇತನ್‌ನನ್ನು 350 ಅಡಿಗಳನ್ನು ಆಳದ ಕಂದಕಕ್ಕೆ ತಳ್ಳಿ ಬಿಟ್ಟ.

ಸಂಜೆ 5.40 ಗಂಟೆ: ಮರಳಿದ ಹಂತಕ: ಕೋಟೆಯಿಂದ ಮರಳಿದ ಚೇತನ್‌ ತನ್ನ ಕಾರ್ಯ ಯಶಸ್ವಿಯಾದ ವಿಶ್ವಾಸದಲ್ಲಿ ಸುಮಾರು 10 ಗಂಟೆ 40 ನಿಮಿಷಗಳ ಬಳಿಕ ಮೊಬೈಲ್‌ ಇಂಟರ್‌ನೆಟ್‌ ಆನ್‌ ಮಾಡಿದ್ದ.

ಪ್ಲ್ಯಾನ್‌ ಫ್ಲ್ಯಾಪ್‌ ಆಗಿದ್ದೇಗೆ?

ಇಷ್ಟೆಲ್ಲ ವ್ಯವಸ್ಥಿತ ಪ್ಲ್ಯಾನ್‌ ಮಾಡಿದ್ದರೂ ಚಿಕ್ಕ-ಪುಟ್ಟ ತಪ್ಪಿನಿಂದ ಚೇತನ್‌-ಸಿಯಾ ಸಿಕ್ಕಿ ಬಿದ್ದಿದ್ದಾರೆ. ಅಸ್ವಾಭಾವಿಕವಾಗಿ ಸುಮಾರು 10 ಗಂಟೆ 40 ನಿಮಿಷಗಳ ಕಾಲ್‌ ಚೇತನ್‌ ಮೊಬೈಲ್‌ ಆಫ್‌ಲೈನ್‌ನಲ್ಲಿದ್ದುದು, ಆತ ಚಳಿಗಾಲದ ಹೂಡಿ ಧರಿಸಿ ಓಡಾಡಿದ್ದು ಮತ್ತು ಆತನ ಫೋನ್‌ ಕರೆಗಳನ್ನು ಸಿಬ್ಬಂದಿ ಸ್ವೀಕರಿಸಿದ್ದು ಚೇತನ್‌ನ ಮೇಲೆ ಅನುಮಾನ ಮೂಡುವಂತೆ ಮಾಡಿದವು.

ಕೇತನ್‌ ಹತ್ಯೆಗೂ 2 ದಶಕಗಳ ಹಿಂದೆ ನಡೆದ ಬೆಂಗಳೂರು ಕೊಲೆಗೂ ಇದೆ ಸಾಮ್ಯತೆ

ಅಂದು ಏನಾಯ್ತು?

ಜೂನ್‌ 18ರ ಬೆಳಗ್ಗೆ ಕೇತನ್‌ ಮನೆಯಿಂದ ಹೊರಟು ಕಿವಾಲೆ ಸೇತುವೆ ಬಳಿ ಸಿಯಾಳನ್ನು ಕಾರ್‌ಗೆ ಹತ್ತಿಸಿಕೊಂಡು ಲೋಹಗಢ ಕೋಟೆ ಬಳಿ ತಲುಪಿದ್ದ. ಸಿಯಾ ಕೇತನ್‌ ತಾಯಿಗೆ ಕರೆ ಮಾಡಿ ಆತ ಕೋಟೆಯಿಂದ ಕಾಲು ಜಾರಿ ಕಣಿವೆಗೆ ಬಿದ್ದಿರುವುದಾಗಿ ತಿಳಿಸಿದ್ದಳು. ಸ್ಥಳೀಯರು, ಪೊಲೀಸರು ಕೇತನ್‌ನನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಕೇತನ್‌ ಮೃತಪಟ್ಟಿದ್ದರು. ಪದೇ ಪದೆ ಸಿಯಾ ಫೋನ್‌ ಬ್ಯುಸಿಯಾಗುತ್ತಿದ್ದುದು, ಆಗಾಗ ಆಕೆ ಚೇತನ್‌ ಹೆಸರು ಹೇಳುತ್ತಿದ್ದುದು ಕೇತನ್‌ ಮನೆಯವರ ಅನುಮಾನಕ್ಕೆ ಕಾರಣವಾಗಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author